Breaking News

ಕಾಣಿಯೂರು ಪ್ರಗತಿ ವಾರ್ಷಿಕೋತ್ಸವ; ಸಾಧಕರಿಗೆ ಗೌರವ- ’ನಮ್ಮ ಪ್ರಗತಿ’ ಪುಸ್ತಕ ಅನಾವರಣ

Puttur_Advt_NewsUnder_1
Puttur_Advt_NewsUnder_1

kaniyooru kaniyooru1

*ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವನ್ನು ಪೋಷಕರು, ಶಿಕ್ಷಕರು ನಿರ್ಮಿಸಬೇಕು- ಜಗನ್ನಾಥ ರೈ ನುಳಿಯಾಲು

*ಉತ್ತಮ ಚಿಂತನೆಯೊಂದಿಗೆ ಸಾಧನೆ ಮಾಡಿದಾಗ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ-ಉದಯ ರೈ ಮಾದೋಡಿ

*ದೇಶ ಸೇವೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಪೋಷಕರು ಪ್ರೇರಣೆ ನೀಡಬೇಕು- ವಸಂತ ಶೆಟ್ಟಿ ಬೆಳ್ಳಾರೆ

ಕಾಣಿಯೂರು: ಸಮಾಜಕ್ಕೆ ಸೇವಾ ಮನೋಭಾವ ನೀಡುವ ಗುಣ, ಬೆಳೆಸುವ ಪ್ರಕ್ರಿಯೆ ಶಿಕ್ಷಣದಿಂದ ಆಗಬೇಕು. ಆ ಕೆಲಸವನ್ನು ಪ್ರಗತಿ ವಿದ್ಯಾಸಂಸ್ಥೆ ಮಾಡುತ್ತಿದೆ. ಪೋಷಕರು ಶಿಕ್ಷಕರು ಸಹಭಾಗಿತ್ವದಿಂದ ಕಾರ್ಯ ನಿರ್ವಹಿಸಿದಾಗ ಮಕ್ಕಳ ಪ್ರಗತಿ ಸಾಧ್ಯ ಎಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲುರವರು  ಹೇಳಿದರು. ಅವರು ದ ೪ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಗೌರವ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಕೂಡ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವನ್ನು ಪೋಷಕರು, ಶಿಕ್ಷಕರು, ಸಮಾಜ ನಿರ್ಮಿಸಬೇಕು ಎಂದರು.

ದ.ಕ ಜಿಲ್ಲಾ ಜನತಾ ಬಜಾರ್ ಇದರ ಅಧ್ಯಕ್ಷರೂ, ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಕೋಶಾಧಿಕಾರಿ ಉದಯ ರೈ ಮಾದೋಡಿಯವರು ಮಾತನಾಡಿ, ಗುರು ಇಲ್ಲದ ಶಿಕ್ಷಣ ಗುರಿಯಿಲ್ಲದ ಸಾಧನೆ. ವಿದ್ಯಾರ್ಥಿಗಳು ಉತ್ತಮ ಗುರುಗಳ ಮೂಲಕ ಶಿಕ್ಷಣ ಪಡೆದು ಉತ್ತಮ ಚಿಂತನೆಯೊಂದಿಗೆ ಸಾಧನೆ ಮಾಡಿದಾಗ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.

ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ಮಾತನಾಡಿ, ಪೋಷಕರು ಜವಾಬ್ದಾರಿಯನ್ನು ಅರಿತು ಮಕ್ಕಳಲ್ಲಿ ನಿಗದಿತ ಗುರಿಯನ್ನು ಮೈಗೂಡಿಸಿಕೊಳ್ಳಲು ಪ್ರೇರಣೆಯಾಗಬೇಕು. ದೇಶ ಸೇವೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಪೋಷಕರು ಪ್ರೇರಣೆ ನೀಡಬೇಕು ಎಂದರು.

ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಜಯಂತ್ ವೈ, ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಆಡಳಿತ ಸಮಿತಿಯ ಸದಸ್ಯರುಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ನಾಗೇಶ್ ರೈ ಮಾಳ, ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ರಮೇಶ್ ಬೆಟ್ಟ, ಕೋಶಾಧಿಕಾರಿ ಡಾ|| ಉದಯ ಕುಮಾರ್, ಉಪಾಧ್ಯಕ್ಷರುಗಳಾದ ಸೌಮ್ಯಲಕ್ಷ್ಮೀ, ರಾಮಣ್ಣ ಗೌಡ ಮುಗರಂಜ, ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಗುರು ಗಿರಿಶಂಕರ ಸುಲಾಯ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ವಿದ್ಯಾಸಂಸ್ಥೆಯ ನಾಯಕಿ ಮೋಹಿತ ಪರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ಗಿರಿಶಂಕರ ಸುಲಾಯ ಶಾಲಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿಗಳಾದ  ಕ್ಷಮಾ ಕೆ, ಹೇಮಾಸ್ವಾತಿ, ವಿಲ್ಮಾ ನತಾಲಿಯಾ, ಚಿಂತನಾ ಪ್ರಾರ್ಥಿಸಿದರು. ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಸ್ವಾಗತಿಸಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥೆ ಎಂ ಸರಸ್ವತಿ ವಂದಿಸಿದರು. ಸಹಶಿಕ್ಷಕಿ ಅನಿತಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪೋಷಕರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ನೃತ್ಯ ರೂಪಕ ಮತ್ತು  ವೀರ ಅಭಿಮನ್ಯು ಕಾಳಗ ಯಕ್ಷಗಾನ ನಡೆಯಿತು.

’ನಮ್ಮ ಪ್ರಗತಿ’ ಪುಸ್ತಕ ಅನಾವರಣ: ಕಾರ್ಯಕ್ರಮದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಮಾಹಿತಿ ಚಿತ್ರಣ, ಸಾಧನೆಗಳನ್ನೊಳಗೊಂಡ ‘ನಮ್ಮ ಪ್ರಗತಿ” 2016-17 ಪುಸ್ತಕವನ್ನು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು ಮಾದೋಡಿಯವರು ಅನಾವರಣಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.