ದರ್ಬೆ: ಈಜುಕೊಳದಲ್ಲಿ ಮುಳುಗಿ ಸಂತ ಫಿಲೋಮಿನಾ ಕಾಲೇಜ್‌ನ ಪ್ರಥಮ ಬಿ.ಕಾಂ ವಿದ್ಯಾರ್ಥಿ ಕಾರ್ತಿಕ್ ಜಿ.ರೈ ಸಾವು

Puttur_Advt_NewsUnder_1
Puttur_Advt_NewsUnder_1

whatsapp-image-2016-12-06-at-1-19-20-pm

swimming-pool swimming-pool1

ಪುತ್ತೂರು: ದರ್ಬೆ ಸಮೀಪದಲ್ಲಿರುವ ಖಾಸಗಿ ಈಜುಕೊಳವೊಂದಕ್ಕೆ ಗೆಳೆಯರೊಂದಿಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.6 ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ.

ದರ್ಬೆ ಬೈಪಾಸ್ ಪತ್ರಾವೋ ಸರ್ಕಲ್ ಬಳಿಯಿರುವ ಖಾಸಗಿ ಒಡೆತನದ ಎ.ಎಸ್.ಆರ್(ಅಭಿಕಾರ್) ಈಜುಕೊಳದಲ್ಲಿ ಈ ಘಟನೆ ನಡೆದಿದೆ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ಪ್ರಥಮ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್ ಜಿ.ರೈ(19ವ) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೂಲತ ಕೈಕಾರ ನಿವಾಸಿಯಾಗಿದ್ದು ಆಲಂಕಾರು-ಕುಂತೂರಿನಲ್ಲಿ ದೀಕ್ಷಾ ಫ್ಯಾನ್ಸಿ ಅಂಗಡಿ ಹೊಂದಿರುವ ಗಂಗಾಧರ್ ರೈ ಹಾಗೂ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಸವಿತ ಜಿ,ರೈರವರ ಹಿರಿಯ ಪುತ್ರ ಕಾರ್ತಿಕ್‌ರವರು ಬೆಳಿಗ್ಗೆ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ’ಮಾರ್ನಿಂಗ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಬಳಿಕ ಕಾಲೇಜ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಅಭ್ಯಾಸ ಮುಗಿಸಿ ತನ್ನ ಇಬ್ಬರು ಸಹಪಾಠಿ ಕ್ರಿಕೆಟ್ ಗೆಳೆಯರಾದ ಫಿಲೋಮಿನಾ ಕಾಲೇಜ್‌ನ ಭುವನೇಂದ್ರ ಹಾಗೂ ಸಾಗರ್ ಎಂಬವರೊಂದಿಗೆ ರಿಲ್ಯಾಕ್ಸ್‌ಗೆಂದು ಈಜುಕೊಳಕ್ಕೆ ಬಂದಿದ್ದರು. ಈಜು ಬಲ್ಲವರಾಗಿದ್ದ ಕಾರ್ತಿಕ್‌ರವರು ನೀರಿಗೆ ಡೈವ್ ಹೊಡೆದ ಸಂದರ್ಭದಲ್ಲಿ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಕೂಡಲೇ ಕಾರ್ಯಪ್ರವೃತ್ತರಾದ ಸ್ನೇಹಿತರು ಕಾರ್ತಿಕ್‌ರವರನ್ನು ಮೇಲಕ್ಕೆ ಎತ್ತಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದರೂ ಯಾವುದೇ ಸ್ಪಂದನೆ ಸಿಗದಿದ್ದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಎಪಿಎಂಸಿ ರಸ್ತೆ ಬಳಿಯ ಆದರ್ಶ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದಾರಿ ಮಧ್ಯೆ ಕಾರ್ತಿಕ್‌ರವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಶಾಕ್‌ಗೆ ಒಳಗಾದ ಗೆಳಯರಾದ ಭುವನೇಂದ್ರ ಆದರ್ಶ ಆಸ್ಪತ್ರೆಯಲ್ಲಿ ಸಾಗರರವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದರು. ಎಂದು ತಿಳಿದು ಬಂದಿದೆ.  ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಮನೆಯವರಿಗೆ ಪೋಲಿಸರು ಹಸ್ತಾಂತರಿಸಿದ್ದಾರೆ.

ಮೃತರ ದೊಡ್ಡಪ್ಪ ದಾಮೋದರ ರೈ ನೀಡಿದ ದೂರಿಂತೆ ಪ್ರಕರಣ ದಾಖಲಾಗಿದೆ.

ಸಿ.ಸಿ.ಕ್ಯಾಮರಾದಲ್ಲಿ ಚಿತ್ರಣ: ಮೃತ ಕಾರ್ತಿಕ್‌ರವರು ಈಜುಕೊಳದಲ್ಲಿ ನಿರಾತಂಕವಾಗಿ ಈಜಾಡುತ್ತಿರುವುದು ಬಳಿಕ ತುಸು ಆಯಾಸವಾಗಿರುವಂತೆ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಕಂಡುಬರುತ್ತಿತ್ತು. ಕಾರ್ತಿಕ್‌ರವರು ಮೊದಲಿಗೆ ಸುಸ್ತು ಹಾಗೂ ಎದೆ ನೋವಾಗುತ್ತದೆ ಎಂದು ಸ್ಥಳದಲ್ಲಿದ್ದವರಲ್ಲಿ ಹೇಳಿಕೊಂಡಿದ್ದರು. ಈಜುಕೊಳಕ್ಕೆ ಇಳಿಯುವ ಜಾಗದ ಪಕ್ಕದಲ್ಲಿ ಡೈವ್ ಹೊಡೆದ ಕಾರ್ತಿಕ್‌ರವರು ನೀರಿನೊಳಗೆ ಅಂಗಾತ ಮಲಗಿದ್ದಂತೆ ಭಾಸವಾಗುತ್ತಿತ್ತು. ಆ ಸಂದರ್ಭದಲ್ಲಿ ಉಳಿದ ಇಬ್ಬರು ಗೆಳೆಯರು ಪೂಲ್‌ನ ಮತ್ತೊಂದು ಬದಿಯಲ್ಲಿದ್ದರು. ಐದಾರು ನಿಮಿಷದ ಬಳಿಕವೂ ಕಾರ್ತಿಕ್‌ರವರಲ್ಲಿ ಯಾವುದೇ ಚಲನವಲನವಿಲ್ಲದ್ದು ಗಮನಕ್ಕೆ ಬಂದೊಡನೆ ಆ ಗೆಳೆಯರಿಬ್ಬರು ಸೇರಿದಂತೆ ಪೂಲ್ ನೋಡಿಕೊಳ್ಳುತ್ತಿದ್ದ ಹುಡುಗ ಇವರೆಲ್ಲರೂ ಸನಿಹಕ್ಕೆ ಬಂದು ಕಾರ್ತಿಕ್‌ರವರನ್ನು ಮೇಲಕ್ಕೆತ್ತಿದ್ದಾರೆ.

ಪ್ರತಿಭಾವಂತ ಕ್ರಿಕೆಟ್ ಆಟಗಾರ: ಉದ್ದನೆಯ ವ್ಯಕ್ತಿತ್ವ ಹೊಂದಿರುವ, ಎಲ್ಲರೊಂದಿಗೆ ಸೌಜನ್ಯತಾಭಾವ ಹೊಂದಿದ್ದ ಕಾರ್ತಿಕ್‌ರವರು ಒಬ್ಬ ಅತ್ತ್ಯುತ್ತಮ ಕ್ರಿಕೆಟ್ ಆಟಗಾರರಾಗಿದ್ದರು ಮಾತ್ರವಲ್ಲದೆ ಒಬ್ಬ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕಾಲೇಜ್‌ಗಳಿಗೆ ಪ್ರಸ್ತುತ ರಜೆಯ ದಿನಗಳಾದ್ದರಿಂದ ಫಿಲೋಮಿನಾ ಕಾಲೇಜ್‌ನಲ್ಲಿ ಕ್ರಿಕೆಟ್ ತಂಡದ ಆಟಗಾರರಾಗಿದ್ದ ಮುಂಬರುವ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕ್ರಿಕೆಟ್ ಟೂರ್ನಿಗೆ ಭಾಗವಹಿಸಲು ಅಭ್ಯಾಸ ಮಾಡುವ ಸಲುವಾಗಿ ಕಾಲೇಜ್‌ನಲ್ಲಿಯೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಒಬ್ಬ ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದ ಕಾರ್ತಿಕ್‌ರವರು ಮಂಗಳೂರಿನ ಪ್ರತಿಷ್ಟಿತ ಕ್ರಿಕೆಟ್ ಟೂರ್ನಿ ’ಮಂಗಳೂರು ಪ್ರೀಮಿಯರ್ ಲೀಗ್’ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಭಾಗವಹಿಸಿದ್ದರು. ಅಲ್ಲದೆ ಸಿಝ್ಲರ್ ಸಾಮೆತ್ತಡ್ಕದವರು ನಡೆಸುವ ‘ಸಿಝ್ಲರ್ ಟ್ರೋಫಿ‘ಯಲ್ಲಿ ಕಡಬ ರೈಡರ‍್ಸ್ ಇಲೆವೆನ್ ತಂಡವನ್ನು ಹಾಗೂ ಪುತ್ತೂರು ಯೂನಿಯನ್ ಕ್ರಿಕೆಟರ‍್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಕ್ರಿಕೆಟ್ ಅನ್ನು ಜೀವಾಳವಾಗಿಟ್ಟುಕೊಂಡ ಕಾರ್ತಿಕ್‌ರವರು ಕಾಲೇಜ್‌ಗೆ ರಜೆಯಿದ್ದ ಸಂದರ್ಭದಲ್ಲಿ ಅಥವಾ ಇನ್ನಿತರ ಬಿಡುವಿನ ಸಮಯದಲ್ಲಿ ಕ್ರಿಕೆಟ್ ಅಭ್ಯಾಸವನ್ನು ನಿರಂತರವಾಗಿ ಕಾಲೇಜ್‌ಗೆ ಬಂದು ಮಾಡುತ್ತಿದ್ದರು. ತುಂಬಾ ಒಳ್ಳೆಯ ಹುಡುಗನಾಗಿದ್ದ ಕಾರ್ತಿಕ್‌ರವರಿಗೆ ಕ್ರಿಕೆಟ್ ಹಾಗೂ ಕಾಲೇಜ್ ಎಂದರೆ ಅತೀವ ಪ್ರೀತಿಯಿತ್ತು ಎಂದು ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ದುಃಖದಿಂದ ಅನಿಸಿಕೆ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಉತ್ತಮ ಕ್ರಿಕೆಟ್‌ಪಟು ಆಗಬೇಕೆಂದಿದ್ದ ಕಾರ್ತಿಕ್‌ರವರ ಕನಸು ದುರಂತ ಸಾವಿನ ಮೂಲಕ ಕಮರಿಹೋಯಿತು.

ಮೃತರು ತಂದೆ, ತಾಯಿ, ರಾಮಕುಂಜ ಪ.ಪೂ. ಕಾಲೇಜು ವಿದ್ಯಾರ್ಥಿಯಾಗಿರುವ ಸಹೋದರ ರುತಿನ್‌ರವರನ್ನು ಅಗಲಿದ್ದಾರೆ.

ಈಜುಕೊಳಕ್ಕೆ ವೃತ್ತ ನಿರೀಕ್ಷಕ ಭೇಟಿ: ಘಟನೆಗೆ ಸಂಬಂಧಿಸಿದಂತೆ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಮಹಿಳಾ ಎಸ್.ಐ ಒಮನ ಮತ್ತು ಪೋಲಿಸ್ ಸಿಬ್ಬಂದಿಗಳು ಇಲ್ಲಿನ ಈಜುಕೊಳಕ್ಕೆ ಭೇಟಿ ನೀಡಿ ಘಟನೆ ನಡೆದ ಸ್ಥಳ ಹಾಗೂ ಘಟನೆಯ ಕುರಿತಾದ ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಣವನ್ನು ಪರಿಶೀಲಿಸಿ ವಿಚಾರಣೆ ನಡೆಸಿದ್ದಾರೆ.

ಘಟನೆಯ ಸುದ್ದಿ ತಿಳಿದೊಡನೆ ಶಾಸಕ ಶಕುಂತಳಾ ಶೆಟ್ಟಿ, ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಪದವಿ ಕಾಲೇಜ್‌ನ ಸೂಪರಿಂಟೆಡೆಂಟ್ ವಿಕ್ಟೋರಿಯನ್ ಫೆರ್ನಾಂಡೀಸ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ, ಉಪನ್ಯಾಸಕ ವೃಂದ, ಸಾಮೆತ್ತಡ್ಕ ಯುವಕ ಮಂಡಲದ ಗೌರವಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್ ಹಾಗೂ ಸಿಝ್ಲರ್ ಕ್ರಿಕೆಟ್ ತಂಡದ ಆಟಗಾರರು, ಫಿಲೋಮಿನಾ ಕಾಲೇಜ್‌ನ ವಿದ್ಯಾರ್ಥಿಗಳು, ನಗರಸಭಾ ನಾಮನಿರ್ದೇಶಕ ಸದಸ್ಯ ಜೋಕಿಂ ಡಿ’ಸೋಜಾ ಸೇರಿದಂತೆ ನೂರಾರು ಜನರು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.

ಘಟನೆ ಕುರಿತಂತೆ ಪತ್ರಕರ್ತರು ಈಜುಕೊಳಕ್ಕೆ ಭೇಟಿ ನೀಡಿದ್ದು ಆ ಸಂದರ್ಭದಲ್ಲಿ ಈಜುಕೊಳದ ಒಳಗೆ ಹೋಗಲು ಗೇಟ್‌ಗೆ ಬೀಗ ಹಾಕಿದ್ದುದರಿಂದ ಗೇಟ್‌ನ ಹೊರಗಡೆ ನಿಲ್ಲಬೇಕಾಯಿತು. ಅದೇ ಸಂದರ್ಭದಲ್ಲಿ ಈಜುಕೊಳಕ್ಕೆ ಕಾರಿನಲ್ಲಿ ನಾಲ್ವರು ಯುವಕರು ಆಗಮಿಸಿದ್ದರು. ಕೂಡಲೇ ಪತ್ರಕರ್ತರು ಆ ಯುವಕರಲ್ಲಿ ಇಂದು ಇಲ್ಲಿ ಒಂದು ಡೆತ್ ಆಗಿದೆ ಎಂದು ಹೇಳಿದ್ದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಯುವಕರಲ್ಲೊಬ್ಬ ನಮಗೆ ಈಜು ಬರುತ್ತದೆ ಎಂದು ಹೇಳಿದಾಗ ಪತ್ರಕರ್ತರು ತಬ್ಬಿಬ್ಬು.

ಎರಡನೆಯ ದುರಂತ:

ಇದೇ ವರ್ಷದ ಎಪ್ರಿಲ್28 ರಂದು ಮರ್ಧಾಳ ನಿವಾಸಿ ಗಂಗಾಧರ್-ಪವಿತ್ರ ದಂಪತಿಯ ಏಕೈಕ ಪುತ್ರ 11ರ ಹರೆಯದ ದೇವಿಪ್ರಸಾದ್ ಇದೇ ಈಜುಕೊಳದಲ್ಲಿ ಸಾವನಪ್ಪಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಜೂ.7 ರಂದು ನಡೆದ ಇನ್ನೊಂದು ಘಟನೆಯಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಸಮೀಪದಲ್ಲಿಯೇ ಇದ್ದಂತಹ ಪುತ್ತೂರು ಹೆಡ್‌ಕಾನ್‌ಸ್ಟೇಬಲ್ ಲೋಕನಾಥ್‌ರವರ ಪುತ್ರ ಅಖಿಲೇಶ್ ಹಾಗೂ ಆಶಿಕ್‌ರವರ ಸಮಯಪ್ರಜ್ಞೆಯಿಂದ ಬದುಕುಳಿಸಿದ ಘಟನೆಯೂ ನಡೆದಿತ್ತು. ಆದರೆ ಒಂದೇ ವರ್ಷದಲ್ಲಿ ಮೃತಪಟ್ಟ ಎರಡನೆಯ ದುರಂತ ಇಲ್ಲಿ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.