ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳೇ ಇಲ್ಲ-ಮಕ್ಕಳು ಸಮಸ್ಯೆ ಹೇಳಿಕೊಂಡರು, ಕಾರ‍್ಯದರ್ಶಿ ಬರೆದುಕೊಂಡರು ಮಕ್ಕಳ ಹಕ್ಕುಗಳ ದುರುಪಯೋಗ ಆಗುತ್ತಿರುವುದು ದುರಂತವೇ ಸರಿ:ರಮೇಶ್ ಉಳಯ

Puttur_Advt_NewsUnder_1
Puttur_Advt_NewsUnder_1

 

ramesh-ulayaಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತು ವ್ಯಾಪ್ತಿಯ 6 ಶಾಲೆಗಳ ಮಕ್ಕಳಿಗೆ ಮಕ್ಕಳ ಗ್ರಾಮ ಸಭೆ ನ.28 ರಂದು ಪರ್ಪುಂಜ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ದರ್ಬೆತ್ತಡ್ಕ ಶಾಲೆಯ ವಿದ್ಯಾರ್ಥಿ ವಿಜೇಶ್ ಕೆ.ಅಂಚನ್‌ರವರು ಸಭಾಧ್ಯಕ್ಷತೆ ವಹಿಸಿ ಕಾರ‍್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮಕ್ಕಳ ಹಕ್ಕುಗಳ ದುರುಪಯೋಗ ಆಗುತ್ತಿದೆ: ಮಕ್ಕಳ ಹಕ್ಕುಗಳ ಬಗ್ಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ,ಸಂಜಯನಗರ ಶಾಲಾ ಮುಖ್ಯಗುರು ರಮೇಶ್ ಉಳಯರವರು ಮಾಹಿತಿ ನೀಡುತ್ತಾ, ಮಕ್ಕಳಿಗೆ ತಮ್ಮ ಸಂರಕ್ಷಣೆಯ ಹಕ್ಕು, ಸವಲತ್ತು ಮತ್ತು ವ್ಯವಸ್ಥೆಯ ಹಕ್ಕು ಮತ್ತು ಕುಂದುಕೊರತೆಗಳನ್ನು ಹೇಳಿಕೊಳ್ಳಲು,ತಮ್ಮ ಬಗ್ಗೆ ಚರ್ಚಿಸುವ ಸಲುವಾಗಿ ಸ್ಥಳೀಯ ಸರ್ಕಾರದ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವ ಒಂದು ವೇದಿಕೆಯಾಗಿದೆ. ನ.13 ರಿಂದ ದಶಂಬರ್ 30 ರವರೆಗೆ ಮಕ್ಕಳ ಸಪ್ತಾಹ ನಡೆಯುತ್ತಿದೆ ಎಂದು ತಿಳಿಸಿದರು. ಮಕ್ಕಳ ಗ್ರಾಮ ಸಭೆಯಲ್ಲಿ ಆಯಾ ಗ್ರಾಮದ ಮೂರನೇ ಒಂದು ಭಾಗದಷ್ಟು ಮಕ್ಕಳು ಸಭೆಯಲ್ಲಿ ಭಾಗವಹಿಸುವ ಅವಶ್ಯಕತೆ ಇದೆ ಎಂದ ಅವರು, ಮಕ್ಕಳ ಹಕ್ಕುಗಳನ್ನು ಮಕ್ಕಳೇ ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹಕ್ಕುಗಳ ಉಲ್ಲಂಘನೆಯಾದಲ್ಲಿ ಕೂಡಲೇ ಮಕ್ಕಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ ರಮೇಶ್ ಉಳಯರವರು, ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದ ಸಮಯದಲ್ಲಿ ನೇರವಾಗಿ 1098 ಕ್ಕೆ ಕರೆ ಮಾಡಿ ಎಂದರು. ಮಕ್ಕಳ ಹಕ್ಕುಗಳ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ಯಾವುದೇ ತೊಂದರೆ ಕಂಡುಬಂದಲ್ಲಿ ಮೊದಲಿಗೆ ಶಾಲಾ ಮುಖ್ಯಗುರುಗಳಿಗೆ ವಿಷಯ ತಿಳಿಸಬೇಕು ಎಂದು ಹೇಳಿದರು.ಮಕ್ಕಳಿಗೆ ಸಂಬಂಧಪಟ್ಟ ಮಾಹಿತಿ,ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದುಕೊಳ್ಳಲಾಯಿತು. ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಲಾಯಿತು.

ಮಕ್ಕಳಿಂದ ಹರಿದು ಬಂದ ಸಮಸ್ಯೆಗಳ ಪ್ರವಾಹ: ಮಕ್ಕಳು ತಮ್ಮ ಶಾಲೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಕಿಡ್ನಾಪ್ ಆದಾಗ ನಾವು ಏನು ಮಾಡಬೇಕು ಎಂದು ಏಕತ್ತಡ್ಕ ಶಾಲೆಯ ವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ. ಆದರೆ ವಿದ್ಯಾರ್ಥಿಯ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಪೊಲೀಸ್ ಇಲಾಖೆಯವರೇ ಸಭೆಯಲ್ಲಿ ಇರಲಿಲ್ಲ. ದರ್ಬೆತ್ತಡ್ಕ ಶಾಲೆಯ ವಿದ್ಯಾರ್ಥಿನಿ ಯಶ್ಚಿತಾ ಮಾತನಾಡಿ, ನಮ್ಮ ಶಾಲೆಗೆ ಸಿಡಿಲು ಬಿದ್ದು ಕಂಪ್ಯೂಟರ್ ಹಾಳಾಗಿದೆ. ನಮಗೆ ಕಂಪ್ಯೂಟರ್ ಬೇಕು ಎಂದರು. ಪರ್ಪುಂಜ ಶಾಲೆಗೆ ಕೌಂಪೌಂಡು ಬೇಕು, ಗಿಡಗಳನ್ನು ದನಗಳು ತಿನ್ನುತ್ತವೆ ಎಂದು ಚರಣ್‌ರಾಜ್ ಹೇಳಿದರು. ದರ್ಬೆತ್ತಡ್ಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ,ಕೊಳವೆ ಬಾವಿ ಅವಶ್ಯತೆ ಇದೆ, ಕುಂಬ್ರ ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದ್ದು, 300 ಮಕ್ಕಳಿರುವ ಶಾಲೆಗೆ 2 ಶೌಚಾಲಯ ಇದೆ, ಕುಟ್ಟಿನೋಪಿನಡ್ಕ ಶಾಲೆಯ ವಠಾರದಲ್ಲಿ ಗುಂಡಿ ಇದ್ದು ಅಪಾಯ ಕಾದಿದೆ, ಕೈಕಾರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ, ಪರ್ಪುಂಜ ಶಾಲೆಗೆ ಶೌಚಾಲಯ ಬೇಕು, ಕೈಕಾರ ಶಾಲೆಗೆ ಆವರಣ ಗೋಡೆ ಬೇಕು, ಪರ್ಪುಂಜ ಶಾಲೆಗೆ ಕಂಫ್ಯೂಟರ್ ಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಗಳನ್ನು ಮಕ್ಕಳು ಸಲ್ಲಿಸಿದರು.

ಮೌನವಾದ ಪಿಡಿಓ, ಸಮಸ್ಯೆ ಬರೆದುಕೊಂಡ ಕಾರ‍್ಯದರ್ಶಿ: ಮಕ್ಕಳು ತಮ್ಮ ಶಾಲೆಯ ಸಮಸ್ಯೆಗಳನ್ನು ಹೇಳುತ್ತಿದ್ದರೆ ಅಭಿವೃದ್ಧಿ ಅಧಿಕಾರಿ ಗೀತಾರವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಲಿಲ್ಲ. ಮಕ್ಕಳು ಸಮಸ್ಯೆಗಳನ್ನು ಹೇಳುತ್ತಿದ್ದಂತೆ ಕಾರ‍್ಯದರ್ಶಿ ದಾಮೋದರ್‌ರವರು ಅದನ್ನು ಪುಸ್ತಕದಲ್ಲಿ ಬರೆದುಕೊಂಡರೇ ವಿನಹ ಮಕ್ಕಳಿಗೆ  ಭರವಸೆ ನೀಡುವ ಕೆಲಸ ಆಗಲಿಲ್ಲ. ಅಧ್ಯಕ್ಷ ಯತಿರಾಜ್ ರೈಯವರು ಒಂದಿಷ್ಟು ಸಮಾದಾನ ಹೇಳುತ್ತಿದ್ದರು.

ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಬೇಕಾದವರು: ಮಕ್ಳಳ ಗ್ರಾಮಸಭೆಯಲ್ಲಿ ಆಯಾ ಗ್ರಾಮದ ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂಬ ನಿಯಮವಿದ್ದರೂ ಎಲ್ಲಿಯೂ ಇದು ಕಾರ‍್ಯರೂಪಕ್ಕೆ ಬರುತ್ತಿಲ್ಲ. ಪೋಷಕರು, ಅಂಗನವಾಡಿ ಕಾರ‍್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್‌ವೈಸರ್‌ಗಳು, ಕಿರಿಯ ಮಹಿಳಾ ಆರೋಗ್ಯ ಕಾರ‍್ಯಕರ್ತೆಯರು, ಎಲ್ಲಾ ಶಾಲಾ ಶಿಕ್ಷಕರು, ಶಿಕ್ಷಕಿಯರು, ಪೊಲೀಸ್ ಅಧಿಕಾರಿಗಳು, ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಸ್ಥಳೀಯ ಸ್ವಯಂಸೇವಾ ಸಂಘಗಳ ಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಮಕ್ಕಳ ಸಮಸ್ಯೆಗಳಿಗೆ ಸಂಬಂದಪಟ್ಟ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಬೇಕು ಎಂಬ ನಿಯಮವನ್ನು ಸರಕಾರದ ಅಧೀನ ಕಾರ‍್ಯದರ್ಶಿ ಬಿ.ವೀರಣ್ಣರವರು ಸುತ್ತೋಲೆ ಹೊರಡಿಸಿದ್ದರೂ ಪರ್ಪುಂಜ ಶಾಲೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಯಾವುದೇ ಇಲಾಖೆಯ ಒಬ್ಬನೇ ಒಬ್ಬ ಅಧಿಕಾರಿ ಕೂಡ ಇರಲಿಲ್ಲ. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಉಪಾಧ್ಯಕ್ಷೆ ಸುಗುಣ, ತಾ.ಪಂ ಸದಸ್ಯ ಹರೀಶ್ ಬಿಜತ್ರೆ, ಗ್ರಾ.ಪಂ.ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಅರಿಯಡ್ಕ, ಶಶಿಕಿರಣ್ ರೈ, ಉಷಾ ನಾರಾಯಣ, ಜಯರಾಮ ರೈ,ಸುಂದರಿ, ಪರ್ಪುಂಜ ಶಾಲಾ ಮುಖ್ಯಗುರು ರೋಹಿಣಿ ಬಾ ಉಪಸ್ಥಿತರಿದ್ದರು. ಪರ್ಪುಂಜ ಶಾಲಾ ಸಹಶಿಕ್ಷಕ ಅಶ್ರಫ್ ಕಾರ‍್ಯಕ್ರಮ ನಿರೂಪಿಸಿದರು. ಕಾರ‍್ಯದರ್ಶಿ ದಾಮೋದರ್ ಸ್ವಾಗತಿಸಿ, ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಗ್ರಂಥಪಾಲಕಿ ಸಿರೀನಾ ಸಹಕರಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳು ಬೇಕಾಗಿಲ್ಲ

ಮಕ್ಕಳ ಗ್ರಾಮಸಭೆಗೆ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಭಾಗವಹಿಸಬೇಕು ಅನ್ನುವ ಯಾವುದೇ ನಿಯಮ ಇಲ್ಲ. ಗ್ರಾ.ಪಂನವರು ತಿಳಿಸಿದ್ರೆ ಸ್ಥಳೀಯ ಮಟ್ಟದ ಇಲಾಖಾ ಅಧಿಕಾರಿಗಳು ಭಾಗವಹಿಸಬಹುದು. ಮಕ್ಕಳ ಸಮಸ್ಯೆಗಳನ್ನು ತಿಳಿದುಕೊಂಡು ಗ್ರಾಮ ಪಂಚಾಯತುನವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು.

ಜಗದೀಶ್, ತಾ.ಪಂ ಕಾರ‍್ಯನಿರ್ವಹಣಾಧಿಕಾರಿ

ಯಾರಿಗೂ ಮಾಹಿತಿ ನೀಡಲಿಲ್ಲ

ಮಕ್ಕಳ ಗ್ರಾಮಸಭೆಯ ಬಗ್ಗೆ ನಾವು ಸ್ಥಳೀಯ ಮಟ್ಟದ ಯಾವುದೇ ಅಧಿಕಾರಿಗೆ ಮಾಹಿತಿ ನೀಡಲಿಲ್ಲ. ಅಂಗನವಾಡಿ ಕಾರ‍್ಯಕರ್ತೆಯರಿಗೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗಾಗಲಿ ಯಾರಿಗೂ ಮಾಹಿತಿ ನೀಡಲಿಲ್ಲ.

ಗೀತಾ, ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾ.ಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.