ಕೋಡಿಂಬಾಳದಲ್ಲಿ ರೈಲು ತಡೆದು ಪ್ರತಿಭಟನೆ-ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ: ಹೋರಾಟ ಸಮಿತಿ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

*  ಯಾವುದೇ ಗಲಭೇ, ಸಮಸ್ಯೆಯಾಗದಿದ್ದರೂ ಸುಳ್ಳು ಆರೋಪದಡಿ ಪ್ರಕರಣ

*  ಸುಳ್ಳು ಆರೋಪ ಹೊರಿಸಿ ಇನ್ನಷ್ಟು ಹೋರಾಟಕ್ಕೆ  ಪ್ರೇರಣೆ

*  ಸಿಬಿಐನಿಂದ ಸುಪ್ರಿಂ ಕೋರ್ಟ್ ತನಕ ಹೋಗಲು ಸಿದ್ದ

*  ಅಭಿವೃದ್ಧಿಗಾಗಿ ಬಿಡುಗಡೆಗೊಂಡ ಹಣ ಗುಳುಂ ಮಾಡಿದ ಬಗ್ಗೆಯೂ ತನಿಖೆಯಾಗಲಿ

ಕಡಬ: ಕೋಡಿಂಬಾಳದಲ್ಲಿ ರೈಲು ನಿಲುಗಡೆಗಾಗಿ ಎಕ್ಸ್‌ಪ್ರೆಸ್ ರೈಲು ತಡೆದು ಶುಕ್ರವಾರ ಪ್ರತಿಭಟನೆ ಮಾಡಿದ 17ಜನ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವ ರೈಲ್ವೇ ಇಲಾಖಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕೋಡಿಂಬಾಳ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈಲ್ವೇ ಪೋಲೀಸರು ಹೋರಾಟಗಾರರ ವಿರುದ್ಧ ಸುಳ್ಳು ಆರೋಪ ಮಾಡಿ ದುರ್ನಡತೆಯಿಂದ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು. ಕೋಡಿಂಬಾಳ ರೈಲ್ವೇ ನಿಲ್ದಾಣದ ಅಭಿವೃದ್ಧಿ ಹಾಗೂ ಎಕ್ಸ್‌ಪ್ರೆಸ್ ರೈಲು ನಿಲುಗಡೆಗಾಗಿ ಎರಡು ಸಾವಿರಕ್ಕೂ ಅಧಿಕ ಹೋರಾಟಗಾರರು ತಮ್ಮ ಹಕ್ಕಿನ ಬಗ್ಗೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಯಾವುದೇ ಗಲಭೆ ನಡೆದಿರಲಿಲ್ಲ ಆದರೂ ನಮ್ಮ ವಿರುದ್ಧ ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ, ಪ್ರತಿಭಟನೆಯ ಕುರಿತು 25 ದಿನಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ, ರೈಲ್ವೇ ಮೈಸೂರು ಡಿವಿಜನಲ್ ಮ್ಯಾನೇಜರ್ ಅವರಿಗೆ ಮುಖತಃ ಮನವಿ ಸಲ್ಲಿಸಲಾಗಿದೆ, ಮಾತ್ರವಲ್ಲ, ಗುರುವಾರ ರೈಲ್ವೇ ಅಧಿಕಾರಿಗಳ ಸಮಕ್ಷಮದಲ್ಲಿ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈಲ್ವೇ ಅಧಿಕಾಗಳು ಶುಕ್ರವಾರ ಪ್ರತಿಭಟನೆಯ ವೇಳೆ ಹೋರಾಟಗಾರರ ಮನವಿ ಸ್ವೀಕರಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು, ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ತಡೆಯಲು ಉದ್ದೇಶಿಸಿರುವ ರೈಲಿನಲ್ಲಿ ಬಂದು ಮನವಿ ಸ್ವೀಕರಿಸುವ ಭರವಸೆ ನೀಡಿದ್ದರು. ಪ್ರತಿಭಟನೆಯ ದಿನ ಮೂರು ಗಂಟೆಗೆ ಕೋಡಿಂಬಾಳಕ್ಕೆ ಬರುವ ಎಕ್ಸ್‌ಪ್ರೆಸ್ ರೈಲನ್ನು ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿ ಒಂದು ಗಂಟೆ ತಡವಾಗಿ ಬಿಟ್ಟು ಕೋಡಿಂಬಾಳದಲ್ಲಿ ರೈಲ್ವೇ ಪೋಲೀಸರೆ ಮಧ್ಯೆ ನಿಂತು ಐದು ನಿಮಿಷ ರೈಲು ನಿಲುಗಡೆ ಮಾಡಿ ರೈಲಿನಲ್ಲಿ ಬಂದ ರೈಲ್ವೇ ಅಧಿಕಾರಿಗಳು ನಮ್ಮ ಮನವಿ ಸ್ವೀಕರಿಸಿ ಅದೇ ರೈಲಿನಲ್ಲಿ ಹೋಗಿರುತ್ತಾರೆ. ಈ ಎಲ್ಲಾ ಬೆಳವಣಿಗೆಗೆ ರೈಲ್ವೇ ಅಧಿಕಾರಿಗಳೇ ಹೋಣೆಯಾಗುತ್ತಾರೆ, ಆದರೆ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಇನ್ನಷ್ಟು ಹೋರಾಟಕ್ಕೆ ಪ್ರೇರಣೆ ನೀಡಲಾಗಿದೆ. ನಮ್ಮ ಮೇಲೆ ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ದಾಖಲಿಸುತ್ತೇವೆ, ಪೋಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸುತ್ತೇವೆ, ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐನಿಂದ ಸುಪ್ರೀಂ ಕೋರ್ಟ್ ವರೆಗೆ ಹೋಗುತ್ತೇವೆ ಎಂದು ಹೇಳಿದ ಮೀರಾ ಸಾಹೇಬ್ ಕೋಡಿಂಬಾಳ ರೈಲ್ವೇ ನಿಲ್ದಾಣ ಅಭಿವೃದ್ಧಿಗಾಗಿ2008 ರಲ್ಲಿ ರೈಲ್ವೇ ಬಜೆಟ್‌ನಲ್ಲಿ 1.80 ಕೋಟಿ ರೂ ಮೀಸಲಿಡಲಾಗಿತ್ತು. ಹಾಗೂ ತುರ್ತು ದುರಸ್ಥಿಗಾಗಿ 4.50 ಲಕ್ಷ ರೂ ಬಿಡುಗಡೆಯಾಗಿತ್ತು ಎನ್ನುವ ಬಗ್ಗೆ ಮಾಹಿತಿ ಇದೆ, ಆದರೆ ದುರಸ್ತಿಯಾಗಲಿ ಅಭಿವೃದ್ಧಿಯಾಗಲಿ ಮಾಡಿದೆ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ  ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಮಾತ್ರವಲ್ಲ ನಮಗೆ ನೀಡಿದ ಭರವಸೆಯಂತೆ ಮೂರು ತಿಂಗಳಲ್ಲಿ ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸದಿದ್ದರೆ ಮತ್ತೆ ಉಗ್ರ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಎತ್ತಿನ ಹೊಳೆ ಹೋರಾಟಕ್ಕೆ ಬೆಂಬಲ:

ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಎತ್ತಿನ ಹೊಳೆ ಯೋಜನೆಯ ವಿರುದ್ಧ ನಡೆಯುವ ಪ್ರತಿಭಟನಾ ಜಾಥಾಕ್ಕೆ ಕೋಡಿಂಬಾಳ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಮಿತಿಯ ಅಧ್ಯಕ್ಷ ಮೀರಾ ಸಾಹೇಬ್ ಇದೇ ಸಂದರ್ಭದಲ್ಲಿ ಹೇಳಿದರು. ಸಂಸದರ ನೇತೃತ್ವದಲ್ಲಿ ದಶಂಬರ್ 10 ರಂದು ಸುಬ್ರಹ್ಮಣ್ಯದಿಂದ ಹೊರಡುವ ಎತ್ತಿನ ಹೊಳೆ ವಿರುದ್ಧದ ಜಾಥಾಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಎತ್ತಿನ ಹೊಳೆಯಿಂದ ಹರಿಯುವ ನೀರು ಕೆಂಪು ಹೊಳೆಯ ಮುಖಾಂತರ ಕುಮಾರಾಧಾರ ಸೇರಿ ಉಪ್ಪಿನಂಗಡಿಯಲ್ಲಿ ನೇತ್ರಾವತಿಯ ಒಡಲು ಸೇರಿ ಅನೇಕ ರೈತಾಪಿ ಜನರ ಜೀವನಾಡಿಯಾಗಿದೆ, ಮಾತ್ರವಲ್ಲ ಜಿಲ್ಲೆಗೆ ಕುಡಿಯುವ ನೀರಿನ ಮೂಲವಾಗಿದೆ, ಎತ್ತಿನ ಹೊಳೆ ಯೋಜನೆ ಅನುಷ್ಟಾನವಾದರೆ ಜೀವ ನದಿಗಳ ನೀರು ಬರಿದಾಗಿ ನೀರಿಗಾಗಿ ಪರಿತಪಿಸಬೇಕಾಗುತ್ತದೆ,  ಪರಿಣಾಮ ಕೆಟ್ಟದಾಗಿ ಮೂಡಿಬರಲಿದೆ, ಮಾತ್ರವಲ್ಲ ಈ ಭಾಗದಲ್ಲಿ ಯಾವುದೇ ವೆಂಟೆಡ್ ಡ್ಯಾಮ್‌ಗಳು ಇಲ್ಲ, ಕಳೆದ 40 ವರ್ಷಗಳಿಂದ ಈ ಭಾಗದ ಹಲವಾರು ಕೆರೆಗಳನ್ನು ಅಭಿವೃದ್ಧಿಪಡಿಸಿಲ್ಲ, ಖಾಸಗಿಯವರಿಂದ ಸ್ವಾಧೀನವಾಗಿ ಕೆರೆಗಳು ಇನ್ನಿಲ್ಲದಂತಾಗಿದೆ, ಇದರಿಂದಾಗಿ ನದಿಗಳು ಬರಡಾದರೆ ನೀರಿನ ಮೂಲ ಎಲ್ಲಿ ಎಂದು ಹುಡುಕಬೇಕಾಗಬಹುದು ಇಂತ ಕಾಲಘಟ್ಟದಲ್ಲಿ ನದಿಗಳಲ್ಲಿ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿ ರೈತರಿಗೆ ಮೋಸ ಮಾಡಲು ಹುನ್ನಾರ ನಡೆಸಲಾಗುತ್ತಿದೆ, ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವ ನದಿಗಳನ್ನು ಉಳಿಸುವ ನೆಲೆಯಲ್ಲಿ ಸಂಸದರ ನೇತೃತ್ವದಲ್ಲಿ ಎತ್ತಿನ ಹೊಳೆ ವಿರೋಧಿ ಹೋರಾಟದ ರಥ ಯಾತ್ರೆಗೆ  ನಾವೆಲ್ಲಾ ಸಂಪೂರ್ಣ ಬೆಂಬಲ ನೀಡುವ ಅವಶ್ಯಕತೆಯಿದೆ. ಜಾಥಾ ಮರ್ದಾಳ ಮುಖಾಂತರ ಸಾಗುವ ಸಂದರ್ಭದಲ್ಲಿ ಮರ್ದಾಳದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದೆ ಎಂದು ಮೀರಾ ಸಾಹೇಬ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಸೂರ್ಯನಾರಾಯಣ ಭಟ್ ಪಟ್ರೋಡಿ, ಪಿ.ಟಿ.ಸೈಮನ್ ಕೋಡಿಂಬಾಳ, ಜನಾರ್ಧನ ಗೌಡ ಪಣೆಮಜಲು, ತಮ್ಮಯ್ಯ ಗೌಡ ಕುತ್ಯಾಡಿ, ಸುಂದರ ಗೌಡ ಬಳ್ಳೇರಿ, ಎಲ್ಸಿ ತೋಮಸ್ ಕುಟ್ರುಪ್ಪಾಡಿ, ಶಿವರಾಮ ಗೌಡ ಕಲ್ಕಳ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.