ಪುತ್ತೂರಿನಲ್ಲಿ ಸುವಿಚಾರ ಪ್ರಕಾಶನ ಉದ್ಘಾಟನೆ, ಕವಿಗೋಷ್ಠಿ ಸಾಹಿತಿಗಳು ಮಾನವೀಯ ಮೌಲ್ಯ ಅಳವಡಿಸಿಕೊಂಡಿರಬೇಕು-ಅಬ್ದುಲ್ ಹೈ

Puttur_Advt_NewsUnder_1
Puttur_Advt_NewsUnder_1

 

suvicharaಪುತ್ತೂರು: ಸುವಿಚಾರ ಪ್ರಕಾಶನ ಸಂಸ್ಥೆಯ ಉದ್ಘಾಟನೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಡಿ.3 ರಂದು ಪರ್ಲಡ್ಕ ಡಾ|ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು.

ಉದ್ಘಾಟಿಸಿದ ಬಳ್ಳಾರಿಯ ಹಿರಿಯ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ ಬರಹಗಾರರು ಜಾತಿ, ಮತ, ಧರ್ಮದ ಅಮಲಿನಿಂದ ಹೊರಗಿದ್ದು ಮಾನವೀಯ ಮೌಲ್ಯ ಅಳವಡಿಸಿಕೊಂಡವರಾಗಿರಬೇಕು, ಅಂತವರ ಸಾಹಿತ್ಯಗಳು ಮಾತ್ರ ಸಮಾಜಕ್ಕೆ ಪ್ರಯೋಜನಕಾರಿಯಾಗಿ ಇರಲಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಸದುಪಯೊಗಪಡಿಸಿಕೊಂಡಿರುವುದರ ಫಲವಾಗಿ ಇಲ್ಲಿ ’ಸುವಿಚಾರ ಪ್ರಕಾಶನ’ ಎನ್ನುವ ಸಂಸ್ಥೆ ಹುಟ್ಟಿಕೊಂಡಿದೆ ಎಂದ ಅವರು ಪರಸ್ಪರ ಮನಸ್ಸುಗಳನ್ನು ಕಟ್ಟುವ ಮೂಲಕ ಮನುಷ್ಯತ್ವ ಬೆಸೆಯುವ ಸಂಸ್ಥೆಯಾಗಿ ಸುವಿಚಾರ ಬೆಳೆಯಲಿ ಎಂದು ಹಾರೈಸಿದರು.

ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ ಕುಕ್ಕಿಲ ಮಾತನಾಡಿ ಬರಹಗಾರರು ವಿಚಾರವೊಂದರ ಕುರಿತು ಬರೆಯುವಾಗ ಅದನ್ನು ಆಳವಾಗಿ ಅಭ್ಯಸಿಸಿ ಬರೆಯಬೇಕು ಎಂದು ಹೇಳಿದರು. ಸಾಮಾಜಿಕ ಮೌಲ್ಯಗಳು ಅಪಮೌಲ್ಯಗೊಂಡಾಗ ಸಮಾಜದ ಮೇಲೆ ದುಷ್ಟ ಪರಿಣಾಮ ಬಿರುತ್ತದೆ ಎಂದ ಅವರು ಬರಹಗಳು ಸಮಾಜವನ್ನು ಕಟ್ಟುವಂತಿರಬೇಕೇ ವಿನಃ ಸಮಾಜವನ್ನು ಒಡೆಯುವಂತಿರಬಾರದು ಎಂದರು.

ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಮಾತನಾಡಿ ಬರಹಗಾರರು ಯಾವುದೇ ಪ್ರಭಾವಕ್ಕೆ ಒಳಗಾಗದೇ ಯೋಚಿಸಿ ಮುಕ್ತವಾಗಿ ಬರೆಯಬೇಕು ಆಗ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ ಎಂದು ಹೇಳಿದರು. ಜಯಕರ್ನಾಟಕ ಪುತ್ತೂರು ತಾಲೂಕು ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ ಬರವಣಿಗೆ ಬೆಳಗಬೇಕಾದರೆ ಬರಹಗಾರರ ಉತ್ಪಾದನೆಯಾಗಬೇಕು ಈ ನಿಟ್ಟಿನಲ್ಲಿ ಸುವಿಚಾರ ಪ್ರಕಾಶನ ತಂಡ ಉತ್ತಮ ಬರಹಗಾರರನ್ನು ಸಿದ್ದಪಡಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕ.ರ.ವೇ ಸ್ವಾಭಿಮಾನಿ ಬಣ ದ.ಕ ಜಿಲ್ಲಾಧ್ಯಕ್ಷ ಹಾಜಿ ಮುಹಮ್ಮದ್ ಕುಕ್ಕುವಳ್ಳಿ ಮಾತನಾಡಿ ಸುಖೀ ಸಮಾಜ ನಿರ್ಮಾಣ ಆಗಬೇಕಾದರೆ ಎಲ್ಲ ವರ್ಗದ ಜನತೆಯನ್ನು ಒಟ್ಟು ಸೇರಿಸಿಕೊಂಡು ಕಾರ್ಯಕ್ರಮ ಸಂಘಟಿಸಿ ಅದರ ಸವಿಯನ್ನು ಉಣಬೇಕು ಎಂದು ಹೇಳಿ ಶುಭ ಹಾರೈಸಿದರು. ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಪುಸ್ತಕ ಪರಿಚಯ ಮಾಡಿದರು. ಸಾಹಿತಿ ಅಬ್ದುಲ್ ಸಮದ್ ಹಾಜಿ ಬಾವಾ ಅವರು ಸುವಿಚಾರ ಪ್ರಕಾಶನ ಹೊರತಂದ ಮೊದಲ ಪುಸ್ತಕ ’ಜೇನು ಗೂಡು’ವನ್ನು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ  ಸಾಹಿತಿ ಬಶೀರ್ ಅಹ್ಮದ್ ಕಿನ್ಯ, ಅಲ್ತಾಫ್ ಬಿಲಗುಳ, ತು.ರ.ವೇ ಜಿಲ್ಲಾಧ್ಯಕ್ಷ ಹಸನ್ ಮಾಡೂರು, ಸವಣೂರು ಸಾಹಿತ್ಯ ವೇದಿಕೆ ಉಪಾಧ್ಯಕ್ಷ ಹೈದರ್ ಆಲಿ ಐವತ್ತೊಕ್ಲು ಉಪಸ್ಥಿತರಿದ್ದರು. ಈಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸುವಿಚಾರ ಪ್ರಕಾಶನದ ಸಂಚಾಲಕ ಹಕೀಂ ಪದಡ್ಕ ಸ್ವಾಗತಿಸಿದರು. ಮಹಮ್ಮದ್ ಗಝ್ಝಾಲಿ ಹಾಗೂ ಸಫ್ವಾನ್ ಹಸನ್ಮುಖಿ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

ಕವಿಗೋಷ್ಠಿ: ಬಳಿಕ ಸಾಂಸ್ಕೃತಿಕ ಕಲಾಕೇಂದ್ರ ಬೊಳ್ವಾರು ಇದರ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ನಾನು ಕವಿ ಅಲ್ಲ.. ನನ್ನನ್ಯಾಕೆ ಕವಿಗೋಷ್ಠಿಗೆ ಹಾಕ್ತೀರಿ

ನಾನು ಒಬ್ಬ ಸಾಂಸ್ಕೃತಿಕ ಸಂಘಟಕ ಹಾಗೂ ನಟ, ನಾನು ಕವಿ ಅಲ್ಲ, ಆದರೂ ನನ್ನನ್ನು ಹಲವು ಕಡೆ ಕವಿಗೋಷ್ಠಿಗೆ ನೇತೃತ್ವ ವಹಿಸಲು ಹೇಳುತ್ತಿದ್ದಾರೆ. ಕವಿ ಅಲ್ಲದಿದ್ದರೂ ನನ್ನನ್ನು ಕವಿ ಎಂದು ಏಕೆ ಕರೆಯುತ್ತಾರೆ ಎಂಬುವುದು ನನಗೆ ಅರ್ಥವೇ ಆಗುತ್ತಿಲ್ಲ. ಎಲ್ಲರಿಗೂ ನಾನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ ನಾನು ಕವಿಯಲ್ಲ ನಾನೊಬ್ಬ ಸಾಂಸ್ಕೃತಿಕ ಸಂಘಟಕ ಜೊತೆಗೆ ನಾನೊಬ್ಬ ನಟ.

-ಚಿದಾನಂದ ಕಾಮತ್ ಕಾಸರಗೋಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.