Breaking News

ತಾ| ಯುವಜನ ಒಕ್ಕೂಟದ ಪ್ರಶಸ್ತಿ ಪ್ರಕಟ; *ಸುನೀಲ್ ಕಾವು, ಗುರುಪ್ರಿಯಾ ನಾಯಕ್‌ಗೆ ಅತ್ಯುತ್ತಮ ಯುವ ಪ್ರಶಸ್ತಿ * ಪ್ರವೀಣ್ ಚೆನ್ನಾವರ, ದೀಪಕ್ ಕುಲಾಲ್‌ರಿಗೆ ವೈಯುಕ್ತಿಕ ಪರಿಸರ ಜಾಗೃತಿ ಪ್ರಶಸ್ತಿ * ರವಿಚಂದ್ರ ರೈ ಕುಂಬ್ರ, ಪರಮೇಶ್ವರ ದೇವಾಡಿಗರಿಗೆ ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿ * ಸದಾನಂದ ಆಚಾರ್ಯ, ಗೋಪಾಲಕೃಷ್ಣರಿಗೆ ಸಾಂಸ್ಕೃತಿಕ ಸೌರಭ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

yuvajana

*ನರಿಮೊಗರು ಪ್ರಖ್ಯಾತಿ ಯುವತಿ ಮಂಡಲಕ್ಕೆ ಅತ್ಯುತ್ತಮ ಯುವ ಸಂಸ್ಥೆ, ನನ್ಯ ತುಡರ್ ಯುವಕ ಮಂಡಲಕ್ಕೆ ಪರಿಸರ ಜಾಗೃತಿ ಪ್ರಶಸ್ತಿ

* ಚಂದ್ರಶೇಖರ ರೈ ಇಳಂತಾಜೆ, ಕುಸುಮಾ ಪಿ. ಶೆಟ್ಟಿಯವರಿಗೆ ಸನ್ಮಾನ

ಪುತ್ತೂರು: ತಾಲೂಕು ಯುವಜನ ಒಕ್ಕೂಟದ ವತಿಯಿಂದ ಕೊಡಮಾಡುವ ತಾಲೂಕಿನ ಅತ್ಯುತ್ತಮ ಯುವ ಪ್ರಶಸ್ತಿ, ವೈಯುಕ್ತಿಕ ಪರಿಸರ ಜಾಗೃತಿ ಪ್ರಶಸ್ತಿ, ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿ, ಸಾಂಸ್ಕೃತಿಕ ಸೌರಭ ಪ್ರಶಸ್ತಿ, ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದೆ.

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮತ್ತು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ. ರವರ ನೇತೃತ್ವದ ಆಯ್ಕೆ ಸಮಿತಿಯು ದ.8ರಂದು ಆಯ್ಕೆ ಪ್ರಕ್ರಿಯೆ ನಡೆಸಿ ಸುನೀಲ್ ಕಾವು ಮತ್ತು ಗುರುಪ್ರಿಯ ನಾಯಕ್‌ರವರಿಗೆ ತಾಲೂಕಿನ ಅತ್ಯುತ್ತಮ ಯುವ ಪ್ರಶಸ್ತಿ, ಪ್ರವೀಣ್ ಚೆನ್ನಾವರ ಮತ್ತು ದೀಪಕ್ ಕುಲಾಲ್‌ರಿಗೆ ವೈಯುಕ್ತಿಕ ಪರಿಸರ ಜಾಗೃತಿ ಪ್ರಶಸ್ತಿ, ರವಿಚಂದ್ರ ರೈ ಕುಂಬ್ರ ಮತ್ತು ಪರಮೇಶ್ವರ ದೇವಾಡಿಗರಿಗೆ ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿ, ಸದಾನಂದ ಆಚಾರ್ಯ ಮತ್ತು ಗೋಪಾಲಕೃಷ್ಣರಿಗೆ ಸಾಂಸ್ಕೃತಿಕ ಸೌರಭ ಪ್ರಶಸ್ತಿ, ನರಿಮೊಗರು ಪ್ರಖ್ಯಾತಿ ಯುವತಿ ಮಂಡಲಕ್ಕೆ ಅತ್ಯುತ್ತಮ ಯುವ ಸಂಸ್ಥೆ, ನನ್ಯ ತುಡರ್ ಯುವಕ ಮಂಡಲವನ್ನು ಪರಿಸರ ಜಾಗೃತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸುನೀಲ್ ಕಾವು, ಗುರುಪ್ರಿಯಾ ನಾಯಕ್‌ಗೆ ಅತ್ಯುತ್ತಮ ಯುವ ಪ್ರಶಸ್ತಿ: ಸುನೀಲ್ ಕಾವು ಮತ್ತು ಗುರುಪ್ರಿಯಾ ನಾಯಕ್‌ರವರು ಅತ್ಯುತ್ತಮ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುನೀಲ್ ಕಾವುರವರ ಪರಿಚಯ: ಮಾಡ್ನೂರು ಗ್ರಾಮದ ನಿಧಿಮುಂಡ ನಿವಾಸಿ ನಾರಾಯಣ ಗೌಡ ಮತ್ತು ಪದ್ಮಾವತಿ ದಂಪತಿಯ ಪುತ್ರ, ಸುದ್ದಿ ಬಿಡುಗಡೆ ವರದಿಗಾರ ಸುನೀಲ್‌ರವರು ಬಿಬಿಎಂ ಪದವೀಧರರಾಗಿದ್ದು, ಕಾವು ನನ್ಯ ತುಡರ್ ಯುವಕ ಮಂಡಲದಲ್ಲಿ 5 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಸೇವೆ ಸಲ್ಲಿಸಿದ್ದು, ಇವರ ಅವಧಿಯಲ್ಲಿ ಸಂಘಕ್ಕೆ ಭಾರತ ಸರಕಾರದ ನೆಹರೂ ಯುವ ಕೇಂದ್ರದಿಂದ ಜಿಲ್ಲಾ ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ, ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲದಿಂದ ಶ್ರವಣ ಕೀರ್ತಿ ಪ್ರಶಸ್ತಿ ಲಭಿಸಿತ್ತು, 2014ರಲ್ಲಿ ಕಾವುನಲ್ಲಿ ತಾಲೂಕು ಮಟ್ಟದ ಯುವಜನ ಮೇಳ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದ ಸುನೀಲ್‌ರವರು ಯುವಜನ ಮೇಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಗುರುಪ್ರಿಯ ನಾಯಕ್‌ರವರ ಪರಿಚಯ: ಗುರುಪ್ರಿಯ ನಾಯಕ್‌ರವರು ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿಯಾಗಿದ್ದು, 2007ರಲ್ಲಿ ನರಿಮೊಗರುವಿನಲ್ಲಿ ಪ್ರಖ್ಯಾತಿ ಯುವತಿ ಮಂಡಲವನ್ನು ಸ್ಥಾಪನೆ ಮಾಡಿ ಕಳೆದ 9 ವರ್ಷದಿಂದಲೂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಪ್ರಖ್ಯಾತಿ ಯುವತಿ ಮಂಡಲವು ಪ್ರತಿ ವರ್ಷವೂ ಯುವಜನ ಮೇಳದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ 6 ವರ್ಷದಿಂದ ತಾಲೂಕಿನ ಸಮಗ್ರ ಪ್ರಶಸ್ತಿ ಗಳಿಸಿದೆ, ಗುರುಪ್ರಿಯಾ ನಾಯಕ್‌ರವರು ಏಕಪಾತ್ರಾಭಿನಯ, ಭಾವಗೀತೆ, ಲಾವಣಿಯಲ್ಲಿ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಮೂರು ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ, ಅಲ್ಲದೇ ಗುಂಪು ಸ್ಪರ್ಧೆಗಳಾದ ಗೀಗೀಪದ, ರಾಗಿ ಬೀಸುವ ಪದ, ಜನಪದ ಗೀತೆಯಲ್ಲೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಇವರು ಮಂಗಳೂರು ನೆಹರೂ ಯುವ ಕೇಂದ್ರದ ತಾಲೂಕು ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರವೀಣ್ ಚೆನ್ನಾವರ, ದೀಪಕ್ ಕುಲಾಲ್‌ರಿಗೆ ವೈಯುಕ್ತಿಕ ಪರಿಸರ ಜಾಗೃತಿ ಪ್ರಶಸ್ತಿ: ಪ್ರವೀಣ್ ಚೆನ್ನಾವರ ಮತ್ತು ದೀಪಕ್ ಕುಲಾಲ್‌ರವರು ವೈಯುಕ್ತಿಕ ಪರಿಸರ ಜಾಗೃತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರವೀಣ್ ಚೆನ್ನಾವರರವರು ಪಾಲ್ತಾಡು ಶ್ರೀವಿಷ್ಣು ಮಿತ್ರವೃಂದ ಹಾಗೂ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಉಪಾಧ್ಯಕ್ಷರಾಗಿ, ಸವಣೂರು ಯುವಕ ಮಂಡಲದ ಕಾರ್ಯದರ್ಶಿಯಾಗಿ, ಸವಣೂರು ಜೆಸಿಐನ ಪ್ರಧಾನ ಕಾರ್ಯದರ್ಶಿಯಾಗಿ, ನಿಯೋಜಿತ ಅಧ್ಯಕ್ಷನಾಗಿ, ಕಡಬ ವಲಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಸದಸ್ಯನಾಗಿ, ಚೆನ್ನಾವರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷನಾಗಿ, ಪಾಲ್ತಾಡಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕನಾಗಿ, ಸುದ್ದಿ ಬಿಡುಗಡೆಯ ಗೌರವ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೀಪಕ್ ಕುಲಾಲ್‌ರವರು ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿಯಾಗಿದ್ದು, ಕೌಡಿಚ್ಚಾರ್ ವಿವೇಕಾನಂದ ಯುವಕ ವೃಂದದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ, ಇವರ ಅವಧಿಯಲ್ಲಿ ಸಂಘದ ಮೂಲಕ ಪರಿಸರ ಜಾಗೃತಿಗಾಗಿ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ, ಇವರು ಶ್ರೀಕೃಷ್ಣ ಭಜನಾ ಮಂದಿರದ ಸದಸ್ಯರಾಗಿದ್ದು, ಕುಂಬಾರರ ಗುಡಿ ಕೈಗಾರಿಕೆ ಸಹಕಾರ ಸಂಘದ ಕೌಡಿಚ್ಚಾರ್ ಶಾಖೆಯಲ್ಲಿ ಸಿಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನರಿಮೊಗರು ಪ್ರಖ್ಯಾತಿ ಯುವತಿ ಮಂಡಲಕ್ಕೆ ಅತ್ಯುತ್ತಮ ಯುವ ಸಂಸ್ಥೆ, ನನ್ಯ ತುಡರ್ ಯುವಕ ಮಂಡಲಕ್ಕೆ ಪರಿಸರ ಜಾಗೃತಿ ಪ್ರಶಸ್ತಿ: ನರಿಮೊಗರು ಪ್ರಖ್ಯಾತಿ ಯುವತಿ ಮಂಡಲಕ್ಕೆ ತಾಲೂಕಿನ ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಲಭಿಸಿದ್ದು, ಈ ಸಂಘವು 2007ರಲ್ಲಿ ಪ್ರಾರಂಭಗೊಂಡು ಕಳೆದ 9 ವರ್ಷದಿಂದ ತನ್ನ ಕಾರ್ಯವ್ಯಾಪ್ತಿಯಲ್ಲಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಪ್ರತಿ ವರ್ಷವೂ ಯುವಜನ ಮೇಳದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ 6 ವರ್ಷದಿಂದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ ಕೆಲವು ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲೂ ಪ್ರಥಮ ಸ್ಥಾನಗಳಿಸಿದ ಹೆಗ್ಗಳಿಕೆ ಹೊಂದಿದೆ.

ನನ್ಯ ತುಡರ್ ಯುವಕ ಮಂಡಲದ ಪರಿಚಯ: ಮಾಡ್ನೂರು ಗ್ರಾಮದ ಕಾವು ನನ್ಯ ತುಡರ್ ಯುವಕ ಮಂಡಲಕ್ಕೆ ತಾಲೂಕಿನ ಪರಿಸರ ಜಾಗೃತಿ ಪ್ರಶಸ್ತಿ ಲಭಿಸಿದ್ದು, ಈ ಸಂಘವು 2011ರಲ್ಲಿ ಮದ್ಲ ಸುಬ್ರಾಯ ಬಲ್ಯಾಯರಿಂದ ಸ್ಥಾಪಿತಗೊಂಡು, 5 ವರ್ಷಗಳ ಕಾಲ ಭಾಸ್ಕರ ಬಲ್ಯಾಯರ ಅಧ್ಯಕ್ಷತೆಯಲ್ಲಿ ಮುನ್ನಡೆದು ಭಾರತ ಸರಕಾರದ ನೆಹರೂ ಯುವ ಕೇಂದ್ರದಿಂದ ಜಿಲ್ಲಾ ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ, ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲದಿಂದ ಶ್ರವಣ ಕೀರ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು, ಪ್ರಸ್ತುತ ಚಂದ್ರಶೇಖರ ಬಲ್ಯಾಯರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತುಡರ್ ಸಂಘಟನೆಯು 2014 ಮತ್ತು 2015 ರಲ್ಲಿ ಜುಲೈ ತಿಂಗಳಿನಲ್ಲಿ ಮನೆ ಮನೆಗೆ ತೆರಳಿ ಪ್ರತಿ ಮನೆಯಲ್ಲೂ ತಲಾ 3 ಸಸಿಗಳನ್ನು ನೆಟ್ಟು ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಆಚರಿಸಿ ಒಟ್ಟು 110 ಮನೆಗಳಲ್ಲಿ 330 ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಿತ್ತು. ಅಲ್ಲದೇ ಶಾಲಾ ಪರಿಸರ ಸ್ವಚ್ಛತೆ, ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಪ್ರಶಸ್ತಿಯು ಯುವಕ ಮಂಡಲಕ್ಕೆ ಮೂರನೇ ಪ್ರಶಸ್ತಿಯಾಗಿದೆ.

ರವಿಚಂದ್ರ ರೈ ಕುಂಬ್ರ, ಪರಮೇಶ್ವರ ದೇವಾಡಿಗರಿಗೆ ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿ: ನಾಟಕ ಕಲಾವಿದ ರವಿಚಂದ್ರ ರೈ ಕುಂಬ್ರ ಮತ್ತು ಸ್ಯಾಕ್ಸೋಫೋನ್ ವಾದಕ ಪರಮೇಶ್ವರ ದೇವಾಡಿಗರವರು ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರವಿಚಂದ್ರ ರೈ ಕುಂಬ್ರರವರು ಕೆದಂಬಾಡಿ ಯುವರಂಗದ ಅಧ್ಯಕ್ಷರಾಗಿದ್ದು, ತುಳು ರಂಗ ಭೂಮಿಯಲ್ಲಿ ಉದಯೋನ್ಮುಖ ಕಲಾವಿದನಾಗಿ ಸ್ತ್ರೀಪಾತ್ರಗಳಿಗೆ ಜೀವತುಂಬಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಪರಮೇಶ್ವರ ದೇವಾಡಿಗರವರು ಸವಣೂರು ಯುವಕ ಮಂಡಲದ ಸದಸ್ಯರಾಗಿದ್ದು, ಸ್ಯಾಕ್ಸೋಫೋನ್ ವಾದಕನಾಗಿ ವಿಶೇಷ ಪರಿಣಿತರಾಗಿ, ಆಕಾಶವಾಣಿ ಕಲಾವಿದನಾಗಿ ಗುರುತಿಸಿಕೊಂಡು, ಯುವಜನ ಮೇಳದಲ್ಲೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಸದಾನಂದ ಆಚಾರ್ಯ, ಗೋಪಾಲಕೃಷ್ಣರಿಗೆ ಸಾಂಸ್ಕೃತಿಕ ಸೌರಭ ಪ್ರಶಸ್ತಿ: ವಿದ್ವಾನ್ ಗೋಪಾಲಕೃಷ್ಣ ಮತ್ತು ಸದಾನಂದ ಆಚಾರ್ಯರವರು ಸಾಂಸ್ಕೃತಿಕ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿದ್ವಾನ್ ಗೋಪಾಲಕೃಷ್ಣರವರು ವೀರಮಂಗಲ ಶ್ರೀ ಮಹಾವಿಷ್ಣು ಸೇವಾ ಸಮಿತಿಯ ಪೂರ್ವಾಧ್ಯಕ್ಷರಾಗಿದ್ದು, ತಾಲೂಕಿನಾದ್ಯಂತ ಕಳೆದ 2 ದಶಕಗಳಿಂದ ಶಾಲೆಗಳಲ್ಲಿ ನೃತ್ಯ, ಸಂಗೀತ, ಶಿಕ್ಷಣವನ್ನು ನೀಡುವುದರೊಂದಿಗೆ ಸಾಹಿತ್ಯ ರಚನೆಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಸದಾನಂದ ಆಚಾರ್ಯರವರು ಕಾಣಿಯೂರು ಅಬೀರ ನಿವಾಸಿಯಾಗಿದ್ದು ಕಾಣಿಯೂರು ಲಕ್ಷ್ಮೀನರಸಿಂಹ ಯುವಕ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಘಟನೆಯ ಮೂಲಕ ಯಕ್ಷಗಾನ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಚಂದ್ರಶೇಖರ ರೈ ಇಳಂತಾಜೆ, ಕುಸುಮಾ ಪಿ. ಶೆಟ್ಟಿಯವರಿಗೆ ಸನ್ಮಾನ: ಕೆಯ್ಯೂರು ಶ್ರೀ ದುರ್ಗಾ ಯುವಕ ಮಂಡಲದ ಮಾರ್ಗದರ್ಶಕ ಚಂದ್ರಶೇಖರ ರೈ ಇಳಂತಾಜೆ, ಸವಣೂರು ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ. ಶೆಟ್ಟಿಯವರಿಗೆ ಸನ್ಮಾನ ನಡೆಯಲಿದೆ.

ನಾಳೆ ಪ್ರಶಸ್ತಿ ಪ್ರದಾನ:

ದ.10,11ರಂದು ಕುದ್ಮಾರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಯುವಜನ ಮೇಳದ ಸಂದರ್ಭದಲ್ಲಿ ದ.10ರಂದು ರಾತ್ರಿ 8 ಗಂಟೆಗೆ ನಡೆಯಲಿರುವ ಸಾಧನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ, ಶಾಸಕಿ ಶಕುಂತಳಾ ಶೆಟ್ಟಿಯವರು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಸುರೇಶ್ ರೈ ಸೂಡಿಮುಳ್ಳುರವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.