ಚಳಿಗಾಲದಲ್ಲಿ  ಆರೋಗ್ಯ ರಕ್ಷಣೆ

Puttur_Advt_NewsUnder_1
Puttur_Advt_NewsUnder_1

raghavendraನವೆಂಬರ್ ಮಧ್ಯದಿಂದ  ಜನವರಿ  ಮಧ್ಯದವರೆಗಿನ ಕಾಲ, ಅಂದರೆ  ಮಾರ್ಗಶಿರ ಹಾಗೂ ಪೌಷ್ಯ ಮಾಸಗಳನ್ನು ಹೇಮಂತಋತು ಎಂದು ಭಾರತೀಯ ಕಾಲಮಾನದಲ್ಲಿ ಕರೆಯಲಾಗಿದೆ. ದಕ್ಷಿಣಾಯನದ ಕಾಲವನ್ನು ವಿಸರ್ಗಕಾಲ ಎಂದಿದ್ದಾರೆ. ಹೇಮಂತವು ದಕ್ಷಿಣಾಯನದ್ದೇ  ಭಾಗ. ಚಳಿಗಾಲ ಎಂದು ನಾವೆಲ್ಲ  ಸಾಮಾನ್ಯವಾಗಿ ಕರೆಯುತ್ತೇವೆ. ಇದು  ಸೂರ‍್ಯನು ಸಕಲ  ಚರಾಚರಗಳಿಗೆ ಶಕ್ತಿಪ್ರದಾನ ಮಾಡುವ ಕಾಲ. ಚಂದ್ರನು ಪ್ರಭಾವಶಾಲಿಯಾಗಿರುತ್ತಾನೆ. ಭೂಮಿಯು  ಮೋಡ, ನೀರು ಹಾಗೂ ಶೀತಗಾಳಿಯಿಂದ  ತಂಪಾಗಿರುವ ಸಮಯ. ಮಧುರ(ಸಿಹಿ), ಅಮ್ಲ(ಹುಳಿ), ಲವಣ(ಉಪ್ಪು)ಗಳು  ಅಧಿಕವಾಗಿರುವ ಆಹಾರ ಸೇವನೆ  ಯೋಗ್ಯ. ಗೋಧಿ, ಉದ್ದಿನ ಉತ್ಪನ್ನಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು,  ಕಬ್ಬಿನಿಂದ ತಯಾರಿಸಿದ ಬೆಲ್ಲ-ಸಕ್ಕರೆ ಪ್ರಶಸ್ತ. ಅಭ್ಯಂಗ, ವ್ಯಾಯಾಮ, ಚರ್ಮ-ರೇಷ್ಮೆ-ಉಣ್ಣೆಗಳಿಂದ ತಯಾರಿಸಿದ ಬಟ್ಟೆಗಳನ್ನು  ಧರಿಸುವುದು, ಸೂರ‍್ಯನ ಬಿಸಿಲಿಗೆ ಮೈಯ್ಯೊಡ್ಡುವುದು ಇತ್ಯಾದಿ  ಕ್ರಮಗಳನ್ನು   ಅನುಸರಿಸಬೇಕು. ಈ ಕಾಲದಲ್ಲಿ  ಜೀರ್ಣಶಕ್ತಿ ಅಥವಾ ಜಠರಾಗ್ನಿ ಪ್ರಬಲವಾಗಿರುವುದು.ಆದುದರಿಂದ ಜೀರ್ಣಕ್ರಿಯೆಗೆ ಹಗುರವಲ್ಲದ ಗುರುವಾದ ಆಹಾರಗಳನ್ನು  ಸೇವಿಸುವುದು  ಒಳ್ಳೆಯದು. ಶೀತಗುಣ ಪರಿಸರದಲ್ಲಿರುವುದರಿಂದ ಅದನ್ನು ಉಲ್ಬಣಗೊಳ್ಳದಂತೆ ಮಾಡಲು ಬಿಸಿನೀರನ್ನು ಕುಡಿಯುವುದು ಒಳ್ಳೆಯದು. ಶರೀರಬಲ ಚೆನ್ನಾಗಿರುವುದರಿಂದ ವ್ಯಾಯಾಮಕ್ಕೆ ಸಕಾಲ. ಜಿಮ್‌ಗೆ ಹೋಗುವ ಅಭ್ಯಾಸ ಇಟ್ಟುಕೊಂಡವರು  ಹೆಚ್ಚು ಹೊತ್ತನ್ನು ಜಿಮ್‌ನಲ್ಲಿ  ಕಳೆಯಬಹುದಾಗಿದೆ.

ಆಯಾ ಋತುಧರ್ಮಕ್ಕೆ ಸರಿಯಾಗಿ  ನಮ್ಮ  ಆಚರಣೆಗಳಿದ್ದರೆ  ಸಾಮರ್ಥ್ಯವು ಹೆಚ್ಚುತ್ತದೆ ಎಂಬುದಾಗಿ ಚರಕಸಂಹಿತೆಯಲ್ಲಿ ಹೇಳಿದ್ದಾರೆ. ಆಚರಣೆಗಳೆಂದರೆ ನಮ್ಮ ಆಹಾರ ಹಾಗೂ ಚಟುವಟಿಕೆ(ವಿಹಾರ)ಗಳು. ಕಾಲು ಒಡೆಯುವುದು, ಗಂಟುನೋವು, ಮೈಕೈನೋವು ಇತ್ಯಾದಿ ವಾತವ್ಯಾಧಿಗಳು ಹಾಗೂ  ಉಬ್ಬಸ, ಕಫ ಸಂಬಂಧಿ ಕಾಯಿಲೆಗಳು ಶೀತಗುಣದಿಂದ ಉಲ್ಬಣಗೊಳ್ಳುವುದು ಎಲ್ಲರ  ಅನುಭವ. ಹೆಚ್ಚಿದ  ವಾತದೋಷವನ್ನು ಶಮನಗೊಳಿಸುವ ಶಕ್ತಿ ಅಭ್ಯಂಗದಲ್ಲಿದೆ. ಅಭ್ಯಂಗವೆಂದರೆ ಶರೀರಕ್ಕೆ ಎಣ್ಣೆ ಹಚ್ಚಿ ತಿಕ್ಕುವುದು. ಅದರಲ್ಲೂ ಇದನ್ನು ತಲೆ, ಪಾದ, ಕಿವಿಗಳಿಗೆ  ವಿಶೇಷವಾಗಿ ಮಾಡಲು ಆಯುರ್ವೇದವು ಹೇಳುತ್ತದೆ. ಅಭ್ಯಂಗದಿಂದಾಗುವ ಪ್ರಯೋಜನಗಳೂ ಅನೇಕ. ವಯಸ್ಸಾಗುವಿಕೆಯನ್ನು ತಡೆಗಟ್ಟುವುದು, ಶ್ರಮ ಮತ್ತು ಸುಸ್ತನ್ನು ನಿವಾರಿಸುವುದು, ಶರೀರವನ್ನುಪುಷ್ಟಿಗೊಳಿಸಿ ದೃಢತೆ ತರುವುದು, ನಿದ್ರೆ  ಚೆನ್ನಾಗಿ  ಬರುವುದು, ದೇಹಕ್ಕೆ  ಮಾರ್ದವತೆ-ಶಕ್ತಿ ಮತ್ತು ವರ್ಣ ನೀಡುವುದು, ಆಯುಷ್ಯವನ್ನು ಅಧಿಕಗೊಳಿಸುವುದು, ಚರ್ಮ ರೋಗಗಳನ್ನು ದೂರಇಡುವುದು, ಕಷ್ಟಸಹಿಷ್ಣುತೆ ಹಾಗೂ ವ್ಯಾಧಿಕ್ಷಮತೆಯನ್ನು ಹೆಚ್ಚಿಸುವುದು, ಕೈಕಾಲುಗಳಿಗೆ ವಿಶೇಷ ಬಲ  ನೀಡುವುದು,  ಆಂತರಿಕ   ಅಂಗಗಳನ್ನು   ಉತ್ತೇಜಿಸಿ  ರಕ್ತ  ಪರಿಚಲನೆಯನ್ನು ಸರಾಗಗೊಳಿಸುವುದು. ಶರೀರದ ಅಭ್ಯಂಗಕ್ಕೆ  ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು

ಉಪಯೋಗಿಸಬಹುದು. ಗಂಟುನೋವಿಗೆ  ಮಹಾನಾರಾಯಣತೈಲ, ಬಲವರ್ಧನೆಗೆ  ಅಶ್ವಗಂಧ ಅಥವಾ ಬಲಾತೈಲ ಬಳಸಬಹುದು. ಅಭ್ಯಂಗದ ನಂತರ  ಬಿಸಿನೀರು ಸ್ನಾನ ಮಾಡಬೇಕು.ತಲೆಗೆ ಅಭ್ಯಂಗ ಮಾಡುವುದರಿಂದ  ಕೂದಲುಗಳು ದಪ್ಪನಾಗಿ ಹೊಳಪಿನಿಂದ ಕೂಡುವುದು, ದೃಷ್ಟಿಯನ್ನು ಪ್ರಖರಗೊಳಿಸುವುದರ ಜೊತೆಗೆ ಜ್ಞಾನೇಂದ್ರಿಯಗಳಿಗೆ

ಸೂಕ್ಷ್ಮತೆಯನ್ನು ತರುವುದು.,ಮುಖದಲ್ಲಿ ನೆರಿಗೆ  ಬೀಳುವುದನ್ನು ತಪ್ಪಿಸುವುದು. ತಲೆಗೆ ಭೃಂಗಾಮಲಕ ತೈಲ.,ಬ್ರಾಹ್ಮೀತೈಲ, ಭೃಂಗರಾಜತೈಲಗಳನ್ನು  ಉಪಯೋಗಿಸಬಹುದು. ಭೃಂಗರಾಜ(ಗರಗ) ಹಾಗೂ ಆಮಲಕ(ನೆಲ್ಲಿಕಾಯಿ) ಗಳಿಂದ ಮನೆಯಲ್ಲೇ  ಎಣ್ಣೆಯನ್ನು ತಯಾರಿಸಿ ಬಳಸಬಹುದು.

   ಆದರೆ  ಕೆಲವು ಸಂದರ್ಭಗಳಲ್ಲಿ ಅಭ್ಯಂಗ ಮಾಡಬಾರದೆಂದು ಆಯುರ್ವೇದ ಗ್ರಂಥಗಳು ಉಲ್ಲೇಖಿಸುತ್ತವೆ. ಸ್ತ್ರೀಯರು ಮುಟ್ಟಿನ ಸಂದರ್ಭ ಅಥವಾ ಗರ್ಭಿಣಿಯಾಗಿದ್ದಾಗ,ಅತಿಯಾಗಿ ಊದಿಕೊಂಡ ಹಾಗೂ  ಗಡ್ಡೆಕಟ್ಟಿಕೊಂಡ ಭಾಗಕ್ಕೆ, ಸೋಂಕಿನಿಂದ ಕೂಡಿದ ಹಾಗೂ ತೆರೆದ  ಗಾಯಗಳಿಗೆ ,ನಾಲಗೆಯ ಮೇಲ್ಭಾಗ  ಬಿಳಿಯಾದ ಪದರದಿಂದ ಕೂಡಿದ್ದಾಗ(ದೇಹಕ್ಕೆ ಹಾನಿ ಮಾಡುವ ಆಮದೋಷದ ಸೂಚಕ), ತೀವ್ರಜ್ವರ, ತೀವ್ರ ಅಜೀರ್ಣ ಇದ್ದಾಗ, ವಾಂತಿ ಉಂಟುಮಾಡುವ ಮತ್ತು ಮಲವಿರೇಚಕ ಔಷಧ ಸೇವನೆಯ ತಕ್ಷಣ, ವೈದ್ಯರ  ಚಿಕಿತ್ಸೆಯ ಸುಪರ್ದಿಯಲ್ಲಿದ್ದಾಗ ವೈದ್ಯರ  ಅನುಮತಿ ಇಲ್ಲದೆ  ಅಭ್ಯಂಗಕ್ಕೆ ಈ ವಿಧಾನವನ್ನು ಅನುಸರಿಸುವುದು ಉತ್ತಮ-: ಬಳಸುವ ಎಣ್ಣೆಯನ್ನುಒಂದು ಕಪ್‌ನಲ್ಲಿ ಹಾಕಿ ಬಿಸಿನೀರಿನ ಮೇಲಿಟ್ಟು  ಉಗುರು  ಬೆಚ್ಚಗೆ  ಮಾಡುವುದು  ಒಳ್ಳೆಯದು. ಕೈಕಾಲುಗಳಲ್ಲಿ  ನೀಳವಾಗಿ  ಉಜ್ಜಿ. ಗಂಟುಗಳಲ್ಲಿ  ವರ್ತುಲಾಕಾರವಾಗಿ  ತಿಕ್ಕಿ. ಹೊಟ್ಟೆ  ಮತ್ತು ಎದೆಗಳಲ್ಲಿ  ವಿಶಾಲ ವರ್ತುಲಾಕಾರವಾಗಿ ಗಡಿಯಾರದ  ಮುಳ್ಳಿನ ಚಲನೆಯ  ದಿಕ್ಕಿನಲ್ಲಿ ತಿಕ್ಕಬೇಕು. ಐದರಿಂದ  ಇಪ್ಪತ್ತು  ನಿಮಿಷಗಳ  ಕಾಲ ಮಾಡುವ ಅಭ್ಯಂಗವು ಉತ್ತಮ ಫಲದಾಯಕ. ಚಳಿಗಾಲ ಆರಂಭವಾಗುವ  ಮುನ್ನವೇ ಬರುವ  ನರಕಚತುರ್ದಶಿಯ  ದಿನದಂದು ಎಣ್ಣೆ  ಹಚ್ಚಿ ಬಿಸಿನೀರು  ಸ್ನಾನ  ಮಾಡುವುದರಿಂದ  ಸಮಸ್ತ  ದೋಷಗಳೂ ಪರಿಹಾರವಾಗುವುದೆಂಬ  ರೂಢಿ ನಂಬಿಕೆಯಲ್ಲಿದೆ. ಇದು  ಮೂಢನಂಬಿಕೆಯಲ್ಲ. ಇಲ್ಲಿ ದೋಷ ಎಂದರೆ  ಶರೀರಕ್ಕೆ  ಹಾನಿಯುಂಟುಮಾಡುವ ಶರೀರದೊಳಗೆ ನಮ್ಮ ಅಹಿತ ಆಹಾರವಿಹಾರಗಳಿಂದ ಸಂಚಯಗೊಂಡ ದೋಷಗಳೆಂದು  ತಿಳಿಯಬೇಕು. ಒಂದು  ದಿನ ಇದನ್ನು ಆಚರಿಸಿ ಮತ್ತೆ ಮರೆತು ಬಿಡಬೇಕೆಂದು ತಾತ್ಪರ‍್ಯವಲ್ಲ. ಚಳಿಗಾಲದಲ್ಲಿ  ಅಭ್ಯಂಗವನ್ನು ಮರೆಯಬಾರದೆಂದು ಈ  ಪದ್ಧತಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.