Breaking News

ದ.26-17: ಕಿಲ್ಲೆ ಮೈದಾನದಲ್ಲಿ ಕರಾವಳಿ ಉತ್ಸವ: ’ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸ್ಪರ್ಧೆಯಾಗಿರಲಿ’; ಕರಾವಳಿ ಉತ್ಸವ-ಪೂರ್ವಭಾವಿ ಸಭೆಯಲ್ಲಿ ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

kille

ಪುತ್ತೂರು: ಮಂಗಳೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಕರಾವಳಿ ಉತ್ಸವಕ್ಕೆ ಪೂರಕವಾಗಿ ತಾಲೂಕು ಮಟ್ಟದಲ್ಲೂ ಕರಾವಳಿ ಉತ್ಸವ ನಡೆಯಬೇಕೆನ್ನುವ ನಿಟ್ಟಿನಲ್ಲಿ ದ.26 ಮತ್ತು 27ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಕರಾವಳಿ ಉತ್ಸವ ನಡೆಯಲಿದ್ದು, ಈ ಕುರಿತು ವಿವಿಧ ಸಂಘ ಸಂಸ್ಥೆ ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಸಹಾಯಕ ಕಮೀಷನರ್ ಡಾ. ರಘುನಂದನ ಮೂರ್ತಿ ಮತ್ತು ರಾಜ್ಯ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ದ.೭ರಂದು ತಾ.ಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕಿಲ್ಲೆ ಮೈದಾನದ ಬದಲು ಪುತ್ತೂರಿನ ಪ್ರವಾಸಿ ತಾಣವಾದ ಬೀರಮಲೆ ಬೆಟ್ಟದಲ್ಲಿ ಕರಾವಳಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಸಲಹೆ ಸೂಚನೆಗಳು ಬಂದರೂ ಕೊನೆಗೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಈ ವರ್ಷ ಕಿಲ್ಲೆ ಮೈದಾನದಲ್ಲೇ ಕರಾವಳಿ ಉತ್ಸವ ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಸೇಡಿಯಾಪು ವಿಶ್ವಪ್ರಸಾದ್‌ರವರು ಮಾತನಾಡಿ ಬೀರಮಲೆ ಬೆಟ್ಟ ಪ್ರವಾಸಿ ತಾಣವಾದ್ದರಿಂದ ಅಲ್ಲಿಗೆ ಜನರನ್ನು ಹೆಚ್ಚು ಆಕರ್ಷಿಸಬೇಕಾದರೆ ಕರಾವಳಿ ಉತ್ಸವವನ್ನು ಬೀರಮಲೆಯಲ್ಲಿ ನಡೆಸುವುದು ಉತ್ತಮ ಯೋಜನೆ ಎಂದರು. ಜೇಮ್ಸ್ ಜೆ. ಮಾಡ್ತ, ಕ್ಸೇವಿಯರ್ ಡಿಸೋಜ ಧ್ವನಿಗೂಡಿಸಿದರು. ಆದರೆ ಅಲ್ಲಿಗೆ ಕ್ರಮಿಸಲು ದೂರವಾಗುವುದು ಮತ್ತು ಅಲ್ಲಿ ಮೂಲಸೌಕರ್ಯದ ಕೊರತೆ ಹಾಗೂ ಬಜೆಟ್ ದೊಡ್ಡದಾಗುವುದರಿಂದ  ಕಿಲ್ಲೆ ಮೈದಾನ ಮತ್ತು ಪುರಭವನವನ್ನು ಉಪಯೋಗಿಸುವುದು ಸೂಕ್ತ ಎಂದು ಸಭೆಯಲ್ಲಿ ಶಾಸಕರು, ಇತರ ಸಂಸ್ಥೆಯ ಸದಸ್ಯರು ಚರ್ಚಿಸಿದರು. ಬೀರಮಲೆಗೆ ಅಗತ್ಯವಾಗಿರುವ ಮೂಲಸೌಕರ್ಯ ಒದಗಿಸಿ ಮುಂದಿನ ವರ್ಷ ಅಲ್ಲೇ ಕರಾವಳಿ ಉತ್ಸವ ನಡೆಸುವ ಎಂದು ಶಾಸಕರು ಹೇಳಿದರು. ಸಹಾಯಕ ಕಮೀಷನರ್ ಡಾ. ರಘುನಂದನ್ ಮೂರ್ತಿಯವರು ಮಾತನಾಡಿ ಕಾರ್ಯಕ್ರಮದ ಚೌಕಟ್ಟಿನ ಮತ್ತು ಬೆಳಿಗ್ಗೆಯಿಂದ ಸಂಜೆಯ ತನಕ  ನಡೆಯುವ ಕಾರ್ಯಕ್ರಮದ ವಿವರಣೆ ನೀಡಿದರು. ಪ್ರೊ.ಬಿ.ಜೆ ಸುವರ್ಣರವರು ಮಾತನಾಡಿ ಸಂಜೆ ವೇಳೆ ಕಿರು ಯಕ್ಷಗಾನ ಪ್ರದರ್ಶನದ ಮೂಲಕ ಕಾರ‍್ಯಕ್ರಮ ಕೊನೆಗೊಳಿಸುವ ಕುರಿತು ಸಲಹೆ ನೀಡಿದರು. ಜೋಕಿಂ ಡಿಸೋಜರವರು ಮಾತನಾಡಿ ಕ್ರಿಸ್‌ಮಸ್ ಹಬ್ಬ ಮುಗಿದ ಬಳಿಕ ನಡೆಯುವ ಕಾರ‍್ಯಕ್ರಮವಾದ್ದರಿಂದ ನನ್ನ ಕಡೆಯಿಂದಲೂ ಒಂದು ಮಕ್ಕಳ ಕಾರ್ಯಕ್ರಮ ನೀಡಬಲ್ಲೆ ಎಂದರು. ವಿಶ್ವಪ್ರಸಾದ್ ಸೇಡಿಯಾಪುರವರು ಮಾತನಾಡಿ ಫೋಟೋಗ್ರಾಫರ‍್ಸ್ ಮತ್ತಿತರ ಸಂಸ್ಥೆಗಳ ಮೂಲಕ ಸ್ಪರ್ಧಾ ಕಾರ್ಯಕ್ರಮ ಇಡುವುದರ ಜೊತೆಗೆ ಇತರ ಶಾಲಾ ಕಾಲೇಜಿನಲ್ಲಿ ವಾರ್ಷಿಕೋತ್ಸವಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಇದಕ್ಕೆ ಜೋಡಿಸಬಹುದು ಎಂದು ಸಲಹೆ ನೀಡಿದರು. ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದರವರು ವಿವಿಧ ಸಲಹೆ ನೀಡಿದರು. ಒಟ್ಟಿನಲ್ಲಿ ಕಾರ್ಯಕ್ರಮಕ್ಕೆ ಅಗತ್ಯವಾದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರದರ್ಶನ ಮಳಿಗೆಗಳನ್ನು ಅಳವಡಿಸುವ ಕುರಿತು ಸಭೆಯಲ್ಲಿ ಸಲಹೆ ಸೂಚನೆ ಪಡೆಯಲಾಯಿತು.

ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಸ್ಪರ್ಧೆ ಆಗಿರಲಿ: ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸುವಾಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾರಿಗೂ ನೋವುಂಟು ಮಾಡುವ ಟಾಂಟ್ ಕೊಡುವ ಕಾರ್ಯಕ್ರಮ ಆಗದಿರಲಿ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಿರಬೇಕು ಎಂದು ಹೇಳಿದರು. ಅದರಲ್ಲೂ ಪೊಲೀಸರ ವೇಷಭೂಷಣ ಹಾಕಿ ಅವರಿಗೆ ನೋವುಂಟು ಮಾಡುವ ಸಂದೇಶ ಬೇಡ ಎಂದರು.

ವಿವಿಧ ಸ್ಪರ್ಧೆಗಳು: ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಸಭೆಗೆ ಮಾಹಿತಿ ನೀಡಿದರು. ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳು, ಪಿಯುಸಿ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಕರ್ಷಿಸಲು ಇತರ ಭಿನ್ನ ಸ್ಪರ್ಧೆಗಳನ್ನು ಇಡುವ ಕುರಿತು ಸಭೆಯಲ್ಲಿ ಸಂಸ್ಥೆಯ ಸದಸ್ಯರು ಮಾತನಾಡಿದರು. ಟ್ರಾಫಿಕ್ ಕುರಿತು ಜಾಗೃತಿ ಸ್ಪರ್ಧೆ ಮಾಡುವುದಾದರೆ ಪೊಲೀಸ್ ಇಲಾಖೆಯಿಂದ ಬಹುಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಎ.ಎಸ್ಪಿ ರಿಷ್ಯಂತ್ ಸಿ.ಬಿ ಮಾಹಿತಿ ನೀಡಿದರು. ತಹಶೀಲ್ದಾರ್ ಅನಂತ ಶಂಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಉಪತಹಶೀಲ್ದಾರ್ ಶ್ರೀಧರ್ ಕೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಯಂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥತರಿದ್ದರು.

ಉತ್ತರ ಭಾರತದ 7 ರಾಜ್ಯಗಳ ತಂಡಗಳಿಂದ ಕಲಾತ್ಮಕ ಸಾಂಸ್ಕೃತಿಕ ಪ್ರದರ್ಶನಗಳು

ಪುತ್ತೂರಿನಲ್ಲಿ ನಡೆಯುವ ಕರಾವಳಿ ಉತ್ಸವಕ್ಕೆ ಅನುದಾನದ ಕೊರತೆ ಇತ್ತು. ಆದರೂ ಮಂಗಳೂರಿನಲ್ಲಿ ದ.೨೩ರಿಂದ ನಡೆಯುವ ಕರಾವಳಿ ಉತ್ಸವಕ್ಕೆ ಪುತ್ತೂರಿನಿಂದ ಸ್ತಬ್ಧ ಚಿತ್ರ ಕಳುಹಿಸುವ ಕುರಿತು ಇಲಾಖಾ ಆದೇಶದಂತೆ ದ.೧೮ಕ್ಕೆ ಪುತ್ತೂರಿನಲ್ಲಿ ಕರಾವಳಿ ಉತ್ಸವ ನಡೆಸಿ ದ.೨೨ಕ್ಕೆ ಸ್ತಬ್ಧ ಚಿತ್ರವನ್ನು ಪುತ್ತೂರಿನಿಂದ ಮಂಗಳೂರಿಗೆ ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಸಭೆಯ ಮಧ್ಯೆ ಸಹಾಯಕ ಕಮೀಷನರ್‌ಗೆ ಜಿಲ್ಲಾಧಿಕಾರಿಯವರು ಪೋನ್ ಮಾಡಿ ಪುತ್ತೂರು ಕರಾವಳಿ ಉತ್ಸವಕ್ಕೂ ರೂ. ೧ಲಕ್ಷ ಅನುದಾನ ನೀಡಲಾಗುವುದು. ಜೊತೆಗೆ ದ.೨೪ರಿಂದ ೩೦ರ ತನಕ ಉತ್ತರ ಭಾರತದ ೭ ರಾಜ್ಯಗಳಿಂದ ವಿಶೇಷ ಸಾಂಸ್ಕೃತಿಕ ಕಾರ‍್ಯಕ್ರಮ ನೀಡುವ ತಂಡಗಳನ್ನು ಪುತ್ತೂರಿಗೆ ಕಳುಹಿಸಿಕೊಡುವ ಎಂದು ಹೇಳಿದ್ದರಿಂದ ಪುತ್ತೂರಿನಲ್ಲಿ ದ.೧೮ರ ಬದಲು ದ.೨೬ ಮತ್ತು ೨೭ಕ್ಕೆ ಕರಾವಳಿ ಉತ್ಸವ ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ವಿಶೇಷ ಸ್ಪರ್ಧೆಗಳು:

ಪೋಟೋಗ್ರಾಫಿ, ಜ್ಯುವೆಲ್ಲರಿ, ಸಿವಿಲ್ ಇಂಜಿನಿಯರ‍್ಸ್ ಎಸೋಸಿಯೆಶನ್‌ನವರಿಂದ ವಿಶೇಷ ಸ್ಪರ್ಧೆಗಳು ನಡೆಯಲಿದೆ. ಅತ್ಯುತ್ತಮ ಪೋಟೋಗ್ರಫಿ, ಅತ್ಯುತ್ತಮ ಆಭರಣಗಳು, ಕಡಿಮೆ ಖರ್ಚಿನಲ್ಲಿ ಉತ್ತಮ ಗ್ರಹ ನಿರ್ಮಾಣದ ಸ್ಪರ್ಧೆಗಳು ನಡೆಯಲಿದೆ. ಸೇಡಿಯಾಪು ವಿಶ್ವಪ್ರಸಾದ್ ಮತ್ತು ತಂಡ ಇದರ ನೇತೃತ್ವ ವಹಿಸಲಿದ್ದಾರೆ. ಜೊತೆಗೆ ವಿವಿಧ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳು ಪ್ರದರ್ಶನಗೊಳ್ಳಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.