ಸವಣೂರು-ಸುಳ್ಯ ನ್ಯಾಯಾಲಯ ವ್ಯಾಪ್ತಿಗೆ ಸೇರುವುದು ನ್ಯಾಯವಲ್ಲ; ಜನ ವಿರೋಧಿ ನಿಯಮಗಳ ವಿರುದ್ಧ ಸವಣೂರು ಗ್ರಾ.ಪಂ ವ್ಯಾಪ್ತಿಯ ಬಿಜೆಪಿಯಿಂದ ಪ್ರತಿಭಟನಾ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

* ಬೋರ್‌ವೆಲ್ ನಿಷೇಧ ಬೇಡ

* ಕೃಷಿಗೆ ನದಿ ನೀರು ಬಳಕೆ ನಿಷೇಧ ಹೇರಬಾರದು

* ಸೂಚನೆ ನೀಡದೆ ವಿದ್ಯುತ್ ಕಡಿತ ಮಾಡಬಾರದು

ಪುತ್ತೂರು: ಸುಳ್ಯ ನ್ಯಾಯಾಲಯ ವ್ಯಾಪ್ತಿಗೆ ಸೇರ್ಪಡೆ, ಬೋರ್‌ವೆಲ್ ನಿಷೇಧ, ನದಿನೀರು ಬಳಕೆಗೆ ತಡೆ ಮುಂತಾದ ಜನ ವಿರೋಧಿ ನಿಯಮಗಳಿಂದ ಸವಣೂರು ಗ್ರಾ.ಪಂ ವ್ಯಾಪ್ತಿಯ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದ್ದು, ಸಮಸ್ಯೆಯನ್ನು ಸರಿಪಡಿಸಲು ಪ್ರಥಮ ಹಂತವಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ ಬಳಿಕ ಸ್ಪಂದಿಸದಿದ್ದಲ್ಲಿ ಸವಣೂರು ಗ್ರಾ.ಪಂ. ಬಿಜೆಪಿ ಸಮಿತಿ ನಾಗರಿಕರನ್ನು ಸೇರಿಸಿಕೊಂಡು ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸವಣೂರು ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ವಿಧಾನಸಭಾ ಕ್ಷೇತ್ರ ಸುಳ್ಯ, ತಾಲೂಕು ಪುತ್ತೂರು, ಕಂದಾಯ ವ್ಯಾಪ್ತಿ ಕಡಬ, ಪೊಲೀಸ್ ಠಾಣೆ ಬೆಳ್ಳಾರೆ. ಈ ಗೊಂದಲಗಳ ಮಧ್ಯೆಯೇ ಇದೀಗ ನ್ಯಾಯಾಲಯದ ವ್ಯಾಪ್ತಿಯನ್ನು ಸುಳ್ಯಕ್ಕೆ ಸೇರಿಸಲಾಗಿದೆ. ಜನಸಾಮಾನ್ಯರ ಕಷ್ಟಗಳನ್ನು ಯಾರೂ ಕೇಳುವವರಿಲ್ಲ ಎಂದರು .

ಸುಳ್ಯ ನ್ಯಾಯಾಲಯ ವ್ಯಾಪ್ತಿಗೆ ಗ್ರಾಮಗಳನ್ನು ಸೇರಿಸುವ ವಿರುದ್ಧ ಪುತ್ತೂರು ತಾಲೂಕಿನ ಸವಣೂರು, ಕಾಣಿಯೂರು, ಪಾಲ್ತಾಡಿ, ಪುಣ್ಚಪ್ಪಾಡಿ, ಕುದ್ಮಾರು, ಕಾಯಿಮಣ, ಕೊಳ್ತಿಗೆ ಮತ್ತು ಪೆರ್ಲಂಪಾಡಿ ಸೇರಿದಂತೆ ಎಂಟು ಗ್ರಾಮಗಳು ಬೆಳ್ಳಾರೆ ಠಾಣಾ ಸರಹದ್ದಿಗೆ ಸೇರಿದೆ ಎಂಬ ಕಾರಣವನ್ನು ಮುಂದಿಟ್ಟು ಈ ಗ್ರಾಮಗಳ ಪ್ರಕರಣಗಳಿಗೆ ಸಂಬಧಿಸಿ ಸುಳ್ಯ ನ್ಯಾಯಾಲಯದಲ್ಲಿ ವ್ಯವಹರಿಸಬೇಕು ಎಂದು ಉಚ್ಛ ನ್ಯಾಯಾಲಯ ಆದೇಶಿಸಿದೆ. ಆದರೆ ವ್ಯವಹಾರಗಳಿಗೆ ಪುತ್ತೂರು ಅನುಕೂಲಕರವಾಗಿರುವುದರಿಂದ ಈ ಗ್ರಾಮಗಳು ಸುಳ್ಯ ನ್ಯಾಯಾಲಯದ ವ್ಯಾಪ್ತಿಗೆ ಸೇರುವುದು ನ್ಯಾಯವಲ್ಲ. ಈ ಕುರಿತು ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ಗಣೇಶ್ ಕುಂಜಾಡಿ ಹೇಳಿದರು.

ಬೋರ್‌ವೆಲ್ ನಿಷೇಧ ಬೇಡ: ಇತ್ತೀಚಿನ ದಿನಗಳಲ್ಲಿ ಮನೆ ಬಳಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿಗಳೇ ಅನಿವಾರ್ಯವಾಗಿರುವ ಕಾರಣ ದ.ಕ. ಜಿಲ್ಲಾಧಿಕಾರಿಗಳು ಕೊಳವೆ ಬಾವಿ ಕೊರೆಯಲು ವಿಧಿಸಿರುವ ನಿಷೇಧವನ್ನು ತತ್‌ಕ್ಷಣ ಹಿಂತೆಗೆಯಬೇಕು. ಅಂತರ್ಜಲ ವೃದ್ಧಿಗಾಗಿ ಮಿನಿ ಅಣೆಕಟ್ಟುಗಳು, ಕಿಂಡಿ ಅಣೆಕಟ್ಟುಗಳು, ನೀರಿಂಗಿಸುವ ಯೋಜನೆಗಳನ್ನು ಮೊದಲು ರೂಪಿಸಬೇಕು ಎಂದರು. ಸವಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ೧೦೦ ಕ್ಕೂ ಮಿಕ್ಕಿ ಅಣೆಕಟ್ಟುಗಳ ನಿರ್ವಹಣೆ, ಹಲಗೆ ಹಾಕುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸುತ್ತೇವೆ ಎಂದು ಗಣೇಶ್ ಕುಂಜಾಡಿ ಹೇಳಿದರು.

ಕೃಷಿ ಚಟುವಟಿಕೆಗೆ ನದಿ ನೀರು ಬಳಕೆಗೆ ನಿಷೇಧ ಹೇರಬಾರದು: ಸವಣೂರು ಪರಿಸರದ ದೀರ್ಘಾವಧಿಯ ಕೃಷಿ ಚಟುವಟಿಕೆಗಳು ನದಿ ಪಾತ್ರದಲ್ಲಿಯೇ ತಲೆತಲಾಂತರದಿಂದ ನಡೆದುಬಂದಿದೆ. ನದಿನೀರನ್ನು ಅವಲಂಬಿಸಿ ಕೃಷಿಯನ್ನು ಅಭಿವೃದ್ಧಿಪಡಿಸಲಾಗಿದೆ. ಜನವರಿಯಿಂದ ಜೂನ್ ತನಕ ನದಿ ನೀರನ್ನು ಕೃಷಿ ಬಳಕೆ ಮಾಡದಂತೆ ಜಿಲ್ಲಾಧಿಕಾರಿಯವರ ಆದೇಶ ಅವೈಜ್ಞಾನಿಕ. ನದಿ ನೀರು ಬಳಕೆ ನಿಷೇಧ ಹೇರುವ ಮೂಲಕ ಬೋರ್‌ವೆಲ್ ಕೊರೆಸಲು ಪ್ರೇರಣೆ ನೀಡಿದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಹೇಳಿದರು.

ಸೂಚನೆ ನೀಡದೆ ವಿದ್ಯುತ್ ಕಡಿತ ಮಾಡಬಾರದು:

ಮೆಸ್ಕಾಂ ಸವಣೂರು ಉಪವಿಭಾಗಕ್ಕೆ ಸೇರಿದ ಕೃಷಿಕರ, ಕೂಲಿಕಾರ್ಮಿಕರ, ಮನೆಗಳ ತಿಂಗಳ ವಿದ್ಯುತ್ ಬಿಲ್ಲು ರೂ.೧೦೦ ಬಾಕಿಯಾದರೂ ಯಾವುದೇ ಸೂಚನೆ ನೀಡದೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಯಾವುದೇ ಸೂಚನೆ ನೀಡದೆ ಈ ರೀತಿ ಸಂಪರ್ಕ ಕಡಿತ ಮಾಡಬಾರದು. ಸಾರ್ವಜನಿಕ ರೇಶನ್‌ಕಾರ್ಡ್ ನೀಡುವಲ್ಲಿ ವಿಳಂಬದ ಬಗ್ಗೆ ಸಹಾಯಕ ಕಮಿಷನರ್‌ಗೆ ಮನವಿ ಸಲ್ಲಿಸಲಾಗುವುದು, ಸವಣೂರು ಬ್ಯಾಂಕ್‌ನಲ್ಲಿ ಖಾತೆಯಿಂದ ಹಣ ಪಡೆಯುವಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಗಣೇಶ್ ಕುಂಜಾಡಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ದಿಲೀಪ್ ಹೆಗ್ಡೆ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಉಪಸ್ಥಿತರಿದ್ದರು.

ಮನವಿಗೆ ಸ್ಪಂದಿಸದಿದ್ದರೆ ಹೋರಾಟ

ಸವಣೂರು ವ್ಯಾಪ್ತಿಗೆ ಸಂಬಂಧಿತ ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಗೆ ಮನವಿ ನೀಡಿ 15 ದಿನಗಳ ತನಕ ಕಾಯುತ್ತೇವೆ. ಸೂಕ್ತ ಸ್ಪಂದನೆ ಸಿಗದಿದ್ದರೆ ನಾಗರಿಕರೊಂದಿಗೆ ಹೋರಾಟ ಅನಿವಾರ್ಯವಾದೀತು ಎಂದು ಗಣೇಶ್ ಶೆಟ್ಟಿ ಕುಂಜಾಡಿ ಎಚ್ಚರಿಕೆ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.