ಕಡಬ ಮೆಸ್ಕಾಂ ಜನ ಸಂಪರ್ಕ ಸಭೆ; ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದರೆ ಉಗ್ರ ಹೋರಾಟದ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

kadaba

* ಸಲಹಾ ಸಮಿತಿಗೆ ಮಾಹಿತಿ ನೀಡಿ

* ನೆಲ್ಯಾಡಿಯಲ್ಲಿ ಜಾಗ ಇದೆ, ಕಟ್ಟಡ ನಿರ್ಮಿಸಿ

* ಕಡಬಕ್ಕೆ ಪೂರ್ಣಕಾಲಿಕ ಎಇಇ ನೇಮಕವಾಗಲಿ

* ಆಲಂಕಾರಿಗೆ ಪೂರ್ಣಕಾಲಿಕ ಜೆಇ ಬೇಕು

* ಅಪಾಯಕಾರಿ ಕಂಬ ತೆರವುಗೊಳಿಸಿ

* ಹಳೆಯ ತಂತಿ ಬದಲಾಯಿಸಿ

ಕಡಬ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸುವುದಕ್ಕೆ ವಿರೋಧ ಸೂಚಿಸಿದ ರೈತರು, ವಿದ್ಯುತ್ ಕಡಿತಗೊಳಿಸಿದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ ಘಟನೆ ಕಡಬ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ನಡೆದಿದೆ.

ಸಭೆ ದ.7ರಂದು ಕಡಬ ಅನುಗ್ರಹ ಸಭಾಭವನದ ಮಿನಿಹಾಲ್‌ನಲ್ಲಿ ನಡೆಯಿತು. ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನೀಯರ್ ನಾಗಾರ್ಜುನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎ.ಪಿ.ಎಂ.ಸಿ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಕೃಷಿಕರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡುವ ಬಗ್ಗೆ ಇಲಾಖೆಯ ನೋಟಿಸ್ ಬೋರ್ಡ್‌ನಲ್ಲಿ ಸೂಚನಾ ಪತ್ರ ಹಾಕಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದಲ್ಲಿ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಬಾರದು. ರೈತರ ಅಹವಾಲು ಲೆಕ್ಕಿಸದೇ ಒಂದು ವೇಳೆ ಪಂಪ್ ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದಲ್ಲಿ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ. ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ರೈತ ದೇಶದ ಬೆನ್ನೆಲುಬು. ಕೃಷಿ ಇಲ್ಲದಿದ್ದರೆ ಈ ದೇಶದಲ್ಲಿ ಬೇರೆ ಯಾವುದೂ ಇರಲಿಕ್ಕಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡಬೇಡಿ ಎಂದು ಸೀತಾರಾಮ ಗೌಡ ಹೇಳಿದರು. ಇದಕ್ಕೆ ರೈತ ಸಂಘದ ವಿಕ್ಟರ್ ಸೇರಿದಂತೆ ಹಲವು ಮಂದಿ ಧ್ವನಿಗೂಡಿಸಿದರು. ಬಳಿಕ ಪ್ರತಿಕ್ರಿಯಿಸಿದ ಮೆಸ್ಕಾಂ ಕಾರ‍್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿಯವರು ಯಾವುದೇ ಕಾರಣಕ್ಕೂ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಲಾಗುವುದಿಲ್ಲ, ಆದರೆ ಡಿ.೧೫ರಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಲಿದೆ. ಆಗ ವಿದ್ಯುತ್ ಅಭಾವ ಉಂಟಾದಲ್ಲಿ ರೈತರು ಸಹಕರಿಸಬೇಕು ಎಂದರು.

ಸಲಹಾ ಸಮಿತಿಗೆ ತಿಳಿಸಿ: ಸಭೆ ಆರಂಭದಲ್ಲಿ ಮಾತನಾಡಿದ ಸಲಹಾ ಸಮಿತಿ ಸದಸ್ಯ ಕ್ಷೇವಿಯರ್ ಬೇಬಿ, ಇಂದಿನ ಜನಸಂಪರ್ಕ ಸಭೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಸರಕಾರದಿಂದ ನೇಮಕಗೊಳಿಸಿದ ಮೆಸ್ಕಾಂ ಸಲಹಾ ಸಮಿತಿ ಸದಸ್ಯರಿಗೂ ಮಾಹಿತಿ ಇಲ್ಲ. ಮೆಸ್ಕಾಂನಲ್ಲಿ ನಡೆಯುವ ಕಾರ‍್ಯಚಟುವಟಿಕೆಗಳ ಬಗ್ಗೆ ಮೆಸ್ಕಾಂ ಸಲಹಾ ಸಮಿತಿಗೆ ತಿಳಿಸುತ್ತೀರಾ, ಆ ಸಮಿತಿಗೆ ಏನಾದರೂ ಆದ್ಯತೆ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ‍್ಯನಿರ್ವಾಹಕ ಇಂಜಿನಿಯರ್ ನಾರಾಯಣ ಪೂಜಾರಿಯವರು, ಸಲಹಾ ಸಮಿತಿಗೆ ಆದ್ಯತೆ ನೀಡುತ್ತೇವೆ, ಮೆಸ್ಕಾಂ ಕಾರ‍್ಯಚಟುವಟಿಕೆಗಳ ಬಗ್ಗೆ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.

ನೆಲ್ಯಾಡಿಯಲ್ಲಿ ಕಟ್ಟಡ ನಿರ್ಮಿಸಿ: ಮೆಸ್ಕಾಂ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಸದಸ್ಯ ಗಂಗಾಧರ ಶೆಟ್ಟಿ ಮಾತನಾಡಿ, ನೆಲ್ಯಾಡಿ ಮೆಸ್ಕಾಂ ಸಬ್ ಸ್ಟೇಷನ್‌ಗೆ ಕಛೇರಿ ನಿರ್ಮಿಸಲು ಪಂಚಾಯತ್‌ನಿಂದ ಜಾಗ ಕಾದಿರಿಸಲಾಗಿದೆ, ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು, ಅಲ್ಲದೆ ಮೆಸ್ಕಾಂಗೆ ವಾಹನ ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ನಾಗಾರ್ಜುನರವರು ನಮಗೆ ಎಲ್ಲ ಕಡೆ ಜಾಗದ ಸಮಸ್ಯೆ ಇದೆ. ನೆಲ್ಯಾಡಿಯಲ್ಲಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಇದ್ದಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸುವುದಾಗಿ ಭರವಸೆ ನೀಡಿದರು.

ಪೂರ್ಣಕಾಲಿಕ ಎ.ಇ.ಇ ನೇಮಕಕ್ಕೆ ಆಗ್ರಹ:  ಕಡಬ ಮೆಸ್ಕಾಂ ಉಪ ವಿಭಾಗದಲ್ಲಿ ಈಗಾಗಲೇ ಕಾರ‍್ಯನಿರ್ವಹಿಸುತ್ತಿದ್ದ ಎ.ಇ.ಇ ಸುರೇಶ್ ಕುಮಾರ್‌ರವರು ವರ್ಗಾವಣೆಗೊಳ್ಳುತ್ತಿರುವುದರಿಂದ ಇಲ್ಲಿಗೆ ಪ್ರಭಾರ ಎ.ಇ.ಇ. ಆಗಿ ರಾಮಚಂದ್ರರವರು ಆಗಮಿಸಿದ್ದಾರೆ. ಕಡಬ ತಾಲೂಕು ಕೇಂದ್ರವಾಗಿದ್ದು, ಇಲ್ಲಿ ಸಾಕಷ್ಟು ಕೆಲಸ ಇರುವುದರಿಂದ ಇಲ್ಲಿನ ಉಪ ವಿಭಾಗಕ್ಕೆ ಪೂರ್ಣಕಾಲಿಕ ಎ.ಇ.ಇ. ಬೇಕು, ಪ್ರಭಾರ ವಹಿಸಿಕೊಂಡವರು ವಾರದಲ್ಲಿ ೨-೩ ದಿವಸ ಬಂದರೆ ಸಮಸ್ಯೆಯಾಗುತ್ತದೆ ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾ ಅಧೀಕ್ಷಕರು, ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.

ಆಲಂಕಾರಿಗೆ ಜೆ.ಇ. ನೇಮಿಸಿ: ಮೆಸ್ಕಾಂನ ಆಲಂಕಾರು ಸೆಕ್ಷನ್‌ಗೆ ಪೂರ್ಣಕಾಲಿಕ ಜೆ.ಇ.ನೇಮಕಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಬಿಳಿನೆಲೆಯಲ್ಲಿ ಸೆಕ್ಷನ್ ಕಛೇರಿ ಆಗಿದೆ, ಅಲ್ಲಿಗೆ ಶಾಖಾಧಿಕಾರಿಯವರನ್ನು ನೇಮಕಗೊಳಿಸಬೇಕೆಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

೧೨೦ರೂ. ಬಾಕಿಗೆ ಸಂಪರ್ಕ ಕಡಿತ ಸರಿಯಾ?: ರೈತ ಸಂಘದ ಸದಸ್ಯ ವಿಕ್ಟರ್ ಮಾತನಾಡಿ, ಮೆಸ್ಕಾಂನಿಂದ ಕೇವಲ ೧೨೦ ರೂ. ಬಿಲ್ಲು ಬಾಕಿ ಇದ್ದರೂ ಸಂಪರ್ಕ ಕಡಿತ ಮಾಡಲಾಗುತ್ತದೆ, ನೀವು ಸಂಪರ್ಕ ಕಟ್ ಮಾಡಲು ಯಾವ ಮಾನದಂಡವನ್ನು ಉಪಯೋಗಿಸುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾರಾಯಣ ಪೂಜಾರಿಯವರು, ಬಿಲ್ ಕಡ್ಡಾಯವಾಗಿ ಆಯಾ ತಿಂಗಳು ಪಾವತಿಸಬೇಕು, ಬಿಲ್‌ನ ಹಿಂಬದಿಯಲ್ಲಿಯೇ ಸೂಚನೆಗಳನ್ನು ಬರೆಯಲಾಗಿದೆ ಎಂದರು. ಈ ವೇಳೆ ಮತ್ತೆ ಮಾತನಾಡಿದ ವಿಕ್ಟರ್‌ರವರು, ನಾನು ಬಿಲ್ಲು ಬಾಕಿ ಇರಿಸಿಕೊಂಡಿಲ್ಲ. ಆದರೂ ಲೈನ್ ಮ್ಯಾನ್ ಮಾರುತಿ ಎಂಬವರು ಪ್ಯೂಸ್ ತೆಗೆಯಲು ಬಂದಾಗ ಬಹಳ ಉಡಾಫೆಯಿಂದ ಮಾತನಾಡುತ್ತಾರೆ. ಬಿಲ್ಲು ಬಾಕಿಯಾಗಿದ್ದಲ್ಲಿ ಗ್ರಾಹಕರನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಅವರಿಗೆ ಮೇಸೆಜ್ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಅಪಾಯಕಾರಿ ಕಂಬ ತೆರವುಗೊಳಿಸಿ: ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಮಾತನಾಡಿ, ಕಡಬ ರೈತ ಸಂಪರ್ಕ ಕೇಂದ್ರದ ಸಮೀಪ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬ ಇದ್ದು ಅವಘಡ ನಡೆಯುವ ಮೊದಲು ತೆರವುಗೊಳಿಸಬೇಕು ಎಂದು ಹೇಳಿದರು. ವಿದ್ಯುತ್ ಲೈನ್‌ಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಕಡಿಯಲು ಸಾರ್ವಜನಿಕರು ಮೆಸ್ಕಾಂಗೆ ಸಹಕಾರ ನೀಡಬೇಕು ಎಂದು ಮೆಸ್ಕಾಂ ಅಧಿಕಾರಿಗಳು ವಿನಂತಿಸಿದರು.

ಹಳೆ ತಂತಿ ಬದಲಾಯಿಸಿ: ಕಡಬ ಉಪ ವಿಭಾಗದ ಎಲ್ಲ ಹಳೆ ತಂತಿಗಳನ್ನು ಬದಲಾಯಿಸಬೇಕು, ಇಚ್ಲಂಪಾಡಿ ಗ್ರಾಮದ ಬದನೆಯಲ್ಲಿ ಟಿ.ಸಿ. ಶೀಘ್ರ ಅಳವಡಿಸಬೇಕು, ಬಿಳಿನೆಲೆ ಸಣ್ಣಾರದಲ್ಲಿ ವೋಲ್ಟೆಜ್ ಸಮಸ್ಯೆ ಸರಿಪಡಿಸಬೇಕು. ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಕೊಡಲೇಬೇಕು, ಕೊಳವೆ ಬಾವಿ ವಿದ್ಯುತ್ ಸಂಪರ್ಕ ನೀಡಬೇಕು ಎಂಬ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಯಿತು.

ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ಹೊಸದಾಗಿ ಕೊರೆಯಲಾದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅವಕಾಶವಿಲ್ಲ, ಆದರೆ ಕೃಷಿಕರಿಗೆ ಯಾವ ವಿಧಾನದಿಂದಲಾದರೂ ನೀರಿನ ವ್ಯವಸ್ಥೆಗೆ ವಿದ್ಯುತ್ ಒದಗಿಸಬೇಕು, ರೈತರು ಕೂಡ ಇದನ್ನು ದುರುಪಯೋಗಪಡಿಸಬಾರದು ಎಂದು ಸಲಹೆ ನೀಡಿದರು. ತಾ.ಪಂ. ಸದಸ್ಯರಾದ ಪಿ.ವೈ.ಕುಸುಮಾ, ಆಶಾ ಲಕ್ಷ್ಮಣ್, ಗಣೇಶ್ ಕೈಕುರೆ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್, ಕಡಬ ಮೆಸ್ಕಾಂ ಪ್ರಭಾರ ಎ.ಇ.ಇ. ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಮೆಸ್ಕಾಂ ಇಂಜಿನಿಯರ್ ನಾಗರಾಜ್, ಪಂಚಾಕ್ಷರಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ತಾ.ಪಂ. ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕಡಬ ಗ್ರಾ.ಪಂ. ಸದಸ್ಯೆ ಶಾಲಿನಿ ಸತೀಶ್ ನಾಕ್, ನೆಲ್ಯಾಡಿ ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ದಿವಾಕರ ಗೌಡ, ಹನೀಫ್, ವರ್ಗೀಸ್ ಅಬ್ರಹಾಂ, ಬಳಕೆದಾರರಾದ ಮಹಮ್ಮದ್ ಮರ್ದಾಳ, ತೀರ್ಥೆಶ್ ಅಮೈ, ಯಾಧವ ಶೆಟ್ಟಿ ಮೊದಲಾದವರು ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಕಾಟಾಚಾರಕ್ಕೆ ಸಭೆ ಬೇಡ, ಅಧಿಕಾರಿಗಳಿಗೆ ತರಾಟೆ

ಕಡಬದಲ್ಲಿ ಇಂದು ಮೆಸ್ಕಾಂ ಜನಸಂಪರ್ಕ ಇದೆ ಎಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು ಬಿಟ್ಟರೆ, ಜನಸಂಪರ್ಕ ಸಭೆ ಬಗ್ಗೆ ಯಾವ ಜನಪ್ರತಿನಿಧಿಗೂ ಇಲಾಖೆ ಮಾಹಿತಿ ನೀಡಿಲ್ಲ. ಆದ್ದರಿಂದಲೇ ಈ ಸಭೆಗೆ ಇಷ್ಟೇ ಜನ ಬಂದಿದ್ದಾರೆ ಎಂದು ಕಡಬ ಗ್ರಾ.ಪಂ. ಸದಸ್ಯ ಹನೀಫ್ ಕೆ.ಎಂ.ರವರು ಹೇಳಿದರು. ಕಳೆದ ಬಾರಿ ಜನಸಂಪರ್ಕ ಸಭೆ ನಡೆಸಿದಾಗಲೂ ಸಭೆಯ ಬಗ್ಗೆ ಪ್ರಚಾರ ಮಾಡಬೇಕು ಎಂದು ಆಗ್ರಹಿಸಿದ್ದೆವು. ಆದರೆ ಇಂದಿನ ಸಭೆಯ ಬಗ್ಗೆ ಇಂದಿನ ಪತ್ರಿಕೆಯಲ್ಲಿ ಪ್ರಕಟವಾದರೆ ಎಲ್ಲರಿಗೂ ಗೊತ್ತಾಗಲು ಹೇಗೆ ಸಾಧ್ಯ, ಇಂತಹ ಇಲಾಖಾ ಸಭೆ ನಡೆಯುವಾಗ ಕಡ್ಡಾಯವಾಗಿ ಗ್ರಾ.ಪಂ.ಗೆ ಮಾಹಿತಿ ನೀಡಬೇಕಲ್ಲ, ಜನಪ್ರತಿನಿಧಿಗಳಿಗೆ ಸಭೆ ನಡೆಯುವ ದಿನದಂದೇ  ಹೇಳಿದರೆ ಹೇಗೆ? ವಿದ್ಯುತ್‌ನ ಬಗ್ಗೆ ಸಾರ್ವಜನಿಕರಿಗೆ ಹಲವು ಪ್ರಶ್ನೆಗಳಿವೆ, ಸಮಸ್ಯೆಗಳಿವೆ ಎಂದ ಅವರು ನಿಮಗೆ ಸಭೆಗೆ ಜನ ಬಂದರೆ ಕಷ್ಟ ಆಗುತ್ತದಾ, ನೀವು ದಾಖಲೆಗೆ ಬೇಕಾಗಿ ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಎ..ಇ.ಇ. ಸುರೇಶ್ ಕುಮಾರ್, ಸಭೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿzವೆ. ಎಲ್ಲರಿಗೂ ತಿಳಿಸಲು ಸಾಧ್ಯವಾಗಲಿಲ್ಲ, ಮುಂದಿನ ಬಾರಿ ತಪ್ಪಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.