ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

panglai panglai2

ಬದುಕು ಕಂಡುಕೊಳ್ಳುವ ಶಿಕ್ಷಣ ಇಂದಿನ ಅಗತ್ಯ-ಪ್ರೊ.ಬಿ.ಜೆ ಸುವರ್ಣ

* ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ಕೃತಿ ಎ.ಟಿರವರಿಗೆ ಸನ್ಮಾನ

* ರಾಷ್ಟ್ರಮಟ್ಟದ ಕರಾಟೆಗೆ ಆಯ್ಕೆಯಾದ ಚೈತನ್ಯ ರಾಜೇಶ್ವರಿಗೆ ಸನ್ಮಾನ

* ೪೦ ಮಂದಿ ಡಿಸ್ಟಿಂಕ್ಷನ್ ವಿಜೇತರಿಗೆ ಸರ್ಟಿಫಿಕೇಟ್ ನೀಡಿ ಗೌರವ

* ಭಿತ್ತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಚೇತನ್ ಕೆ.ರವರಿಗೆ ಗೌರವ

* ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವೈಷ್ಣವಿ ರೈರವರಿಗೆ ಗೌರವ

* ನಿಹಾಲ್, ಶ್ರೇಯಸ್‌ರವರಿಗೆ ಕ್ರೀಡಾಕೂಟದ ಗೌರವ

ಪುತ್ತೂರು: ಹಿಂದೆ ಶಿಕ್ಷಣವೆಂದರೆ ಜ್ಞಾನಾಭಿವೃದ್ಧಿಯಾಗಿತ್ತು. ತರುವಾಯ ಶಿಕ್ಷಣವೆಂದರೆ ಜ್ಞಾನದ ಒಂದು ಭಾಗವಾಯಿತು. ಆದರೆ ಇಂದಿನ ಇಪ್ಪತ್ತೋಂದನೇ ಶತಮಾನದಲ್ಲಿ ಶಿಕ್ಷಣವೆಂದರೆ ಸಮಾಜದಲ್ಲಿ ಆಗುವ ಬದಲಾವಣೆಗೆ ಹೊಂದಾಣಿಕೆ ಮಾಡಿಕೊಂಡು ಬದುಕನ್ನು ಕಂಡುಕೊಳ್ಳುವ ಪರಿಕರವಾಗಬೇಕಾಗಿರುವುದು ಇಂದಿನ ಅಗತ್ಯತೆಗಳಲ್ಲೊಂದಾಗಿದೆ ಎಂದು  ಸಂತ ಫಿಲೋಮಿನಾ ಕಾಲೇಜ್‌ನ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ಜೆ ಸುವರ್ಣರವರು ಹೇಳಿದರು.

ಅವರು ಡಿ.8 ರಂದು ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ಶಿಕ್ಷಣ ಕವಲುದಾರಿಯಲ್ಲಿ ಹೋಗುತ್ತಿರುವುದು ಖೇದಕರವಾಗಿದೆ. ಪೋಷಕರು ಮಕ್ಕಳನ್ನು ಕೇವಲ ತಮ್ಮ ಸ್ವಾರ್ಥಕೋಸ್ಕರ, ಪ್ರತಿಷ್ಟೆಗೋಸ್ಕರ ಬೆಳೆಸಕೂಡದು. ಹೇಗೆ ವಿಜ್ಞಾನ ವಿಷಯದಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಪೋಷಕರ ಅಭಿಮತವಾಗಿದೆಯೋ ಹಾಗೆಯೇ ವಾಣಿಜ್ಯ ಮತ್ತು ಕಲಾ ಕ್ಷೇತ್ರದಲ್ಲೂ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದ ಅವರು ಯಾವುದೇ ಆಯ್ಕೆಯಲ್ಲಿ ತಾರತಾಮ್ಯವಿಲ್ಲ, ಎಲ್ಲಾ ಆಯ್ಕೆಗಳೂ ಅದ್ಭುತವಾಗಿದೆ. ಪೋಷಕರು ಮಗುವಿನ ಆಸಕ್ತಿಯೆಡೆಗೆ ಹೆಚ್ಚಿನ ತೂಕ ಕೊಡಬೇಕೇ ಹೊರತು ತಮ್ಮ ವೈಯಕ್ತಿಕ ಹಿತಸಾಧನೆಗೋಸ್ಕರ ಆಗಕೂಡದು ಎಂದು ಅವರು ಹೇಳಿದರು.

ಕಷ್ಟಪಟ್ಟು ಶಿಕ್ಷಣ ಕಲಿತಾಗ ಬದುಕಿನಲ್ಲಿ ಯಶಸ್ಸು -ವಂ|ರಿತೇಶ್: ಗೌರವ ಅತಿಥಿ ಸಂತ ಫಿಲೋಮಿನಾ ಕಾಲೇಜ್‌ನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ರಿತೇಶ್ ರೊಡ್ರಿಗಸ್‌ರವರು ಮಾತನಾಡಿ, ಎಲ್ಲಾ ಧರ್ಮದ ಬಾಂಧವರನ್ನು ಒಂದುಗೂಡಿಸುವುದು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಶಿಕ್ಷಣಕ್ಕೆ ಮಾತ್ರ ಸಾಧ್ಯವಾಗಿದೆ. ಕಬ್ಬನ್ನು ಸ್ವತಹ ಯಾರು ಜಗಿದು ಸವಿಯನ್ನು ಆನಂದಿಸುತ್ತಾರೆಯೋ ಹಾಗೆಯೇ ಯಾರು ಸ್ವತಹ ಕಷ್ಟಪಟ್ಟು ವಿಷಯವನ್ನು ಸಂಗ್ರಹಿಸಿ ಶಿಕ್ಷಣವನ್ನು ಕಲಿಯುತ್ತಾರೋ ಅವರು ಬದುಕಿನಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ ಎಂಬುದು ಸತ್ಯವಾಗಿದೆ ಎಂದು ಹೇಳಿದರು.

ವಿದ್ಯೆಯ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿ-ಸಿಸ್ಟರ್ ಶುಭ: ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊವಿನ್ಸಿಯಲ್ ಕೌನ್ಸಿಲರ್ ಸಿಸ್ಟರ್ ಶುಭ ಬಿ.ಎಸ್.ರವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಗುಣನಡತೆ ಹಾಗೂ ಮೌಲ್ಯಗಳನ್ನು ಬೆಳೆಸದಿದ್ದಲ್ಲಿ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಯಾರೂ ತನ್ನನ್ನು ತಾನು ತೊಡಗಿಸಿಕೊಂಡು ಶ್ರಮಪಟ್ಟು ದುಡಿಯುತ್ತಾರೋ ಅವರು ಜೀವನದಲ್ಲಿ ಫಲವನ್ನು ಅನುಭವಿಸುತ್ತಾರೆ ಎಂದರು.

ಪೋಷಕರಿಗೆ ತಮ್ಮ ಮಕ್ಕಳೇ ಆಸ್ತಿಯಾಗಬೇಕಾಗಿದೆ-ಜಯಂತ್ ನಡುಬೈಲು: ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಓದಿಸಿ ವಿದೇಶದಲ್ಲಿ ಸೆಟಲ್ ಆಗಿಸುವ ಬದಲು ಇಲ್ಲಿಯೇ ಅವರ ಪ್ರಯೋಜನ ಸಿಗುವಂತಾಗಬೇಕು. ಆಸ್ತಿ, ಐಶ್ಯರ್ಯ ಯಾವುದೂ ಮುಖ್ಯವಲ್ಲ. ಪೋಷಕರಿಗೆ ತಮ್ಮ ಮಕ್ಕಳೇ ಆಸ್ತಿಯಾಗಬೇಕಾಗಿದೆ ಎಂದ ಅವರು ತಂದೆ-ತಾಯಿ ಇಬ್ಬರೂ ಎರಡು ಕಣ್ಣುಗಳು ಇದ್ದ ಹಾಗೆ. ಮುಪ್ಪಿನ ಸಂದರ್ಭದಲ್ಲಿ ಮಕ್ಕಳಲ್ಲಿ ತೋರಿಸಿದ ಪ್ರೀತಿ, ಬಾಂಧವ್ಯ, ಸಂಸ್ಕಾರಯುತ ಶಿಕ್ಷಣ ನೀಡಿದ ಹೆತ್ತವರನ್ನು ಮಕ್ಕಳು ಮರೆಯುವಂತಾಗಬಾರದು ಎಂದು ಹೇಳಿದರು.

ಸನ್ಮಾನ: ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಂಟನೇ ತರಗತಿಯ ವಿದ್ಯಾರ್ಥಿನಿ ಚೈತನ್ಯ ರಾಜೇಶ್ವರಿ ಮತ್ತು ೨೦೧೫-೧೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ಪ್ರಸ್ತುತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಕೃತಿ ಎ.ಟಿ.ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸ್ಮರಣಿಕೆ ನೀಡಿ ಗೌರವ: ಶಿಕ್ಷಣ ಇಲಾಖೆ ನಡೆಸಿದ ಭಿತ್ತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಹತ್ತನೇ ತರಗತಿಯ ವಿದ್ಯಾರ್ಥಿ ಚೇತನ್ ಕೆ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸುರವರ ನೂರನೇ ಜನ್ಮದಿನೋತ್ಸವದ ಸ್ಮರಣಾರ್ಥ ನಡೆಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ರೈರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಗೌರವ: ೨೦೧೫-೧೬ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿರುವ ೪೦ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸತತ ಐದನೇ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಸಂಸ್ಥೆಯು ಡಿಸ್ಟಿಂಕ್ಷನ್ ಪಡೆದಿದೆ.

ಬಹುಮಾನ ವಿತರಣೆ: ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಶಾಲೆ ಏರ್ಪಡಿಸಿದ ವಾರ್ಷಿಕ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ನಿಹಾಲ್ ಹಾಗೂ ಶ್ರೇಯಸ್‌ರವರು ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದಿದ್ದಕ್ಕೆ ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಯಿತು. ವಾರ್ಷಿಕ ಸಮಾರಂಭಕ್ಕೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣರವರೊಂದಿಗೆ ಹಗಲಿರುಳು ಸಹಕರಿಸಿದ ವಿದ್ಯಾರ್ಥಿಗಳಾದ ಅಕ್ಷಯ್, ನಿಹಾಲ್, ಶಬರೀಶ್, ಸಂಜಯ್ ಕೆ.ವಿ, ಕೃತಿನ್ ಬಿ.ಕೆ.ರವರನ್ನು ಗೌರವಿಸಲಾಯಿತು.

ಧ್ವಜಾರೋಹಣ: ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಇಒ ಕಛೇರಿಯ ಇಸಿಒ ತನುಜ ಎಂ.ರವರು ಧ್ವಜಾರೋಹಣಗೈದರು. ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಎಜಿಎಂ ಫ್ರಾನ್ಸಿಸ್ ಡಿಸೋಜ, ಮುಖ್ಯ ಶಿಕ್ಷಕಿ ಸಿಸ್ಟರ್ ಎಮಿರೀಟ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.

ಸಂಚಾಲಕಿ ಸಿಸ್ಟರ್ ಎಮ್.ಮಾರಿಯ ಲೈಟ ಬಿ.ಎಸ್ ಸ್ವಾಗತಿಸಿ, ಮುಖ್ಯಶಿಕ್ಷಕಿ ಸಿಸ್ಟರ್ ಎಮಿರೀಟ ವಂದಿಸಿದರು. ಬೆಥನಿ ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಲೊಯೊಲಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಬೃಂದ ಪ್ರತಿಭಾವಂತರ ಪಟ್ಟಿಯನ್ನು ಓದಿದರು. ಸಿಸ್ಟರ್ ಲೀಡಿಯಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಆಡಳಿತ ಸಿಬ್ಬಂದಿ ಸೆಲಿನ್ ಪಿಂಟೊರವರು ಬಹುಮಾನಿತರ ಪಟ್ಟಿಯ ಜೋಡಣೆಯ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿ ನಾಯಕ ಅಕ್ಷಯ್ ಜೆ., ಸೋನಂ, ನಿಮ್ರಾ ಹಾಗೂ ಎಮಿಲಿಯಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಜ್ಞಾನಾರ್ಜನೆಯೊಂದಿಗೆ ಮಾನವೀಯ ಮೌಲ್ಯಗಳ ಬೆಳೆಸಿ

ಕೇವಲ ಉದ್ಯೋಗವನ್ನು ಮಾನದಂಡವನ್ನಾಗಿ, ಅಂಕಗಳನ್ನು ಪ್ರಕ್ರಿಯೆಯನ್ನಾಗಿ ಮಕ್ಕಳ ಮನಸ್ಸಿನಲ್ಲಿ ಹಾಸುಹೊಕ್ಕಾಗಿಸಿ, ದೇಶದ ಸ್ಥಿತಿಗತಿ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸದೇ ಹೋದರೆ ಭವಿಷ್ಯದ ಬಗೆಗಿನ ಚಿಂತನೆಯನ್ನು ಯಾರು ಮಾಡುವುದು. ಶಿಕ್ಷಕರು ಹಾಗೂ ಪೋಷಕರು ಕಲಿತ ಶಾಲೆಯನ್ನು ’ನಮ್ಮ ಶಾಲೆ ’ ಹಾಗೂ ಕಲಿಯುವ ಮಕ್ಕಳನ್ನು ’ನಮ್ಮ ಮಕ್ಕಳು’ ಎಂದು ಭಾವಿಸುವಂತಾದಾಗ ಜ್ಞಾನಾರ್ಜನೆ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯುತ್ತದೆ.

-ಪ್ರೊ.ಬಿ.ಜೆ ಸುವರ್ಣ, ವಿಶ್ರಾಂತ ಪ್ರಾಧ್ಯಾಪಕರು 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.