ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆ; ಕೊಳವೆ ಬಾವಿ ಕೊರೆಯಲು ಅವಕಾಶ ನೀಡಿ; ಜಿಲ್ಲಾಧಿಕಾರಿಗೆ ಬರೆಯಲು ಸದಸ್ಯರ ಒಮ್ಮತದ ತೀರ್ಮಾನ

Puttur_Advt_NewsUnder_1
Puttur_Advt_NewsUnder_1

kolave

* ಬೀದಿ ಬದಿ ವ್ಯಾಪಾರಕ್ಕೆ ಲೈಸನ್ಸ್ ಇಲ್ಲ

* ಅಪಾಯಕಾರಿ ಮರ ತೆರವುಗೊಳಿಸದಿದ್ದರೆ ಮುಂದಿನ ಅನಾಹುತಕ್ಕೆ ಇಲಾಖೆಯೇ ಜವಾಬ್ದಾರಿ

* ಅಂತ್ಯಸಂಸ್ಕಾರದ ಸಹಾಯಧನದಲ್ಲಿ ವಿಳಂಬ ಬೇಡ

* ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಬಿಲ್ ಸಿಗದೇ 5 ತಿಂಗಳಾಯಿತು

ಪುತ್ತೂರು: ಕೊಳವೆ ಬಾವಿ ಕೊರೆಯಲು ಅವಕಾಶ ಇಲ್ಲ ಎಂಬ ಜಿಲ್ಲಾಧಿಕಾರಿಯವರ ಹೊಸ ಆದೇಶವು ನಮ್ಮ ಜಿಲ್ಲೆಗೆ ಪೂರಕವಾಗಿಲ್ಲ, ಬೇಸಿಗೆ ಕಾಲದಲ್ಲಿ ನೀರಿನ ಬರ ಉಂಟಾದಾಗ ಕೃಷಿಯನ್ನು ಉಳಿಸಿಕೊಳ್ಳಲು, ಕುಡಿಯಲು ನೀರಿಗಾಗಿ ಕೊಳವೆ ಬಾವಿ ಕೊರೆಯುವುದು ಅನಿವಾರ್ಯವಾಗಿದೆ, ಸರಕಾರವು ಕೊಳವೆ ಬಾವಿಯ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಒದಗಿಸಿದ ಬಳಿಕ ಈ ಆದೇಶವನ್ನು ಹೊರಡಿಸಲಿ, ಅಲ್ಲಿಯವರೆಗೆ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲು ಪಂಚಾಯತ್‌ಗೆ ಅಧಿಕಾರ ನೀಡಬೇಕು, ಹಾಗಾಗಿ ಜಿಲ್ಲಾಧಿಕಾರಿಯವರು ತಮ್ಮ ಆದೇಶವನ್ನು ಹಿಂದಕ್ಕೆ ಪಡೆದು ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ಬರೆಯುವಂತೆ ಸದಸ್ಯರು ಒತ್ತಾಯಿಸಿ ನಿರ್ಣಯ ಕೈಗೊಂಡ ಘಟನೆ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಸವಿತಾ ಎಸ್ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಬೀದಿ ಬದಿ ವ್ಯಾಪಾರಕ್ಕೆ ಲೈಸನ್ಸ್ ಇಲ್ಲ: ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರಿಗೆ ಲೈಸನ್ಸ್ ನೀಡದಿರಲು ತೀರ್ಮಾನ ಕೈಗೊಳ್ಳಲಾಯಿತು.

ಅಪಾಯಕಾರಿ ಮರ ತೆರವುಗೊಳಿಸದಿದ್ದರೆ ಮುಂದಿನ ಅನಾಹುತಕ್ಕೆ ಇಲಾಖೆಯೇ ಜವಾಬ್ದಾರಿ: ಪಂಚಾಯತ್ ವ್ಯಾಪ್ತಿಯ ಕಾವು, ಕೌಡಿಚ್ಚಾರ್, ಬಾಳೆಕೊಚ್ಚಿ ಪ್ರದೇಶದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಬರೆದುಕೊಂಡರೂ ಇಲಾಖೆಯಿಂದ ಸಮರ್ಪಕವಾದ ಉತ್ತರ ಬಾರದ ಕಾರಣ ಮುಂದಕ್ಕೆ ಅಪಾಯಕಾರಿ ಮರಗಳಿಂದ ಏನಾದರೂ ಅನಾಹುತಗಳು ಉಂಟಾದರೆ ಅದಕ್ಕೆ ಅರಣ್ಯ ಇಲಾಖೆಯೇ ನೇರ ಜವಾಬ್ದಾರಿಯಾಗಿರುತ್ತದೆ ಎಂದು ಅರಣ್ಯ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.

ಅಂತ್ಯಸಂಸ್ಕಾರದ ಸಹಾಯಧನದಲ್ಲಿ ವಿಳಂಬ ಬೇಡ: ಪರಿಶಿಷ್ಟ ಜಾತಿ/ಪಂಗಡದ ಕುಟುಂಬಗಳಿಗೆ ಸರಕಾರದಿಂದ ಸಿಗುವ ಅಂತ್ಯಸಂಸ್ಕಾರ ಸಹಾಯಧನ ಸಕಾಲಕ್ಕೆ ಸಿಗದೇ ತೊಂದರೆಯಾಗುತ್ತಿದ್ದು ಈ ಬಗ್ಗೆ ಕಂದಾಯ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.

ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಬಿಲ್ ಸಿಗದೇ ೫ ತಿಂಗಳಾಯಿತು: ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ಮೆಟೀರಿಯಲ್ ಬಿಲ್ ಸಿಗದೇ ೫ ತಿಂಗಳು ಕಳೆದಿದೆ, ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಕಷ್ಟವಾಗಲಿದೆ ಹಾಗಾಗಿ ಫಲಾನುಭವಿಗಳಿಗೆ ಬರಲು ಬಾಕಿ ಇರುವ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.

ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲು ದೀನ್‌ದಯಾಳ್ ವಿದ್ಯುದ್ಧೀಕರಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದರೂ ಇಲಾಖೆಯಿಂದ ಈವರೆಗೆ ಯಾವುದೇ ಸ್ಪಂದನೆ ಇಲ್ಲದಿದ್ದು ಈ ಬಗ್ಗೆ ಮೆಸ್ಕಾಂ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.

ರೇಷನ್ ಕಾರ್ಡ್ ವಿತರಣೆಯಲ್ಲಿ ವಿಳಂಬ ಉಂಟಾಗಿ ಫಲಾನುಭವಿಗಳಿಗೆ ತೊಂದರೆ ಉಂಟಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.  ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯರಾದ ಹೊನ್ನಪ್ಪ ಪೂಜಾರಿ, ಸುಂದರ, ಸದಾನಂದ ಮಣಿಯಾಣಿ, ಮಹಾಲಿಂಗ, ಚಿತ್ರಾ ಎನ್, ಸಾವಿತ್ರಿ, ಸಂತೋಷ್ ಮಣಿಯಾಣಿ, ತಿಲಕ್ ರೈ, ಅಮೃತಾ, ಪ್ರೇಮಲತಾ ರೈ, ದಿವ್ಯನಾಥ ಶೆಟ್ಟಿ, ರವೀಂದ್ರ ಪೂಜಾರಿ, ಸೀತಾರಾಮ ಮೇಲ್ಪಾದೆ, ಸರೋಜಿನಿ, ಹೇಮಾವತಿ, ರಾಜೇಶ್ ಹೆಚ್, ನಿರ್ಮಲ, ಸಹನಾ ನಳಿನಾಕ್ಷಿ, ಸಲ್ಮಾ, ನವೀನ ಬಿ.ಡಿ, ಲೋಹೀತ್ ಪೂಜಾರಿ ಯವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಜಯಪ್ರಕಾಶ್ ಎಂ. ಸ್ವಾಗತಿಸಿ, ಕಾರ್ಯದರ್ಶಿ ಟಿ. ಕೃಷ್ಣರಾಜ್ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.