ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆ ಅಗಲೀಕರಣ ಕಾಮಗಾರಿ; 50ಕ್ಕೂ ಅಧಿಕ ಲ್ಯಾಂಡ್‌ಲೈನ್ ಫೋನ್ ಸಂಪರ್ಕ ಕಡಿತ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ಪುಳಿತ್ತಡಿ, ಪೆರಿಯಡ್ಕ ಭಾಗದ ಎಲ್ಲಾ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿದೆ.

ಉಪ್ಪಿನಂಗಡಿ- ಕಡಬ- ಮರ್ದಾಳ ರಸ್ತೆಯು ವಿಸ್ತರಣೆಗೊಳ್ಳಲಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಳೆಗೇಟು, ಪುಳಿತ್ತಡಿ, ಪೆರಿಯಡ್ಕದಲ್ಲಿ ಈಗಾಗಲೇ ಹಿಟಾಚಿಗಳ ಮೂಲಕ ರಸ್ತೆಯನ್ನು ಅಗಲಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಭೂಮಿಯಡಿ ಹಾದು ಹೋಗಿದ್ದ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್‌ನವರ ದೂರವಾಣಿ ಸಂಪರ್ಕ ಲೈನ್‌ಗಳು ಅಲ್ಲಲ್ಲಿ ತುಂಡಾಗಿದ್ದು, ಬಿಎಸ್ಸೆನ್ನೆಲ್‌ನ ಉಪ್ಪಿನಂಗಡಿ ಉಪವಿಭಾಗದಿಂದ ಸಂಪರ್ಕ ಪಡೆದಿದ್ದ ಈ ಭಾಗದ ಸುಮಾರು ೫೦ಕ್ಕೂ ಅಧಿಕ ಮಂದಿಯ ಸ್ಥಿರ ದೂರವಾಣಿ ಸಂಪರ್ಕ ಕಳೆದ 10 ದಿನಗಳಿಂದ ಕಡಿತಗೊಂಡಿವೆ. ಆದ್ದರಿಂದ ಬಿಎಸ್ಸೆನ್ನೆಲ್ ಅವಲಂಬಿತ ಈ ಭಾಗದವರು ತೊಂದರೆಗೆ ಸಿಲುಕುವಂತಾಗಿದೆ.

ಸರಕಾರಿ ಯೋಜನೆಯೊಂದನ್ನು ರೂಪಿಸುವಾಗ ಅದನ್ನು ಶಾಶ್ವತವಾಗಿ ಇರುವಂತೆ ರೂಪಿಸಬೇಕು. ಆದರೆ ನಮ್ಮಲ್ಲಿ ಆ ರೀತಿ ಆಗುತ್ತಿಲ್ಲ. ಉದಾಹರಣೆಗೆ ಒಂದು ಕಡೆ ರಸ್ತೆ ನಿರ್ಮಾಣವಾದರೆ, ಅದರ ಬದಿಯಲ್ಲಿಯೇ ದೂರವಾಣಿ ಕೇಬಲ್ ವಯರ್‌ಗಳನ್ನು, ನೀರಿನ ಸಂಪರ್ಕ ಪೈಪ್‌ಗಳನ್ನು ಅಳವಡಿಸಲಾಗುತ್ತದೆ. ವಿದ್ಯುತ್ ಕಂಬ  ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಅಲ್ಲಿಯೇ ನಡೆಸಲಾಗಿರುತ್ತದೆ. ಮತ್ತೊಂದು ವರ್ಷದಲ್ಲಿ ಆ ರಸ್ತೆ ಅಗಲಗೊಳಿಸುವ ಪ್ರಕ್ರಿಯೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಾಗ ಹೀಗೆ ಮುಂದಿನ ಯೋಚನೆಯಿಲ್ಲದೆ ಮಾಡಲಾದ ಇಂತಹ ಕಾಮಗಾರಿಗಳನ್ನು ತೆಗೆಯಬೇಕಾಗುತ್ತದೆ. ಆಗ ಅನಗತ್ಯವಾಗಿ ಹಣವೂ ಹಾಳು, ಶ್ರಮವೂ ಹಾಳು ಇದರೊಂದಿಗೆ ನಾಗರಿಕರು ತೊಂದರೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ಸರಕಾರಗಳು ಅಥವಾ ಇಲಾಖೆಗಳು ಯಾವುದಾದರೊಂದು ಕಾಮಗಾರಿಯನ್ನು ಅನುಷ್ಠಾನಕ್ಕೆ ತರುವಾಗ ದೂರದೃಷ್ಟಿಯಲ್ಲಿಟ್ಟುಕೊಂಡು ಅದಕ್ಕೆ ರೂಪುರೇಷೆ ತಯಾರಿಸಬೇಕು. ಆದರೆ ಅದು ಮಾತ್ರ ಎಲ್ಲಿಯೂ ಆಗುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ. ಇಂತಹ ನಾಳಿನ ಯೋಚನೆಯಿಲ್ಲದ ಕಾಮಗಾರಿಯಿಂದಾಗಿ ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಗಳು ಸ್ಥಗಿತಗೊಂಡು ಇದೀಗ ಜನರು ತೊಂದರೆಗೆ ಸಿಲುಕಿಕೊಳ್ಳುವಂತಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಿಎಸ್ಸೆನ್ನೆಲ್ ಉಪ್ಪಿನಂಗಡಿ ಉಪವಿಭಾಗದ ಜೆಇ ಉಷಾ ಅವರು, ರಸ್ತೆ ವಿಸ್ತರಣೆಯ ಕಾಮಗಾರಿ ನಡೆಯುತ್ತಿರುವುದರಿಂದ ಕೇಬಲ್‌ಗಳು ತುಂಡಾಗಿ ಈ ಸಮಸ್ಯೆಯುಂಟಾಗಿದೆ. ರಸ್ತೆ ಅಗಲಗೊಳಿಸುವ ಪ್ರಕ್ರಿಯೆ ಮುಗಿಯದೇ ನಾವು ಅದರ ದುರಸ್ತಿ ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ರಸ್ತೆ ಅಗಲಗೊಳಿಸುವ ಪ್ರಕ್ರಿಯೆ ಸಂದರ್ಭ ಮತ್ತೆ ಮತ್ತೆ ಕೇಬಲ್‌ಗಳು ತುಂಡಾಗುತ್ತವೆ. ಈ ಬಗ್ಗೆ ಕಾಮಗಾರಿಯ ಗುತ್ತಿಗೆದಾರರಲ್ಲಿ ಮಾತನಾಡಿದ್ದು, ಇನ್ನು ೨-೩ ದಿನದಲ್ಲಿ ರಸ್ತೆ ವಿಸ್ತರಣೆ ಪ್ರಕ್ರಿಯೆ ಮುಗಿಯುತ್ತದೆ ಎಂದು ತಿಳಿಸಿದ್ದಾರೆ. ಆ ಬಳಿಕ ದೂರವಾಣಿಗಳು ಸರಿಯಾಗಲಿವೆ ಎಂದು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.