ವಿವೇಕಾನಂದ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗಮೇಳಕ್ಕೆ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1

vivekananda

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷ್ಯದಲ್ಲಿರಿಸಿ ಈ ಔದ್ಯೋಗಿಕ ಮೇಳವನ್ನು ರೂಪಿಸಲಾಗಿದೆ. ಉದ್ಯೋಗ ಕ್ಷೇತ್ರದ ಬಗೆಗೆ ಸರಿಯಾದ ಮಾಹಿತಿ, ಜ್ಞಾನ ದೊರಕದೆ ಉದ್ಯೋಗಹೀನರಾಗಿ ಗ್ರಾಮಗಳಲ್ಲಿರುವ ಯುವ ಸಮೂಹವನ್ನು ಗಮನದಲ್ಲಿರಿಸಿ ಈ ಮೇಳ ಆಯೋಜನೆಗೊಂಡಿದೆ.

2017ರ ಜನವರಿ 13ರಂದು ಈ ಉದ್ಯೋಗಮೇಳ ಆಯೋಜನೆಗೊಳ್ಳುತ್ತಿದ್ದು, ಸುಮಾರು ಮುನ್ನೂರಕ್ಕೂ ಅಧಿಕ ಕಂಪೆನಿಗಳನ್ನು ಸಂಪರ್ಕಿಸಲಾಗಿದೆ. ರಾಜ್ಯ ಹಾಗೂ ಹೊರರಾಜ್ಯದ ಅನೇಕ ಸಂಸ್ಥೆಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಿ ಈ ಭಾಗದ ಯುವಕ ಯುವತಿಯರಿಗೆ ಉದ್ಯೋಗ ಕೊಡುವುದಕ್ಕೆ ಉತ್ಸಾಹ ತೋರಿಸಿವೆ. ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ರಿಟೇಲ್ ಕ್ಷೇತ್ರದ ಉದ್ಯಮ, ಉತ್ಪಾದನಾ ಘಟಕಗಳೇ ಮೊದಲಾದ ಅನೇಕ ಉದ್ಯಮಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

ಸಿದ್ಧತೆ:

ಉದ್ಯೋಗ ಮೇಳವನ್ನು ಸಸೂತ್ರವಾಗಿ ನಿರ್ವಹಿಸುವುದಕ್ಕಾಗಿ ಈಗಾಗಲೇ 12 ಸಮಿತಿಗಳ ರಚನೆಯಾಗಿದೆ. ವಿವೇಕಾನಂದ ಕ್ಯಾಂಪಸ್‌ನ ವಿವಿಧ ಸಂಸ್ಥೆಗಳಲ್ಲಿ ಬೇರೆ ಬೇರೆ ಕಂಪೆನಿಗಳಿಗೆ ವ್ಯವಸ್ಥೆ ಕಲ್ಪಿಸುವುದೆಂದು ನಿರ್ಧರಿಸಲಾಗಿದೆ. ಉದ್ಯೋಗಾರ್ಥಿಗಳಾಗಿ ಆಗಮಿಸುವವರಿಗೆ ಉಚಿತ ಊಟೋಪಚಾರದ ವ್ಯವಸ್ಥೆ ಇದೆ. ವಿವೇಕಾನಂದ ವಿದ್ಯಾಸಂಸ್ಥೆಗಳ ಉಪನ್ಯಾಸಕರು, ಉಪನ್ಯಾಸಕೇತರ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

 ಯಾರು ಭಾಗವಹಿಸಬಹುದು?

ಪ್ರಾಥಮಿಕ, ಪ್ರೌಢಶಾಲಾ ಮಟ್ಟದಿಂದ ತೊಡಗಿ ಪಾರಂಪರಿಕ ಪದವಿಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ನಂತಹ ಪದವೀಧರರು, ಐಟಿಐ, ಡಿಪ್ಲಮೋದಂತಹ ವಿಷಯವನ್ನು ಓದಿದವರು, ಇಂಜಿನಿಯರಿಂಗ್, ಎಂ.ಬಿ.ಎ ಮೊದಲಾದ ವೃತ್ತಿಪರ ಶಿಕ್ಷಣ ಹೊಂದಿದವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಪ್ರಸ್ತುತ ಅಂತಿಮ ವರ್ಷದಲ್ಲಿ ಅಧ್ಯಯನ ನಡೆಸುತ್ತಿರುವವರೂ ಅರ್ಜಿ ಸಲ್ಲಿಸಬಹುದು. ರಾಜ್ಯದ ಯಾವುದೇ ಭಾಗದ ಉದ್ಯೋಗಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.

ಏನು ಮಾಡಬೇಕು?

ಈಗಾಗಲೇ ಈ ಉದ್ಯೋಗ ಮೇಳದ ಹಿನ್ನಲೆಯಲ್ಲಿ ವೆಬ್ ಸೈಟ್ ಒಂದನ್ನು ರೂಪಿಸಲಾಗಿದೆ. ಆ ವೆಬ್ ಸೈಟ್‌ನಲ್ಲಿರುವ ಅರ್ಜಿಯನ್ನು ತುಂಬಿ ಭಾಗವಹಿಸುವ ಉಮೇದುಗಾರಿಕೆಯನ್ನು ನೋಂದಾವಣೆ ಮಾಡಬೇಕು ಮತ್ತು ಡೌನ್‌ಲೋಡ್ ಮಾಡಿಕೊಂಡ ಅರ್ಜಿ ಫಾರಂನ್ನು ತುಂಬಿಸಿ ದಿನಾಂಕ ೧೩-೦೧-೨೦೧೭ರಂದು ಸಂದರ್ಶನಕ್ಕೆ ಬರುವಾಗ ಅಂಕಪಟ್ಟಿಗಳ ಮೂಲ ಪ್ರತಿಯೊಂದಿಗೆ ತರಬೇಕು. ವೆಬ್ ಸೈಟ್ ವಿಳಾಸ :www.vivekaudyoga.com. ವೆಬ್‌ಸೈಟ್‌ನಲ್ಲಿ ದಾಖಲೆ ಮಾಡಲು ಸಾಧ್ಯವಾಗದವರು ನೆಹರುನಗರದ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ರೂಪಿಸಲಾಗಿರುವ ಉದ್ಯೋಗ ಮೇಳದ ಮಾಹಿತಿ ಕೇಂದ್ರಕ್ಕೆ ನೇರವಾಗಿ ಆಗಮಿಸಿ ಅಥವ  ೮೭೬೨೮೩೭೪೯೯ ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು.  ಅಲ್ಲದೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ವತಿಯಿಂದ ವಿವಿಧ ಕೇಂದ್ರಗಳಲ್ಲಿ ನಡೆಸಲ್ಪಡುವ ವಿದ್ಯಾಸಂಸ್ಥೆಗಳಲ್ಲಿ  ಅರ್ಜಿ ಫಾರಂಗಳು ದೊರೆಯುತ್ತಿದ್ದು ಸದ್ರಿ ಕೇಂದ್ರಗಳಲ್ಲಿ ನೋಂದಾವಣೆಗೆ ಅವಕಾಶವಿರುತ್ತದೆ.   ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡವರಿಗೆ ಕೆಲವು ದಿನಗಳ ನಂತರ ಅಗತ್ಯ ಮಾಹಿತಿ, ಉದ್ಯೋಗ ಮೇಳಕ್ಕೆ ಆಗಮಿಸುವಾಗಿನ ಸಿದ್ಧತೆ ಬಗೆಗೆ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿ ಕೇಂದ್ರ ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ ತೆರೆದಿರುತ್ತದೆ.

ಈವರೆಗಿನ ನೋಂದಣಿ:

ಈವರೆಗೆ ವಿಪ್ರೋ, ಇನ್ಫೋಸಿಸ್, ವೋಲ್ವೋ, ರಿಲಯನ್ಸ್, ಪ್ಲಿಪ್ ಕಾರ್ಟ್,  ಅಂಬುಜಾ ಸಿಮೆಂಟ್, ಬಜಾಜ್ ಕ್ಯಾಪಿಟಲ್, ಐಟಿಸಿ ಮೈ ಫೋರ್ಚೂನ್, ಬಿಗ್ ಬಜಾರ್ ಮೊದಲಾದ ಸುಮಾರು 120 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದಕ್ಕೆ ತಮ್ಮ ಉತ್ಸುಕತೆಯನ್ನು ತೋರಿಸಿದ್ದಲ್ಲದೆ ನೋಂದಾವಣೆ ಮಾಡಿಕೊಂಡಿರುವುದು ಸಂತಸದ ವಿಚಾರ. ಅಂತೆಯೇ ಈವರೆಗೆ ೨೨೦೦ ಜನ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ನೋಂದಾವಣೆ ಮಾಡಿಸಿಕೊಂಡಿದ್ದರೆ ಸುಮಾರು ೫೦೦ ಮಂದಿ ಆಫ್‌ಲೈನ್ ಮೂಲಕ ದಾಖಲೆ ಮಾಡಿಸಿಕೊಂಡಿದ್ದಾರೆ.

ಸ್ವ – ಉದ್ಯೋಗದ ಬಗ್ಗೆ ಸೆಮಿನಾರ್

ಯುವ ಸಮೂಹಕ್ಕೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಬೇಕೆಂಬ ಆಶಯ ಒಂದೆಡೆಯಾದರೆ ಸ್ವಂತ ಉದ್ಯೋಗ – ಉದ್ದಿಮೆಗೆ ಯುವ ಶಕ್ತಿ ಮನಮಾಡುವಂತೆ ಪ್ರೇರಣೆ ನೀಡಬೇಕೆಂಬುದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ. ಈ ಹಿನ್ನಲೆಯಲ್ಲಿ ಉದ್ಯೋಗಮೇಳದ ದಿನದಂದು ಸ್ವ ಉದ್ಯೋಗದ ಬಗೆಗೆ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ. ಸ್ವ ಉದ್ಯೋಗ ಆರಂಭಿಸುವುದು ಹೇಗೆ? ಆ ಬಗೆಗೆ ಸರಕಾರದ ಯೋಜನೆಗಳೇನಿವೆ? ಎಂಬಿತ್ಯಾದಿ ಮಾಹಿತಿಗಳನ್ನು ತಜ್ಞರು ಒದಗಿಸಿಕೊಡಲಿದ್ದಾರೆ.

ನಿರೀಕ್ಷೆ:

ಜಿಲ್ಲೆ ಹಾಗೂ ಹೊರಜಿಲ್ಲೆಗಳ ಸುಮಾರು ಎಂಟು ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದಿನೇ ದಿನೇ ಉದ್ಯೋಗದ ಅಪೇಕ್ಷಿತರ ಸಂಖ್ಯೆ ವೃದ್ಧಿಸುತ್ತಿದೆ. ಒಟ್ಟಿನಲ್ಲಿ ಅವಕಾಶ ವಂಚಿತರಾಗಿರುವ ಯುವ ಸಮೂಹಕ್ಕೊಂದು ಉತ್ಕೃಷ್ಟ ವೇದಿಕೆಯಾಗಿ ಹಾಗೂ ಉದ್ಯೋಗಾಕಾಂಕ್ಷಿಗಳ ಹೊಸ ವಿಶ್ವಾಸವಾಗಿ ಈ ಉದ್ಯೋಗ ಮೇಳ ರೂಪುಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.