Breaking News

ಅನುದಾನ ಇದ್ದರೂ..ಶಿಲಾನ್ಯಾಸಕ್ಕೆ ದಿನ ಕೂಡಿ ಬರುತ್ತಿಲ್ಲ…! ಪಾಪೆಮಜಲು ಅಂಗನವಾಡಿ ಕಟ್ಟಡ ಕಾಮಗಾರಿ ವಿಳಂಬಕ್ಕೆ ಕಾರಣವೇನು…?

Puttur_Advt_NewsUnder_1
Puttur_Advt_NewsUnder_1

 

papemajalu1papemajalu2ಶಾಸಕರು ಗಮನಹರಿಸಲಿ

ಸದ್ಯಕ್ಕೆ ಉಂಟಾಗಿರುವ ಅಂಗನವಾಡಿ ಕಟ್ಟಡ ವಿಚಾರದಲ್ಲಿ ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಸ್ಥಳೀಯವಾಗಿ ಕೇಳಿ ಬಂದಿದೆ. ಅನುದಾನವಿದ್ದರೂ ಅಂಗನವಾಡಿ ಕಟ್ಟಡ ನಿರ್ಮಾಣವಾಗದೇ ಇರಲು ಕಾರಣವೇನೆಂಬುವುದನ್ನು ವಿಮರ್ಶಿಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರವನ್ನು ಶಾಸಕರು ತೆಗೆದುಕೊಳ್ಳುವ ಮೂಲಕ ಮಕ್ಕಳ ಹಿತ ಕಾಪಾಡಬೇಕಾಗಿದೆ ಎಂಬ ಆಗ್ರಹ ವ್ಯಕ್ತವಾಗಿದೆ.

ಮಕ್ಕಳ ಹಿತದೃಷ್ಟಿಯೇ ಮುಖ್ಯವಾಗಲಿ

ಅನುದಾನವಿದ್ದರೂ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳದೇ ಇರುವುದು ಊರಿನವರ ಅಸಮಾಧಾನಕ್ಕೂ ಕಾರಣವಾಗಿದೆ. ಶಾಲಾ ಆಡಳಿತ ಸಂಸ್ಥೆಯವರಾಗಲೀ, ಶಿಕ್ಷಕರಾಗಲೀ, ಜನಪ್ರತಿನಿಧಿಗಳಾಗಲೀ ಅವರ ಅಧಿಕಾರ  ಶಾಶ್ವತವಲ್ಲ, ತಮಗೆ ಅಧಿಕಾರವಿರುವ ವರೆಗೆ ಮಾತ್ರ ತಮ್ಮ ಅಧಿಕಾರ ಚಲಾಯಿಸುತ್ತಾರೆ. ಆದರೆ ಅಂಗನವಾಡಿ ಕಟ್ಟಡ ಸ್ಥಳೀಯ ಪಾಪೆಮಜಲು ಪರಿಸರದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿರ್ಮಾಣಗೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಮಕ್ಕಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬಂದಿದೆ.

ಯೂಸುಫ್ ರೆಂಜಲಾಡಿ

ಪುತ್ತೂರು: ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಪಾಪೆಮಜಲುವಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ  ಅಂಗನವಾಡಿಗೆ ಅನುದಾನ ಬಿಡುಗಡೆಯಾಗಿದ್ದರೂ ಶಿಲಾನ್ಯಾಸಕ್ಕೆ ದಿನವೇ ಕೂಡಿ ಬರುತ್ತಿಲ್ಲ. ಒಮ್ಮೆ ನಿಗದಿಯಾಗಿದ್ದ ಶಿಲಾನ್ಯಾಸ ಕಾರ್ಯಕ್ರಮವೂ ಕೊನೆಗಳಿಗೆಯಲ್ಲಿ ರದ್ದಾಗುವ ಮೂಲಕ ಮುಂದೂಡಲ್ಪಟ್ಟಿತ್ತು. ಅಂಗನವಾಡಿ ಕಟ್ಟಡ ನಿರ್ಮಾಣ ವಿಳಂಬಕ್ಕೆ ವ್ಯಕ್ತಿ ಪ್ರತಿಷ್ಠೆಯೋ ಅಥವಾ ಆಂತರಿಕ ಭಿನ್ನಾಭಿಪ್ರಾಯವೋ ಗೊತ್ತಿಲ್ಲ. ಅಂತೂ ಅನುದಾನ ಲಭ್ಯವಿದ್ದರೂ ಸದ್ಯಕ್ಕೆ ಗುದ್ದಲಿಪೂಜೆ ಕಾರ್ಯಕ್ಕೆ ಮಾತ್ರ ಕಾಲ ಕೂಡಿ ಬರುತ್ತಿಲ್ಲ.

ಅನುದಾನವಿದೆ…ಹೊಂದಾಣಿಕೆಯಿಲ್ಲ: ಪ್ರಸ್ತುತ ಪಾಪೆಮಜಲುವಿನಲ್ಲಿರುವ ಅಂಗನವಾಡಿಯಲ್ಲಿ ಸುಮಾರು 40ಕ್ಕೂ ಮಿಕ್ಕಿ ಮಕ್ಕಳಿದ್ದು ಸ್ಥಳಾವಕಾಶ ಕಡಿಮೆ ಇದೆ. ಜೊತೆಗೆ ನೆಲದ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಅಡಿಗೆ ಕೋಣೆಯ ಪರಿಸ್ಥಿತಿಯೂ ಹದಗೆಟ್ಟಿದೆ. ಈ ಎಲ್ಲಾ ಪರಿಸ್ಥಿತಿಯಲ್ಲಿ ಅಲ್ಲಿಗೆ ಅಂಗನವಾಡಿ ಕಟ್ಟಡ ಅತ್ಯಗತ್ಯ. ಹಾಗೆಯೇ ಅಂಗನವಾಡಿ ಕಟ್ಟಡಕ್ಕೆ ಅರಿಯಡ್ಕ ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ರೂ 5 ಲಕ್ಷ ಅನುದಾನ ಮೀಸಲಿಡಲಾಗಿದೆ. ಹಾಗೆಯೇ ನಬಾರ್ಡ್ ಯೋಜನೆಯಿಂದ ರೂ 9 ಲಕ್ಷದ 17 ಸಾವಿರ ಇರಿಸಲಾಗಿದ್ದು ಹೀಗೆ ಒಟ್ಟು 14ಲಕ್ಷದ 17ಸಾವಿರ ಅನುದಾನ ಬಿಡುಗಡೆಯಾಗಿದೆ. ಆದರೂ ಕಟ್ಟಡ ನಿರ್ಮಾಣ ಮಾಡಲು ಮೀನಮೇಷ ಎನಿಸುತ್ತಿರುವ ಹಿಂದಿನ ಕಾರಣ ಮಾತ್ರ ನಿಗೂಢವಾಗಿದೆ.

ಸ್ಥಳ ವಿವಾದವೇ ವಿಳಂಬಕ್ಕೆ ಕಾರಣವಾಯಿತೇ..?: ಪ್ರಸ್ತುತ ಇರುವ ಅಂಗನವಾಡಿ ಪಕ್ಕದಲ್ಲಿರುವ ಪಾಪೆಮಜಲು ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದ ಬದಿಯಲ್ಲಿ ನೂತನ ಅಂಗನವಾಡಿ ಕಟ್ಟಡ ಕಟ್ಟುವುದೆಂದು ತೀರ್ಮಾನಿಸಲಾಗಿದೆ. ಅದರಂತೆ ಸ್ಥಳಕ್ಕೆ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಓ ಶ್ರೀವಿದ್ಯಾ, ಜಿಲ್ಲಾ ಪಂಚಾಯತ್ ಡಿ.ಎಸ್, ಇ.ಓ. ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಹೀಗೆ ಎಲ್ಲರೂ ಭೇಟಿ ಕೊಟ್ಟಿದ್ದಾರೆ. ಸದ್ರಿ ಗುರುತಿಸಿರುವ ಸ್ಥಳವೇ ಅಂಗನವಾಡಿಗೆ ಸೂಕ್ತ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶಿಕ್ಷಣಾಧಿಕಾರಿಯವರು ಈಗಿರುವ ಅಂಗನವಾಡಿ ಕಟ್ಟಡವನ್ನು ಗುಬ್ಬಚ್ಚಿ ಸ್ಪೀಕಿಂಗ್‌ಗೆ ಹಾಗೂ ಲೈಬ್ರೆರಿಗೆ ಉಪಯೋಗಿಸಿದರೆ ಉತ್ತಮ ಎಂದು ಸ್ಥಳೀಯ ಗ್ರಾ.ಪಂಗೆ ವರದಿಯನ್ನೂ ಮಾಡಿದ್ದಾರೆ. ಆದರೆ ಸ್ಥಳೀಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯಗುರು ಮತ್ತು ಕೆಲವರು ಸದ್ರಿ ಸ್ಥಳದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅಸಮಾಧಾನ ಸೂಚಿಸಿದ್ದಾರೆ ಎನ್ನಲಾಗುತ್ತಿದ್ದು ಹಾಗಾಗಿ ಗುದ್ದಲಿ ಪೂಜೆಗೆ ಸಮಯ ಕೂಡಿ ಬರುತ್ತಿಲ್ಲ ಎನ್ನಲಾಗುತ್ತಿದೆ.

ಕಟ್ಟಡ ನಿರ್ಮಾಣಕ್ಕೆ ತಂದ ಕಲ್ಲು ವಾಪಸ್ ಹೋಗುತ್ತಿದೆ..!: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆಂದು ಈಗಾಗಲೇ ಕಲ್ಲುಗಳನ್ನು ಗುತ್ತಿಗೆದಾರರು ಕೆಲವು ಸಮಯಗಳ ಹಿಂದೆಯೇ ತಂದು ಹಾಕಿದ್ದಾರೆ. ಆದರೆ ಕಟ್ಟಡ ನಿರ್ಮಾಣ ಕಾರ್ಯ ನಿಗದಿತ ಸಮಯದಲ್ಲಿ ಪ್ರಾರಂಭಗೊಳ್ಳದೇ ಇರುವುದರಿಂದ ತಂದು ಹಾಕಲಾಗಿರುವ ಕೆಲವು ಲೋಡ್ ಕಲ್ಲುಗಳನ್ನು ಗುತ್ತಿಗೆದಾರರು ವಾಪಸ್ ಕೊಂಡು ಹೋಗಿರುವುದಾಗಿಯೂ ತಿಳಿದು ಬಂದಿದೆ.

ಎಸ್‌ಡಿಎಂಸಿ ಅಧ್ಯಕ್ಷರ, ಶಾಲಾ

ಮುಖ್ಯ ಶಿಕ್ಷಕರದ್ದು ಮಾತ್ರ ವಿರೋಧ

ಪಾಪೆಮಜಲು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಸ್ಥಳವನ್ನು ಗುರುತಿಸಲಾಗಿದ್ದು ಪ್ರಾಥಮಿಕ ಶಾಲಾ ಮೈದಾನದ ಬದಿಯಲ್ಲಿ ಕಟ್ಟಡ ಕಟ್ಟುವುದೆಂದು ನಿರ್ಧರಿಸಿದ್ದೇವೆ. ಇದಕ್ಕೆ ಶಾಸಕರಿಂದ ಹಿಡಿದು, ಬಿಇಒ, ಗ್ರಾಮ ಪಂಚಾಯತ್ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಸ್ಥಳೀಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಶಾಲಾ ಮುಖ್ಯ ಶಿಕ್ಷಕಿಯವರು ಪ್ರಸ್ತುತ ಸ್ಥಳದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ದಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು. ಅಭಿವೃದ್ದಿ ವಿಚಾರ ಬರುವಾಗ ರಾಜಕೀಯವನ್ನೂ ಬದಿಗಿಡಬೇಕು.

-ರಾಧಾಕೃಷ್ಣ ಬೋರ್ಕರ್, ತಾ.ಪಂ ಸದಸ್ಯರು

ಕಟ್ಟಡ ಶಿಲಾನ್ಯಾಸ ವಿಳಂಬಕ್ಕೆ

ಗ್ರಾ.ಪಂ ಕಾರಣವಲ್ಲ

ಅಂಗನವಾಡಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಈಗಾಗಲೇ ಗ್ರಾಮ ಪಂಚಾಯತ್‌ನಿಂದ ಉದ್ಯೋಗ ಖಾತರಿ ಯೋಜನೆ ಮೂಲಕ 5 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದ್ದು ಕಟ್ಟಡ ನಿರ್ಮಾಣ ವಿಳಂಬಕ್ಕೆ ಪಂಚಾಯತ್ ಕಾರಣವಲ್ಲ. ಅಂಗನವಾಡಿ ಬಾಲವಿಕಾಸ ಸಮಿತಿ, ಪಾಪೆಮಜಲು ಶಾಲಾ ಎಸ್‌ಡಿಎಂಸಿ, ಶಾಲಾ ಶಿಕ್ಷಕ ವೃಂದ ಹೀಗೆ ಎಲ್ಲರೂ ಹೊಂದಾಣಿಕೆಯ ಮೂಲಕ ಒಮ್ಮತದ ಅಭಿಪ್ರಾಯಕ್ಕೆ ಬಂದು ಅಂಗನವಾಡಿ ಕಟ್ಟಡ ಕೆಲಸ ಪ್ರಾರಂಭವಾಗಬೇಕು. ಅದಕ್ಕೆ ನಮ್ಮ ಸಹಕಾರವಿದೆ.

– ಸವಿತಾ ಎಸ್., ಅಧ್ಯಕ್ಷರು ಗ್ರಾ.ಪಂ ಅರಿಯಡ್ಕ

ಸೂಕ್ತ ಸ್ಥಳ ಗುರುತಿಸಲಾಗಿದೆ

ಸದ್ರಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಗುರುತಿಸಿರುವ ಸ್ಥಳವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವೀಕ್ಷಿಸಿದ್ದು ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಸೂಕ್ತ ಎಂದು ಹೇಳಿದ್ದಾರೆ. ಅಂಗನವಾಡಿಯಲ್ಲಿ ಈಗಾಗಲೇ ೪೦ ಮಕ್ಕಳಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನುಕೂಲತೆಗೆ ತಕ್ಕಂತೆ ಹೊಸ ಅಂಗನವಾಡಿ ಕಟ್ಟಡ ಅಗತ್ಯವಿದೆ.

-ಸಂತೋಷ್ ಮಣಿಯಾಣಿ, ಅಧ್ಯಕ್ಷರು ಅಂಗನವಾಡಿ ಬಾಲವಿಕಾಸ ಸಮಿತಿ ಪಾಪೆಮಜಲು

ಈಗ ಇರುವ ಸ್ಥಳದಲ್ಲೆ ಅಂಗನವಾಡಿ ನಿರ್ಮಾಣಗೊಳ್ಳಲಿ

ಪಾಪೆಮಜಲು ಶಾಲಾ ಮೈದಾನದ ಪಕ್ಕ ಗುರುತಿಸಲಾಗಿರುವ ಸ್ಥಳದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಉದ್ದೇಶ ಪೂರ್ವಕವಾಗಿ ವಿರೋಧಿಸುತ್ತಿಲ್ಲ. ಪ್ರಸ್ತುತ ಈಗ ಇರುವ ಅಂಗನವಾಡಿ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಸ್ಥಳದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಬೇಕು ಎಂಬುವುದೇ ನನ್ನ ಆಗ್ರಹವಾಗಿದೆ.

-ಧನಂಜಯ, ಅಧ್ಯಕ್ಷರು ಎಸ್.ಡಿ.ಎಂ.ಸಿ

ಪಾಪೆಮಜಲು ಸ.ಪ್ರಾ. ಶಾಲೆ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.