ಕಂಬಳದ ಅಂತಿಮ ಆದೇಶ ಜನವರಿಯಲ್ಲಿ: ಹೈಕೋರ್ಟ್

Puttur_Advt_NewsUnder_1
Puttur_Advt_NewsUnder_1

kambalaಪುತ್ತೂರು: ಕಂಬಳ ಕೂಟ ಆಯೋಜಿಸುವುದಕ್ಕೆ ಸಂಬಂಧಿಸಿದ ಅಂತಿಮ ಆದೇಶವನ್ನು ಜನವರಿ ತಿಂಗಳ ಪ್ರಥಮ ವಾರದಲ್ಲಿ ನೀಡುವುದಾಗಿ ದ.15ರಂದು ಹೈಕೋರ್ಟ್ ತಿಳಿಸಿದೆ. ಕಂಬಳ ಕೂಟದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಪ್ರಾಣಿದಯಾ ಸಂಘದವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ಕಂಬಳವನ್ನು ನಿಷೇಧಿಸಿ ಈ ಹಿಂದೆ ತಾತ್ಕಾಲಿಕ ಆದೇಶ ನೀಡಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಮರು ಪರಿವರ್ತನೆ ಮಾಡಬೇಕು ಮತ್ತು ತುಳುನಾಡಿನ ಪ್ರಾಚೀನ ಜನಪದ ಕ್ರೀಡೆಯಾಗಿರುವ ಕಂಬಳವನ್ನು ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಮತ್ತು ದ.ಕ. ಜಿಲ್ಲಾ ಕಂಬಳ ಸಮಿತಿಯ ಪರ ವಕೀಲರಾದ ಬಿ.ವಿ.ಆಚಾರ್ಯ ಹಾಗೂ ರಾಜಶೇಖರ್ ಇಲ್ಯಾರ್‌ರವರ ವಾದವನ್ನು ದ.15ರಂದು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್‌ರವರನ್ನೊಳಗೊಂಡ ದ್ವಿಸದಸ್ಯ ಪೀಠವು ಮುಂದಿನ ವಿಚಾರಣೆಯನ್ನು ಜನವರಿ ಪ್ರಥಮ ವಾರಕ್ಕೆ ಮುಂದೂಡಿದೆ. ಈ ಹಿಂದೆ ಕಂಬಳಕ್ಕೆ ನಿರ್ಬಂಧ ಹೇರಿದ್ದ ಹೈಕೋರ್ಟ್ ಆದೇಶವು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿರುವುದರಿಂದ ಜನವರಿ 7ರವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗದಿಯಾಗಿದ್ದ ಕಂಬಳ ಕೂಟಗಳು ರದ್ದುಗೊಂಡಿದೆ. ಮಾರ್ಚ್‌ನಲ್ಲಿ ನಡೆಯಲು ನಿಗದಿಯಾಗಿರುವ ಪುತ್ತೂರಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮತ್ತು ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಕೂಟ ನಡೆಯುವುದೇ, ಇಲ್ಲವೇ ಎಂಬುದು ಜನವರಿಯಲ್ಲಿ ಪ್ರಕಟವಾಗುವ ಹೈಕೋರ್ಟ್ ಆದೇಶವನ್ನು ಅವಲಂಬಿಸಿದೆ.

ಕಂಬಳ ಕೂಟದ ಪರ ನಿಂತ ರಾಜ್ಯ ಸರಕಾರ:  ತುಳುನಾಡಿನ ವೀರ ಕ್ರೀಡೆಯಾದ ಕಂಬಳದಲ್ಲಿ ಯಾವುದೇ ಪ್ರಾಣಿಹಿಂಸೆ ಆಗುತ್ತಿಲ್ಲ, ಮಾತ್ರವಲ್ಲದೆ, ಕಂಬಳದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದೆ, ಆದುದರಿಂದ ಕಂಬಳವನ್ನು ನಿಷೇಧಿಸಬಾರದು, ಎಂದಿನಂತೆ ಕಂಬಳ ಕೂಟ ಆಯೋಜಿಸಲು ಅವಕಾಶ ನೀಡಬೇಕು ಎಂದು ಕಂಬಳಾಭಿಮಾನಿಗಳ ನಿಯೋಗ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ರಾಜ್ಯ ಸರಕಾರವು ಕಂಬಳದ ಪರ ಆದೇಶ ನೀಡಿದೆ. ಮಾತ್ರವಲ್ಲದೆ, ಕಂಬಳದ ಉಳಿವಿಗಾಗಿ ಸೂಕ್ತವಾದ ಮಂಡನೆ ಮಾಡುವಂತೆ ಅಡ್ವೋಕೇಟ್ ಜನರಲ್‌ಗೆ ಸೂಚಿಸಿದೆ. ಕಂಬಳಾಭಿಮಾನಿಗಳ ನಿಯೋಗವು ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಅರಣ್ಯ ಖಾತೆಯ ಸಚಿವ ಬಿ. ರಮಾನಾಥ ರೈ, ಯುವಜನ ಸೇವಾ ಮತ್ತು ಕ್ರೀಡಾಖಾತೆಯ ಸಚಿವ ಪ್ರಮೋದ್ ಮಧ್ವರಾಜ್, ಪಶುಸಂಗೋಪನಾ ಖಾತೆಯ ಸಚಿವ ಅರಕಲಗೂಡು ಮಂಜು ಮತ್ತು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್‌ರವರನ್ನು ಭೇಟಿ ಮಾಡಿ ಕಂಬಳ ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು. ನಿಯೋಗದ ಮನವಿ ಮತ್ತು ಈ ಐವರು ಪ್ರಮುಖರು ಕಂಬಳ ಪರ ಮಾಡಿದ್ದ ಶಿಫಾರಸ್ಸಿಗೆ ಬೆಂಬಲ ನೀಡಿದ ರಾಜ್ಯ ಸರಕಾರವು ಕಂಬಳದ ಪರ ಆದೇಶ ಹೊರಡಿಸಿತ್ತಲ್ಲದೆ, ಆರು ಮಂದಿಯ ತಜ್ಞರ ತಂಡವನ್ನು ರಚಿಸಿತ್ತು. ಈ ತಜ್ಞರು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆಯುವ ಕಂಬಳ ಕೂಟವನ್ನು ವೀಕ್ಷಿಸಿ ಕಂಬಳದ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡು ವರದಿ ನೀಡಲು ತಿಳಿಸಲಾಗಿತ್ತು. ಈ ಮಧ್ಯೆ ಕಂಬಳಕ್ಕೆ ನಿಷೇಧ ಹೇರಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿಯ ಅರ್ಜಿಯನ್ನು ದ.೧೫ರಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್‌ರವರು ವಿಚಾರಣೆಯನ್ನು ಜನವರಿಗೆ ಮುಂದೂಡಿದ್ದಾರೆ. ಕಂಬಳದ ಪರ ವಾದ ಮಂಡಿಸಿದ ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣರವರು ಕಂಬಳಕ್ಕೆ ತನ್ನದೇ ಆದ ಇತಿಹಾಸ ಇದೆ, ಇದರಲ್ಲಿ ಯಾವುದೇ ರೀತಿಯ ಪ್ರಾಣಿಹಿಂಸೆ ನಡೆಯುತ್ತಿಲ್ಲ, ಸರಕಾರ ಕೂಡ ಕಂಬಳದ ಪರ ಆದೇಶ ನೀಡಿದೆ. ಆದುದರಿಂದ ಕಂಬಳ ಕೂಟ ಆಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಕಂಬಳ ಸಮಿತಿ ಪರ ವಕೀಲರಾದ ಬಿ. ವಿ. ಆಚಾರ್ ಮತ್ತು ರಾಜಶೇಖರ್ ಇಲ್ಯಾರ್‌ರವರು ಕಂಬಳ ಉಳಿವಿಗಾಗಿ ನಿಯೋಗವು ಸಚಿವರನ್ನು ಭೇಟಿ ಮಾಡಿದ ವಿವರ, ಸರಕಾರ ಕಂಬಳ ಪರ ನೀಡಿದ ಆದೇಶ, ತಜ್ಞರ ತಂಡದ ನೇಮಕ ಇತ್ಯಾದಿಗಳನ್ನು ವಿವರಿಸಿದರಲ್ಲದೆ, ನೂರಾರು ವರ್ಷಗಳ ಇತಿಹಾಸ ಇರುವ ಮತ್ತು ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಇರುವ ಹಾಗೂ ಪ್ರೀತಿಯಿಂದ ನಡೆಸಲಾಗುವ ಕಂಬಳದಲ್ಲಿ ಯಾವುದೇ ಪ್ರಾಣಿಹಿಂಸೆ ನಡೆಯುತ್ತಿಲ್ಲ, ಆದುದರಿಂದ ಎಂದಿನಂತೆ ಕಂಬಳ ಕೂಟಕ್ಕೆ ಅನುಮತಿ ನೀಡಬೇಕು ಎಂದು ವಾದ ಮಂಡಿಸಿದರು. ನ್ಯಾಯಾಲಯಕ್ಕೆ ಇನ್ನಷ್ಟೇ ತಜ್ಞರ ವರದಿ ಸಲ್ಲಿಕೆಯಾಗಬೇಕಿರುವುದರಿಂದ, ವಾದ-ವಿವಾದ ಮುಂದುವರಿಯಬೇಕಿರುವುದರಿಂದ ಮತ್ತು ನ್ಯಾಯಾಲಯದ ಕಲಾಪಗಳಿಗೆ ಚಳಿಗಾಲದ ಮಧ್ಯಂತರ ರಜೆ ಇರುವುದರಿಂದ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಜನವರಿ ತಿಂಗಳ ಪ್ರಥಮ ವಾರಕ್ಕೆ ಮುಂದೂಡಿ ಆದೇಶಿಸಿದರು. ಅರ್ಜಿಯ ವಿಚಾರಣೆ ಮುಂದೂಡಿಕೆ ಆಗಿರುವುದರಿಂದ ಅಲ್ಲಿಯವರೆಗೆ ಕಂಬಳ ನಿಷೇಧದ ಆದೇಶ ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಾರಾಡಿ, ವೇಣೂರು ಸಹಿತ ಐದು ಕಡೆಯ ಕಂಬಳ ಕೂಟಗಳು ರದ್ದುಗೊಂಡಿದೆ. ಜನವರಿಯಲ್ಲಿ ಹೈಕೋರ್ಟ್ ನೀಡಲಿರುವ ಆದೇಶವು ಮಾರ್ಚ್ ತಿಂಗಳಿನಲ್ಲಿ ನಡೆಯಲು ನಿಗದಿಯಾಗಿರುವ ಪುತ್ತೂರು ಮತ್ತು ಉಪ್ಪಿನಂಗಡಿಯ ಕಂಬಳದ ಅಳಿವು-ಉಳಿವಿನ ಬಗ್ಗೆ ನಿರ್ಣಯ ಮಾಡಲಿದೆ.

ಹೈಕೋರ್ಟ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಕಂಬಳಾಭಿಮಾನಿಗಳು

ಪ್ರಾಚೀನ ಇತಿಹಾಸ ಇರುವ ಕಂಬಳ ಕೂಟಕ್ಕೆ ನಿಷೇಧ ಆಗುತ್ತದೆಯೇ ಅಥವಾ ಕಂಬಳವನ್ನು ಯಥಾಸ್ಥಿತಿಯಲ್ಲಿ ನಡೆಸಲು ಹೈಕೋರ್ಟ್ ಅನುಮತಿ ನೀಡುತ್ತದೆಯೇ ಎಂಬುದರ ಕುರಿತ ಅಂತಿಮ ಆದೇಶ ಪ್ರಕಟವಾಗಲಿದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ದ.೧೫ರಂದು ಹೈಕೋರ್ಟ್‌ನಲ್ಲಿ ಕಂಬಳಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಕಂಬಳ ಪರ ವಾದ ಮಂಡಿಸುತ್ತಿರುವ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಹಿರಿಯ ವಕೀಲ ಬಿ.ವಿ. ಆಚಾರ್ಯ, ರಾಜಶೇಖರ್ ಇಲ್ಯಾರ್ ಸಹಿತ ೨೦ ವಕೀಲರು, ಕಂಬಳದ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಪಿ.ಆರ್.ಶೆಟ್ಟಿ, ಸೀತಾರಾಮ ಶೆಟ್ಟಿ ಮಂಗಳೂರು, ವಿಜಯ ಕುಮಾರ್ ನೇತೃತ್ವದ ಕಂಬಳಾಭಿಮಾನಿಗಳು ವಿಚಾರಣೆಯ ವೇಳೆ ಹೈಕೋರ್ಟ್‌ನಲ್ಲಿ ಜಮಾಯಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.