ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು ’ಮೋದಿಜಿ ಘೋಷಿಸಿದ ದಿನ ಸುಖವಾಗಿ ನಿದ್ರಿಸಿದಾತ ಶ್ರೀಮಂತ’

Puttur_Advt_NewsUnder_1
Puttur_Advt_NewsUnder_1

notuಕಳೆದ ಒಂದು ತಿಂಗಳಿಂದ ಪ್ರತಿಯೊಬ್ಬರ ಬಾಯಲ್ಲಿ ಕೇಳಿಬರುವ ಮಾತುಗಳು ಬ್ಯಾಂಕ್‌ನಲ್ಲಿ ಅದೆಂತಹ ಸರದಿ ಸಾಲು…! ವ್ಯಾಪಾರ ತುಂಬ ಕಡಿಮೆ. ಅದ್ಯಾರದೋ ಮನೆಯಲ್ಲಿ ಕೋಟಿಗಟ್ಟಲೆ ಹಣ ಇತ್ತಂತೆ…? ಬಸ್ಸಿನಲ್ಲಿ ಚಿಲ್ಲರೆಗಾಗಿ ಗಲಾಟೆಯಂತೆ…! ಹೀಗೆ ಹತ್ತು ಹಲವು. ಕೆಲವೊಬ್ಬರಿಂದ ಈ ದಿಟ್ಟ ನಿರ್ಧಾರಕ್ಕೆ ಶಹಬ್ಬಾಸ್‌ಗಿರಿ. ಕೆಲವೊಬ್ಬರಿಂದ ಬೇಜವಾಬ್ದಾರಿ ಹೇಳಿಕೆಗಳು. ಅರ್ಥಹೀನ ಮುಷ್ಕರಗಳು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಂತ ಲಾಭಕ್ಕಾಗಿ ಒದ್ದಾಡುತ್ತಿರುವುದು, ಅಧಿಕಾರಕ್ಕಾಗಿ ಹಾತೊರೆಯುತ್ತಿರುವುದು, ಭವಿಷ್ಯತ್ತಿನ ಸ್ಥಾನಮಾನಕ್ಕಾಗಿ ದುರಾಲೋಚನೆ (ದೂರಾಲೋಚನೆ) ಮಾಡುತ್ತಿರುವುದು ಸರ್ವೇ ಸಾಮಾನ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೋಟು ರದ್ಧತಿಯಂತಹ ಸಾಹಸ ಕಾರ್ಯಕ್ಕೆ ಶಿರಬಾಗಿ ನಮಿಸಲೇ ಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಮುಂದಿನ ಸುಖ ಜೀವನಕ್ಕಾಗಿ ಇಂದಿನ ಕಷ್ಟಗಳನ್ನು ನುಂಗಿಕೊಳ್ಳಬೇಕಾದ್ದು ಅನಿವಾರ್ಯ.

ಸಾಮಾನ್ಯ ಮನುಷ್ಯರಿಗೆ ಈ ನಿರ್ಧಾರದಿಂದ ಕಿಂಚಿತ್ತು ಸಮಸ್ಯೆ ಆಗಲಿಲ್ಲ ಆದರೂ ಸಮಸ್ಯೆ ಆಗಿದೆ ಎಂದು ಬಿಂಬಿಸುತ್ತಿರುವುದು ನೋಟು ರದ್ಧತಿ ನಿರ್ಧಾರ ಪ್ರಕಟವಾದ ದಿನ ಸರಿಯಾಗಿ ನಿದ್ರಿಸದ ಕಪ್ಪು ಕುಳಗಳು. ಇನ್ನೊಂದು ಮುಖದಲ್ಲಿ ಆಲೋಚಿಸುವುದಾದರೆ ಕಪ್ಪು ಕುಳಗಳಲ್ಲಿ ಸಾಕಷ್ಟು ಹಣವಿದ್ದು, ತಮ್ಮ ಆಳುಗಳನ್ನು ಹಣದ ಆಮಿಷವೊಡ್ಡಿ ನೋಟು ಬದಲಾವಣೆಗೆ ಬಳಸಿಕೊಂಡು ನಿರಾಯಾಸವಾಗಿ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಬಡ ಜನರು ನೋಟುಗಳ ಬದಲಾವಣೆಗಾಗಿ ಒಂದು ದಿನದ ಕೆಲಸವನ್ನು ಅನಿವಾರ್ಯವಾಗಿ ಕಳೆದುಕೊಳ್ಳುವುದು ಒಂದು ದಿನದ ಸಂಭಾವನೆಯಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ. ಆದರೂ ಮುಂದಿನ ಶ್ರೀಮಂತ ಜೀವನಕ್ಕಾಗಿ ಇಂತಹ ತ್ಯಾಗಗಳು ಅನಿವಾರ್ಯ. ಗೌರವಾನ್ವಿತ ಪ್ರಧಾನಿಯವರ ಧೈರ್ಯತನ, ಒಬ್ಬ ನಾಯಕನಾಗಿ ತೆಗೆದುಕೊಳ್ಳುವ ತೀರ್ಮಾನ ಮೆಚ್ಚುವಂತದ್ದೆ. ಒಬ್ಬ ನಾಯಕನಾಗಿ ತನ್ನ ದೇಶದ ಹಿತದೃಷ್ಟಿಯಿಂದ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಭವಿಷತ್ತಿನ ಅಧಿಕಾರದ ಆಸೆಯನ್ನು ಬದಿಗಿಟ್ಟು ಧೈರ್ಯತನ ತೋರಿಸುತ್ತಿರುವುದಕ್ಕಾಗಿ ನಾನೊಬ್ಬ ಭಾರತೀಯ ಸತ್ಪ್ರಜೆಯಾಗಿ ಎದೆ ತಟ್ಟಿ ಹೇಳುತ್ತೇನೆ. ಮೋದಿಜಿ ನಿರ್ಧಾರಕ್ಕೆ ಸಾಷ್ಟಾಂಗ ನಮನ ನಮನ ನಮನ…

ನೋಟು ರದ್ದತಿಯ ಪರಿಣಾಮ ಅದೆಷ್ಟೋ ಕೋಟಿ ಹಣ ಸರ್ಕಾರದ ಖಜಾನೆ ಸೇರಿದೆ. ಅವುಗಳನ್ನು ವಿವಿಧ ಜನಪರ ಯೋಜನೆಗಳಿಗೆ ಬಳಸಲಾಗುವುದು ಎಂಬ ಆಶ್ವಾಸನೆ ಸ್ವಾಗತಾರ್ಹ. ನನಗೆ ಮನಸ್ಸಿನಲ್ಲಿ ಒಮ್ಮೊಮ್ಮೆ ಕಾಡುವುದು ಸಾಮಾನ್ಯರು ಕೇಳುವ ಪ್ರಶ್ನೆ ದೇಶದ, ರಾಜ್ಯದ ಮಂತ್ರಿ ಮಹೋದಯರು, ಶಾಸಕರು, ಉದ್ಯಮಿಗಳು (ಕಪ್ಪು ಹಣ ಹೊಂದಿರುವವರು ಮಾತ್ರ) ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಅಥವಾ ನೋಟು ಬದಲಾವಣೆಗಾಗಿ ಯಾವ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಇತ್ತೀಚೆಗೆ ಕೇಳಿ ಬರುವ ಸುದ್ದಿ ಬ್ಯಾಂಕ್ ನೌಕರರು, ಉನ್ನತ ಮಟ್ಟದ ಅಧಿಕಾರಿಗಳು ನೋಟು ದಂಧೆಯಲ್ಲಿ ಪಾಲುದಾರರಾಗಿದ್ದಾರೆ ಎಂಬುದು ಮೇಲಿನ ಹೇಳಿಕೆಗೆ ಪುಷ್ಠಿ ನೀಡುತ್ತದೆ. ಅಲ್ಲಲ್ಲಿ ನೋಟುಗಳನ್ನು ಬಿಸಾಡುತ್ತಿರುವುದು, ಸುಟ್ಟು ಹಾಕುವುದು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿರುವುದು ವಿಷಾದನೀಯ.

ದೇಶ ಕಾಯುವ ಪುಣ್ಯದ ಕಾಯಕ ನಮಗಂತೂ ದಕ್ಕಲಿಲ್ಲ. ಸಾಮಾನ್ಯ ಜನರ (ಬಡ ಜನರ) ಭವಿಷ್ಯತ್ತಿನ ಸುಖ ಜೀವನಕ್ಕಾಗಿ ಯಾವುದೇ ಅಸಂಬದ್ಧ ಹೇಳಿಕೆಗೆ ಕಿವಿಗೊಡದೆ ಕಷ್ಟಗಳನ್ನು ನುಂಗಿಕೊಳ್ಳುತ್ತ ದೇಶದ ಆರ್ಥಿಕತೆ ಸುಸ್ಥಿತಿಗೆ ಬರಲು ಬೆಂಬಲ ನೀಡುತ್ತಾ ಇಂತಹ ಗಟ್ಟಿ ನಿರ್ಧಾರಗಳು ಮುಂದಿನ ದಿನಗಳಲ್ಲಿ ಪ್ರಕಟವಾಗಲಿ. ದೇಶವು ಸುಸ್ಥಿತಿಯ ಕಡೆಗೆ ವಾಲಲಿ. ನೋಟು ರದ್ಧತಿ ನಿರ್ಧಾರಕ್ಕೆ ಜಯವಾಗಲಿ. ದೇಶ ಶ್ರೀಮಂತವಾಗಲಿ ಎಂಬ ಆಶಯದೊಂದಿಗೆ.

ಗುರುಪ್ರಸಾದ್ , ಶಿಕ್ಷಕರು

ಸ.ಹಿ.ಪ್ರಾ. ಶಾಲೆ ಪೆರಾಬೆ

ಮೊ: 9902333160

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.