ರಸ್ತೆ ಅಭಿವೃದ್ಧಿಗೆ ಸ್ಪೆಷಲ್ ಫಂಡ್; ಮಿನಿವಿಧಾನ ಸೌಧ, ತಾ.ಪಂ, ನ್ಯಾಯಾಲಯ ಪರಿಸರದಲ್ಲಿ ಹೈಮಾಸ್ಟ್ ಲೈಟ್ ಉದ್ಘಾಟಿಸಿ ಶಕುಂತಳಾ ಶೆಟ್ಟಿ

hymast-light hymast-light1

ಪುತ್ತೂರು: ಮಿನಿವಿಧಾನ ಸೌಧ, ತಾ.ಪಂ ನ್ಯಾಯಾಲಯದ ಪರಿಸರದಲ್ಲಿ ನಗರಸಭೆಯಿಂದ ಅಳವಡಿಸಲಾದ ಹೈಮಾಸ್ಟ್ ಲೈಟ್‌ನ್ನು ದ.16ರಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಉದ್ಘಾಟಿಸಿದರು.

ಬಳಿಕ ಶಕುಂತಳಾ ಶೆಟ್ಟಿಯವರು ಮಾತನಾಡಿ ಪುತ್ತೂರು ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಕೆಲವೊಂದು ಗ್ರಾಮಾಂತರ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬಂದಿದ್ದು ಅತ್ತ ಜಿ.ಪಂ ಅನುದಾನವೂ ಸಿಗುವುದಿಲ್ಲ. ಇತ್ತ ನಗರಸಭೆಯ ಅನುದಾನವೂ ಅದಕ್ಕೆ ಲಭ್ಯವಾಗದೆ ಇರುವ ಹಿನ್ನೆಲೆಯಲ್ಲಿ ರಸ್ತೆಗಳ ಅಭಿವೃದ್ಧಿ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ನನ್ನ ಸ್ಪೆಷಲ್ ಫಂಡ್ ಮೂಲಕ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು. ಈಗಾಗಲೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ. ೧.೫ ಕೋಟಿ ಅನುದಾನ ಬಂದಿದೆ. ದೇವರಾಜು ಅರಸು ಸಭಾಂಗಣ ನಿರ್ಮಾಣಕ್ಕೆ ಈಗಾಗಲೇ ಸಾಲ್ಮರ ಕೊಟೇಚಾ ಹಾಲ್ ಸಮೀಪ ಸ್ಥಳ ಕಾದಿರಿಸಲಾಗಿದೆ. ಜೊತೆಗೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರೂ. ೬೨ ಲಕ್ಷ ದ ತಡೆಗೋಡೆ ನಿರ್ಮಾಣವಾಗಿದೆ ಎಂದ ಅವರು ಮುಂದೆ ಇನ್ನೂ ಅಭಿವೃದ್ದಿಗೆ ಪ್ರಯತ್ನ ಮಾಡುವುದಾಗಿ ಹೇಳಿದರು.

ಎಫ್‌ಎಂ ರೇಡಿಯೋ ಪ್ರಾರಂಭಕ್ಕೆ ಚಿಂತನೆ: ಆಲಿ

ನಗರಸಭಾ ಸದಸ್ಯ ಹೆಚ್.ಮಹಮ್ಮದ್ ಆಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ನಗರಸಭೆಗೆ ನಗರೋತ್ಥಾನದ ಅಡಿಯಲ್ಲಿ ರೂ. ೨೫ ಕೋಟಿ ಅನುದಾನ ಬಂದಿದೆ. ಈ ಅನುದಾನಕ್ಕೆ ಶಾಸಕರ ಸಮಕ್ಷಮದಲ್ಲಿ  ಕ್ರಿಯಾಯೋಜನೆ ತಯಾರಿಸಲಾಗುವುದು. ನಗರಸಭಾ ನಿಧಿಯಿಂದ ರೂ. ೫೬ಲಕ್ಷದಲ್ಲಿ ಪುರಭವನದ ಅಭಿವೃದ್ಧಿ ನಡೆಸಲಾಗುವುದು. ಜೊತೆಗೆ ಪುತ್ತೂರಿನ ಇತಿಹಾಸವನ್ನು ಮರುಕಳಿಸುವಂತೆ ಎಫ್ ಎಂ. ರೇಡಿಯೋ ಮತ್ತು ಸೈರನ್ ವ್ಯವಸ್ಥೆಯನ್ನು ಮತ್ತೊಮ್ಮೆ ಪ್ರಾರಂಭಿಸುವ ಯೋಜನೆ ಹಾಕಲಾಗಿದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ನಗರಸಭಾ ಸದಸ್ಯರಾದ ಶಕ್ತಿ ಸಿನ್ಹ, ಮುಖೇಶ್ ಕೆಮ್ಮಿಂಜೆ, ಜೆಸಿಂತ ಮಸ್ಕರೇನ್ಹಸ್, ಪೌರಾಯುಕ್ತೆ ರೂಪಾ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ್, ಹಿರಿಯ ಆರೋಗ್ಯ ಅಧಿಕಾರಿ ರಾಮಚಂದ್ರ, ಇಂಜಿನಿಯರ್ ತುಳಸಿದಾಸ್, ಬನ್ನೂರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಪಾಟಾಳಿ ಸೇರಿದಂತೆ ಗುತ್ತಿಗೆದಾರ ವಿಷ್ಣು ಎಲೆಕ್ಟ್ರಿಕಲ್ಸ್‌ನ ಸುಧಾಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹೈಮಾಸ್ಟ್‌ಗೆ ಅಟೋ ಟೈಮಿಂಗ್ ಅಳವಡಿಕೆ:

ನಗರಸಭೆಯ ೬ ಕಡೆಗಳಲ್ಲಿ ಈಗಾಗಲೇ ಅಳವಡಿಸಿದ ಹೈಮಾಸ್ಟ್ ಲೈಟ್‌ಗೆ ಅಟೋ ಟೈಮಿಂಗ್ ಅಳವಡಿಸಲಾಗಿದೆ. ಸಂಜೆ ೬ ಗಂಟೆಗೆ ತನ್ನಷ್ಟಕ್ಕೆ ಬೆಳಕು ನೀಡಿದರೆ ಬೆಳಿಗ್ಗೆ ಗಂಟೆ ೬ಕ್ಕೆ ತನ್ನಿಂದ ತಾನೆ ಆಫ್ ಆಗುತ್ತದೆ. ಇನ್ನು ಮುಂದೆ ದಾರಿ ದೀಪವನ್ನು ಉರಿಸಲು ಮಾನವ ಶ್ರಮದ ಅಗತ್ಯವಿಲ್ಲ. ಮಿನಿ ವಿಧಾನ ಸೌಧದ ಬಳಿ ಅಳವಡಿಸಲಾಗಿರುವ ಹೈಮಾಸ್ಟ್ ಲೈಟ್‌ಗೆ ಈ ತಂತ್ರಜ್ಞಾನ ಅಳವಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.