ಸೂಜಿಮೊನೆ-ಇದು ಶಿಕ್ಷಣದಂಕಣ ಮನೆಯ ಪಕ್ಕಾಸಿನಲ್ಲಿ ನೇತಾಡುತ್ತಿದ್ದ ಅಪ್ಪನ ಹೆಣ ಇಣುಕ ತೊಡಗಿತ್ತು… ಪಠ್ಯ ಪುಸ್ತಕದ ತುಂಬೆಲ್ಲ

Puttur_Advt_NewsUnder_1
Puttur_Advt_NewsUnder_1

ulayaಅವನ ಕಣ್ಣಲ್ಲಿ ಕಣ್ಣೀರಿರಲಿಲ್ಲ. ಧ್ವನಿ ಕಂಠಸ್ಥವಾಗಿಯೇ ಇತ್ತು. ಅಳುವಿನ್ನೂ ಅವನ ಬಳಿಯೇ ಸುಳಿದಿರಲಿಲ್ಲ. ಆತ ಆರಾಮವಾಗಿಯೇ ಹೇಳುತ್ತಿದ್ದ. ’ಸಾರ್ ನಾನು ಓಡೋಡಿ ಮನೆಗೆ ಬಂದೆ. ಬಂದವನೇ ಮನೆಯ ಒಳ ನುಗ್ಗಿದೆ. ಏನನ್ನು ನೋಡಲಿ ಸಾರ್…? ಮನೆಯ ಮಾಡಿನ ಮಧ್ಯದ ಪಕ್ಕಾಸಿಗೆ ನನ್ನಪ್ಪ ನೇಣು ಹಾಕಿಕೊಂಡಿದ್ದರು…! ನನ್ನಮ್ಮ ಪ್ರೀತಿಸುತ್ತಿದ್ದ ಆ ಬಣ್ಣದ ಸೀರೆ… ಆ ಸೀರೆಯನ್ನು ಪಕ್ಕಾಸಿಗೆ ಸಿಕ್ಕಿಸಿ ನೇತಾಡುತ್ತಿದ್ದರು ನನ್ನಪ್ಪ…! ಹೌದ್ಸಾರ್… ನಾನು ಪ್ರತಿ ಬಾರಿ ಪುಸ್ತಕ ತೆರೆದಾಗಲೂ… ನನಗೆ ಅಲ್ಲಿರುವ ಅಕ್ಷರಗಳು ಕಾಣುವುದಿಲ್ಲ. ಅಮ್ಮನ ಪ್ರೀತಿಯ ಸೀರೆಯಲ್ಲಿ ನೇತಾಡುತ್ತಿರುವ ನನ್ನಪ್ಪನೇ ಕಾಣುತ್ತಾರೆ…!! ನನಗೆ ಓದಲಾಗುತ್ತಿಲ್ಲ ಸಾರ್… ಬರೆಯಲಂತೂ ಆಗುವುದೇ ಇಲ್ಲ ಸಾರ್…! ಸಾರ್ ಏಕೆ ಸಾರ್ ನನ್ನಪ್ಪ ಹಾಗೆ ಮಾಡಿದ್ದು…! ಸಾರ್ ನನ್ನಪ್ಪ ಮತ್ತೆ ಬರ‍್ತಾರಾ? ಸಾರ್…? ಹುಡುಗನ ಮಾತುಗಳನ್ನು ಕೇಳುತ್ತಲೇ ನಾನು ಮೌನಿಯಾಗಿದ್ದೆ. ಮಗು, ಬಾಲ್ಯ, ತಂದೆ, ತಾಯಿ, ವಿದ್ಯೆ, ಶಾಲೆ, ಕಲಿಕೆ, ಶಿಸ್ತು, ವೃತ್ತಿ, ಸಂಸಾರ, ಸಂಸ್ಕಾರ, ಬದುಕು, ಸಾವು… ಹೀಗೆ ನಾನಾ ಶಬ್ದಗಳು ಚರ್ಮ ತುರಿಕೆಯನ್ನುಂಟು ಮಾಡುವ ಮಾರಿ ಸೊಳ್ಳೆಗಳಾಗಿ ನನ್ನ ಸುತ್ತ ಸುತ್ತ ತೊಡಗಿದವು’.

ಹಾಗಂತ ಇದು ಬಹಳ ಹಿಂದಿನ ಕತೆಯೇನಲ್ಲ. ನಮ್ಮ ಕಲಿಕಾ ವ್ಯವಸ್ಥೆಯೊಂದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ನಡೆಸಿದ ವಿಶೇಷ ತರಬೇತಿಯಲ್ಲಿ ಭಾಗವಹಿಸಿದ ಮಗುವೊಬ್ಬನ ಹೃದಯ ಒಡೆದು ಬಂದ ಮಾತುಗಳಿವು. ವ್ಯವಸ್ಥೆ ನಿಗದಿಪಡಿಸಿದ ಕಲಿಕೆಯ ಸ್ತರಕ್ಕಿಂತ ಕೆಳಗಿರುವ ಮಕ್ಕಳನ್ನು ಗುರುತಿಸಿ ಒಂದೆಡೆ ಸೇರಿಸಿ ಮತ್ತೆ ಕಲಿಸುವ ಪ್ರಯತ್ನವದು.

ಈ ಪ್ರಯತ್ನದ ಬಗ್ಗೆ ಪ್ರಶ್ನೆಯಿಲ್ಲ. ಪ್ರಶ್ನೆಯಿರುವುದು ಮಕ್ಕಳು ಏಕೆ ಕಲಿಕೆಯಲ್ಲಿ ಹಿಂದುಳಿದಿದ್ದರೆ ಎಂಬುದನ್ನು ಅರ್ಥಮಾಡಿಕೊಳ್ಳದೆ… ಸುಖಿಗಳಾಗಿರುವ ನಮ್ಮ ಸುಖದ ಬಗ್ಗೆ ಕಲಿಕೆ ಎನ್ನುವುದು ಶಾಲೆ ಎನ್ನುವ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಸಿಕ್ಕುವ ಸೇಬುಹಣ್ಣು ಎಂದು ತಿಳಿದಿರುವ ನಮ್ಮ ಮೂರ್ಖತನದ ಬಗೆ. ಕಲಿಕೆ ಎನ್ನುವುದು ನಮ್ಮ ಮಕ್ಕಳ ದೇಹದಲ್ಲಿ ತುಂಬಿಕೊಂಡಿರುವ ಅಕ್ಷರದ ರಕ್ತ ಎಂದು ನಂಬಿರುವ ನಮ್ಮ ಭ್ರಮೆಯ ಬಗ್ಗೆ. ಕಲಿಕೆ ಎನ್ನುವುದು ಮಗು ಜೇಬಲ್ಲಿ, ಚೀಲದಲ್ಲಿ ತುಂಬಿಸಿಕೊಳ್ಳಬಹುದಾದ ವಸ್ತು ಎಂದು ಒಪ್ಪಿರುವ ನಮ್ಮ ದುರ್ದೈವದ ಬಗ್ಗೆ. ಕಲಿಕೆ ಎನ್ನುವುದು ತಿಂದು ವಾಂತಿ ಮಾಡುವ ಊಟದಾಟ ಎನ್ನುವ ನಮ್ಮ ಅಜ್ಞಾನದ ಬಗ್ಗೆ…!!

ಇನ್ನೊಂದು ಕಥೆ ಹುಡುಗಿಯೊಬ್ಬಳದ್ದು. ಆಕೆ ೭ನೇ ತರಗತಿ ಇರಬಹುದು. ಆಕೆಗೆ ಆಕೆಯ ಮೂತ್ರ ವಿಸರ್ಜನೆಯ ಬಗ್ಗೆ ಸ್ಥಿರತೆ ಇರಲಿಲ್ಲ…! ಆಕೆಯ ಮಾತುಗಳೇ ಬೇರೆ ’ನನ್ನ ಅಪ್ಪ ಅಮ್ಮ ಇಬ್ಬರೂ ಕುಡಿಯುತ್ತಾರೆ. ರಾತ್ರಿ ಕುಡಿದು ಬಂದು ಇಬ್ಬರೂ ಜಗಳವಾಡುತ್ತಾರೆ. ನನ್ನ ತಲೆಯಲ್ಲಿ ಅವರದೇ ಚಿಂತೆ…!’ ಹೌದು ಈಕೆಯೂ ಕಲಿಕೆಯಲ್ಲಿ ಹಿಂದುಳಿದಿದ್ದಳು. ಇವೆಲ್ಲವೂ ಬಡವರ ಕಥೆ… ಶ್ರೀಮಂತರ ಕಥೆ ಬೇರೆ ಇದೆ. ಅದೂ ಹೆಣ್ಣು ಮಗಳ ಕಥೆ…! ಆಕೆ ಹೇಳುತ್ತಿದ್ದ ವಾಕ್ಯಗಳು ಅಚ್ಚರಿ ಹುಟ್ಟಿಸುವಂತದ್ದು. ’ನನ್ನಪ್ಪ ರಾತ್ರಿ ಎಂಟು ಗಂಟೆಗೆ ಮನೆಗೆ ಬರುತ್ತಾರೆ… ಅವರು ಬಂದ ಕೂಡಲೇ… ನಾನು ಮನೆಯಿಂದ ಹೊರಗೆ ಹೋಗಬೇಕು…! ಯಾರ‍್ಯಾರೋ ಮನೆಗೆ ಬರ‍್ತಾರೆ…! ಮತ್ತೆ ನಾನು ಮನೆಗೆ ಹೋಗುವುದು ಹತ್ತು ಗಂಟೆ ಕಳೆದ ಮೇಲೆ. ಎಷ್ಟೋ ದಿನ ನಾನು ಹತ್ತಿರದ ಮೈಲಿಗಲ್ಲಿನ ಮೇಲೆ ಕುಳಿತು ಕಾಲ ಕಳೆದಿzನೆ…!!’ ಹೌದು ಈಕೆಯೂ ಕಲಿಕೆಯಲ್ಲಿ ಹಿಂದುಳಿದಿದ್ದಳು. ಹೀಗೆ ಮಾತನಾಡಿದವರು ಒಬ್ಬರಲ್ಲ… ಇಬ್ಬರಲ್ಲ… ಬರೋಬ್ಬರಿ ಹತ್ತೊಂಬತ್ತು ಮಕ್ಕಳು. ಪ್ರತಿಯೊಬ್ಬರ ಕಥೆ ಗಳೂ ಕಣ್ಣಂಚಲ್ಲಿ ನೀರು ತರುವಂತz…! ಅಲ್ಲಿ ಮನೆ ಸುಟ್ಟ ಹುಡುಗನಿದ್ದ. ತನ್ನ ತಾಯಿ, ತಂದೆಯನ್ನು ಬಿಟ್ಟು ಇನ್ನೊಬ್ಬನ ಜೊತೆ ಓಡಿ ಹೋದುದನ್ನು ನೆನಪಿಸುತ್ತಿದ್ದ ಹುಡುಗಿಯಿದ್ದಳು. ಚಿಕ್ಕಮ್ಮನ ಪೆಟ್ಟಿಗೆ ಹೆದರಿ ಕೈ ಕೊಯ್ದು ಕೊಂಡ ಬಾಲಕನಿದ್ದ. ಅಪ್ಪ ತನ್ನಲ್ಲಿ ಮಾತನಾಡಲಿ ಎಂದು ಅಪ್ಪನ ಕಾರಿನ ಚಕ್ರದ ಗಾಳಿ ತೆಗೆದು… ಅಪ್ಪನಿಂದ ಒದೆ ತಿಂದು… ಕಾಲು ಮುರಿದಿದ್ದ ಬಾಲಕಿಯಿದ್ದಳು. ಹೌದು ಇವರೆಲ್ಲರೂ ಕಲಿಕೆಯಲ್ಲಿ ಹಿಂದುಳಿದವರೇ…

ಶಾಲೆಯ ಮುಖವನ್ನು ಕಾಣದ ತಾಯಿ ಎಡಗೈಯ ಕಂಕುಳಲ್ಲಿ ಮಗುವನ್ನೆತ್ತಿ… ಅಂಗೈಯನ್ನು ಅನ್ನದ ಬಟ್ಟಲಿಗೆ ಕೊಟ್ಟು… ಬಲಗೈಯಲ್ಲಿ ಮಗುವಿಗೆ ತುತ್ತು ತಿನ್ನಿಸುತ್ತಾ ಹೇಳುವ ಮಾತು ಹೇಳು ಚಂದಿರಾ…! ನನ್ನ ಮಗ ಪೊಲೀಸಪ್ಪ ಆಗ್ತಾನಾ…!? ಅಲ್ಲ ಮಾಸ್ತರಾಗ್ತಾನಾ? ಹೇಳು ಚಂದಿರಾ… ನನ್ನ ಮಗ ಡಾಕ್ಟರಾಗ್ತಾನಾ…? ಅಲ್ಲ ಇಂಜಿನಿಯರ್ ಆಗ್ತಾನಾ…! ಹೇಳು ಚಂದಿರಾ… ನನ್ನ… ಮಗ… ಆಫೀಸರ್ ಆಗ್ತಾನಾ…!? ಅಲ್ಲ ಕಲೆಕ್ಟರ್ ಆಗ್ತಾನಾ…!?

ಪದವಿ ಪ್ರಮಾಣ ಪತ್ರಗಳನ್ನು ಅಲ್ಮೆರಾದ ಮೇಲಿನ ಅಂತಸ್ಥಿನಲ್ಲಿಟ್ಟು ಕೈಯಲ್ಲಿ ರಿಮೋಟ್ ಹಿಡಿದು… ಬಂಗಲೆಯ ವಿಶಾಲ ಹಾಲ್‌ನ ಗೋಡೆಗಂಟಿಸಿದ್ದ ೯೪ ಇಂಚಿನ ಎಲ್.ಇ.ಡಿ. ಪ್ಲಾಟ್ ಟಿ.ವಿ.ಯ ಮುಂದೆ ಕುಳಿತು… ಚಾನೆಲ್ ಬದಲಾಯಿಸುತ್ತಾ..! ಪ್ಲಾಸ್ಟಿಕ್‌ನ ಬುಟ್ಟಿಯಲ್ಲಿ ಮಗುವನ್ನು ಕುಳ್ಳಿರಿಸಿ ವಿದೇಶದ ಬಾಟಲಿಯಲ್ಲಿ ಕೋಲ್ಡ್ ಹಾರ್ಲಿಕ್ಸ್‌ನ್ನು ಕುಡಿಸುತ್ತಾ… ತಾಯಿ ಹೇಳುವ ಮಾತು ಹೇಳು ಸೂರ್ಯ… ನನ್ನ ಮಗ… ಅಮೇರಿಕಾಕ್ಕೆ ಹೋಗ್ತಾನಾ? ಅಲ್ಲ ಲಂಡನ್‌ಗೆ ಹೋಗ್ತಾನಾ…!? ಹೇಳು ಸೂರ್ಯ ನನ್ನ ಮಗ ಸಿಂಗಾಪುರಕ್ಕೆ ಹೋಗ್ತಾನಾ…? ಅಲ್ಲ ದುಬಾಯಿಗೆ ಹೋಗ್ತಾನಾ…?

ಇವೆರಡೂ ವಿಭಿನ್ನ ಕನಸುಗಳಲ್ಲ…! ಕಲಿಕೆಯ ಕಲ್ಪನೆಯಲ್ಲಿ ಕಟ್ಟಿಕೊಂಡ ಕನಸುಗಳಿವು. ಆದರೆ ಕಲಿಕೆ ಈ ಕಲ್ಪನೆಯ ನಿಲುಕುವುದೆಂತು? ಹಾರುತ್ತಿರುವ ಹಕ್ಕಿ… ಈಜುತ್ತಿರುವ ಮೀನು… ಸರಿಯುತ್ತಿರುವ ಉರಗ… ಅಂಬಾ ಎನ್ನುತ್ತಲೇ ಬೇಕಾ ದನ್ನು ಪಡೆದು ಕೊಳ್ಳುವ; ಹುಲಿಯೊಂದು ಎದುರು ಬಂದರೆ… ಅದು ತನ್ನನ್ನು ತಿನ್ನ ಬಹುದು ಎಂದು ಊಹಿಸಿ… ತಿರುಗಿ ಓಡುವ ಆ ಕರು…! ಅಂಗಾತ ಬೀಳುತ್ತಿದ್ದ ಮಗು ಕವುಚಿ ಬಿದ್ದದ್ದು. ನೋಡ ನೋಡುತ್ತಲೇ ನಡೆದದ್ದು… ತನ್ನ ಸುತ್ತೆಲ್ಲ ಕೇಳಿದ ಭಾಷೆಯನ್ನು ಮಾತನಾಡಿದ್ದು… ತಿಂದದ್ದು… ಕುಣಿದದ್ದು… ಅತ್ತದ್ದು… ನಕ್ಕದ್ದು… ಬಿದ್ದದ್ದು… ಎದ್ದದ್ದು ಯಾವುದೂ ಕಲಿಕೆಯ ಹಣೆ ಪಟ್ಟಿಯಲ್ಲಿ ನಡೆದದ್ದಲ್ಲ…! ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ…!

ಮಕ್ಕಳ ಮೇಲೆಯೇ ನಂಬಿಕೆ ಇಲ್ಲದವರು ನಾವು…! ನಮ್ಮ ಮಕ್ಕಳಿಗೇ… ಅವರ ಶಿಕ್ಷಕರಲ್ಲಿ ಹೊಡೆಯಿರಿ ಬಡಿಯಿರಿ ಎಂದು ಹೇಳುವ ಕ್ರೂರಿಗಳು ನಾವು…! ಪಕ್ಕದ ಮನೆಯ ಹುಡುಗನ ಸಾಧನೆಯನ್ನು ನೋಡಿ ನಮ್ಮ ಮಗುವನ್ನು ಅವಮಾನಿಸುವ ಮೂರ್ಖರು ನಾವು…! ನಮ್ಮ ತಲೆಬಿಸಿ, ನಮ್ಮ ಯೋಚನೆಗಳು, ನಮ್ಮ ವಹಿವಾಟುಗಳಿಗೆ ನಮ್ಮ ಮಕ್ಕಳನ್ನು ಬಲಿಪಶು ಮಾಡುವ ಸ್ವಾರ್ಥಿಗಳು ನಾವು…! ಈಗ ಹೇಳಿ… ನಮ್ಮ ಮಕ್ಕಳ ಮೇಲೆ ನಮಗೆ ಪ್ರೀತಿ ಇದೆಯಾ…!? ಇಲ್ಲ… ಖಂಡಿತಾ ಇಲ್ಲ…! ನಮಗಿರುವುದು… ಅವರ ಮೇಲೆ ಆಸೆಗಳಷ್ಟೇ… ಅದು ನಮ್ಮ ಸ್ವಾರ್ಥದ ಪರಿಧಿಯನ್ನು ದಾಟಿದ ಆಸೆಗಳು. ಈ ಆಸೆಗಳು… ನಮ್ಮ ಮಕ್ಕಳಲ್ಲಿ ಕಲಿಕೆಯ ಭಾವವನ್ನುಂಟು ಮಾಡುತ್ತದೆ ಎನ್ನುವ ನಂಬಿಕೆ ನನಗಿಲ್ಲ…!

ಕೊನೆಯ ಕಥೆ. ’ಸಾರ್… ನನಗೆ ಅಪ್ಪ ಇಲ್ಲ… ನಾನು ನನ್ನ ಅಪ್ಪನ ಮುಖವನ್ನು ನೋಡಿಲ್ಲ… ಸಾರ್… ಎಂದು ನನ್ನನ್ನು ಬಿಗಿದಪ್ಪಿ ಹೇಳುತ್ತಲೇ ಇದ್ದಳು…!! ಕದಲಲಿಲ್ಲ… ನನ್ನ ಬಲ ಕೈಯಲ್ಲಿದ್ದ… ಸೀಮೆಸುಣ್ಣ…! ಮಾತನಾಡಲಿಲ್ಲ… ನನ್ನ ಎಡಗೈಯಲ್ಲಿದ್ದ… ಹೊತ್ತಗೆ…! ನೇವರಿಸಲಿಲ್ಲ… ನನ್ನ ಕೈಗಳು… ಆಕೆಯ ತಲೆ ಯನ್ನು…!!’

ಆಕೆಯ ಕಣ್ಣೀರಿಂದ ನನ್ನ… ಪಾದ ಒದ್ದೆಯಾಗಿತ್ತು… ಅಷ್ಟೇ…!!

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.