Breaking News

ವಿವೇಕಾನಂದ ಆ.ಮಾ. ಎರಡನೇ ದಿನದ ವಾರ್ಷಿಕೋತ್ಸವ ಭಾರತೀಯ ಯುವ ಶಕ್ತಿಗೆ ಭಾರೀ ಬೇಡಿಕೆಯಿದೆ – ಡಾ| ದೇವರಾಜ್

Puttur_Advt_NewsUnder_1
Puttur_Advt_NewsUnder_1

 

vc3 vc1 vc2 vc4ಪುತ್ತೂರು: ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಭಾರತೀಯ ಯುವ ಶಕ್ತಿಗೆ ಭಾರೀ ಬೇಡಿಕೆಯಿದೆ. ಎಲ್ಲಾ ಕ್ಷೇತ್ರಗಳಲ್ಲೂ 30 ಶೇಕಡಾಕ್ಕಿಂತಲೂ ಅಧಿಕವಾಗಿ ಭಾರತೀಯರನ್ನೇ ಮುಂದುವರಿದ ರಾಷ್ಟ್ರಗಳು ಆಯ್ಕೆ ಮಾಡುತ್ತಿದೆ. ಇದು ನಾವು ಭಾರತೀಯರೆಂಬ ಹೆಮ್ಮೆ ಇಮ್ಮಡಿಗೊಳಿಸುತ್ತಿದೆ ಎಂದು ಮಂಗಳೂರು ಎಸ್‌ಡಿಎಂ ಕಾಲೇಜಿನ ನಿರ್ವಹಣಾ ಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ನಿರ್ದೇಶಕ ಡಾ| ದೇವರಾಜ್ ಹೇಳಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಎರಡನೇ ದಿನವಾದ ದ. 17ರಂದು ನಡೆದ ಸಭಾ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಭಾರತದ ಸಮಾಜದಲ್ಲಿ ಶಿಕ್ಷಣ ಪಡೆಯುವಲ್ಲಿ ಆರ್ಥಿಕವಾಗಿ ಕೆಲವೊಂದು ಸಮಸ್ಯೆಗಳಿರಬಹುದು. ಆದರೆ ಶಿಕ್ಷಣ ವ್ಯವಸ್ಥೆ ಎಂದೂ ಕುಂಠಿತಗೊಂಡಿಲ್ಲ. ಶಿಕ್ಷಣ ಪಡೆಯುವ ಹಕ್ಕು ಕೂಡಾ ವಿಶಾಲವಾಗಿದೆ. ಯಾವುದೇ ರಾಜಕೀಯ, ಆರ್ಥಿಕ ಬೌಂಡರಿಯಿಂದ ಮುಕ್ತವಾಗಿದೆ ಎಂದ ಅವರು ಶಿಕ್ಷಣದ ಜೊತೆ ಸಂಸ್ಕಾರವನ್ನು ಪಡೆದು ಉತ್ತಮ ಶಿಕ್ಷಣವನ್ನು ಮಗುವಿಗೆ ನೀಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರಲ್ಲಿದೆ ಎಂದರು. ಶಿಕ್ಷಕರು ಸೇವಾ ಮನೋಭಾವ ಮಾತ್ರವಲ್ಲದೇ ತ್ಯಾಗಭಾವದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದ ಅವರು ಶಿಕ್ಷಕ ವೃತ್ತಿಯ ಶ್ರೇಷ್ಠತೆಯನ್ನು ಬಣ್ಣಿಸಿದರು.

ಧರ್ಮ ಶಿಕ್ಷಣವನ್ನು ಶಾಲೆಗಳಲ್ಲಿಯೇ ನೀಡಬೇಕಾಗಿದೆ – ಸತ್ಯಶಂಕರ ಬೊಳ್ಳಾವ: ಸಭಾಧ್ಯಕ್ಷತೆ ವಹಿಸಿದ್ದ ಕೋಟೆಕಾರ್ ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಮಾತನಾಡಿ, ’ಸತ್ಯ ಧರ್ಮಗಳು ಸದಾ ನಮ್ಮನ್ನು ಕಾಪಾಡುತ್ತದೆ. ಅಂತಹ ಧರ್ಮ ವಿಚಾರಗಳನ್ನು ಶಾಲೆಯಲ್ಲಿಯೇ ಮಗುವಿಗೆ ನೀಡಬೇಕಾದ ಅನಿವಾರ‍್ಯತೆ ಇದೆ. ಪರೋಪಕಾರದ ಮೌಲ್ಯದೊಂದಿಗೆ ಜೀವನ ನಡೆಸುವ ಕೌಶಲ್ಯ ಮಗುವಿನಲ್ಲಿ ಬೆಳೆಸಬೇಕು. ಈ ನಿಟ್ಟಿನಲ್ಲಿ ವಿವೇಕಾನಂದ ಸಂಸ್ಥೆ ಇದಕ್ಕೆ ಪೂರಕವಾಗಿ ಶಿಕ್ಷಣ ನೀಡುತ್ತಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ’ ಎಂದರು.

ಭಾರತೀಯ ಸಂಸ್ಕೃತಿಗೆ ವಿಶ್ವದಲ್ಲಿ ವಿಶೇಷ ಸ್ಥಾನವಿದೆ- ಕಾರ್ತಿಕ್ ತಂತ್ರಿ: ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬ್ರಹ್ಮಶ್ರೀ ಕಾರ್ತಿಕ್ ತಂತ್ರಿ ಮಾತನಾಡಿ, ’ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವಿಶೇಷ ಸ್ಥಾನ ಪಡೆದಿದೆ. ಇಲ್ಲಿ ಜ್ಞಾನ ಹಾಗೂ ವಿದ್ಯೆಗೆ ಹೆಚ್ಚು ಮಹತ್ವ ನೀಡುತ್ತೇವೆ. ವೇದಗಳಲ್ಲಿ ಜ್ಞಾನದ ಮೂಲ ಅಡಕವಾಗಿದೆ. ಸಂಸ್ಕಾರವನ್ನು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿದರೆ ಅದು ಶಾಶ್ವತವಾಗಿರಲು ಸಾಧ್ಯ’ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್ವರ ಅಮೈ, ಸಂಚಾಲಕ ಮುರಳೀಧರ ಕೆ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುರಳೀಕೃಷ್ಣ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಶೆಣೈ, ಪ್ರೌಢ ವಿಭಾಗದ ಮುಖ್ಯಗುರು ಸತೀಶ್ ಕುಮಾರ್ ರೈ, ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಯ್ಕ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಗುರು ಮಮತಾ ಕೆ. ಉಪಸ್ಥಿತರಿದ್ದರು.

ವಿಜ್ಞಾನ, ಚಿತ್ರಕಲೆ, ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಪುರಸ್ಕೃತರಾದ ಶಾಲಾ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು.

ಆಡಳಿತ ಮಂಡಳಿಯ ಸದಸ್ಯ ಡಾ. ಸುರೇಶ್ ಪುತ್ತೂರಾಯ ಸ್ವಾಗತಿಸಿ, ಸದಸ್ಯೆ ರೂಪಲೇಖಾ ವಂದಿಸಿದರು. ಶಿಕ್ಷಕಿಯರಾದ ಸಾಯಿಗೀತಾ ಎಸ್. ರಾವ್, ರೇಖಾ ಆರ್., ಅನುರಾಧ ಎ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಅಮೃತಾ ಭಟ್, ಅನಘಾ ಕೆ., ಕೃಪಾಲಿ, ಶ್ರೀಕೃಪಾ ಹಾಗೂ ಅಪೇಕ್ಷಾ ಪ್ರಾರ್ಥಿಸಿದರು. ಅಕ್ಷಯ್ ಪಾಂಗಲ್ ದಿನಪಂಚಾಂಗ, ಶ್ರೇಯಸ್ ಹೇರಳೆ ಸುಭಾಷಿತ ಹಾಗೂ ರಂಜಿತಾ ಅಮೃತವಚನ ವಾಚಿಸಿದರು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಮೊದಲು ಹಾಗೂ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೂಡಿಬಂದವು. ಪ್ರಕೃತಿ ಮಾತೆಯ ಉಳಿವು, ರಾಷ್ಟ್ರಭಕ್ತಿ, ಧರ್ಮಜಾಗೃತಿ ಮೂಡಿಸುವ ವಿವಿಧ ನೃತ್ಯಗಳು, ರೂಪಕಗಳು ಮನರಂಜಿಸಿದವು.

ಹಬ್ಬದ ಸಂಭ್ರಮ ಮನೆ ಮಾಡಿತು

ವಾರ್ಷಿಕೋತ್ಸವದ ಸಂಭ್ರಮ ಹಬ್ಬದ ರೀತಿಯಲ್ಲಿ ಕಳೆ ಮೂಡಿಸಿತ್ತು. ತೆಂಕಿಲ ಬೈಪಾಸ್ ರಸ್ತೆಯ ಬದಿಯಲ್ಲಿ ಶಾಲೆಯ ಮುಖ್ಯ ದ್ವಾರದಲ್ಲಿ ಆಕರ್ಷಕ ಗೂಡು ದೀಪಗಳು, ಬೃಹತ್ ಸ್ವಾಗತ ಕಿರೀಟ, ಒಳಬಂದಂತೆ ಮತ್ತೆ ಗೂಡು ದೀಪಗಳು, ಬಣ್ಣದ ಕೊಡೆಗಳ ಕಂಬಗಳು, ಸಾಂಪ್ರದಾಯಿಕ ಮಾವಿನ ತೋರಣ, ಬಾಳೆಯ ಗಿಡಗಳು, ಮುಖಮಂಟಪದ ಮೇಲ್ಭಾಗದಲ್ಲಿ ಟ್ರೋಫಿಗಳನ್ನು ಜೋಡಿಸಿಟ್ಟದ್ದು ಕ್ಯಾಂಪಸ್‌ನಲ್ಲಿ ವಿಶೇಷ ರಂಗು ಮೂಡಿಸಿತ್ತು. ಯಾದವಶ್ರೀ ಸಭಾಂಗಣದ ಸುತ್ತಲೂ ಮಕ್ಕಳ ಕೈ ಚಳಕದಲ್ಲಿ ಮೂಡಲ್ಪಟ್ಟ ವಿವಿಧ ರೀತಿಯ ಕಲಾಕೃತಿಗಳ ತೋರಣ, ವೇದಿಕೆಯ ಮುಂಭಾಗದಲ್ಲಿ ಶಾರದಾ ಮಾತೆ, ಲಕ್ಷ್ಮೀ ಹಾಗೂ ವಿದ್ಯಾಗಣಪತಿಯ ಪುಷ್ಪಾಲಂಕೃತ ಫೊಟೋಗಳು, ಸ್ವಾಮಿ ವಿವೇಕಾನಂದರ ಭಾವಚಿತ್ರ, ಎಲ್‌ಸಿಡಿ ಸ್ಕ್ರೀನ್ ಮೂಲಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬೃಹತ್ ಅನಾವರಣ ಒಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಆಂಗ್ಲ ಮಾಧ್ಯಮ ವಿಭಾಗದಲ್ಲಿ ಎರಡು ದಿನ ಕಾರ್ಯಕ್ರಮ ನಡೆಯುವುದಾದರೂ ಯಾದವಶ್ರೀ ಸಭಾಂಗಣ ಪೋಷಕರಿಂದ, ವಿದ್ಯಾಭಿಮಾನಿಗಳಿಂದ ತುಂಬಿ ತುಳುಕಿತ್ತು. ವಾಹನ ಪಾರ್ಕಿಂಗ್‌ಗೆ ಕ್ರೀಡಾಂಗಣವನ್ನು ಬಳಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.