ದಿ.ಡೆನ್ನಿಸ್ ಡಿ’ಸೋಜರವರಿಗೆ ಗುರುಸ್ಮರಣೆ ‘ಮೆಸ್ತ್ರಿ ತುಜ್ಯಾ ಮಾನಾಕ್’- ನಾಗರಿಕರ ಹೃದಯದಲ್ಲಿ ಅಮರರಾಗಿರುವ ‘ಸಿಂಗಿಂಗ್ ಹೆಡ್‌ಮಾಸ್ತರ್’ ಡೆನ್ನಿಸ್ 

Puttur_Advt_NewsUnder_1
Puttur_Advt_NewsUnder_1

dennis1 dennis2

ಪುತ್ತೂರು: ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪುತ್ತೂರಿನಲ್ಲಿ ತನ್ನದೇ ಆದ ‘ಆಸ್ತಿತ್ವ’ವನ್ನು ಪ್ರದರ್ಶಿಸಿದ, ಎಲ್ಲಾ ಜಾತಿ ವರ್ಗದವರ ಮನಸ್ಸಿನಲ್ಲಿ ‘ಹೆಡ್ ಮಾಸ್ಟರ್’ ಹೆಸರಿನಲ್ಲಿ ಜನಮೆಚ್ಚುಗೆ ಪಡೆದ ಹಾಗೂ ಪುತ್ತೂರಿನ ನಾಗರಿಕರ ಹೃದಯದಲ್ಲಿ ಈಗಲೂ ‘ಅಮರ’ರಾಗಿರುವ ಶಿಕ್ಷಕರಾದ ‘ಸಿಂಗಿಂಗ್ ಹೆಡ್‌ಮಾಸ್ತರ್’ ಎಂದೇ ಖ್ಯಾತರಾಗಿರುವ ಡೆನ್ನಿಸ್ ಡಿ’ಸೋಜರವರಿಗೆ ಸಲ್ಲಿಸುವ ‘ಗುರುಸ್ಮರಣೆ’ ಕಾರ್ಯಕ್ರಮವು ಸಂಗೀತ ನಿರ್ದೇಶಕ ಜೋಯೆಲ್ ಪಿರೇರಾರವರ ನಿರ್ದೇಶನದಲ್ಲಿ ನಡೆಯಿತು. ಪುತ್ತೂರಿನ ಹಾಗೂ ಆಸುಪಾಸಿನ ಕಲಾಕಾರರಿಂದ, ಡೆನ್ನಿಸ್ ಡಿ’ಸೋಜರವರಿಂದ ರಚಿಸಲ್ಪಟ್ಟ ಸುಮಧುರವಾದ ಒಂಭತ್ತು ಕೊಂಕಣಿ ಹಾಡುಗಳು ಹಾಗೂ ಒಂದು ಕನ್ನಡ ಹಾಡು ಸಾಕಾರಗೊಂಡವು

ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಮುಖ್ಯಗುರುಗಳಾಗಿದ್ದ ದಿ.ಡೆನ್ನಿಸ್ ಡಿ’ಸೋಜರವರಿಗೆ ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ‘ಮೆಸ್ತ್ರಿ ತುಜ್ಯಾ ಮಾನಾಕ್’ ಎಂಬ ಹೆಸರಿನಲ್ಲಿ ಗುರುಸ್ಮರಣೆ ಸಲ್ಲಿಸುವ ಮೂಲಕ ಗೌರವ ನೀಡುವ ಕಾರ್ಯಕ್ರಮ ಮತ್ತು ಅವರದೇ ರಚನೆಯ ಹಾಡುಗಳ ಮೆಲುಕು ಹಾಕುವ ಸಂಗೀತ ಕಾರ್ಯಕ್ರಮ ದ.೧೮ ರಂದು ಸಂಜೆ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ದಿ.ಡೆನ್ನಿಸ್ ಡಿ’ಸೋಜ ಸ್ಮಾರಕ ರಂಗಮಂಟಪದಲ್ಲಿ ನಡೆಯಿತು.

ಡೆನ್ನಿಸ್‌ರವರು ಮಣ್ಣಿನ ಮಗ, ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ-ವಂ|ಆಲ್ಫ್ರೆಡ್: ಮಾದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಡೆನ್ನಿಸ್ ಡಿ’ಸೋಜರವರ ತಾಕತ್ತು ಏನೆಂಬುದು ನಾನು ಇಲ್ಲಿ ಸಹಾಯಕ ಗುರುಗಳಾಗಿದ್ದ ಸಂದರ್ಭದಲ್ಲಿಯೇ ಬಲ್ಲವನಾಗಿದ್ದೆ. ಅವರೊಬ್ಬ ಮಣ್ಣಿನ ಮಗನಾಗಿದ್ದು ಅವರು ಇಂದಿಗೂ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಹಾಡುಗಳನ್ನು ಸ್ವತಃ ಬರೆದು ಅದನ್ನು ಪ್ರೌಢಶಾಲಾ ಮಕ್ಕಳಲ್ಲಿ ಹಾಡಿಸುತ್ತಿದ್ದರು ಎಂದರು. ಡೆನ್ನಿಸ್‌ರವರು ಅಂದು ಭಿತ್ತಿದ್ದ ಬೀಜ ಇಂದು ಫಲಕೊಡುತ್ತಿದೆ ಮಾತ್ರವಲ್ಲ ಸಮಾಜದಲ್ಲಿ ಪ್ರಜ್ವಲಿಸುವಂತೆ ಮಾಡಿದೆ ಎನ್ನಲಡ್ಡಿಯಿಲ್ಲ ಎಂದು ಅವರು ಹೇಳಿದರು.

ರಂಜಿಸಿದ ಹತ್ತು ಹಾಡುಗಳು: ಒಂದೊಂದು ಹಾಡುಗಳು ವಿಭಿನ್ನತೆಯಿಂದ ಕೂಡಿದ್ದವು. ಪ್ರತಿಯೊಂದು ಹಾಡುಗಳು ಸಾಹಿತ್ಯಭರಿತವಾಗಿದ್ದು ವಾಸ್ತವಕ್ಕೆ ತುಂಬಾ ಹತ್ತಿರವಾಗಿದ್ದವು. ವ್ಯಕ್ತಿಗೆ ಅಥವಾ ವಿಷಯಕ್ಕೆ ಅಥವಾ ಸನ್ನಿವೇಷಕ್ಕೆ ಸಾಮೀಪ್ಯವಿರುವ ಹಾಡುಗಳನ್ನು ಡೆನ್ನಿಸ್‌ರವರ ಹೃದಯಾಂತರಾಳದಿಂದ ಮೂಡಿ ಬಂದಿದೆ. ಸಂತರಾಗಿರುವ ಮದರ್ ತೆರೆಸಾರವರು ನೀಡಿದ ಮಾನವೀಯತೆಯ ಸೇವೆಗಳ ಬಗ್ಗೆ, ಕೊಂಕಣಿ ಭಾಷೆ ಒಂದು ಸಂಸ್ಕೃತಿ ಬಗ್ಗೆ, ಅವಳಿ-ಜವಳಿ ಮಕ್ಕಳ ಬಗ್ಗೆ, ಸಾಮೂಹಿಕ ಮದುವೆಗಳ ಬಗ್ಗೆ, ಮೀನು ಹಿಡಿಯುವ ಬೆಸ್ತರ ಬಗ್ಗೆ, ಧರ್ಮಗುರುಗಳಿಗೆ ನಮನ ಸಲ್ಲಿಸುವ ಬಗ್ಗೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಯೋಧರ ಬಗ್ಗೆ, ಸದಾ ಕಾಪಾಡುವ ಹಾಗೂ ಗೌರವಿಸುವ ಭಾರತಮಾತೆ ಬಗ್ಗೆ, ೧೯೮೩ರ ವಿಶ್ವಕಪ್‌ನಲ್ಲಿ ಭಾರತ ಅದ್ವಿತೀಯ ವಿಜಯ ಸಾಧಿಸಿದ ಬಗೆಗಿನ ಡೆನ್ನಿಸ್‌ರವರು ಬರೆದ ಹಾಡುಗಳು ಸಾರ್ವಜನಿಕರಿಂದ ಪ್ರಶಂಸಿಸಲ್ಪಟ್ಟವು.

ಕಲಾಕಾರರಿಗೆ ಸ್ಮರಣಿಕೆ ನೀಡಿ ಗೌರವ: ಕಲಾಕಾರರಾದ ಸಿಲ್ವಿಯಾ ಡಿ’ಸಿಲ್ವ, ಲೆನ್ಸಿ ಮಾಡ್ತಾ, ಒಸ್ಕರ್ ವೇಗಸ್, ವಿ.ಜೆ ಫೆರ್ನಾಂಡೀಸ್, ಒಸ್ವಾಲ್ಡ್ ವೇಗಸ್, ಮೀರಾ ಪಾಸ್, ಒಲಿಂಡಾ ಗೋವಿಯಸ್, ಮೋಲಿ ಲೋಬೋ, ಒಲಿವಿಯಾ ರೊಡ್ರಿಗಸ್, ಕ್ಲೋಡಿಯಸ್ ಡಿ’ಸೋಜ, ಜೋನ್ ಪಿಂಟೋ, ತೋಮಸ್ ತಾವ್ರೋ, ಪ್ರವೀಣ್ ಪಿಂಟೋ, ಲೀನಾ ರೇಗೋ, ಲೀನಾ ಪಾಸ್‌ರವರು ಸಂಗೀತ ನಿರ್ದೆಶಕ ಜೋಯೆಲ್ ಪಿರೇರಾರವರ ನಿರ್ದೇಶನದಲ್ಲಿ ಡೆನ್ನಿಸ್ ಡಿ’ಸೋಜರವರ ವಿರಚಿತ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. ಬಳಿಕ ಎಲ್ಲಾ ಕಲಾಕಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಶೇಷ ಆಕರ್ಷಣೆಯಾಗಿ ನೀಲೇಶ್ ಜೋಯ್ ಡಾಯಸ್ ತಂಡದಿಂದ ಡ್ಯಾನ್ಸ್ ಮತ್ತು ಜೊಸ್ಟನ್ ಲೋಬೋ ತಂಡದಿಂದ ಪ್ರಹಸನ ನಡೆಯಿತು.

ಮೌನ ಪ್ರಾರ್ಥನೆ: ಫಿಲೋಮಿನಾ ಪ್ರೌಢಶಾಲೆಯ ಕೀರ್ತಿಯನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಿದ ಮತ್ತು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದು ಅಗಲಿದ ಅಪ್ರತಿಮ ಮುಖ್ಯ ಶಿಕ್ಷಕ ಡೆನ್ನಿಸ್ ಡಿ’ಸೋಜ ಹಾಗೂ ಇತ್ತೀಚೆಗೆ ಅಗಲಿದ ಅವರ ಪತ್ನಿ ಮೆಟಿಲ್ಡಾರವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತನು ಕರುಣಿಸಲೆಂದು ಆರಂಭದಲ್ಲಿ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸುವರ್ಣ ಮಹೋತ್ಸವದಲ್ಲಿ ಡೆನ್ನಿಸ್: ಸಂತ ಫಿಲೋಮಿನಾ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡೆನ್ನಿಸ್ ಡಿ’ಸೋಜರವರನ್ನು ಪ್ರತಿಯೊಬ್ಬರೂ ಆದರದಿಂದ ಬರಮಾಡಿಕೊಳ್ಳುವ ದೃಶ್ಯವನ್ನು ಪರದೆಯ ಮೇಲೆ ಭಿತ್ತರಿಸಲಾಯಿತು. ಸುವರ್ಣ ಸಮಿತಿಯ ಗೌರವಾಧ್ಯಕ್ಷ ಮೈಕಲ್ ಡಿ’ಸೋಜ ಸ್ವಾಗತಿಸಿ, ಕಲಾವಿದೆ ಸಿಲ್ವಿಯಾ ಡಿ’ಸಿಲ್ವ ವಂದಿಸಿದರು. ಸುವರ್ಣ ಸಮಿತಿಯ ಸಂಯೋಜಕ ಜೋನ್ ಕುಟಿನ್ಹಾ, ಅಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಕ್ಲೋಡಿಯಸ್ ಡಿ’ಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್ ಪಿಂಟೋ, ರೋಯ್ಸ್ ಪಿಂಟೋ ಸಹಿತ ಕ್ಲಬ್ ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು. ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಕಾಲೇಜು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ|ರಿತೇಶ್ ರೊಡ್ರಿಗಸ್, ವಿಕ್ಟರ‍್ಸ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ವಂ|ಮ್ಯಾಕ್ಸಿಂ ಡಿ’ಸೋಜ, ವಂ|ವಲೇರಿಯನ್ ಮಿತ್ತೂರು, ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೊಡ್ರಿಗಸ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ ಆರ್ತಿಕಜೆ, ನಿವೃತ್ತ ಶಿಕ್ಷಕರಾದ ಸುರೇಶ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು. ವಿ.ಜೆ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ರೂ,೧.೬೦ ಲಕ್ಷ ಹಸ್ತಾಂತರ

ದಿ.ಡೆನ್ನಿಸ್ ಡಿ’ಸೋಜರವರ ಗುರುಸ್ಮರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದ ಮುಖಾಂತರ ಡೆನ್ನಿಸ್ ಡಿ’ಸೋಜರವರ ಹೆಸರಿನಲ್ಲಿ ಫಿಲೋಮಿನಾ ಪ್ರೌಢಶಾಲೆಯ ಅಭಿವೃದ್ದಿಗೋಸ್ಕರ ಶಾಲಾ ಅಂಗಣಕ್ಕೆ ಇಂಟರ್‌ಲಾಕ್ ಅಳವಡಿಸಲು ರೂ,೧ ಲಕ್ಷದ ೬೦ ಸಾವಿರ ಮೊತ್ತವನ್ನು ಹಸ್ತಾಂತರಿಸಲಾಯಿತು.

ಸನ್ಮಾನವು ಪ್ರವೀಣ್ ಪಿಂಟೋ, ರೋಯ್ಸ್ ಪಿಂಟೋರವರಿಗೆ ಸಲ್ಲಬೇಕು…..

ಡೆನ್ನಿಸ್ ಗುರುಗಳ ಗುರುಸ್ಮರಣಾರ್ಥವಾಗಿ ಮತ್ತು ಅವರ ಸವಿನೆನಪಿಗಾಗಿ ಅವರೇ ರಚಿಸಿದ ಹಾಡುಗಳನ್ನು ಅವರದೇ ಹೆಸರಿನ ರಂಗಮಂಟಪದಲ್ಲಿ ಹಾಡಬೇಕು ಮತ್ತು ‘ಮೆಸ್ತ್ರಿ ತುಜ್ಯಾ ಮಾನಾಕ್’(ಗುರುಗಳೇ ನಿಮಗೆ ವಂದನೆ)ಎಂಬ ಹೆಸರನ್ನು ಸಂಗೀತ ಸಂಜೆ ಕಾರ್ಯಕ್ರಮದ ಪ್ರಾಯೋಜಕಿ ಒಲಿವಿಯಾರವರೇ ಸೂಚಿಸಿದ್ದರು. ಪುತ್ತೂರಿನ ಸ್ಥಳೀಯ ಕಲಾಕಾರರೊಂದಿಗೆ ಯಶಸ್ವಿ ಕಾರ್ಯಕ್ರಮವೊಂದನ್ನು ಪುತ್ತೂರಿನ ಜನತೆಗೆ ನೀಡಿದ ಕೂರ್ನಡ್ಕ ಎ.ಬಿ ವೇಗಸ್ ಹಾಗೂ ಹೆಲೆನ್ ಮೋನಿಕಾ(ಆಗ್ನೇಸ್)ಡಿ’ಸೋಜರವರ ಪುತ್ರಿ ಒಲಿವಿಯಾರವರನ್ನು ಈ ಸಂದರ್ಭದಲ್ಲಿ ಡೊನ್ ಬೊಸ್ಕೊ ಕ್ಲಬ್‌ರವರು ಸನ್ಮಾನಿಸಿದರು. ಆದರೆ ತನಗೆ ಈ ಸನ್ಮಾನದಲ್ಲಿ ಆಸಕ್ತಿಯಿಲ್ಲ ಮತ್ತು ನನಗೆ ಈ ಸನ್ಮಾನ ಸಂದುದಲ್ಲ. ಆದರೆ ನಿಜವಾಗಿ ಸನ್ಮಾನ ಸಲ್ಲಬೇಕಾದುದು ನನ್ನ ಆಶಯಗಳಿಗೆ ಮತ್ತು ಯೋಜನೆಗಳಿಗೆ ಜೀವ ನೀಡಿ ಕಾರ್ಯರೂಪಕ್ಕೆ ಇಳಿಸಿದ ಡೊನ್ ಬೊಸ್ಕೊ ಕ್ಲಬ್‌ನ ಸದಸ್ಯರಾದ ಪ್ರವೀಣ್ ಪಿಂಟೋ ಹಾಗೂ ರೋಯ್ಸ್ ಪಿಂಟೋರವರು. ಅವರಿಗೆ ಈ ಸನ್ಮಾನ, ಅವರ ಪರವಾಗಿ ಈ ಸನ್ಮಾನವನ್ನು ನಾನು ಸ್ವೀಕರಿಸುತ್ತಿzನೆ ಎಂದು ಒಲಿವಿಯಾರವರು ಹೇಳಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದ ಡೆನ್ನಿಸ್ ಡಿ’ಸೋಜರು ಶಿಕ್ಷಣರಂಗದಲ್ಲಿ ಅಪೂರ್ವವಾದ ಸಾಧನೆಗಳನ್ನು ಮಾಡಿ ನಾಡಿನಾದ್ಯಂತ ಹೆಸರುಗಳಿಸಿದ ಮಹಾನುಭಾವರು. ಅವರದು ಅನನ್ಯ ವ್ಯಕ್ತಿತ್ವ, ಅಸಾಧಾರಣ ಪ್ರತಿಭೆ ಮತ್ತು ಮೃದುಮಧುರ ಸ್ವಭಾವ. ಕ್ರೀಡಾಸಕ್ತರಾಗಿದ್ದು ಉತ್ತಮ ಅಧ್ಯಾಪಕರಾಗಿ ಹೆಸರು ಪಡೆದ ಡೆನ್ನಿಸರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವಚ್ಛತೆ, ಅಧ್ಯಯನಶೀಲತೆಗಳ ಜತೆಗೆ ಕಲಾತ್ಮಕತೆ, ಸೃಜನಶೀಲತೆ ಮತ್ತು ಸಾಹಸ ಮನೋವೃತ್ತಿಗಳನ್ನು ರೂಪಿಸಿದವರು.

-ಪ್ರೊ.ವಿ.ಬಿ ಆರ್ತಿಕಜೆ, ವಿಶ್ರಾಂತ ಪ್ರಾಧ್ಯಾಪಕರು

ಕ್ರೀಡಾಕ್ಷೇತ್ರವಾಗಲಿ ಯಾವುದೇ ಕ್ಷೇತ್ರವಾಗಲಿ ಎಲ್ಲರನ್ನು ಹುರಿದುಂಬಿಸಿ ಬೆಂಬಲಿಸುತ್ತಿದ್ದರು. ಫಿಲೋಮಿನಾ ಸಂಸ್ಥೆಗೆ ಅವರ ಕೊಡುಗೆ ಅಪಾರವಾಗಿದೆ. ಇಲ್ಲಿನ ಪ್ರತಿಯೊಂದು ಕಲ್ಲುಗಳು ‘ಡೆನ್ನಿಸ್, ಡೆನ್ನಿಸ್, ಡೆನ್ನಿಸ್’ ಎಂದು ಕರೆಯುತ್ತಿದೆ. ಡೆನ್ನಿಸ್‌ರವರು ಕೂಡ ‘ಫಿಲೋಮಿನಾ, ಫಿಲೋಮಿನಾ, ಫಿಲೋಮಿನಾ’ ಎಂದು ಅವರ ಮನಸ್ಸು ತುಡಿಯುತ್ತಿತ್ತು.

-ರಾಜಶೇಖರ್, ಶಿಕ್ಷಕರು,ಫಿಲೋಮಿನಾ ಪ್ರೌಢಶಾಲೆ

ಡಿ’ಸೋಜರು ಒಳ್ಳೆಯ ಕವಿ. ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಗಳಲ್ಲಿ ಮೋಹಕ ಹಾಡುಗಳನ್ನು ಬರೆದು ಗಾಯನ ಮಾಡಿದರು. ಅವರ ’ಏಳಿರೆಲ್ಲ ಭಾರತದ ವೀರ ಯೋಧರು’ ಮತ್ತು ’ಹೇ ಜಗದೀಶ ಪೊರೆತಂದೆಯೇ’ ಮುಂತಾದುವು ಮರೆಯಲಾರದ ಹಾಡುಗಳು. ಅವರನ್ನು ’ಸಿಂಗಿಂಗ್ ರೊಟೇರಿಯನ್’, ’ಸಿಂಗಿಂಗ್ ಹೆಡ್‌ಮಾಸ್ಟರ್’ ಎಂದೂ ಜನ ಗುರುತಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.