ಉಪ್ಪಿನಂಗಡಿಯಲ್ಲಿ ಚರಂಡಿ ಅತಿಕ್ರಮಿತ ಕಾಮಗಾರಿ ತೆರವಿಗೆ ಮುಂದಾದ ಪಂಚಾಯತ್- ತೆರವಿಗೆ ಅತಿಕ್ರಮಣದಾರರಿಗೆ ನೊಟೀಸ್; ಒಂದು ವಾರಗಳ ಕಾಲಾವಕಾಶ

Puttur_Advt_NewsUnder_1
Puttur_Advt_NewsUnder_1

uppinangady

ಉಪ್ಪಿನಂಗಡಿ: ಪೇಟೆಯಲ್ಲಿ ಚರಂಡಿ ಅತಿಕ್ರಮಿತ ರಚನಾ ಕಾಮಗಾರಿಗಳು ಹಾಗೂ ಮಾಡುಗಳ ತೆರವಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮುಂದಾಗಿದ್ದು, ಸೋಮವಾರ ಪಂಚಾಯತ್ ಅಧಿಕಾರಿಗಳ ತಂಡ ಸರ್ವೇ ನಡೆಸಿ, ಗುರುತು ಹಾಕಿದೆ. ಅಲ್ಲದೇ, ಅತಿಕ್ರಮಣದಾರರಿಗೆ ನೊಟೀಸ್ ನೀಡಿ, ತೆರವಿಗೆ ಒಂದು ವಾರಗಳ ಕಾಲಾವಕಾಶ ನೀಡಿದೆ.

ತೀರಾ ಕಿರಿದಾಗಿರುವ ಉಪ್ಪಿನಂಗಡಿಯ ಪೇಟೆ ರಸ್ತೆಯಲ್ಲಿ ಜನದಟ್ಟಣೆ ಹಾಗೂ ವಾಹನದಟ್ಟಣೆ ತಪ್ಪಿಸಲು ರಸ್ತೆ ಹಾಗೂ ಚರಂಡಿ ಅತಿಕ್ರಮಿತ ಕಟ್ಟಡಗಳನ್ನು ತೆರವುಗೊಳಿಸುವಂತೆ ಈ ಹಿಂದಿನ ಉಪವಿಭಾಗಾಧಿಕಾರಿಯಾಗಿದ್ದ ಡಾ. ಕೆ.ವಿ. ರಾಜೇಂದ್ರ ಅವರು ಪಂಚಾಯತ್‌ಗೆ ಸೂಚಿಸಿದ್ದರು. ಅಲ್ಲದೇ, ಆ ಬಳಿಕ ನಡೆದ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿಯೂ ಚರಂಡಿ ಅತಿಕ್ರಮಿತ ರಚನಾ ಕಾಮಗಾರಿಗಳು ಹಾಗೂ ಚರಂಡಿಯ ಮೇಲೆ ಚಾಚಿರುವ ಮಾಡುಗಳ ತೆರವು ನಡೆಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಸೋಮವಾರ ಇಲ್ಲಿನ ಬ್ಯಾಂಕ್ ರಸ್ತೆಯಲ್ಲಿ ಸರ್ವೆ ನಡೆಸಿ, ಗುರುತು ಹಾಕುವ ಪ್ರಕ್ರಿಯೆ ನಡೆಸಿದರು. ಅತಿಕ್ರಮಣದಾರರಿಗೆ ಈಗಾಗಲೇ ನೊಟೀಸ್ ನೀಡಿ, ಇನ್ನು ಒಂದು ವಾರಗಳೊಳಗೆ ಅತಿಕ್ರಮಿತ ರಚನಾ ಕಾಮಗಾರಿ ಹಾಗೂ ಮಾಡುಗಳನ್ನು ತೆರವುಗೊಳಿಸದಿದ್ದರೆ, ಪಂಚಾಯತ್‌ನಿಂದಲೇ ತೆರವು ಪ್ರಕ್ರಿಯೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಉಪ್ಪಿನಂಗಡಿಯಲ್ಲಿ ಚರಂಡಿಯನ್ನು ಅತಿಕ್ರಮಿಸಿಕೊಂಡು ಕಟ್ಟಡ ರಚನೆಯಾಗಲಿ, ಚರಂಡಿಯ ನೇರಕ್ಕೆ ಚಾಚಿರುವಂತೆ ಮಾಡಿನ ರಚನೆಯಾಗಲೀ ಕಂಡು ಬಂದಲ್ಲಿ ಅದರ ತೆರವಿಗೆ ಪಂಚಾಯತ್ ಮುಂದಾಗಿದ್ದು, ಈಗಾಗಲೇ ಅತಿಕ್ರಮಣದಾರರಿಗೆ ನೊಟೀಸ್ ನೀಡಲಾಗಿದೆ. ಒಂದು ವಾರದವರೆಗೆ ಅವರಿಗೆ ತೆರವು ಮಾಡಲು ಕಾಲಾವಕಾಶ ನೀಡಿದ್ದು, ಬಳಿಕವೂ ತೆರವು ನಡೆಸದ ಅತಿಕ್ರಮಿತ ಕಾಮಗಾರಿಗಳನ್ನು ಪಂಚಾಯತ್ ತೆರವುಗೊಳಿಸಲಿದೆ ಎಂದು ತಿಳಿಸಿದರು.  ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ಕಾರ್ಯದರ್ಶಿ ರೋಹಿತಾಶ್ವ ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.