ಕುಂತೂರು: ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಪಲ್ಟಿ ರಸ್ತೆಗೆ ಬಿದ್ದವರಿಗೆ ಇನ್ನೊಂದು ಬೈಕ್ ಡಿಕ್ಕಿ ಅಪಘಾತವೆಸಗಿದ ಬೈಕ್ ನಾಪತ್ತೆ-ಬಿಗುವಿನ ಪರಿಸ್ಥಿತಿ

Puttur_Advt_NewsUnder_1
Puttur_Advt_NewsUnder_1

 

ಪೆರಾಬೆ: ಬೈಕೊಂದು ಪಾದಚಾರಿ ಯೋರ್ವರಿಗೆ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಇದೇ ವೇಳೆ ಇನ್ನೊಂದು ಬೈಕ್ ಬಂದು ಪಾದಚಾರಿ ಹಾಗೂ ಪಲ್ಟಿಯಾಗಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಕೆಳಗಿನ ಪೇಟೆಯಲ್ಲಿ ದ.22ರಂದು ಸಂಜೆ ನಡೆದಿದೆ. ಇದೇ ವೇಳೆ ಡಿಕ್ಕಿ ಹೊಡೆದ ಬೈಕೊಂದು ಸ್ಥಳದಿಂದ ನಾಪತ್ತೆಯಾಗಿದ್ದು ಸ್ಥಳದಲ್ಲಿ ಕೆಲಹೊತ್ತು ಗೊಂದಲ ಸೃಷ್ಟಿಸಿ ಬಿಗುವಿನ ಪರಿಸ್ಥಿತಿಗೆ ಕಾರಣವಾಗಿತ್ತು.

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕುಂತೂರು ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿರುವ ಕುಂತೂರು ಕುಂಡಡ್ಕ ನಿವಾಸಿ ಮೋಹನ ಗೌಡ ಎಂಬವರು ಕುಂತೂರು ಕೆಳಗಿನ ಪೇಟೆಯಲ್ಲಿ ಮೋಹನ್ ಟೈಲರ್ ಎಂಬವರಿಂದ ಪಿಗ್ಮಿ ಸಂಗ್ರಹಿಸಿ ರಾಜ್ಯ ಹೆದ್ದಾರಿ ದಾಟುತ್ತಿದ್ದ ವೇಳೆ ಆಲಂಕಾರು ಕಡೆಯಿಂದ ಕಡಬ ಕಡೆಗೆ ವಿಶ್ವನಾಥ ಗೌಡ ಪರಕ್ಕಾಲು ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಪಾದಚಾರಿ ಮೋಹನ ಗೌಡ ಹಾಗೂ ಬೈಕ್ ಸವಾರ ವಿಶ್ವನಾಥರವರು ರಸ್ತೆಗೆ ಬಿದ್ದಿದ್ದು ಇದೇ ವೇಳೆ ಕಡಬ ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ ಕೋಚಕಟ್ಟೆ ನಿವಾಸಿಗಳಾದ ಬೈಕ್ ಸವಾರ ಯಾಸೀರ್ ಹಾಗೂ ಸಹಸವಾರ ಮುಸ್ತಫಾ ಎಂಬವರು ಬರುತ್ತಿದ್ದ, ಕೋಚಕಟ್ಟೆ ನಿವಾಸಿ ನಬುವಾತ್ ಎಂಬವರಿಗೆ ಸೇರಿದ ಬೈಕ್(ಕೆಎ 19 07786)ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೋಹನ ಗೌಡ ಕುಂಡಡ್ಕ, ವಿಶ್ವನಾಥ ಗೌಡ ಪರಕ್ಕಾಲು ಹಾಗೂ ಮುಸ್ತಫಾ ಎಂಬವರು ಗಾಯಗೊಂಡಿದ್ದು ಮೂವರನ್ನು 108ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೈಕ್ ಸವಾರ ಯಾಸೀರ್ ಎಂಬವರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

ಬೈಕ್ ನಾಪತ್ತೆ, ಬಿಗುವಿನ ಪರಿಸ್ಥಿತಿ: ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಯಾಸೀರ್ ಹಾಗೂ ಮುಸ್ತಫಾರವರು ಬರುತ್ತಿದ್ದ ಬೈಕ್ ಘಟನಾ ಸ್ಥಳದಿಂದ ನಾಪತ್ತೆಯಾಗಿತ್ತು. ಇದೊಂದು ಅಪಘಾತ ಪ್ರಕರಣವಾಗಿರುವುದರಿಂದ ಯಾರಿಗೂ ತಿಳಿಸದೇ ಬೈಕ್ ಸ್ಥಳದಿಂದ ಕೊಂಡೊಯ್ದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿ, ಬೈಕನ್ನು ಮತ್ತೆ ಸ್ಥಳಕ್ಕೆ ಕರೆಸಬೇಕೆಂದು ಗುಂಪೊಂದು ಪಟ್ಟು ಹಿಡಿದ ಪರಿಣಾಮ ಸ್ಥಳದಲ್ಲಿ ತುಸು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬೈಕ್ ಮಾಲಕ ನಬುವಾತ್‌ರವರು ಬೈಕನ್ನು ಮತ್ತೆ  ಘಟನಾ ಸ್ಥಳಕ್ಕೆ ತಂದಿದ್ದು ಪರಿಸ್ಥಿತಿ ತಿಳಿಗೊಂಡಿತು. ಘಟನಾ ಸ್ಥಳದಲ್ಲಿ ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಶೆಟ್ಟಿ, ಸದಸ್ಯ ದಿನೇಶ್, ಸ್ಥಳೀಯ ಪ್ರಮುಖರಾದ ಸುಬ್ರಹ್ಮಣ್ಯ ಗೌಡ ಎರ್ಮಾಳ, ನಿಂಗರಾಜು, ಸಿದ್ದೀಪ್ ಮುಡಿಪಿನಡ್ಕ ಮತ್ತಿತರರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.