Breaking News

ಫಿಲೋಮಿನಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

philominaಪುತ್ತೂರು: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ನಡವಳಿಕೆಯೊಂದಿಗೆ ಭವಿಷ್ಯದ ಗುರಿಯ ಕಡೆ ಹೆಜ್ಜೆಯಿಡಬೇಕು. ಭವಿಷ್ಯದ ಗುರಿಯು ಪ್ರಾಮಾಣಿಕವಾಗಿರುವುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸುಳ್ಯ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರ್ ಎಚ್.ವಿ.ರವರು ಹೇಳಿದರು.

ಅವರು ದ.21 ರಂದು ಸಂತ ಫಿಲೋಮಿನಾ ಕಾಲೇಜ್‌ನ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಕೇಸರಿ ಬಿಳಿ ಹಸಿರು ಬಲೂನನ್ನು ಆಗಸಕ್ಕೆ ಹಾರಿಸಿ ಉದ್ಘಾಟಿಸಿ ಮಾತನಾಡಿದರು. ದೇವರು ಪ್ರತಿಭೆಯನ್ನು ಎಲ್ಲರಿಗೂ ನೀಡಿದ್ದಾನೆ. ಆದರೆ ಪ್ರತಿಭೆಯ ನಿಜವಾದ ಅನಾವರಣವಾಗಬೇಕಾದರೆ ವ್ಯಕ್ತಿಯಲ್ಲಿ ಪ್ರತಿಭೆಯ ಬಗ್ಗೆ ಆಸಕ್ತಿಯಿರಬೇಕು ಮತ್ತು ಅದರ ಬಗ್ಗೆ ಪ್ರೀತಿಯನ್ನು ಹೊಂದಿರಬೇಕು ಎಂದ ಅವರು ಪ್ರೀತಿಯಿಂದ ಯಾವುದೇ ಕೆಲಸ ಮಾಡಿದಾಗ ಶೈಕ್ಷಣಿಕವಾಗಿ, ಭೌದ್ದಿಕವಾಗಿ, ಮಾನಸಿಕವಾಗಿ ಸರ್ವಾಂಗೀಣ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಭೆ ಇದ್ದರೆ ಸಾಲದು, ಇಚ್ಛಾಶಕ್ತಿ ಬೇಕು-ರೋಸ್‌ಮೇರಿ: ಕಾಲೇಜ್‌ನ ಹಿರಿಯ ವಿದ್ಯಾರ್ಥಿನಿ, ಅಂತರ್ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು, ಪ್ರಸ್ತುತ ಕೇರಳ ಸರಕಾರದ ಸಾಮಾನ್ಯ ಆಡಳಿತ ವಿಭಾಗದಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಆಗಿರುವ ರೋಸ್‌ಮೇರಿ ಪ್ರೆಸಿಲ್ಲಾರವರು ಮಾತನಾಡಿ, ಕೇವಲ ಪ್ರತಿಭೆ ಇದ್ದರೆ ಸಾಲದು, ಪ್ರತಿಭೆಯನ್ನು ಬೆಳಗಿಸಲು ಇಚ್ಚಾಶಕ್ತಿಯೂ ಬೇಕಾಗುತ್ತದೆ. ಯುವಶಕ್ತಿಯು ಭ್ರಷ್ಟಾಚಾರದತ್ತ ಮುಖಮಾಡದೆ ಭ್ರಷ್ಟಾಚಾರವನ್ನು ಮಟ್ಟಹಾಕುವ ಮೂಲಕ ದೇಶವನ್ನು ಸುಭಿಕ್ಷೆಯತ್ತ ಕೊಂಡೊಯ್ಯಲು ಮನಸ್ಸು ಮಾಡಬೇಕು ಎಂದು ಹೇಳಿದರು.

ರೋಸ್ ಮೇರಿರವರ ಸಾಧನೆ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು -ವಂ| ಆಲ್ಫ್ರೆಡ್: ಅಧ್ಯಕ್ಷತೆ ವಹಿಸಿದ ಮಾದೆ ದೇವುಸ್ ವಿದ್ಯಾಸಂಸ್ಥೆಯ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ಭಾಗವಹಿಸಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ, ಸಂಸಾರಿಯಾಗಿದ್ದುಕೊಂಡು ಶೈಕ್ಷಣಿಕ ಜೀವನದಲ್ಲಿ ಉನ್ನತ ಸಾಧನೆ ಮಾಡಿದ ರೋಸ್‌ಮೇರಿರವರೇ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಹೇಳಿದರು.

ಉತ್ತಮ ಸಾಧನೆಯೊಂದಿಗೆ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿರಿ- ವಂ| ಡಾ| ಆಂಟನಿ: ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಐತಿಹಾಸಿಕವಾದ ಫಿಲೋಮಿನಾ ಕ್ರೀಡಾಂಗಣದಲ್ಲಿ ಕಠಿಣ ಪರಿಶ್ರಮವನ್ನು ಮಾಡುತ್ತಾ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಸಂಪಾದಿಸಿದ್ದಾರೆ. ಅದರಂತೆ ಮುಂದಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮುತ್ತಾ ಸಂಸ್ಥೆಗೆ ಕೀರ್ತಿ ತರುವಂತಾಗಬೇಕು ಎಂದು ಹೇಳಿದರು.

ಆಕರ್ಷಕ ಪಥಸಂಚಲನ: ಕಾಲೇಜ್‌ನ ಕ್ರೀಡಾ ಕಾರ್ಯದರ್ಶಿ ಶ್ರವಣ್ ಮುತ್ತಣ್ಣರವರ ನೇತೃತ್ವದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾವ್, ಜೊತೆ ಕಾರ್ಯದರ್ಶಿ ಫಾತಿಮತ್ ಶರೀನ್, ಫ್ಲ್ಯಾಗ್ ಬ್ಯಾರರ‍್ಸ್‌ಗಳಾದ ವಿವೇಕ್ ದಯಾ, ಮೋಕ್ಷ ಮುತ್ತಕ್ಕ, ಪೌರ್ಣಮಿ, ದರ್ಶನ್ ದೇವಯ್ಯರವರ ಸಹಕಾರದೊಂದಿಗೆ ಬ್ಯಾಂಡ್ ವಾದ್ಯ ಮುಖ್ಯಸ್ಥ ರುಥರ್ ಲೂವಿಸ್‌ರವರ ತಂಡದ ನೆರವಿನೊಂದಿಗೆ ಕಾಲೇಜ್‌ನ ಬಿಎ, ಬಿಕಾಂ, ಬಿಎಸ್ಸಿ, ಬಿಎಸ್‌ಡಬ್ಲ್ಯೂ, ಬಿಬಿಎಂ, ಬಿಸಿಎ ವಿಭಾಗದ 21 ತಂಡಗಳಿಂದ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ದ್ವಿತೀಯ ಬಿಎಸ್ಸಿ ಪ್ರಥಮ, ಅಂತಿಮ ಬಿಕಾಂ ಬಿ ದ್ವಿತೀಯ, ಅಂತಿಮ ಬಿಎಸ್ಸಿ ತೃತೀಯ ಸ್ಥಾನ ಗಳಿಸಿತು. ಉಳಿದ ತಂಡಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಪಥಸಂಚಲನದ ತೀರ್ಪುಗಾರರಾಗಿ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಐವಿ ಗ್ರೆಟ್ಟಾ ಪಾಸ್, ನರೇಶ್ ಲೋಬೋರವರು ಸಹಕರಿಸಿದರು.

ಕ್ರೀಡಾಜ್ಯೋತಿ ಪ್ರದಕ್ಷಿಣೆ: ಅಂತರ್ರಾಷ್ಟ್ರೀಯ ಈಜುಪಟು ಪ್ರಥಮ ಬಿಕಾಂನ ವೈಷ್ಣವ್ ಹೆಗ್ಡೆರವರ ಮುಂದಾಳತ್ವದಲ್ಲಿ ಕ್ರೀಡಾಜ್ಯೋತಿಯನ್ನು ತಂಡದ ಕ್ರೀಡಾಪಟು ಸದಸ್ಯರಾದ ದೀಕ್ಷಾ ರಮೇಶ್, ಬಿಪಿನ್ ಭೀಮಯ್ಯ, ಸ್ವೀಡಲ್ ಲೋಬೋ, ಮೊಹಮ್ಮದ್ ಮಸೂದ್, ಉತ್ತಪ್ಪ ಕೆ.ಕೆ, ಆಶಿತ್ ಯು.ಚೆಟ್ನಳ್ಳಿ, ಸಾಗರ್ ಎಚ್.ವಿ, ಸಚಿನ್ ಎಂ.ಆರ್, ಆನ್ಸಿ ವಿಯೋನ್ ಲೋಬೋ, ಸಾಯಿಕಿರಣ್, ಮನೀಷಾರವರೊಂದಿಗೆ ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣಿ ಹಾಕಿ ಕ್ರೀಡಾಜ್ಯೋತಿಯನ್ನು ರೋಸ್‌ಮೇರಿರವರಿಗೆ ಹಸ್ತಾಂತರಿಸಿದರು. ರೋಸ್‌ಮೇರಿರವರು ಕ್ರೀಡಾಜ್ಯೋತಿಯನ್ನು ಎತ್ತಿಹಿಡಿದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಕ್ರೀಡಾಜ್ಯೋತಿಯನ್ನು ಬೆಳ್ಳಿಹಬ್ಬದ ಸಭಾಂಗಣದ ಮೇಲೆ ಇರಿಸಲಾದ ಅಗ್ನಿಕುಂಡಲಿಯಲ್ಲಿ ಉರಿಸಲಾಯಿತು.

’ಆಡಿಟಿಂಗ್’ ಪಠ್ಯ ಪುಸ್ತಕ ಬಿಡುಗಡೆ: ಕಾಲೇಜ್‌ನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಮ್ಯಾಕ್ಸಿಂ ಕಾರ್ಲ್‌ರವರು ಬರೆದಿರುವ ‘ಆಡಿಟಿಂಗ್(ಲೆಕ್ಕಪರಿಶೋಧನೆ)’ ಪಠ್ಯ ಪುಸ್ತಕವನ್ನು ವೇದಿಕೆಯಲ್ಲಿನ ಅತಿಥಿಗಣ್ಯರು ಬಿಡುಗಡೆಗೊಳಿಸಿದರು. ಲೇಖಕ ಪ್ರೊ.ಮ್ಯಾಕ್ಸಿಂ ಕಾರ್ಲ್‌ರವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ, ಉಪ ಪ್ರಾಂಶುಪಾಲ ಪ್ರೊ.ವಿಷ್ಣು ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಮ್ಯಲತಾ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಶ್ರವಣ್ ಮುತ್ತಣ್ಣ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ವಿಜೇತರ ಪಟ್ಟಿಯನ್ನು ವಾಚಿಸಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ದೈಹಿಕ ಶಿಕ್ಷಣ ನಿರ್ದೇಶಕಿ ಸೌಮ್ಯಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ.ಸೋಜ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಶ್ರವಣ್ ಮುತ್ತಣ್ಣರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪರ್ಫಾರ್ಮಿಂಗ್ ಆರ್ಟ್ಸ್ ತಂಡ ಪ್ರಾರ್ಥಿಸಿದರು. ಪ್ರೊ.ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.

ತಾನು ಒಬ್ಬಳು ಅಂತರ್ರಾಷ್ಟ್ರೀಯ ಕಬಡ್ಡಿಪಟುವೆಂದು ಗುರುತಿಸಿಕೊಳ್ಳಲು ಹಾಗೂ ತನ್ನ ಕೆರಿಯರ್ ರೂಪಿಸಲು ವೇದಿಕೆ ನಿರ್ಮಿಸಿದ್ದು ಎಂದರೆ ಅದು ಸಂತ ಫಿಲೋಮಿನಾ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇಲ್ಲಿನ ವಾತಾವರಣ, ಕಲಿಕೆಗೆ, ಕ್ರೀಡೆಗೆ ನೀಡುವ ಪ್ರೋತ್ಸಾಹ, ಪ್ರಾಂಶುಪಾಲರ, ದೈಹಿಕ ಶಿಕ್ಷಣ ನಿರ್ದೇಶಕರ, ಶಿಕ್ಷಕ-ಶಿಕ್ಷಕೇತರ ವೃಂದದ ಹಾಗೂ ಕ್ಯಾಂಟೀನ್‌ನ ಆನಂದಣ್ಣನವರ ಪ್ರೋತ್ಸಾಹದಾಯಕ ಮಾತುಗಳು ನನ್ನಲ್ಲಿ ಸಾಧನೆ ಮಾಡಲು ಪ್ರೇರೇಪಿಸಿತು. ಅಸಾಧ್ಯವೆಂಬುದು ಯಾವುದೂ ಇಲ್ಲ. ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮವಿದ್ದರೆ ನೆಟ್ಟ ಗುರಿಯೆಡೆಗೆ ಸಾಗಲು ಕಷ್ಟವಾಗಲಾರದು.

ರೋಸ್‌ಮೇರಿ ಪ್ರೆಸಿಲ್ಲಾ,

ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು

ಅಂತಿಮ ಬಿ.ಕಾಂ ’ಸಿ’ ವಿಭಾಗ ಚಾಂಪಿಯನ್

ವಿವಿಧ ವಿಭಾಗದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಅಂತಿಮ ಬಿ.ಕಾಂ ‘ಸಿ’ ವಿಭಾಗವು ಚಾಂಪಿಯನ್ ಆಗಿದ್ದು, ಪ್ರಥಮ ಬಿಎಸ್ಸಿ ವಿಭಾಗವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ದ್ವಿತೀಯ ಬಿ.ಕಾಂ’ಸಿ’ ವಿಭಾಗವು ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು. ಹುಡುಗರ ವಿಭಾಗದಲ್ಲಿ ಅಂತಿಮ ಬಿ.ಕಾಂ’ಸಿ’ ವಿಭಾಗದ ಶ್ರವಣ್ ಮುತ್ತಣ್ಣ ಹಾಗೂ ದ್ವಿತೀಯ ಬಿಸಿಎ ವಿಭಾಗದ ಸಚಿನ್ ಯು ಮತ್ತು ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಿಎಸ್ಸಿಯ ಪೂರ್ಣಿಮಾ ಎ.ಆರ್ ಹಾಗೂ ದ್ವಿತೀಯ ಬಿಎಸ್‌ಡಬ್ಲ್ಯೂ ವಿಭಾಗದ ನಿಶಾ ಪಿ.ಜೆರವರು ಜಂಟಿಯಾಗಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

ಸಿಬ್ಬಂದಿಗಳ ಫಲಿತಾಂಶ

ಉಪನ್ಯಾಸಕರಿಗೆ ಹಾಗೂ ಆಡಳಿತ ಸಿಬ್ಬಂದಿಗಳಿಗೆ ನಡೆದ 100 ಮೀ ಓಟದಲ್ಲಿ ಉಪನ್ಯಾಸಕರಾದ ಮಧುಸೂದನ್ ಪ್ರಥಮ, ವಿಲ್ಸನ್ ದ್ವಿತೀಯ, ನೀಲೇಶ್ ತೃತೀಯ ಸ್ಥಾನವನ್ನು, 50ಮೀ ಮಹಿಳೆಯರ ಓಟದಲ್ಲಿ ಉಪನ್ಯಾಸಕಿಯರಾದ ಚೈತ್ರ ಪ್ರಥಮ, ನ್ಯಾನ್ಸಿ ಲವೀನಾ ಪಿಂಟೋ ದ್ವಿತೀಯ, ಜೆಸ್ಲಿನ್ ಡಿ’ಕುನ್ಹಾ ತೃತೀಯ ಸ್ಥಾನವನ್ನು, ಮಹಿಳೆಯರ ವಿಭಾಗದ ಶಾಟ್‌ಪುಟ್‌ನಲ್ಲಿ ರಾಜೇಶ್ವರಿ ಪ್ರಥಮ, ಭಾರತಿ ಎಸ್.ರೈ ದ್ವಿತೀಯ, ಹರ್ಷಿತಾ ತೃತೀಯ ಸ್ಥಾನವನ್ನು, ಪುರುಷರ ವಿಭಾಗದಲ್ಲಿ ಕೀರ್ತನ್ ಪ್ರಥಮ, ತೇಜಸ್ವಿ ಭಟ್ ದ್ವಿತೀಯ, ಧನ್ಯ ತೃತೀಯ ಸ್ಥಾನವನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.