Breaking News

ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ ’ಸಂಭ್ರಮ ರಶ್ಮಿ’

Puttur_Advt_NewsUnder_1
Puttur_Advt_NewsUnder_1

vidyarashmi

* ಸಂಸ್ಥೆಯ ಆಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿ -ಸೀತಾರಾಮ ರೈ

* ಸೀತಾರಾಮ ರೈರವರಿಂದ ಸಮಾಜಕ್ಕೆ ಕೊಡುಗೆ – ಮೆನನ್

* ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ- ಕೆ.ಸಿ.ನಾಕ್

* ಕಠಿಣ ಪರಿಶ್ರಮ ಅಗತ್ಯ-ರಿಷ್ಯಂತ್

* ವಿದ್ಯೆ ಕಲಿಯಲು ಸ್ಪೂರ್ತಿಯ ತಾಣ- ರೇವಣಸಿದ್ದ ಮಹಾರಾಜ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ ’ಸಂಭ್ರಮ ರಶ್ಮಿ’ ದ.೨೪ರಂದು ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ನಮ್ಮ ಸಂಸ್ಥೆಯ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಯೂ ಆಗಬೇಕು ಎಂಬ ಆಶಯ ನಮ್ಮದಾಗಿದೆ ಎಂದರು. ನನ್ನ ತಂದೆ ಶೀಂಟೂರು ನಾರಾಯಣ ರೈರವರ ಆಶಯದಂತೆ ಸವಣೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿzನೆ,೨೦೦೧ ರಲ್ಲಿ ಸ್ಥಾಪನೆಯಾದ ವಿದ್ಯಾರಶ್ಮಿ ಸಂಸ್ಥೆಗೆ ಇದೀಗ ೧೬ ನೇ ವರ್ಷದ ಸಂಭ್ರಮ, ರಾಜ್ಯದ ನಾನಾ ಜಿಲ್ಲೆಗಳಿಂದ ವಿದ್ಯಾಭ್ಯಾಸ ಪಡೆಯಲು ಸವಣೂರಿನ ಈ ಸುಂದರ ಪ್ರದೇಶಕ್ಕೆ ಬರುತ್ತಿರುವುದು ತುಂಬಾ ಸಂತೋಷ ತಂದಿದೆ, ಇಲ್ಲಿ ಉತ್ತಮವಾದ ಶಿಕ್ಷಣ,  ವ್ಯವಸ್ಥಿತವಾದ ಹಾಸ್ಟೆಲ್ ವ್ಯವಸ್ಥೆ ಇದೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಲಿದ್ದು,ಶಿಕ್ಷಣ ಪ್ರೇಮಿಗಳ ಸಹಕಾರ ಅಗತ್ಯ ಎಂದರು.

ಸೀತಾರಾಮ ರೈರವರಿಂದ ಸಮಾಜಕ್ಕೆ ಕೊಡುಗೆ- ಮೆನನ್: 

ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಯೇನಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಶ್ರೀಕುಮಾರ್ ಮೆನನ್ ಮಾತನಾಡಿ ಇಂದು ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮೂಡಿಸಿಕೊಂಡು ಸಮಾಜದಲ್ಲಿನ ಬೇಡಿಕೆಗಳಿಗನುಗುಣವಾಗಿ ಜ್ಞಾನವನ್ನು ಹೊಂದಬೇಕು, ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ವಿದ್ಯಾಕೇಂದ್ರವನ್ನು ಸ್ಥಾಪಿಸಿದ ಸವಣೂರು ಸೀತಾರಾಮ ರೈರವರಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ ದೊರೆತಿದೆ ಎಂದರು.

ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ- ಕೆ.ಸಿ.ನೈಕ್:

ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಮಹಾಬಲೇಶ್ವರ ಪ್ರೊಮೋಟರ್ಸ್ ಮತ್ತು ಬಿಲ್ಡರ್ಸ್ ಸಂಸ್ಥೆಯ ಮಾಲಕ ಕೆ.ಸಿ. ನೈಕ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿಯೇ  ಅತ್ಯುತ್ತಮವಾದ ವಿದ್ಯಾಸಂಸ್ಥೆಯಾಗಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ  ವಿದ್ಯೆಪಡೆಯುವ ಸದವಕಾಶ  ವಿದ್ಯಾರ್ಥಿಗಳಿಗೆ ದೊರೆತಿದೆ. ಇದನ್ನು ಸದುಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

ಕಠಿಣ ಪರಿಶ್ರಮ ಅಗತ್ಯ-ರಿಷ್ಯಂತ್: ಪುತ್ತೂರಿನ ಎಎಸ್ಪಿ ರಿಷ್ಯಂತ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿಯೇ ಕಠಿಣ ಪರಿಶ್ರಮ ವಹಿಸಿದರೆ ಭವಿಷ್ಯ ಭದ್ರವಾಗಿರುತ್ತದೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಾಧನೆಯನ್ನು ಗಮನಿಸಿದಾಗ, ಈ ಸಂಸ್ಥೆಯು ಸಮಾಜದಲ್ಲಿ ಕೀರ್ತಿಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರಶ್ಮಿ ಸಮ್ಮಾನ: ವಿಶೇಷ ಅತಿಥಿಯಾಗಿದ್ದು ವಿದ್ಯಾರಶ್ಮಿ ಸಮ್ಮಾನ ಪಡೆದ ಬಿಜಾಪುರದ ಇಂಡಿ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಧರ್ಮದರ್ಶಿ ಶ್ರೀ ರೇವಣಸಿದ್ದ ಮಹಾರಾಜರು ಮಾತನಾಡಿ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸವಣೂರು  ಸೀತಾರಾಮ ರೈಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಬಿಜಾಪುರ ಜಿಲ್ಲೆಯಿಂದಲೂ ಇಲ್ಲಿಗೆ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮ ಶಿಕ್ಷಣ ನೀಡುವ, ಸುಂದರವಾದ ಗ್ರಾಮೀಣ ಪ್ರದೇಶವಾಗಿರುವ ಸವಣೂರಿನ ವಿದ್ಯಾರಶ್ಮಿಯಲ್ಲಿ  ವಿದ್ಯೆ ಕಲಿಯಲು ಸ್ಪೂರ್ತಿಯ ತಾಣವಾಗಿದೆ ಎಂದು ಹೇಳಿ, ಸಂಸ್ಥೆಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿರವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದೇ ಸಂಸ್ಥೆಯ ಆಶಯವಾಗಿದ್ದು, ಸಂಸ್ಥೆಯ ಅಭಿವೃದ್ಧಿಯಲ್ಲಿ ಪೋಷಕರ ಸಹಕಾರ ಅಗತ್ಯ ಎಂದರು.

 ಪ್ರಾಂಶುಪಾಲ ಸೀತಾರಾಮ ಕೇವಳ ವರದಿ ವಾಚಿಸಿದರು. ವಿವಿಧ ದತ್ತಿನಿಧಿಗಳ ಬಹುಮಾನ ಮೊತ್ತವಾದ ಸುಮಾರು ೬೮೦೦೦ ರೂಪಾಯಿಗಳನ್ನು ವಿತರಿಸಲಾಯಿತು.

 ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಮಡಿಕೇರಿಯ ವಿಶಾಖ್ ಪೈ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ನಿರ್ದೇಶಕರಾದ ಸವಣೂರು ಎನ್. ಸುಂದರ ರೈ, ಡಾ. ರಾಜೇಶ್ ಎಸ್. ರೈ ಸವಣೂರು, ವಾದಿರಾಜ ಪೆಜತ್ತಾಯ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪ್ರಸನ್ನ ರೈ, ಬೋಧಕ ವರ್ಗದ ದರ್ಶನ್, ಧನ್ಯಾ, ಶ್ರೀಲೇಖಾ ಶೆಟ್ಟಿ ಮತ್ತು ರಮ್ಯಾ ವಿ. ವಿವಿಧ ಕಾರ್ಯಗಳಲ್ಲಿ ಸಹಕರಿಸಿ ವಿದ್ಯಾರ್ಥಿ ನಾಯಕ ಅಹ್ಮದ್ ಇರ್ಫಾನ್ ವಂದಿಸಿದರು. ವಿದ್ಯಾರ್ಥಿಗಳಾದ ಅಂಜಲಿ ಮತ್ತು ಸೃಜನ್ ಕಶ್ಯಪ್ ಕಾರ‍್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಎಸ್‌ಎನ್ ಆರ್ ರೂರಲ್ ಎಜ್ಯುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ರಶ್ಮಿ ಆಶ್ವಿನ್ ಶೆಟ್ಟಿ, ಕಸ್ತೂರಿಕಲಾ ಎಸ್ ರೈ ಸವಣೂರು ಉಪಸ್ಥಿತರಿದ್ದರು

ಕಾರ‍್ಯಕ್ರಮದ ಹೈಲೈಟ್ಸ್: ಸುಮಾರು ನಾಲ್ಕು ಗಂಟೆಗಳ ಕಾಲ ಉತ್ತರ ಭಾರತದ ಮಾದರಿ ಮತ್ತು ತುಳು ಸೇರಿದಂತೆ ವಿಶಿಷ್ಟ ಮನರಂಜನಾ ಕಾರ್ಯಕ್ರಮಗಳು ಮೂಡಿಬಂದವು. ಸಭಾ ಕಾರ‍್ಯಕ್ರಮದ ಮುನ್ನ ಶೀಂಟೂರು ನಾರಾಯಣ ರೈ ಪ್ರತಿಮೆಗೆ ಇಂಡಿ ಶ್ರೀ ಕ್ಷೇತ್ರ ಇಂಚಗೇರಿ ಮಠದ ಧರ್ಮದರ್ಶಿ ಶ್ರೀ ರೇವಣಸಿದ್ದ ಮಹಾರಾಜರವರು ಹಾರಾರ್ಪಣೆಗೈದರು. ಸಭಾಕಾರ‍್ಯಕ್ರಮದ ಬಳಿಕ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವಿದ್ಯಾರಶ್ಮಿ ವಿದ್ಯಾಲಯದ ಹಾಸ್ಟೆಲ್‌ನಲ್ಲಿ ಮಾಡಲಾಗಿತ್ತು. ಸಂಜೆ ನಿಗದಿತ ಸಮಯಕ್ಕೆ ಆರಂಭವಾದ ಕಾರ‍್ಯಕ್ರಮ ರಾತ್ರಿ ೧೧.೩೦ರವರೆಗೆ ನಡೆಯಿತು. ಕಾರ‍್ಯಕ್ರಮದಲ್ಲಿ ೩ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸವಣೂರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಮನವಿ

 ಸವಣೂರು ಮತ್ತು ಸುತ್ತಮುತ್ತಲ ಊರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ೫ ಕೋಟಿ ರೂಪಾಯಿಯ ಅವಶ್ಯಕತೆ ಇದ್ದು, ಇದನ್ನು  ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರ ಮೂಲಕ ಮಾಡಿಕೊಡುವಂತೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಧರ್ಮದರ್ಶಿ ಶ್ರೀ ರೇವಣಸಿದ್ದ ಮಹಾರಾಜರವರಿಗೆ ಮನವಿಯನ್ನು ನೀಡಿ, ಸವಣೂರು ವಿದ್ಯಾರಶ್ಮಿ  ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈರವರು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ರೇವಣಸಿದ್ದ ಮಹಾರಾಜರವರು ಸಚಿವರಿಗೆ ಈ ಮನವಿಯನ್ನು ತಲುಪಿಸಿ ಈ ವ್ಯವಸ್ಥೆಗೆ ಸಹಕರಿಸುವುದಾಗಿ ಆಶ್ವಾಸನೆಯಿತ್ತರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.