ಪುತ್ತೂರು: ಕೆದಂಬಾಡಿ ಶ್ರೀಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ 25ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ.28ರಂದು ಪ್ರಾರಂಭಗೊಂಡು ಜ.1ರ ತನಕ ನಡೆಯಲಿದೆ.
ದ.28ರಂದು ರಾತ್ರಿ ಪ್ರತಿಷ್ಠಾ ಮಂಗಳೋತ್ಸವದ ಉದ್ಘಾಟನೆ ನಡೆಯಲಿದ್ದು, ಕೆಯ್ಯೂರು ಶ್ರೀ ಮಹಿಷಮರ್ದಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ತೇಜಸ್ವಿನಿ ಮಂಜೇಶ್ವರ ಇವರಿಂದ ನೃತ್ಯದಲ್ಲಿ ಜಾದೂ ಕಾರ್ಯಕ್ರಮ ನಡೆಯಲಿದೆ. ದ.29ರಂದು ರಾತ್ರಿ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಸುಳ್ಯ ಸುದ್ದಿ ಚಾನೆಲ್ ನಿರ್ದೇಶಕ ದುರ್ಗಾಕುಮಾರ್ ನಾಯರ್ ಕೆರೆ ಅವರು ‘ಧಾರ್ಮಿಕ ಆಚರಣೆ- ಸಾಮಾಜಿಕ ಪ್ರಜ್ಞೆ’ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ದ.30ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಜತ ಸಂಭ್ರಮ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಕಾರ್ಯಾಧ್ಯಕ್ಷ ಬಂಗಾರಡ್ಕ ಮುರಳೀಧರ ಭಟ್, ಪಂಜ ಗ್ರಾ.ಪಂ.ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗ್ಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ಅನ್ನಸಂತರ್ಪಣೆ, ರಾತ್ರಿ ಮುಂಡಾಳಗುತ್ತು ಡಾ. ತಿಮ್ಮಪ್ಪ ರೈ ಬೆಂಗಳೂರು ಇವರಿಂದ ಭಜನೆ ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಕಟೀಲು ಮೇಳದವರಿಂದ ‘ಸಹಸ್ರ ಕವಚ ಮೋಕ್ಷ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.