ಗೋಳಿತ್ತಡಿ-ದೇವರಗುಡ್ಡೆ ರಸ್ತೆಗೆ ಹಾನಿ-ದೂರು

Puttur_Advt_NewsUnder_1
Puttur_Advt_NewsUnder_1

golithadyರಾಮಕುಂಜ: ನೀರಿನ ಪೈಪು ಅಳವಡಿಸಲು ಹೊಸದಾಗಿ ಡಾಮರೀಕರಣಗೊಂಡ ರಾಮಕುಂಜ ಗ್ರಾಮದ ಗೋಳಿತ್ತಡಿ-ದೇವರಗುಡ್ಡೆ ರಸ್ತೆ ಹಾನಿಗೊಳಿಸಿರುವುದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಗ್ರಾ.ಪಂ.ಗೆ ದೂರು ಸಲ್ಲಿಸಿದ್ದಾರೆ.

ಗೋಳಿತ್ತಡಿಯಿಂದ ದೇವರಗುಡ್ಡೆ ರಸ್ತೆ ಡಾಮರೀಕರಣಗೊಳಿಸಬೇಕೆಂದು ಕಳೆದ ಹಲವು ವರ್ಷಗಳಿಂದ ಈ ಪ್ರದೇಶದ ಸಾರ್ವಜನಿಕರ ಆಗ್ರಹವಿತ್ತು. ನಬಾರ್ಡ್ ಯೋಜನೆಯಡಿ ಬಿಡುಗಡೆಗೊಂಡ ಅನುದಾನದಿಂದ ತಿಂಗಳ ಹಿಂದೆ ಸದ್ರಿ ರಸ್ತೆ ಡಾಮರೀಕರಣ ಕಾಮಗಾರಿ ನಡೆದಿತ್ತು. ಈ ಮೂಲಕ ರಸ್ತೆ ಡಾಮರೀಕರಣಗೊಳ್ಳಬೇಕೆಂಬ ಜನರ ಬೇಡಿಕೆ ಕೊನೆಗೂ ಈಡೇರಿತು ಎಂದು ಈ ಪ್ರದೇಶದ ಜನರು ಸಂತಸಗೊಂಡಿದ್ದರು. ಆದರೆ ಡಾಮರೀಕರಣಗೊಂಡು ಉತ್ತಮ ರಸ್ತೆ ನಿರ್ಮಾಣಗೊಂಡು ಕೆಲವೇ ದಿನ ಕಳೆಯುತ್ತಿದ್ದಂತೆ ಸದ್ರಿ ರಸ್ತೆಯ ಶಾರದಾನಗರ ಎಂಬಲ್ಲಿ ಸ್ಥಳೀಯ ನಿವಾಸಿಯೋರ್ವರು ನೀರಿನ ಪೈಪು ಹಾಕಲು ರಾತ್ರಿ ಬೆಳಗಾಗುವುದರೊಳಗೆ ಯಾರಿಗೂ ತಿಳಿಯದಂತೆ ರಸ್ತೆ ಅಗೆದು ಪೈಪು ಹಾಕಿದ್ದಾರೆ. ಇದರಿಂದಾಗಿ ಇಲ್ಲಿ ಡಾಮರು ಎದ್ದುಹೋಗಿ ಗುಂಡಿ ನಿರ್ಮಾಣಗೊಂಡಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ರಿ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮರು ಡಾಮರೀಕರಣವೂ ಮಾಡಲಾಗಿತ್ತು.  ಈ ವಿಚಾರ ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆಯಲ್ಲೂ ಚರ್ಚೆಗೆ ಬಂದಿದೆ. ಸಭೆ ಬಳಿಕ ವಾರ್ಡ್ ಸದಸ್ಯರ ಜೊತೆ ಪಿಡಿಓ ರವಿಚಂದ್ರರವರು ಸ್ಥಳ ಪರಿಶೀಲನೆ ನಡೆಸಿದ್ದು, ರಸ್ತೆ ಅಗೆದಿರುವುದು ಕಂಡುಬಂದಿದೆ. ರಸ್ತೆ ತುಂಡರಿಸಿದವರನ್ನು ಸ್ಥಳಕ್ಕೆ ಕರೆಸಿದ ಪಿಡಿಓರವರು ಹಾನಿಗೊಂಡಿರುವ ಭಾಗದಲ್ಲಿ ಕಾಂಕ್ರೀಟ್ ಹಾಕಿ ಸರಿಪಡಿಸಿಕೊಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ

ಏಕಾಏಕಿ ಯಾರಿಗೂ ತಿಳಿಯದಂತೆ ಪೈಪು ಅಳವಡಿಸಲು ರಸ್ತೆ ಅಗೆಯಲಾಗಿದೆ. ಇದರಿಂದ ಡಾಮರು ಎದ್ದುಹೋಗಿ ರಸ್ತೆ ಹಾಳಾಗಿದೆ. ರಸ್ತೆ ಅಗೆದು ಪೈಪು ಹಾಕುತ್ತೇವೆ ಎಂದು ಗ್ರಾಮ ಪಂಚಾಯತ್‌ಗೆ ಅಥವಾ ಸಂಬಂಧಪಟ್ಟವರಿಗೆ ಯಾರೂ ತಿಳಿಸಿಲ್ಲ. ಈ ರಸ್ತೆಯಲ್ಲಿ ದಿನಂಪ್ರತಿ ಹಲವು ವಾಹನಗಳು ಓಡಾಡುತ್ತವೆ. ರಸ್ತೆ ಅಗೆದು ಹಾನಿಗೊಳಿಸಿರುವುದು ಬೇಸರ ತಂದಿದೆ.

-ರವಿ ಕೆದಿಲಾಯ, ಸದಸ್ಯರು ಗ್ರಾ.ಪಂ.ರಾಮಕುಂಜ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.