Breaking News

ಧರ್ಮ ಜಾಗೃತಿಗಾಗಿ ಗ್ರಾಮ ಭೇಟಿ ಎಲ್ಲಾ ಸಮುದಾಯದವರು ಒಂದಾದಾಗ ಧರ್ಮದ ಉಳಿವು- ಡಾ|ನಿರ್ಮಲಾನಂದನಾಥ ಸ್ವಾಮೀಜಿ

Puttur_Advt_NewsUnder_1
Puttur_Advt_NewsUnder_1

dharma8 dharma dharma1 dharma2 dharma3 dharma4 dharma5 dharma6 dharma7* ಗ್ರಾಮ ಭೇಟಿ ಸಮುದಾಯದ ನಡುವೆ ಶಕ್ತಿ ಪ್ರದರ್ಶನಕ್ಕಲ್ಲ-ಡಿ.ವಿ. ಸದಾನಂದ ಗೌಡ

* ಕ್ಷೇತ್ರದ ಜನತೆಗೆ ಸ್ವಾಮೀಜಿಯವರ ಆಶೀರ್ವಾದ ಇರಲಿ-ಶಕುಂತಳಾ ಶೆಟ್ಟಿ

* ಸಾಮರಸ್ಯಕ್ಕಾಗಿ ಎಲ್ಲಾ ಸಮುದಾಯ ಒಟ್ಟಾಗಬೇಕಿದೆ-ಎನ್.ಕೆ ಜಗನ್ನಿವಾಸ ರಾವ್

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಯುವ ಒಕ್ಕಲಿಗ ಗೌಡ ಸೇವಾ ಸಂಘ, ಗೌಡ ಮಹಿಳಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ ಆಶ್ರಯದಲ್ಲಿ ಧರ್ಮ ಜಾಗೃತಿಗಾಗಿ ನಡೆಯುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನದ 72ನೇ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಗ್ರಾಮ ಭೇಟಿ ಕಾರ್ಯಕ್ರಮಕ್ಕೆ ದ.26ರಂದು ಬೆಳಿಗ್ಗೆ ಚಾಲನೆ ಸಿಕ್ಕಿದೆ.ಸಂಜೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಧರ್ಮ ಜಾಗೃತಿ ಸಭೆ ನಡೆಯಿತು. ವಿವಿಧ ಜಾತಿ ಸಂಘಟನೆಗಳನ್ನು ಒಟ್ಟು ಸೇರಿಸಿ, ಅದರ ಅಧ್ಯಕ್ಷರನ್ನು ವೇದಿಕೆಗೆ ಆಹ್ವಾನಿಸಿ ಅವರಿಗೆ ಸ್ವಾಮೀಜಿಯವರು ವಿಶೇಷ ಗೌರವ ನೀಡಿದರು.

ಎಲ್ಲಾ ಸಮುದಾಯದವರು ಒಂದಾದಾಗ ಧರ್ಮದ ಉಳಿವು:  ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಭಾರತದಲ್ಲಿ ದೇವಸ್ಥಾನದ ಒಳಗೆ ಮಾತ್ರ ಧರ್ಮ ಇರುವುದಲ್ಲ. ಹೆಜ್ಜೆ ಹೆಜ್ಜೆ, ಕಣ ಕಣದಲ್ಲೂ ಧರ್ಮ ಅಡಗಿದೆ. ಆಧುನಿಕ ಯುಗದಲ್ಲಿ ರಾಜಕೀಯ ಕನ್ನಡಕ ಹಿಡಿದು ಧರ್ಮ ನೋಡುವುದು ಸರಿಯಲ್ಲ. ಧರ್ಮದ ನಿಜವಾದ ಅರ್ಥ ಸಿಗಬೇಕಾದರೆ ಎಲ್ಲಾ ಸಮುದಾಯವರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.  ಮನುಷ್ಯನಿಗೆ ಆಮ್ಲಜನಕ ಇಲ್ಲದೆ ಬದುಕಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಧರ್ಮವಿಲ್ಲದೆ ಮನುಷ್ಯ ಬದುಕಲಾರ ಎಂದ ಅವರು  ಧರ್ಮವನ್ನು ಜಾತಿಯಲ್ಲಿ ಕಾಣದೆ ಧರ್ಮದ ನಡುವಿನ ಕಿತ್ತಾಟವನ್ನು ನಿಲ್ಲಿಸಬೇಕು. ತನ್ನ ಧರ್ಮದ ಬಗ್ಗೆ ಯಾರಿಗೆ ಆಳವಾದ ಜ್ಞಾನವಿಲ್ಲವೋ ಅವರು ತಮ್ಮ ಧರ್ಮವನ್ನು ಪ್ರೀತಿಸುವುದು ಬಿಟ್ಟು ಇನ್ನೊಂದು ಧರ್ಮದ ಕಿತ್ತಾಟಕ್ಕೆ ಹೋಗುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಭವಿಷ್ಯವಿರುವ ಮಕ್ಕಳಲ್ಲಿ ಧರ್ಮ ಜ್ಞಾನವನ್ನು ಬೆಳೆಸುವ ಕೆಲಸ ಆಗಬೇಕು ಎಂದರು.

ಗ್ರಾಮ ಭೇಟಿ ಸಮುದಾಯದ ನಡುವೆ ಶಕ್ತಿ ಪ್ರದರ್ಶನಕ್ಕಲ್ಲ:  ಕೇಂದ್ರ ಸಚಿವರಾದ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಅಧ್ಯಕ್ಷತೆ ವಹಿಸಿ ಮಾತನಾಡಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ಭೇಟಿ ಸಮಾಜದಲ್ಲಿ ಎಲ್ಲಾ ಸಮುದಾಯದವರನ್ನು ಒಟ್ಟುಸೇರಿಸಿಕೊಂಡು ಧರ್ಮಜಾಗೃತಿಯನ್ನು ಮೂಡಿಸುವ ಒಳ್ಳೆಯ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಇದು ಸಮುದಾಯದ ನಡುವಿನ ಶಕ್ತಿ ಪ್ರದರ್ಶನಕ್ಕಲ್ಲ ಎಂದರು. ಒಕ್ಕಲಿಗ ಸಮುದಾಯ ಸಮಾಜದ ಮನೋಸ್ಥಿತಿ ಇಲ್ಲದೇ, ಸ್ಪಷ್ಟವಾದ ಮಾರ್ಗದರ್ಶನ ಇಲ್ಲದಾಗ 1979ರ ಸಂದರ್ಭದಲ್ಲಿ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ನಮ್ಮ ಜಿಲ್ಲೆಗೆ ಭೇಟಿ ನೀಡಿ ಈ ಭಾಗದ ಒಕ್ಕಲಿಗ ಸಮುದಾಯಕ್ಕೆ ಹೊಸ ದಿಕ್ಕನ್ನು ತೋರಿಸಿಕೊಟ್ಟಿದ್ದರು, ಕೇವಲ ಕೃಷಿ ಚಟುವಟಿಕೆಯಲ್ಲಿ ಮಾತ್ರ ತೊಡಗಿಸಿಕೊಂಡಿದ್ದ ಸಮುದಾಯವು ಬಳಿಕ ವ್ಯಾವಹಾರಿಕ ಕ್ಷೇತ್ರದಲ್ಲೂ ತನ್ನ ಸಾಧನೆಯನ್ನು ಮಾಡಿ ತೋರಿಸಿತು. ಇಂದು ಮತ್ತೊಮ್ಮೆ ಅವರ ಮಾರ್ಗದರ್ಶನದಂತೆ ಕ್ಷೇತ್ರದ 72ನೇ ಪೀಠಾಧ್ಯಕ್ಷರು ಗ್ರಾಮ ಭೇಟಿ ಮಾಡುವ ಮೂಲಕ ಏಕತೆಯನ್ನು ಸೃಷ್ಟಿಸುವ ಯಜ್ಞ ಕೈಗೊಂಡಿದ್ದಾರೆ. ಇದು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕ್ಷೇತ್ರದ ಜನತೆಗೆ ಸ್ವಾಮೀಜಿಯವರ ಆಶೀರ್ವಾದ ಇರಲಿ:  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು. ಬಳಿಕ ಅವರು ಮಾತನಾಡಿ ಆದಿಚುಂಚನಗಿರಿಯ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಧರ್ಮಜಾಗೃತಿಗಾಗಿ ನಡೆಸುತ್ತಿರುವ ಗ್ರಾಮಭೇಟಿಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸ್ವಾಮೀಜಿಯವರ ಅನುಗ್ರಹ, ಆಶೀರ್ವಾದ ಲಭಿಸಲಿ, ಆರೋಗ್ಯಪೂರ್ಣ ಸಮಾಜಕ್ಕೆ ಧರ್ಮಜಾಗೃತಿ ಸಭೆಯು ಪೂರಕವಾಗಲಿ ಎಂದು ಹೇಳಿ ಈ ನನ್ನ ಕ್ಷೇತ್ರಕ್ಕೆ ಜನ ನನ್ನಿಂದ ಏನು ಅಪೇಕ್ಷೆ ಪಡುತ್ತಾರೋ ಅದು ತನ್ಮೂಲಕ ಸಂದಾಯ ಮಾಡುವಂತ ಅನುಗ್ರಹ ನಮಗೆಲ್ಲ ಸಿಗಲಿ ಎಂದರು.

ಸಾಮರಸ್ಯಕ್ಕಾಗಿ ಎಲ್ಲಾ ಸಮುದಾಯ ಒಟ್ಟಾಗಬೇಕಾಗಿದೆ:  ವೇದಿಕೆಯಲ್ಲಿದ್ದ ಎಲ್ಲಾ ಸಮುದಾಯಗಳ ಪರವಾಗಿ ಆದಿ ದ್ರಾವಿಡ ಬ್ರಾಹ್ಮಣರ ಸಂಘದ ಅಧ್ಯಕ್ಷ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರೂ ಆಗಿರುವ ಎನ್.ಕೆ.ಜಗನ್ನಿವಾಸ್ ರಾವ್‌ರವರು ಮಾತನಾಡಿ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಎಲ್ಲರು ಒಟ್ಟು ಸೇರಬೇಕು. ಧರ್ಮ ಜಾಗೃತಿ ಪ್ರತಿ ಮನೆಯಿಂದ ಬೆಳಗಿದಾಗ ಸಂಸ್ಕಾರಯುತವಾಗಿ ಬೆಳೆಯತ್ತದೆ ಎಂದರು. ಈ ಹಿಂದೆ ಆದಿಚುಂಚನಗಿರಿ ಬಾಲಗಂಗಾಧರನಾಥ ಮಹಾಸ್ವಾಮಿಗಳು ಇರುವ ಸಮಯದಲ್ಲಿ ಪುತ್ತೂರಿನ ನ್ಯಾಯವಾದಿ ದಿ.ಶಿವರಾಮ ಗೌಡರ ಜೊತೆ ಅನೇಕ ಬಾರಿ ಆದಿಚುಂಚನಗಿರಿಗೆ ಹೋಗಿದ್ದೆ. ಈ ನಿಟ್ಟಿನಲ್ಲಿ ಅಲ್ಲಿನ ಎಲ್ಲಾ ವಿಚಾರಗಳ ಕುರಿತು ಅರಿತು ಕೊಂಡಿದ್ದೇನೆ ಎಂದ ಅವರು ಮುಂದೆ ಧರ್ಮ ಜಾಗೃತಿ ವಿಷಯದಲ್ಲಿ ನಾವೆಂದಿಗೂ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು.

ಬಾಲಪ್ರತಿಭೆಗೆ ಗೌರವ: ಝೀ ಕನ್ನಡ ಚಾನೆಲ್‌ನಲ್ಲಿ ಡ್ರಾಮಾ ಜ್ಯೂನಿಯರ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಸುಳ್ಯದ ವಿಜಯ, ರೂಪಾ ದಂಪತಿ ಪುತ್ರ ರೂಪೇಶ್‌ರವರನ್ನು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಗೌರವಿಸಿದರು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ತಾ.ಪಂ ಅಧ್ಯಕ್ಷೆ ಭವಾನಿಚಿದಾನಂದ್, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಜಿ.ಎಸ್.ಬಿ. ಸಮಾಜದ ಅಧ್ಯಕ್ಷ ಅಚ್ಯುತ ಪ್ರಭು, ಪರಿವಾರ ಬಂಟರ ಸಂಘದ ಪದಾಧಿಕಾರಿ, ಜೈನ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಗಡೆ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಜಗದೀಶ್ ಎಸ್.ಎನ್, ಮಡಿವಾಳ ಸಂಘದ ಅಧ್ಯಕ್ಷ ಸುಭಾಶ್ಚಂದ್ರ, ಸವಿತಾ ಸಮಾಜದ ಅಧ್ಯಕ್ಷ ಕೇಶವ ಭಂಡಾರಿ, ಕುಲಾಲರ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ, ಶಿವಳ್ಳಿ ಸಂಪದ ಅಧ್ಯಕ್ಷ ರಂಗನಾಥ್ ರಾವ್, ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಮೋಹನ್ ರಾವ್, ಹವ್ಯಕ ಸಂಘದ ಅಧ್ಯಕ್ಷ ವಿದ್ಯಾಗೌರಿ, ಹೆಗ್ಡೆ ಸಮಾಜದ ಅಧ್ಯಕ್ಷ ಗಣೇಶ್ ಹೆಗ್ಡೆ, ಮರಾಠಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಮುಗೇರ ಸಂಘದ ಅಧ್ಯಕ್ಷ ಡಾ. ಬಿ.ರಘು, ನಲಿಕೆ ಸಮಾಜದ ಸೇವಾ ಸಂಘದ ಅಧ್ಯಕ್ಷ ನಾರಾಯಣ ಸೇಡಿಯಾಪು, ಶಾರದಾಂಬ ಸಮಾಜ ಸೇವಾ ಸಂಘದ ಕೇಶವ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಸ್ವಾಮೀಜಿಯವರಿಗೆ ಹಾರಾರ್ಪಣೆ ಮಾಡಿದರು. ಯುವ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿ ರಾಧಾಕೃಷ್ಣ ನಂದಿಲ, ಮಹಿಳಾ ಸಂಘದ ಅಧ್ಯಕ್ಷೆ ಗೌರಿ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಸಿಂಚನಾ ಡಿ.ಗೌಡ ಮತ್ತು ಕು. ಪರ್ಣಿಕಾ ಪ್ರಾರ್ಥಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರವಿ ಮುಂಗ್ಲಿಮನೆ ವಂದಿಸಿದರು. ದಾಮೋದರ್ ನಂದಿಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯ ಕೆಳಗೆ ಬಲ ಭಾಗದಲ್ಲಿ ಸ್ವಾಮೀಜಿಯವರು ಸಾರ್ವಜನಿಕರಿಗೆ ಮಂತ್ರಾಕ್ಷತೆ ವಿತರಿಸಿದರು. ವೇದಿಕೆಯಲ್ಲಿ ನೆಲ್ಯಾಡಿ ನಕ್ಷತ್ರ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತ್ತು. ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ವೇದಿಕೆಯ ಮುಂಭಾಗದಲ್ಲಿ ಬಲ್ನಾಡು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಭಾಕಾರ್ಯಕ್ರಮ ಮುಗಿದ ಬಳಿಕ ಸಭಾಭವನದ ಕೆಳ ಅಂತಸ್ತಿನಲ್ಲಿ ಸಾರ್ವಜನಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನದಲ್ಲಿ ಉಪ್ಪಿನ ಕಾಯಿ, ತೊಂಡೆಕಾಯಿ, ಗೇರು ಬೀಜ ಪಲ್ಯ, ಕಡ್ಲೆ ಗಸಿ, ಬೆಳ್ತಿಗೆ ಅನ್ನ, ರಸಂ, ಸಾಂಬಾರು, ಕ್ಯಾರೆಟ್ ಪಾಯಸ, ಹೋಳಿಗೆ, ಮಜ್ಜಿಗೆ ಇತ್ತು.

ಕಾರ್ಯಕ್ರಮ ಹೀಗೆ ಸಾಗಿ ಬಂತು

ಗೋಳಿತೊಟ್ಟು ಉಪಶಾಖಾ ಮಠದಿಂದ ಆಗಮಿಸಿದ ಡಾ. ನಿರ್ಮಲಾನಂದ ಸ್ವಾಮೀಜಿಯವರು ಬೆಳಿಗ್ಗೆ 8.30 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗ್ರಾಮ ಭೇಟಿಗೆ ಚಾಲನೆ ನೀಡಿದರು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಕಛೇರಿ, ಬಳಿಕ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐ.ಟಿ.ಐ.ಗೆ ಭೇಟಿ ನೀಡಿದರು. ಅಲ್ಲಿಂದ ಇರ್ದೆ ಗ್ರಾಮದ ಶಶಿಕುಮಾರ್ ಬೈಲಾಡಿ, ಮುಂಡೂರು ಗ್ರಾಮದ ಕರೆಮನೆ ನಳಿನಿ ಲೋಕಪ್ಪ ಗೌಡರವರ ಮನೆಗೆ ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದರು, ಅಪರಾಹ್ನದ ಬಳಿಕ ಮುರದಲ್ಲಿರುವ ಗೌಡ ಸಮುದಾಯ ಭವನ, ಬನ್ನೂರು ಹಲಂಗ ರಾಮಣ್ಣ ಗೌಡರ ಮನೆಗೆ ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದರು. ಸಂಜೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿಂದ ವಾಹನ ಜಾಥಾದ ಮೂಲಕ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನಕ್ಕೆ ತೆರಳಿ ಧರ್ಮ ಜಾಗೃತಿ ಸಭೆ ನಡೆಸಿದರು. ಬಳಿಕ ಎಪಿಎಂಸಿ ರಸ್ತೆ ಬಳಿಯಲ್ಲಿರುವ ರಾಮ್‌ದಾಸ್ ಗೌಡರವರ ಮನೆಗೆ ಬಂದು ವಾಸ್ತವ್ಯ ಮಾಡಿದರು.

ಬೆಳಿಗ್ಗೆ ಗಂಟೆ 8.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ: ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಡಾ. ನಿರ್ಮಲಾನಂದ ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತದಿಂದ ದೇವಳಕ್ಕೆ ಬರ ಮಾಡಿಕೊಳ್ಳಲಾಯಿತು. ದೇವಳದ ದ್ವಾರದ ಬಳಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಗೌರವ ಸಲಹೆಗಾರರಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಗೌಡ ಸಂಘದ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ನಿಯೋಜಿತ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರುರವರು ಸ್ವಾಮೀಜಿಗಳಿಗೆ ತುಳಸಿ ಮಾಲಾರ್ಪಣೆ ಮಾಡಿದರು. ದೇವಳದ ಪ್ರಧಾನ ಅರ್ಚಕರಾದ ವಸಂತ ಕೆದಿಲಾಯ ಮತ್ತು ವಿ.ಎಸ್ ಭಟ್‌ರವರು ಕಲಶದೊಂದಿಗೆ ದೇವಳದ ಒಳಗೆ ಬರಮಾಡಿಕೊಂಡರು. ದೇವಳದಲ್ಲಿ ಆರತಿ, ಪ್ರಸಾದ ವಿತರಣೆ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ.ಜಗನ್ನಿವಾಸ್ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಪಿ.ರಾಮಕೃಷ್ಣ, ಸಂಜೀವ ನಾಯಕ್ ಕಲ್ಲೇಗ, ನಾಗರಾಜ್, ಜಾನು ನಾಯ್ಕ, ನಯನಾ ರೈ, ರೋಹಿಣಿ ಆಚಾರ್ಯ, ಗೌಡ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ಪುರುಷೋತ್ತಮ ಗೌಡ ಮುಂಗ್ಲಿಮನೆ, ತಿಮ್ಮಪ್ಪ ಗೌಡ, ಲಕ್ಷ್ಮಣ ಗೌಡ ಕುಂಟಿಕಾನ, ಸಂಘದ ಉಪಾಧ್ಯಕ್ಷ ಸಂಜೀವ ಮಠಂದೂರು,  ಶ್ರೀ ಮಹಾಲಿಂಗೇಶ್ವರ ಐಟಿಐನ ಸಂಚಾಲಕ ಸಿ.ಪಿ.ಜಯರಾಮ ಗೌಡ,  ಯುವ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಕಾರ್ಯದರ್ಶಿ ರಾಧಾಕೃಷ್ಣ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ಪುತ್ತೂರು ವಲಯ ಉಸ್ತುವಾರಿ ಲಿಂಗಪ್ಪ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕಿಟ್ಟಣ್ಣ ಗೌಡ, ಚಂದ್ರಶೇಖರ್ ಮುಂಗ್ಲಿಮನೆ, ಕೌಶಲ್ ಕನ್‌ಸ್ಟ್ರಕ್ಷನ್‌ನ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ್ ರಾವ್, ಮನೋಹರ್ ಕೆ.ವಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಕರ್ಮಲ, ಗೌಡ ಸಂಘದ ಕೋಶಾಧಿಕಾರಿ ವಿಶ್ವನಾಥ ಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಗೌಡ ಕಣಜಾಲು, ದಾಮೋದರ್ ಗೌಡ ನಂದಿಲ, ಮೀನಾಕ್ಷಿ, ರಾಧಾಕೃಷ್ಣ ಗೌಡ ಬನ್ನೂರು, ಜನಾರ್ದನ ಗೌಡ ಬನ್ನೂರು, ಮನೋಹರ್ ಡಿ.ವಿ ಸೇರಿದಂತೆ ಸಾವಿರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಭೇಟಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ದೇವರ ಮಂಟಪಕ್ಕೆ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಶಾಖಾ ಮೆನೇಜರ್ ಹೊನ್ನಪ್ಪ ಗೌಡ ಪಟ್ಟೆ ಹಾಗೂ ಕಚೇರಿ ಸಿಬಂದಿಗಳಿಗೆ ಮಂತ್ರಾಕ್ಷತೆ ನೀಡಿ. ಸಂಘದ ವ್ಯವಹಾರಗಳ ಕುರಿತು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರಲ್ಲಿ ಮಾಹಿತಿ ಪಡೆದರು.

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಂಸ್ಥೆಗೆ ಭೇಟಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸಂಸ್ಥೆಗೆ ಭೇಟಿ ನೀಡಿದ ಸ್ವಾಮೀಜಿಯವರು ಅಲ್ಲಿ ಟ್ರಸ್ಟ್ ವತಿಯಿಂದ ನೀಡುವ ವರ್ಷದ ಕ್ಯಾಲೆಂಡರ್ ಮತ್ತು ಸ್ವಸಹಾಯ ಟ್ರಸ್ಟ್‌ನ ಸಾಫ್ಟ್‌ವೇರ್‌ನ್ನು ಬಿಡುಗಡೆಗೊಳಿಸಿದರು. ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ಪ್ರತಿಭಾ ದಂಪತಿ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಸಲಹಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಮಳುವಾಲು, ಬೆಳಿಯಪ್ಪ ಗೌಡ ಶಾಂತಿಗೋಡು, ಪದ್ಮಯ್ಯ ಗೌಡ, ಲಿಂಗಪ್ಪ ಗೌಡ, ವೆಂಕಪ್ಪ ಗೌಡ ದೇವಳಿಕೆ, ನಿರ್ದೇಶಕರಾದ ಉದಯ ಕುಮಾರ್ ಕರ್ಮಲ, ಸುರೇಂದ್ರ ಕುಮಾರ್, ದಿವ್ಯ ಪ್ರಸಾದ್ ಎ.ಎಂ, ಯಶವಂತ ಕಳುವಾಜೆ, ಪ್ರವೀಣ್ ಕುಂಟ್ಯಾನ, ಮಧು ನರಿಯೂರು, ಆನಂದ ಗೌಡ ಮೂವಪ್ಪು, ಪ್ರೇರಕರಾದ ಶ್ರೀಕಾಂತ್ ಗೌಡ ಕಾವು, ವಾಸುದೇವ ಗೌಡ ನೆಲ್ಯಾಡಿ, ವಸಂತ ಗೌಡ, ಬಾಲಕೃಷ್ಣ ಗೌಡ ನಿಡ್ಯಾಳ, ಉಷಾಕಿರಣ ಪೆರಿಯಡ್ಕ, ಸಿಬಂದಿಗಳಾದ ಅರ್ಪಿತಾ, ಅಶ್ವಿನಿಯವರು ಸ್ವಾಮೀಜಿಯವರಿಂದ ಮಂತ್ರಾಕ್ಷತೆ ಪಡೆದುಕೊಂಡರು.

ಮಹಾಲಿಂಗೇಶ್ವರ ಐಟಿಐಗೆ ಭೇಟಿ: ಮಹಾಲಿಂಗೇಶ್ವರ ಐಟಿಐಗೆ ಆಗಮಿಸಿದ ಸ್ವಾಮೀಜಿಯವರನ್ನು ವಿದ್ಯಾರ್ಥಿಗಳು ಬರಮಾಡಿಕೊಂಡರು. ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಗ್ರಾಮ ಭೇಟಿಯ ಪ್ರಥಮ ಸಭೆ ನಡೆಸಿ ಆಶೀರ್ವಚನ ನೀಡಿದರು.

ಶಿಕ್ಷಣದ ಜತೆ ಕೌಶಲ್ಯ ಬೆಳೆಸಿಕೊಳ್ಳಿ-ಡಾ. ನಿರ್ಮಲಾನಂದನಾಥ ಸ್ವಾಮೀಜಿ: ವಿದ್ಯಾರ್ಥಿಗಳನ್ನು ಉzಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಐ.ಟಿ.ಐ ಕಲಿಯುತ್ತಿರುವ ನೀವು ಯಾವುದೇ ಕಾರಣಕ್ಕೂ ಡಿಪ್ಲೋಮೊ, ಇಂಜಿನಿಯರಿಂಗ್ ಓದಲು ಆಗಿಲ್ಲ ಎಂಬ ಭಾವನೆ ಬೇಡ. ವ್ಯಕ್ತಿ ಯಾವ ಎಜ್ಯುಕೇಶನ್ ಕಲಿತರೂ ಆ ವಿದ್ಯೆಯ ಮೇಲೆ ಕೌಶಲ್ಯ ಇಲ್ಲದೆ ಇದ್ದರೆ ಅದು ಪ್ರಯೋಜನವಿಲ್ಲ ಎಂದರು. ಇವತ್ತಿನ ಸರಕಾರ ಕೌಶಲ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದೆ. ಈ ನಿಟ್ಟಿನಲ್ಲಿ ಇವತ್ತಿನ ಆಧುನಿಕ ಜಗತ್ತಿನಲ್ಲಿ ಎಷ್ಟೇ ವಿದ್ಯೆ ಇದ್ದರೂ ಕೆಲಸವನ್ನು ಮಾರ್ಕ್ಸ್‌ಕಾರ್ಡ್ ಮತ್ತು ಸಟಿಫಿಕೇಟ್ ನೋಡಿ ಕೊಡುವ ಸಂದರ್ಭ ಕಡಿಮೆ ಆಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಸಿ.ಪಿ.ಜಯರಾಮ ಗೌಡ ಸ್ವಾಮೀಜಿಯವರಿಗೆ ತುಳಸಿ ಮಾಲಾರ್ಪಣೆ ಮಾಡಿ ಫಲಪುಷ್ಪ ನೀಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಗೌಡ ವಿದ್ಯಾವರ್ಧಕ ಸಂಘದ ಧನಂಜಯ ಅಡ್ಪಂಗಾಯ, ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಭವಾನಿ ಗೌಡ ವಂದಿಸಿದರು. ಪ್ರಶಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.