ಪೆರ್ನಾಜೆ ಸೀತಾರಾಘವ ಪ್ರೌಢಶಾಲಾ ಸುವರ್ಣ ಸಂಭ್ರಮಕ್ಕೆ ತೆರೆ

Puttur_Advt_NewsUnder_1
Puttur_Advt_NewsUnder_1

pernajepernaje15 ದಿನಗಳ ಸುವರ್ಣ ಸಂಭ್ರಮ ಹೀಗಿತ್ತು

ಪೆರ್ನಾಜೆ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಮಹೋತ್ಸವವು ದ.20 ರಂದು ಬೆಳಿಗ್ಗೆ ಆರಂಭಗೊಂಡು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶಾಲಾ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿಯೊಂದಿಗೆ ಸ್ವಚ್ಛಭಾರತಯಾನ ಮೆರವಣಿಗೆ  ಸಾಗಿ ಬಂದು ಸುವರ್ಣ ಸಂಭ್ರಮಕ್ಕೆ ಚಾಲನೆ ಸಿಕ್ಕಿತ್ತು, ಬಳಿಕ ಕ್ರೀಡಾಂಗಣದಲ್ಲಿ ಪಥಸಂಚಲನ, ಧ್ವಜಾರೋಹಣ, ಕ್ರೀಡೋತ್ಸವ ನಡೆಯಿತು. ದ.21 ರಂದು ಬೆಳಿಗ್ಗೆ ನಡೆದ ಸುವರ್ಣ ಜಯಂತಿಯಲ್ಲಿ ಗಣಪತಿ ಪೂಜೆ, ಪ್ರತಿಭಾ ಸ್ಪರ್ಧೆ, ಸಾಂಸ್ಕೃತಿಕ ಸೌರಭ ನಡೆಯಿತು. ದ.22 ರಂದು ನಡೆದ ಸುವರ್ಣ ಸಮ್ಮಿಲನದಲ್ಲಿ ಹಿರಿಯ ವಿದ್ಯಾರ್ಥಿಗಳ, ಊರಿನ ವಿದ್ಯಾಭಿಮಾನಿಗಳ ಸಮ್ಮಿಲನ ನಡೆದು, ಅವರಿಗಾಗಿ ಕ್ರೀಡೋತ್ಸವ, ಪ್ರತಿಭಾ ಸ್ಪರ್ಧೆ ನಡೆಯಿತು. ದ.23 ರಂದು ನಡೆದ ಸುವರ್ಣ ಸಂಭ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ, ಸಾಂಸ್ಕೃತಿಕ ಹಬ್ಬ, ಸಂಸ್ಥಾಪಕರ ಸಂಸ್ಮರಣೆ ನಡೆಯಿತು. ದ.24 ರಂದು ಬೆಳಿಗ್ಗೆ ನಡೆದ ಸುವರ್ಣ ಮುಂಬೆಳಕು ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಸಾಮೂಹಿಕ ನೃತ್ಯ ಸಂಭ್ರಮ, ಸಭಾ ಕಾರ್ಯಕ್ರಮ, ನವೀಕೃತ ಕಛೇರಿ ಉದ್ಘಾಟನೆ, ಗೌರವಾರ್ಪಣೆ ನಡೆಯಿತು. ಸಂಜೆ ನಡೆದ ಸುವರ್ಣ ಹೊಂಬೆಳಕು ಕಾರ್ಯಕ್ರಮದಲ್ಲಿ ವಾದ್ಯ ಸಂಗೀತ, ಸಭಾ ಕಾರ್ಯಕ್ರಮ, ಸ್ವರ್ಣೋದ್ಯಾನ ಲೋಕಾರ್ಪಣೆ, ನಗೆ ಹಬ್ಬ, ಸಂಗೀತ ರಸಮಂಜರಿ, ನೃತ್ಯ ವೈಭವ, ತುಳು ನಾಟಕ ನಡೆಯಿತು. 5 ದಿನಗಳ ಕಾಲ ನಡೆದ ಸುವರ್ಣ ಸಂಭ್ರಮವು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ಮೂಡಿ ಬಂದಿತ್ತು.

ಪುತ್ತೂರು: ದ.20ರಿಂದ ಆರಂಭಗೊಂಡು 5 ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಪೆರ್ನಾಜೆ ಶ್ರೀ ಸೀತಾರಾಘವ ವಿದ್ಯಾವರ್ಧಕ ಸಂಘದ ಆಡಳಿತದಲ್ಲಿರುವ ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಸಂಭ್ರಮ ದ.24ರಂದು ರಾತ್ರಿ ಸಂಪನ್ನಗೊಂಡಿದೆ.

ಶಿಕ್ಷಣದ ವ್ಯಾಪಾರೀಕರಣ ಸಲ್ಲದು- ನಳಿನ್ ಕುಮಾರ್ ಕಟೀಲ್: ಸಂಜೆ ನಡೆದ ಸುವರ್ಣ ಹೊಂಬೆಳಕು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌ರವರು ದಿ. ಪೆರ್ನಾಜೆ ಸೀತಾರಾಮ ಭಟ್ಟರ ಶಿಕ್ಷಣ ಪ್ರೇಮ, ವಿದ್ಯಾದಾನದ ಮನಸ್ಸಿನಿಂದ ಕಳೆದ 50 ವರ್ಷಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕನ್ನು ನೀಡಿ ಪುಣ್ಯದ ಫಲವನ್ನು ಪಡೆದಿದ್ದಾರೆ, ಗ್ರಾಮಾಂತರ ಭಾಗದ ಮಕ್ಕಳ ವಿದ್ಯಾರ್ಜನೆಗೆ ಸೀತಾರಾಘವ ಪ್ರೌಢಶಾಲೆಯು ಉತ್ತಮ ಅವಕಾಶವಾಗಿದೆ, ಶಿಕ್ಷಣದ ವ್ಯಾಪಾರೀಕರಣದಿಂದ ಶಿಕ್ಷಣದ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ರಂಗಮಂದಿರ ನಿರ್ಮಾಣಕ್ಕೆ ರೂ.2 ಲಕ್ಷ ಅನುದಾನ-ಶಕುಂತಳಾ ಶೆಟ್ಟಿ: ಸಭಾಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ 50 ವರ್ಷಗಳ ಇತಿಹಾಸವನ್ನು ಕಂಡ ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯು ವಿದ್ಯಾದಾನದ ಮೂಲಕ ಸುಸಂಸ್ಕೃತ ಮಕ್ಕಳನ್ನು ಸಮಾಜಕ್ಕೆ ಕೊಡುಗೆ ನೀಡಿದೆ.  ಬದಲಾದ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದಾಗಿ ಸಂಸ್ಕಾರಯುತ, ಮೌಲ್ಯಧಾರಿತ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದರು. ಪೆರ್ನಾಜೆ ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಂಗಮಂದಿರಕ್ಕೆ ರೂ.2 ಲಕ್ಷ ಅನುದಾನವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ತ್ಯಾಗದ ಫಲ ಅನಂತವಾದದ್ದು-ರಮಾನಂದ ಬನಾರಿ: ಪ್ರಧಾನ ಅತಿಥಿಯಾಗಿದ್ದ ಸಾಹಿತಿ, ವೈದ್ಯರೂ ಆಗಿರುವ ಡಾ| ರಮಾನಂದ ಬನಾರಿಯವರು ಮಾತನಾಡಿ ಶಿಕ್ಷಣ ಶಿಕ್ಷೆಯಾಗಬಾರದು, ಶಿಕ್ಷೆಯಿಂದ ಶಿಕ್ಷಣ ಕಲಿಯಬೇಕು, ಶಿಕ್ಷಣದ ಜತೆಗೆ ಬದುಕು ಶಿಕ್ಷಣವನ್ನು ಕಲಿತುಕೊಂಡು ತ್ಯಾಗದ ಜೀವನಕ್ಕೆ ಒತ್ತು ನೀಡಬೇಕು, ತ್ಯಾಗದ ಫಲ ಅನಂತವಾಗಿರುತ್ತದೆ ಎಂದು ಹೇಳಿದರು. ಆಡಳಿತ ಮಂಡಳಿ ಅಧ್ಯಕ್ಷ ಶಂಕರನಾರಾಯಣ ಭಟ್‌ರವರು ಸುವರ್ಣ ಮಹೋತ್ಸವದ ನುಡಿಗಳನ್ನಾಡಿದರು.

ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್, ಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕಿ ಅನುಪಮಾ ಎಸ್ ಭಟ್, ಶೈಕ್ಷಣಿಕ ಕಾರ್ಯದರ್ಶಿ ಯು. ಶಿವಶಂಕರ ಭಟ್, ಕೋಶಾಧಿಕಾರಿ ಮಳಿ ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಗುರು ಪಿ. ಶ್ರೀಕೃಷ್ಣ ಸ್ವಾಗತಿಸಿ, ಪ್ರಾಚಾರ್ಯ ಕೆ.ಆರ್ ಗೋಪಾಲಕೃಷ್ಣರವರು ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ದೇವಣ್ಣ ರೈ ಮುದರ್‌ಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಸ್ವರ್ಣೋದ್ಯಾನ ಲೋಕಾರ್ಪಣೆ: ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ನಿರ್ಮಿಸಲಾದ ಸ್ವರ್ಣೋದ್ಯಾನವನ್ನು ಶಾಸಕಿ ಶಕುಂತಳಾ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ಗೌರವಾರ್ಪಣೆ: ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶಂಕರನಾರಾಯಣ ಭಟ್ ಹಾಗೂ ಸಂಚಾಲಕಿ ಅನುಪಮಾ ಎಸ್. ಭಟ್‌ರವರನ್ನು ಶಾಸಕಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ನಾರಾಯಣ ಹೆಗಡೆ, ಯು. ಶಿವಶಂಕರ ಭಟ್‌ರವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಸೇವೆಗೈಯುತ್ತಿರುವ ಬೋಧಕ, ಬೋಧಕೇತರ ಶಿಕ್ಷಕರ ಪರಿಚಯ ನೀಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಹಣತೆ ಹಚ್ಚಿ ಸಂಭ್ರಮ: ವಿದ್ಯಾರ್ಥಿಗಳು 50 ಹಣತೆಯನ್ನು ಹಚ್ಚಿ ಸಭಾ ವೇದಿಕೆಯ ಮುಂದೆ ಸಾಲಾಗಿ ಇಟ್ಟು ಸಂಸ್ಥೆಯ 50 ರ ಸಂಭ್ರಮವನ್ನು ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡಿದರು.

ಸಂಸ್ಥಾಪಕರ ಸಂಸ್ಮರಣೆ: ಸಂಸ್ಥೆಯ ಸಂಸ್ಥಾಪಕರಾಗಿರುವ ದಿ. ಪೆರ್ನಾಜೆ ಸೀತಾರಾಮ ಭಟ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸ್ಮರಣೆ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಮೊದಲು ವಾದ್ಯ ಸಂಗೀತ ನಡೆಯಿತು, ಸಭಾ ಕಾರ್ಯಕ್ರಮದ ಬಳಿಕ ಪಟ್ಟಾಭಿರಾಮ ಸುಳ್ಯರವರಿಂದ ನಗೆಹಬ್ಬ ಮಿಮಿಕ್ರಿ ನಡೆಯಿತು. ಬಳಿಕ ಸುಗಮ ಸಂಗೀತ, ನೃತ್ಯ ವೈಭವ, ಸಂಸ್ಥೆಯ ಮಕ್ಕಳಿಂದ, ನೌಕರರಿಂದ, ಹಿರಿಯ ವಿದ್ಯಾರ್ಥಿಗಳಿಂದ, ಆಹ್ವಾನಿತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆ ಬಳಿಕ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಬೂಡಿಯಾರ್ ರಾಧಾಕೃಷ್ಣ ರೈ ನೇತೃತ್ವದ ಪುತ್ತೂರು ಕಲಾವಿದೆರ್ ಅಭಿನಯದ ’ಪಂಡ್‌ದ್ ಸುಖ ಇಜ್ಜಿ’ ತುಳು ಹಾಸ್ಯಮಯ ನಾಟಕ ನಡೆಯಿತು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.