Breaking News

ಪಟ್ಟೆ ಪ್ರತಿಭಾ ಪ್ರೌಢ ಶಾಲಾ ಬೆಳ್ಳಿ ಹಬ್ಬ ಸಂಪನ್ನ;  ಸಮಾರೋಪ, ಮನರಂಜಿಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ‍್ಯಕ್ರಮ

Puttur_Advt_NewsUnder_1
Puttur_Advt_NewsUnder_1

patte

ದೇವ ಮಂದಿರಕ್ಕಿಂತಲೂ ವಿದ್ಯಾಮಂದಿರ ಶ್ರೇಷ್ಠ-ನಳಿನ್ ಕುಮಾರ್

ಪುತ್ತೂರು: ಒಂದು ದೇವಸ್ಥಾನ ಕೇವಲ ಒಂದಷ್ಟು ಮತ ಧರ್ಮದವರಿಗೆ ಮಾತ್ರ ಸೀಮಿತವಾಗಿರುತ್ತದೆ ಆದರೆ ಶಿಕ್ಷಣ ಮಂದಿರ ಸಮಾಜದ ಎಲ್ಲಾ ವರ್ಗದವರಿಗೆ ಸೀಮಿತವಾಗಿರುತ್ತದೆ ಆದ್ದರಿಂದ ದೇವ ಮಂದಿರಕ್ಕಿಂತಲೂ ಶ್ರೇಷ್ಠವಾದದ್ದು ವಿದ್ಯಾಮಂದಿರವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅವರು ದ.24 ರಂದು ಪಟ್ಟೆ ವಿದ್ಯಾಸಂಸ್ಥೆಗಳು ಬಡಗನ್ನೂರು ಇದರ ಪ್ರತಿಭಾ ಪ್ರೌಢ ಶಾಲೆಯ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕಾಶಿ ಎಂದ ಅವರು ಇಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ ಆದರೆ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನಳಿನ್‌ರವರು, ಜೀವನ ಮೌಲ್ಯಗಳನ್ನು ನೀಡುವಂತಹ ಶಿಕ್ಷಣ ಇಂದು ಅಗತ್ಯವಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸಮಾಜಕ್ಕೆ ನೀಡುವ ಪಟ್ಟೆ ವಿದ್ಯಾಸಂಸ್ಥೆಗಳಂತಹ ಶಿಕ್ಷಣ ಸಂಸ್ಥೆಗಳು ಇಂದು ಬೇಕಾಗಿವೆ ಎಂದರು.

ಸರ್ವ ಧರ್ಮೀಯರ ದೇವಾಲಯ- ಭವಾನಿ ಚಿದಾನಂದ್: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್‌ರವರು ಮಾತನಾಡಿ, ಶಾಲೆ ಎಂಬುದು ಒಂದು ಸರ್ವ ಧರ್ಮಿಯರ ದೇವಾಲಯ ಆಗಿದೆ. ಇಂತಹ ದೇವಾಲಯಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳ ಶಿಕ್ಷಣ ನೀಡುವುದರ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸಬೇಕಾಗಿದೆ. ಸರಕಾರಿ ಶಾಲೆಗಳು ಕೂಡ ಯಾವುದೇ ವಿಚಾರದಲ್ಲಿ ಕಡಿಮೆ ಇಲ್ಲ ಎಂಬುದನ್ನು ಪ್ರತಿಯೊಬ್ಬ ಪೋಷಕರು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದರು.

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ- ವೈ. ಶಿವರಾಮಯ್ಯ: ಹಿಂಗಾರ ಅರಳಿಸುವುದರ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇದರ ಪ್ರವಾಚಕರಾದ ವೈ.ಶಿವರಾiಯ್ಯರವರು ಮಾತನಾಡಿ, ಪಟ್ಟೆ ಶಾಲೆಯು ಎಲ್ಲಾ ವಿಧದಲ್ಲೂ ಒಂದು ಉತ್ತಮ ಶಾಲೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವುದು ಶ್ಲಾಘನೀಯ. ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಮೂಲಕ ಸಮಾಜಕ್ಕೆ ಕೊಡುವ ಕೆಲಸವನ್ನು ಶಾಲೆ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ, ಬೋಧನ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೂ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಕ್ರೀಡೆ,ಶೈಕ್ಷಣಿಕವಾಗಿ ಶಾಲೆ ಸಾಧನೆ ಮಾಡಿದೆ- ಜಿ.ಎಸ್.ಶಶಿಧರ್: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್‌ರವರು ಮಾತನಾಡಿ, ಪಟ್ಟೆ ಶಾಲೆಯು ಕ್ರೀಡೆ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಸಾಧನೆಯನ್ನು ಮಾಡಿದೆ.ಈ ನಿಟ್ಟಿನಲ್ಲಿ ಶಾಲೆಯನ್ನು ಅಭಿನಂದಿಸಲೇಬೇಕಾಗಿದೆ ಎಂದರು.

ಅಂಕವೊಂದೇ ಜೀವನದ ಗುರಿಯಲ್ಲ- ಡಾ.ಬಿ.ವಿ ಭಟ್: ಕಣ್ಣೂರು ಅಶೋಕ ಆಸ್ಪತ್ರೆಯ ನೇತ್ರ ತಜ್ಞ ಡಾ.ಬಿ.ವಿ ಭಟ್‌ರವರು ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಬೇಕು ಎಂದು ಪೋಷಕರು ಯಾವತ್ತೂ ಬಯಸಬಾರದು ಏಕೆಂದರೆ ಅಂಕವೊಂದೇ ಜೀವನದ ಗುರಿಯಲ್ಲ. ಅವರು ಜೀವನದ ಗುರಿ ಮುಟ್ಟಬೇಕು. ಜೀವನ ಮೌಲ್ಯಗಳನ್ನು ಕಲಿಯಬೇಕು. ಸಂಸ್ಕಾರ, ಸಂಸ್ಕೃತಿಯ ಗುರಿ ಮುಟ್ಟಬೇಕು. ಈ ಬಗ್ಗೆ ಪೋಷಕರು ಎಚ್ಚರ ವಹಿಸಿಕೊಳ್ಳಬೇಕು ಎಂದರು.

ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಶಿಕ್ಷಣದ ಅಗತ್ಯವಿದೆ- ಜಯಂತ ನಡುಬೈಲು: ಅಕ್ಷಯ ಗ್ರೂಪ್ ಸಂಪ್ಯ ಇದರ ಮಾಲಕ ಉದ್ಯಮಿ ಜಯಂತ ನಡುಬೈಲುರವರು ಮಾತನಾಡಿ, ಪಟ್ಟೆ ಶಾಲೆಯ ಬಗ್ಗೆ ನೋಡಿದಾಗ ಇದು ಬಹಳಷ್ಟು ಪ್ರತಿಭೆಗಳನ್ನು ಈ ಸಮಾಜಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಬಗ್ಗೆ ತಿಳಿಯುತ್ತದೆ. ಸಂಸ್ಕಾರ ಸಂಸ್ಕೃತಿಯ ಜೀವನ ಮೌಲ್ಯವನ್ನು ಕಲಿಸುವ ಹಲವು ಶಾಲೆಗಳಲ್ಲಿ ಪಟ್ಟೆ ವಿದ್ಯಾಸಂಸ್ಥೆ ಕೂಡ ಒಂದಾಗಿದೆ ಎಂಬುದು ಸಂತಸದ ವಿಷಯವಾಗಿದೆ ಎಂದರು. ನಾನು ಸುಮಾರು ೧೫ ಶಾಲೆಗಳಿಗೆ ವಿವಿಧ ರೀತಿಯ ಸಹಕಾರ ಮಾಡುತ್ತಿದ್ದು, ಕೆಲವು ಮಕ್ಕಳನ್ನು ದತ್ತು ಪಡೆದುಕೊಂಡು ಶಿಕ್ಷಣ ನೀಡುತ್ತಿzನೆ ಎಂದ ಅವರು, ನಮ್ಮ ಮಕ್ಕಳೇ ನಮ್ಮ ಆಸ್ತಿ. ಅವರನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು ಪ್ರತಿಯೊಬ್ಬ ಹೆತ್ತವರ ಕರ್ತವ್ಯ ಎಂದು ಹೇಳಿ ಶುಭ ಹಾರೈಸಿದರು.

ಸನ್ಮಾನ, ಗೌರವ ಅರ್ಪಣೆ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆರವರನ್ನು ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ಹಾಗೂ ಶ್ರೀ ಕೃಷ್ಣ ಯುವಕ ಮಂಡಲದ ಪರವಾಗಿ ಸನ್ಮಾನಿಸಲಾಯಿತು. ಶಾಲೆಯ ಪರವಾಗಿ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರೆ, ಯುವಕ ಮಂಡಲದ ಪರವಾಗಿ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆಯವರು ಶಾಲು,ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶಾಲೆಗೆ ಕಂಪ್ಯೂಟರ್ ಕೊಠಡಿಗೆ ೫ ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಿದ ಶ್ರೀಮತಿ ರೀಮಾ ಗೋಪಾ ಕುಮಾರ್ ಮತ್ತು ಮುರಳೀಕೃಷ್ಣರವರನ್ನು ಗೌರವಿಸಲಾಯಿತು.

ಪುಸ್ತಕ ಕೊಡುಗೆ ನೀಡಿದ ಅರ್ತಿಕಜೆ: ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆಯವರು ವಿದ್ಯಾಸಂಸ್ಥೆಗೆ ಸುಮಾರು ೨೫೦೦ ಬೆಲೆಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಸಂಚಾಲಕ ಪಿ.ನಾರಾಯಣ ಭಟ್‌ರವರು ಪುಸ್ತಕಗಳನ್ನು ಸ್ವೀಕರಿಸಿದರು.

ತಾ.ಪಂ ಸದಸ್ಯ ರಾಧಾಕೃಷ್ಣ ಬೋರ್ಕರ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ಪಿ.ನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪಿ.ವೇಣುಗೋಪಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ಳಿ ಹಬ್ಬ ಸಮಿತಿಯ ಕೋಶಾಧಿಕಾರಿ ನಹುಷ ಪಿ.ವಿ ಸ್ವಾಗತಿಸಿದರು. ಶಿಕ್ಷಕಿಯರಾದ ಭವಿತಾ, ಜಯಶ್ರೀ, ಶೃತಿ ಕುಮಾರಿ, ಯಮುನಾ, ಶಂಕರಿ, ಶಿಕ್ಷಕರಾದ ವಿಶ್ವನಾಥ ಬಿ, ಮೋನಪ್ಪ ಪಟ್ಟೆ, ದ್ವಿ.ದರ್ಜೆ ಸಹಾಯಕ ವಿಠಲ, ಯುವಕ ಮಂಡಲದ ಅಧ್ಯಕ್ಷ ಶಶಿಧರ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಮನಾ ಬಿ. ವಂದಿಸಿದರು. ಲಿಟ್ಲ್ ಪ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ಕಾರ‍್ಯಕ್ರಮ ನಿರೂಪಿಸಿದರು. ದ,೨೩ ರಂದು ನೆಲ್ಯಾಡಿ ಸಂತ ಚಾರ್ಜ್ ಪ್ರೌಢ ಶಾಲಾ ಮುಖ್ಯಗುರು ರವೀಂದ್ರ ಕಾರ‍್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದ್ದರು.

ಮನರಂಜಿಸಿದ ಸಾಂಸ್ಕೃತಿಕ ಕಾರ‍್ಯಕ್ರಮ: ಬೆಳ್ಳಿ ಹಬ್ಬದ ಸಂಭ್ರಮವಾಗಿ ದ.೨೩ ಮತ್ತು ೨೪ ರಂದು ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ,ಯುವಕ ಮಂಡಲದ ಸದಸ್ಯರಿಂದ,ಪೋಷಕರಿಂದ, ಅಂಗನವಾಗಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.೨೩ ರಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಯಕ್ಷಗಾನ ಬಯಲಾಟ ನಡೆಯಿತು. ೨೪ ರಂದು ಅಂಗನವಾಡಿ ಪುಟಾಣಿಗಳ, ಪ್ರೌಢ ಶಾಲಾ ವಿದ್ಯಾರ್ಥಿಗಳ, ಪೋಷಕರ, ಯುವಕ ಮಂಡಲದ ಸದಸ್ಯರ ಸಾಂಸ್ಕೃತಿಕ ಕಾರ‍್ಯಕ್ರಮ ಜನರ ಮನಸೂರೆಗೊಂಡಿತು. ಎರಡೂ ದಿನಗಳಲ್ಲಿಯೂ ಊಟ, ಪಾಯಸದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಕಾರ‍್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ವರ್ಷ 14 ಶಾಲೆಗಳು ಮುಚ್ಚುವ ಭೀತಿ

ಸರಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸದರು ಮುಂದಿನ ವರ್ಷಕ್ಕೆ ಸುಮಾರು ೧೪ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ ಎಂದು ಹೇಳಿದರು. ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟ ಕನ್ನಡ ಶಾಲೆಗಳಲ್ಲಿಯೂ ಸಿಗುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರ, ಪೋಷಕರ ಮಾನಸಿಕ ಸ್ಥಿತಿ ಬದಲಾಗಬೇಕಾಗಿದೆ. ನನ್ನ ಮಗ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರೆ ಮಾತ್ರ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯ ಎಂಬ ಮಾನಸಿಕ ಸ್ಥಿತಿ ಬದಲಾಗಬೇಕು.ಪ್ರಧಾನಿ ಮೋದಿ, ಕಲಾಂರಂತವರು ಅವರವರ ಮಾತೃ ಭಾಷಾ ಶಾಲೆಯಲ್ಲಿಯೇ ಓದಿ ಸಮಾಜಕ್ಕೆ ಬೆಳಕಾದವರು ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.