Breaking News

ದೂರದೂರಿನಿಂದ ವಾರೀಸುದಾರರು ಬರಲು ವಿಳಂಬ ಸಂಜೆಯವರೆಗೆ ಹೆದ್ದಾರಿ ಬದಿ ಬಿದ್ದಿದ್ದ ಮೃತದೇಹ

Puttur_Advt_NewsUnder_1
Puttur_Advt_NewsUnder_1

 

mruthadehaಉಪ್ಪಿನಂಗಡಿ: ಮುಂಜಾನೆ ನಿಧನರಾದ ವ್ಯಕ್ತಿಯೋರ್ವನ ಶವವನ್ನು ಆತನ ವಾರೀಸುದಾರರಿಲ್ಲದೆ ಯಾರೂ ಮುಟ್ಟಲು ಮುಂದಾಗದ ಹಿನ್ನೆಲೆಯಲ್ಲಿ ಸಂಜೆಯವರೆಗೆ ಶವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಬಿದ್ದಿರಬೇಕಾದ ಹೃದಯವಿದ್ರಾವಕ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಕುಮಾರಧಾರ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿ ಟೆಂಟ್ ಹಾಕಿಕೊಂಡು ಹೆಲ್ಮೆಟ್ ಮಾರುತ್ತಿದ್ದ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾರುತಿನಗರ ನಿವಾಸಿ ನಾಗೇಶ್ ಬಿನ್ ಸುರೇಶ್ (29) ಮೃತ ವ್ಯಕ್ತಿ.

ಸುರೇಶ್ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿ ಹೆಲ್ಮೆಟ್ ಮಾರುತ್ತಿದ್ದು, ಪತ್ನಿ, ಮಕ್ಕಳೊಂದಿಗೆ ಉಪ್ಪಿನಂಗಡಿಯಲ್ಲಿ ವಾಸವಾಗಿದ್ದರು. ಆದರೆ ಅವರ ಪತ್ನಿ ಊರಿನಲ್ಲಿ ನಡೆದ  ಸಂಬಂಧಿಕರ ಮದುವೆಗೆಂದು ಹೋಗಿದ್ದ ವೇಳೆ ಉಪ್ಪಿನಂಗಡಿಯಲ್ಲಿ ನಾಗೇಶ್ ಮತ್ತು ಅವರ ಮಾವ ಮಾತ್ರ ಇದ್ದು, ಮಂಗಳವಾರ ರಾತ್ರಿ ಊಟ ಮಾಡಿ ಹೆಲ್ಮೆಟ್ ಮಾರಲು ಹಾಕಿದ್ದ ಟೆಂಟ್‌ನಲ್ಲೇ ಮಲಗಿದ್ದರು. ಮುಂಜಾನೆ 5ರ ಸುಮಾರಿಗೆ ಮಾವ ನಾಗೇಶ್ ಅವರನ್ನು ಎಬ್ಬಿಸಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂತು. ಆದರೆ ಅವರ ಪತ್ನಿ ಘಟನೆ ಸಂದರ್ಭ ಊರಿನಲ್ಲಿ ಇರದಿದ್ದುದರಿಂದ ಮೃತದೇಹವನ್ನು ಮುಟ್ಟಲು ಯಾರೂ ಮುಂದಾಗಿಲ್ಲ. ಒಬ್ಬಂಟಿಯಾಗಿದ್ದ ನಾಗೇಶ್ ಅವರ ಮಾವ ಕೂಡಾ ಅಸಹಾಯಕರಾಗಿದ್ದರು. ಮೃತರ ವಾರೀಸುದಾರರು ಬರುವವರೆಗೆ ಮೃತದೇಹವನ್ನು ಅವರು ವಾಸ್ತವ್ಯವಿದ್ದ ಬಾಡಿಗೆ ಮನೆಗೆ ಸಾಗಿಸುವುದಕ್ಕಾಗಲೀ, ಸಮೀಪದ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುವ ಕೆಲಸವಾಗಲಿ ಪೊಲೀಸ್ ಇಲಾಖೆಯಿಂದಾಗಲೀ, ಪಂಚಾಯತ್ ಆಡಳಿತದಿಂದಾಗಲೀ ನಡೆಯಲಿಲ್ಲ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಸ್ಥಿತಿಯಲ್ಲಿ ಮೃತದೇಹ ಮುಂಜಾನೆಯಿಂದ ಸಂಜೆಯವರೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇತ್ತು. ಸಂಜೆಯ ವೇಳೆ ಮೃತ ನಾಗೇಶರ ತಂದೆ, ಪತ್ನಿ ಮತ್ತಿತರ ಬಂಧುಗಳು ಬಂದ ಬಳಿಕ ಮೃತದೇಹವನ್ನು ಉಪ್ಪಿನಂಗಡಿಯ ಸಶಾನಕ್ಕೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ದೂರದ ಚಿತ್ರದುರ್ಗದಿಂದ ಬಂದ ಮೃತರ ಕುಟುಂಬಸ್ಥರಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಮಡಿವಾಳ, ರಮೇಶ್ ಭಂಡಾರಿ, ಸ್ಥಳೀಯ ಪ್ರಮುಖರಾದ ಮಹೇಶ್ ಬಜತ್ತೂರು, ಕಿಶನ್ ಕಾಂಚನ, ಯೋಗೀಶ್ ನಿನ್ನಿಕಲ್ಲ್, ಉಮೇಶ್ ಅಮೀನ್ ಮತ್ತಿತರರು ಸಹಕರಿಸಿ, ಅಂತ್ಯಸಂಸ್ಕಾರದ ವಿಧಿವಿಧಾನಗಳಿಗೆ ಕೈಜೋಡಿಸಿದರು.

ಮೃತಪಟ್ಟ ವ್ಯಕ್ತಿಯೋರ್ವನ ವಾರೀಸುದಾರರು ದೊರೆಯುವವರೆಗೆ ಆ ಶವವನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಆಡಳಿತಕ್ಕೆ ಕಾನೂನು ಬದ್ಧ ಅಧಿಕಾರವಿದೆ. ಆದರೆ ಅದರ ಪಾಲನೆ ಮಾತ್ರ ಆಗದಿರುವುದು ನಮ್ಮ ಈ ವ್ಯವಸ್ಥೆಯ ದುರಂತ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.