Breaking News

ವಿಟ್ಲ: ಕೇರಳದಿಂದ ಗಾಂಜಾ ತಂದು ಬಂಟ್ವಾಳದ ವಿವಿಧೆಡೆ ಮಾರಾಟ ಇಬ್ಬರು ಆರೋಪಿಗಳ ಸೆರೆ: 13ಕೆಜಿ ಗಾಂಜಾ ವಶ ಡಿವೈಎಸ್‌ಪಿ ರವೀಶ್ ನೇತೃತ್ವದ ಪೊಲೀಸರ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1

vittlaವಿಟ್ಲ: ಕೇರಳದಿಂದ ಕರ್ನಾಟಕಕ್ಕೆ ಮಾರಾಟ ಮಾಡಲು ತರುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 13 ಕೆಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಟ್ವಾಳ ಡಿವೈಎಸ್‌ಪಿಯವರ ನೇತೃತ್ವದ ಪೊಲೀಸರ ತಂಡ ಡಿ.30ರಂದು ಅಳಿಕೆ ಗ್ರಾಮದ ಕಾಂತಡ್ಕದಿಂದ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಸೀರಂಕಲ್ಲು ನಿವಾಸಿ ಅಬೂಬಕ್ಕರ್‌ರವರ ಪುತ್ರ ಖಲಂದರ್ ಶಾಫಿ(೨೨.ವ) ಹಾಗೂ ಉತ್ತರಪ್ರದೇಶ ಬದಾಯಿ ಜಿಲ್ಲೆಯ ಸೈದಾಪುರ್ ಗ್ರಾಮದ ಮಹಮ್ಮದ್‌ರವರ ಪುತ್ರ, ಕನ್ಯಾನದ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್(25.ವ) ಬಂಧಿತ ಆರೋಪಿಗಳು.

ಬಂಟ್ವಾಳ ತಾಲೂಕಿನ ವಿವಿಧೆಡೆಗಳಲ್ಲಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದ ಕುರಿತು ನಾಗರಿಕ ವಲಯದಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಡಿವೈಎಸ್‌ಪಿ ರವೀಶ್‌ರವರ ನೇತೃತ್ವದಲ್ಲಿ ಬಂಟ್ವಾಳ ವೃತ್ತನಿರೀಕ್ಷಕ ಬಿ.ಕೆ ಮಂಜಯ್ಯ ಹಾಗೂ ವಿಟ್ಲ ಠಾಣಾ ಎಸ್‌ಐ ಹೆಚ್‌ಈ ನಾಗರಾಜ್‌ರವರ ನೇತೃತ್ವದ ಪೊಲೀಸರ ತಂಡ ಗಾಂಜಾಮಾರಾಟ ಮಾಡುತ್ತಿದ್ದವರ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದರು. ಅದರಂತೆ ಡಿ.೩೦ರಂದು ಕೇರಳ ಭಾಗದಿಂದ ಕರ್ನಾಟಕಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ. ಡಿವೈಎಸ್‌ಪಿಯವರ ನೇತೃತ್ವದ ಪೊಲೀಸರ ತಂಡ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಕನ್ಯಾನ ಭಾಗದಿಂದ ಬಂದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಆರು ಪ್ಯಾಕೆಟ್‌ಗಳಲ್ಲಿ ತುಂಬಲಾಗಿದ್ದ 13 ಕೆಜಿ ಗಾಂಜಾ ಪತ್ತೆಯಾಯಿತು. ಕೂಡಲೇ ಅವರಿಬ್ಬರನ್ನು ಬಂಧಿಸಿ ವಿಟ್ಲ ಠಾಣೆಗೆ ಕರೆತಂದು ಇನ್ನಷ್ಟು ವಿಚಾರಣೆ ನಡೆಸಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ೧,೫೦,೦೦೦ ರೂಪಾಯಿ ಹಾಗೂ ವಾಹನದ ಮೌಲ್ಯ 50,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತರಿಂದ ಹಲವಾರು ಮಾಹಿತಿಯನ್ನು ಸಂಗ್ರಹಿಸಿಕೊಂಡಿರುವ ಪೊಲೀಸರ ತಂಡ ತನಿಖೆ ನಡೆಸುತ್ತಿದ್ದಾರೆ.

ಎಸ್ಪಿ ಭೂಷಣ್ ಜಿ ಬೊರಾಸೆಯವರ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿಆರ್, ವೃತ್ತ ನಿರೀಕ್ಷಕ ಬಿಕೆ ಮಂಜಯ್ಯ, ವಿಟ್ಲ ಠಾಣಾ ಎಸ್‌ಐ ಹೆಚ್‌ಈ ನಾಗರಾಜ್, ಎಎಸ್‌ಐ ರುಕ್ಮಯ್ಯ, ಸಿಬ್ಬಂದಿಗಳಾದ ಬಾಲಕೃಷ್ಣ, ಹರೀಶ್ಚಂದ್ರ, ರಾಮಚಂದ್ರ, ಸೀತಾರಾಮ ಗೌಡ, ಪ್ರವೀಣ್ ರೈ, ಭವಿತ್ ರೈ, ಸತ್ಯ ಪ್ರಕಾಶ್ ರೈ, ಉದಯ, ವಿಜಯೇಶ್ವರ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಕೇರಳದಿಂದ ಸರಬರಾಜಾಗುತ್ತಿತ್ತು ಗಾಂಜಾ: ಬಂಟ್ವಾಳ ತಾಲೂಕಿನ ವಿವಿಧೆಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಏಜೆಂಟರುಗಳಿಗೆ ತಲುಪಿಸುವುದು ಇವರಿಬ್ಬರ ಕೆಲಸವಾಗಿತ್ತು. ಕೇರಳದ ಉಪ್ಪಳದಿಂದ ಇವರು ಗಾಂಜಾವನ್ನು ಪಡೆದು ಬಳಿಕ ಬಾಯಾರು ರಸ್ತೆಯಾಗಿ ಕೇರಳದ ಗಡಿ ದಾಟುತ್ತಿದ್ದರು. ಬಳಿಕ ಇಲ್ಲಿನ ಏಜೆಂಟರುಗಳಿಗೆ ಸರಬರಾಜು ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರೇ ಹೆಚ್ಚಾಗಿರುವ ಕಡೆಗಳಲ್ಲಿ ತಮ್ಮ ವ್ಯವಹಾರ ಕುದುರಿಸುತ್ತಿದ್ದ ಇವರುಗಳಿಗೆ ಕಾಲೇಜು ಬಳಿಯ ಅಂಗಡಿಯವರು, ರಿಕ್ಷಾ ಚಾಲಕರು, ಯುವಕರನ್ನು ತಮ್ಮತ್ತ ಸೆಳೆಯಲು ಸಾಮರ್ಥ್ಯವಿರುವವರನ್ನು ತಮ್ಮ ಏಜೆಂಟರಾಗಿ ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಇವರಿಬ್ಬರು ಕೇವಲ ಕಮೀಶನ್‌ನ ಆಸೆಗೆ ಕೇರಳದಿಂದ ತಂದು ಕರ್ನಾಟಕದ ವಿವಿಧೆಡೆ ಏಜೆಂಟರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಹಲವಾರು ಮಂದಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಅವರ ಬಂಧನ ಇನ್ನಷ್ಟೇ ಆಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಹಲವು ಪ್ರಕರಣಗಳ ರೂವಾರಿ: ಬಂಧಿತ ಖಲಂದರ್ ಶಾಫಿ ಹಲವಾರು ಪ್ರಕರಣಗಳ ಆರೋಪಿಯಾಗಿದ್ದು, 2014ರ ಜೂ.15ರ ರಾತ್ರಿ ಪಿಲಿಂಗುಳಿ ನಿವಾಸಿ ಸತೀಶ್ ಶೆಟ್ಟಿ ಎಂಬವರು ಕನ್ಯಾನ ಪೇಟೆಯಲ್ಲಿ ವ್ಯಾಪಾರಿಯೋರ್ವರಲ್ಲಿ ಮಾತನಾಡುತ್ತಿದ್ದ ವೇಳೆ ತಲವಾರಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಶಾಫಿ ಪ್ರಮುಖ ಆರೋಪಿ. ಪೊಲೀಸರಿಂದ ಬಂಧಿಸಲ್ಪಟ್ಟು ಬಳಿಕ ಜಾಮೀನಿನಲ್ಲಿ ಹೊರ ಬಂದಿದ್ದ. ವಾರಗಳ ಹಿಂದೆ ಕನ್ಯಾನದ ಶಾಲೆಯೊಂದರಲ್ಲಿ ನಡೆದ ಮಕ್ಕಳ ಯಕ್ಷಗಾನದ ವೇಳೆ ಯಕ್ಷಗಾನವನ್ನು ನಿಲ್ಲಿಸುವಂತೆ ಇತರರಿಗೆ ಕುಮ್ಮಕ್ಕು ನೀಡಿದ ಪ್ರಮುಖ ಈತನೇ ಆಗಿದ್ದ. ಇಷ್ಟು ಮಾತ್ರವಲ್ಲದೆ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗಲಭೆ ಹಾಗೂ ಹಲ್ಲೆ ಪ್ರಕರಣಗಳಿಗೆ ಈತ ಕುಮ್ಮಕ್ಕು ನೀಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಮ್ಮ ತಂಡದ ಕಾರ್ಯಾಚರಣೆ ಶ್ಲಾಘನೀಯ: ಎಸ್‌ಪಿ- ನಮ್ಮ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆ ಶ್ಲಾಘನೀಯವಾಗಿದೆ. ಸುಮಾರು 13ಕೆಜಿ ಗಾಂಜಾವನ್ನು ನಮ್ಮ ಪೊಲೀಸರ ತಂಡ ವಶಪಡಿಸಿಕೊಂಡಿದ್ದಾರೆ. ಈ ತಂಡದಲ್ಲಿದ್ದ ಪೊಲೀಸರಿಗೆ ನಮ್ಮ ಕಡೆಯಿಂದ ಬಹುಮಾನವನ್ನು ಘೋಷಿಸಲಾಗಿದೆ ಎಂದು ಎಸ್ಪಿ ಭೂಷಣ್ ಜಿ ಬೊರಾಸೆಯವರು ’ಸುದ್ದಿ’ಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.