HomePage_Banner
HomePage_Banner
HomePage_Banner
HomePage_Banner

ಕಳ್ಳತನ ಪ್ರಕರಣವನ್ನು ಪೊಲೀಸ್ ಇಲಾಖೆ ಶೀಘ್ರ ಭೇದಿಸಲಿ ನೆ.ಮುಡ್ನೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

kallathana1 kallathanaನೀರಿಗೆ ಮೊದಲ ಆದ್ಯತೆ ಕೊಡಲು ಜಿ.ಪಂ ಸದಸ್ಯೆ ಸೂಚನೆ

 ರಸ್ತೆ ಮತ್ತಿತರ ಸಮಸ್ಯೆಗಿಂತಲೂ ಪ್ರಸಕ್ತ ಸನ್ನಿವೇಶದಲ್ಲಿ ನೀರಿಗೆ ಪ್ರಥಮ ಪ್ರಾಶಸ್ತ್ಯ ಕೊಡಿ ಎಂದು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಗ್ರಾಮ ಪಂಚಾಯತ್‌ಗೆ ಸೂಚಿಸಿದರು. ನೀರಿನ ಸಮಸ್ಯೆ ತಲೆದೋರುವ ಪ್ರದೇಶದ ಸಮಸ್ಯೆಯನ್ನು ತಕ್ಷಣ ಸ್ಪಂದಿಸಿ ಬಗೆಹರಿಸಬೇಕು, 14ನೇ ಹಣಕಾಸಿನಲ್ಲಿ ನೀರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಅವರು ಹೇಳಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿದ್ದು ಬೇಕಾದಷ್ಟು ಹಣವೂ ಇದೆ ಅದನ್ನು ಸದುಪಯೊಗಪಡಿಸಿಕೊಳ್ಳಲು ಗ್ರಾಮಸ್ಥರು ಆಸಕ್ತಿ ವಹಿಸಬೇಕು, ನೆ.ಮುಡ್ನೂರು ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿಯಾಗಿದೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

 ಮದ್ಯದಂಗಡಿಗೆ ಪರವಾನಿಗೆ ಬೇಡ

ನೆ.ಮುಡ್ನೂರನ್ನು ಮದ್ಯಮುಕ್ತ ಗ್ರಾಮವಾಗಿ ಮಾಡಬೇಕು ಮತ್ತು ಮದ್ಯದಂಗಡಿಗಳಿಗೆ ಮುಂದಕ್ಕೆ ಪರವಾನಿಗೆ ಕೊಡಬಾರದು ಎಂದು ಹಲವು ಮಂದಿ ಗ್ರಾಮಸ್ಥರು ಒತ್ತಾಯಿಸಿದರು. ಸಭೆಯಲ್ಲಿದ್ದ ಹಲವಾರು ಮಂದಿ ಚಪ್ಪಾಳೆಯ ಮೂಲಕ ಸಹಮತ ಸೂಚಿಸಿದರು. ಮದ್ಯದಂಗಡಿಗಳ ಪರವಾನಿಗೆ ಕುರಿತಾಗಿ ಗ್ರಾಮ ಪಂಚಾಯತ್ ಗಂಭೀರವಾಗಿ ಚಿಂತಿಸಬೇಕು, ಮುಂದಕ್ಕೆ ಯಾವುದೇ ಮಧ್ಯದಂಗಡಿಗಳಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲೇಬಾರದು ಎಂಬ ಒತ್ತಾಯವೂ ಕೇಳಿ ಬಂತು. ಬಳಿಕ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ಈಶ್ವರಮಂಗಲ ಮತ್ತಿತರ ಪರಿಸರದಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿದ್ದು ಅವುಗಳನ್ನು ಪೊಲೀಸರು ಸಮರ್ಥವಾಗಿ ಭೇದಿಸಬೇಕೆಂಬ ಒಕ್ಕೊರಳ ಆಗ್ರಹ ನೆಟ್ಟಣಿಗೆ ಮುಡ್ನೂರು ಗ್ರಾಮ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯು ಮಾ.25ರಂದು ಗ್ರಾ.ಪಂ ಅಧ್ಯಕ್ಷೆ ಶಂಕರಿ ಭಂಡಾರಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಹಿಂದೆ ಸಂಪ್ಯ ಪೊಲೀಸ್ ಠಾಣೆ ಮಾತ್ರ ಇರುವಾಗ ಇಲ್ಲಿ ಕಳ್ಳತನ ಪ್ರಕರಣ ವಿರಳವಾಗಿತ್ತು, ಆದರೆ ಈಶ್ವರಮಂಗಲ ಹೊರಠಾಣೆ ಆದ ಬಳಿಕ ಕಳ್ಳತನ ನಿರಂತರವಾಗಿ ನಡೆಯುತ್ತಿದೆ ಇದಕ್ಕೆ ಕಾರಣವೇನು, ಹಾಗಾದರೆ ಹೊರಠಾಣೆ ಇದ್ದರೂ ಕಳ್ಳರು ಅದನ್ನು ಕ್ಯಾರೇ ಮಾಡುತ್ತಿಲ್ಲ ಎಂಬಂತಾಯಿತಲ್ಲವೇ ಎಂದು ಹಲವು ಗ್ರಾಮಸ್ಥರು ಪ್ರಶ್ನಿಸಿದರು. ಗ್ರಾಮಸ್ಥ ಅಬ್ದುಲ್ ಕುಂಞಿ ಮಾತನಾಡಿ ಈಶ್ವರಮಂಗಲ ಪೇಟೆಯ ಆಸುಪಾಸಿನಲ್ಲಿ ತ್ಯಾಜ್ಯಗಳನ್ನೂ ಎಸೆಯಲಾಗುತ್ತಿದ್ದು ಸ್ವಚ್ಚತೆ ಇಲ್ಲದಾಗಿದೆ ಈ ಬಗ್ಗೆಯೂ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಈಶ್ವರಮಂಗಲ ಹೊರಠಣಾ ಎಎಸ್ಸೈ ಸಿ.ಟಿ ಸುರೇಶ್ ಉತ್ತರಿಸಿ ನಾನು ಈಗಷ್ಟೇ ಇಲ್ಲಿಗೆ ಎಎಸ್ಸೈ ನೆಲೆಯಲ್ಲಿ ನಿಯುಕ್ತಿಗೊಂಡಿರುತ್ತೇನೆ, ಇಲ್ಲಿನ ಗ್ರಾಮಸ್ಥರ ಒತ್ತಾಯವನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥ ರಾಮ ಮೇನಾಲ ಮಾತನಾಡಿ ಈಶ್ವರಮಂಗಲ ಪರಿಸರದಲ್ಲಿ ನೈತಿಕ ಪೊಲೀಸ್‌ಗಿರಿ ನಡೆಯುತ್ತಿದ್ದು ಅದನ್ನು ಜಾತಿ, ಮತ ಧರ್ಮ ನೋಡದೆ ಪೊಲಿಸರು ಮಟ್ಟ ಹಾಕಬೇಕೆಂದು ಆಗ್ರಹಿಸಿದರು. ಗ್ರಾಮಸ್ಥ ಸುರೇಶ್ ಸಾಂತ್ಯ ಮಾತನಾಡಿ ಕಲ್ಲು ಸಾಗಾಟದ ಲಾರಿಗಳು ಅತೀ ವೇಗದಲ್ಲಿ ಈ ಪರಿಸರದಲ್ಲಿ ಹೋಗುತ್ತಿದ್ದು ಇದರಿಂದಾಗಿ ನಾಗರಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಈ ಬಗ್ಗೆ ಪೊಲಿಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಂಡರು. ಉತ್ತರಿಸಿದ ಎಎಸ್ಸೈ ಸಿ.ಟಿ ಸುರೇಶ್ ಅಂತಹ ಲಾರಿಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಈಶ್ವರಮಂಗಲವು ಕೇರಳ ಕರ್ನಾಟಕ ಗಡಿಪ್ರದೇಶವಾಗಿರುವ ಕಾರಣ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಬೇಕೆಂದೂ ಹಲವರು ಆಗ್ರಹಿಸಿದರು. ಗಡಿ ಪ್ರದೇಶದ ಅಲ್ಲಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕೆಂದೂ ಮತ್ತೆ ಕೆಲವರು ಆಗ್ರಹಿಸಿದರು.

ಹಕ್ಕು ಪತ್ರ ಸಿಕ್ಕಿದ್ದರೂ ಆರ್‌ಟಿಸಿ ಸಿಕಿಲ್ಲ: 94.ಸಿ ಮುಖಾಂತರ ಫಲಾನುಭವಿಗಳಿಗೆ ಹಕ್ಕು ಪತ್ರ ಲಭಿಸಿದ್ದರೂ ಆರ್‌ಟಿಸಿ ಮಾತ್ರ ಸಿಕ್ಕಿಲ್ಲ. ಇದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಈ ಬಗ್ಗೆ ಅಗತ್ಯ ಕ್ರಮವನ್ನು ತಕ್ಷಣವೇ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದರು. ಪಿಡಿಓ ಹೆಚ್.ಟಿ ಸುನಿಲ್ ಅವರು ಸಮಸ್ಯೆಯ ಕುರಿತಾಗಿ ಮಾಹಿತಿ ನೀಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದರು.

ಕುಡಿಯುವ ನೀರನ್ನು ಕೃಷಿಗೆ ಬಳಸುವವರಿದ್ದಾರೆ: ಪಂಚಾಯತ್ ಕುಡಿಯುವ ನೀರನ್ನು ಕೆಲವರು ಕೃಷಿಗೆ ಉಪಯೋಗಿಸುತ್ತಿದ್ದಾರೆ ಈ ಬಗ್ಗೆ ಪಂಚಾಯತ್‌ನಿಂದ ಕ್ರಮವಾಗಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಮಾತನಾಡಿ ಕುಡಿಯುವ ನೀರನ್ನು ಕೃಷಿಗೆ ಬಳಸಲು ಅವಕಾಶವಿಲ್ಲ, ಕುಡಿಯುವ ನೀರು ಎಲ್ಲರಿಗೂ ಸರಿಯಾಗಿ ಸಿಗಬೇಕು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ಗ್ರಾಮಸ್ಥ ಸುರೇಶ್ ಸಾಂತ್ಯ ಮಾತನಾಡಿ ನೆ.ಮುಡ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನದ್ದೇ ಹೆಚ್ಚಿನ ಸಮಸ್ಯೆಯಿದೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಬಗ್ಗೆ ಸರ್ವೆ ನಡೆಸಬೇಕು ಎಂದು ಹೇಳಿದರು. ಪಂಚಾಯತ್ ವ್ಯಾಪ್ತಿಯ ಪೈಪ್, ಗೇಟ್‌ವಾಲ್ ಮೊದಲಾದವುಗಳನ್ನು ಪಂಚಾಯತ್‌ನ ಅಧಿಕೃತರು ಹೊರತುಪಡಿಸಿ ಇತರರು ಮುಟ್ಟಿದರೆ ಅಂತವರ ವಿರುದ್ದ ಗ್ರಾ.ಪಂ ಕ್ರಮ ಜರುಗಿಸಬೇಕೆಂಬ ಒತ್ತಾಯವೂ ಕೇಳಿ ಬಂತು.

ಬೀದಿ ನಾಯಿ, ಹುಚ್ಚುನಾಯಿ ನಿಯಂತ್ರಿಸಿ: ಈಶ್ವರಮಂಗಲ ಪರಿಸರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದ್ದು ಶಾಲೆಗಳಿಗೆ ತೆರಳುವ ಮಕ್ಕಳಿಗೆ ಮತ್ತು ನಡೆದಾಡುವ ನಾಗರಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರೋರ್ವರು ಸಭೆಯ ಗಮನ ಸೆಳೆದರು. ಬೀದಿ ನಾಯಿ ಹೆಚ್ಚಾಗಿರುವ ಪರಿಣಾಮ ಹುಚ್ಚು ನಾಯಿಗಳೂ ಇವೆ ಇದಕ್ಕೆ ಗ್ರಾ.ಪಂ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಯಿತು.

ಗಾಳಿಮುಖ, ಕರ್ನೂರು ಪ್ರದೇಶಗಳ ಸಮಸ್ಯೆ ನಿವಾರಿಸಿ: ಗಾಳಿಮುಖ, ಕರ್ನೂರು ,ಕೊಟ್ಯಾಡಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಿದ್ದು ಜನರು ತೊಂದರೆಗೊಳಗಾಗಿದ್ದಾರೆ ಎಂದು ಗ್ರಾಮಸ್ಥರೋರ್ವರು ಪ್ರಸ್ತಾಪಿಸಿದರು. ಗಾಳಿಮುಖ ಕರ್ನೂರು ಮೊದಲಾದ ಕಡೆಗಳಿಗೆ ೨ ತಿಂಗಳಾದರೂ ವಿದ್ಯುತ್ ಬಿಲ್‌ನ್ನು ಇಲಾಖೆ ಕೊಟ್ಟಿಲ್ಲ ಏಕೆ ಎಂದೂ ಪ್ರಶ್ನಿಸಲಾಯಿತು. ಈ ಬಗ್ಗೆ ಗಮನಹರಿಸುವುದಾಗಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಭರವಸೆ ನೀಡಿದರು. ಮಕ್ಕಳ ಶಾಲಾ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಬಾರದೆಂದು ಮೆಸ್ಕಾಂ ಇಲಾಖೆಯವರಲ್ಲಿ ಕೇಳಿಕೊಳ್ಳಲಾಯಿತು

ಇತರ ಬೇಡಿಕೆಗಳು: ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಡುಕೋಣ ಹಾವಳಿಯಿದ್ದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಸುರುಳಿಮೂಲೆಯಲ್ಲಿ ಪದವಿ ಕಾಲೇಜು ಸ್ಥಾಪನೆಯಾಗಬೇಕೆಂದು ಸುರೇಶ್ ಸಾಂತ್ಯ ಆಗ್ರಹಿಸಿದರು. ಗ್ರಾಮ ಸಭೆಗಳಿಗೆ ಎಲ್ಲ ಇಲಾಖೆಯವರೂ ಬಂದು ಮಾಹಿತಿ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಚರ್ಚೆಯಿಂದ ಗ್ರಾಮದ ಅಭಿವೃದ್ದಿ ಸಾಧ್ಯ-ಅನಿತಾ: ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಗ್ರಾಮ ಸಭೆಗಳಲ್ಲಿ ವಿವಿಧ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಚರ್ಚೆಯಾದರೆ ಮಾತ್ರ ಗ್ರಾಮದ ಅಭಿವೃದ್ದಿಯಾಗುತ್ತದೆ ಎಂದರು. ಗ್ರಾಮದ ಅಭಿವೃದ್ದಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ, ಉದ್ಯೋಗ ಖಾತರಿ ಮೂಲಕ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೀರನ್ನು ಕಾಪಾಡುವ ಮೂಲಕ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕೆಂದು ಅವರು ಹೇಳಿದರು. ತಾ.ಪಂ ಯೋಜನಾಧಿಕಾರಿ ಗಣಪತಿ ಭಟ್ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ಫೌಝಿಯಾ ಇಬ್ರಾಹಿಂ, ಗ್ರಾ.ಪಂ ಸದಸ್ಯರಾದ ಅಬ್ದುಲ್ಲಾ ಕೆ, ಅಸ್ಮಾ ಕೊಟ್ಯಾಡಿ, ವಿಜಯಾ, ಸುರೇಶ್ ನಾಯ್ಕ, ಇಬ್ರಾಹಿಂ ಎಂ.ಬಿ, ಲೀಲಾವತಿ, ವತ್ಸಲಾ, ಸಂಶುದ್ದೀನ್ ಪಿ.ಕೆ, ಕೆ.ಎಂ ಮುಹಮ್ಮದ್ ಕುಂಞಿ, ಮಾಧವಿ, ಲಲಿತಾ, ಆಯಿಶಾ ಡಿ.ಎಂ, ಇಬ್ರಾಹಿಂ ಕೆ, ಅಬ್ದುಲ್ ಖಾದರ್ ಎನ್, ಇಂದಿರಾ, ರಮೇಶ್ ರೈ, ಪುಷ್ಪಾವತಿ, ಬಾಬು ಎನ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.