ನೆಲ್ಯಾಡಿ: ದುಬೈ ನೆಲ್ಯಾಡಿ ಫ್ರೆಂಡ್ಸ್ ಇದರ 7ನೇ ವರ್ಷದ ಮಹಾಸಭೆ ಇತ್ತೀಚೆಗೆ ದುಬೈ ಅಲ ಕೂಜ್ನ ಗ್ರಾಂಡ್ ಸಿಟಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಜರಗಿತು.
ಸಭೆಯನ್ನು ನೆಲ್ಯಾಡಿ ಫ್ರೆಂಡ್ಸ್ನ ಗೌರವಾಧ್ಯಕ್ಷ ಯುಸೂಫ್ ಅತ್ತಾಜೆ ಉದ್ಘಾಟಿಸಿದರು. ಹಾಲಿ ಅಧ್ಯಕ್ಷ ಇಸಾಕ್ ಸಾಹೇಬ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಪ್ಪಿಯವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಪ್ರಸ್ತುತ ವರ್ಷದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ, ಅರಸಿನಮಕ್ಕಿಯಲ್ಲಿ 3೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಖಲಂದರ್ ಷಾ ಜುಮಾ ಮಸೀದಿ ಹಾಗೂ ಕಡಬ ಪೊಸೋಳಿಗೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬದ್ರಿಯಾ ಜುಮಾ ಮಸೀದಿಯ ಕಾಮಗಾರಿಗಳನ್ನು ಮುಂದಿನ ಚಾಲ್ತಿ ವರ್ಷದಲ್ಲಿ ಪೂರ್ಣಗೊಳಿಸುವ ಬಗ್ಗೆ ಕಾರ್ಯಯೋಜನೆ ಹಮ್ಮಿಕೊಳ್ಳಲಾಯಿತು.
ನಂತರ 2017-18ನೇ ಸಾಲಿಗೆ ಹಾಲಿ ಸಮಿತಿಯನ್ನೇ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು. ಅದರಂತೆ ಅಧ್ಯಕ್ಷರಾಗಿ ಇಸಾಕ್ ಸಾಹೇಬ್, ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಅಪ್ಪಿ, ಜೊತೆ ಕಾರ್ಯದರ್ಶಿಯಾಗಿ ಗಫಾರ್ ಕೆ.ಇ., ಕೋಶಾಧಿಕಾರಿಯಾಗಿ ರಜಾಕ್ ಕೊಕ್ಕಡ ಪುನರಾಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಜರ್ ನೆಲ್ಯಾಡಿ, ಹನೀಫ್ ಕೋಲ್ಪೆ, ಮದನಿ ಸಿ.ಕೆ., ಅಶ್ರಫ್ ಎಂ.ಕೆ., ಸಲೀಂ ಕೋಲ್ಪೆ, ಇಸ್ಮಾಯಿಲ್ ಕೊಕ್ಕಡ, ಖಲಂದರ್ ಇಕ್ಬಾಲ್ ಆಯ್ಕೆಗೊಂಡರು. ಸಲಹೆಗಾರರಾಗಿ ಯುಸೂಫ್ ಅತ್ತಾಜೆ ಹಾಗೂ ಲೆಕ್ಕ ಪರಿಶೋಧಕರಾಗಿ ಮನ್ಸೂರು ಮೊರಂಕಳ ನೇಮಕಗೊಂಡರು. ಕಾರ್ಯಕ್ರಮದಲ್ಲಿ ಗಫಾರ್ ಕೆ.ಇ.ಸ್ವಾಗತಿಸಿ, ರಫೀಕ್ ಅಪ್ಪಿ ವಂದಿಸಿದರು.