HomePage_Banner
HomePage_Banner

ಕಣ್ಮರೆಯಾದ ಕಾಮತ್… ಪರಮಾತ್ಮನ ಲೋಕ ಸೇರಿದ ಸಾಂಸ್ಕೃತಿಕ ದಿಗ್ಗಜ ಚಿದಾನಂದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ತನ್ನ ಕೊನೆಯ ಚಿತ್ರ ‘ಅಂತು’ ಕೊಂಕಣಿ ಚಿತ್ರದಲ್ಲಿ ಕಾಣಿಸಿಕೊಂಡಿರುವ ಚಿದಾನಂದ ಕಾಮತ್

 

ಪುತ್ತೂರು: ಸಾಂಸ್ಕೃತಿಕ ರಂಗದ ಮೇರುಪರ್ವತ ಎಂದೇ ಬಿಂಬಿತವಾಗಿರುವ, ಕನ್ನಡ ನಾಡಿನ ಜನರ ಜೀವನಾಡಿಯಲ್ಲಿ ಡಿಂಡಿಮ ಕಾಮತ್ ಎಂದು ಕರೆಸಿಕೊಂಡಿದ್ದ ’ಕಲಾ ತಪಸ್ವಿ’ ಚಿದಾನಂದ ಕಾಮತ್ ಕಾಸರಗೋಡುರವರು ವಿಧಿವಶರಾದರು. ಜು. 23ರ ತಡರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದರು. ಮೃತರು ಪತ್ನಿ ಅನಿತಾ ಕಾಮತ್, ಪುತ್ರ ಕಿರಣ್‌ರಾಜ್, ಪುತ್ರಿ ನೀತಾರವರನ್ನು ಅಗಲಿದ್ದಾರೆ.
ಸಾಂಸ್ಕೃತಿಕ ಲೋಕದ ದಿಗ್ಗಜ: ಆಧುನಿಕತೆಯ ಪರ್ವದಲ್ಲಿ ಉಂಟಾಗಿರುವ ಪ್ರವಾಹದ ನಡುವೆಯೂ ಪಾರಂಪರಿಕ ಕಲಾ ಸಾಹಿತ್ಯ ಕ್ಷೀಣಿಸುತ್ತಿರುವ ಇಂದಿನ ದಿನಮಾನದಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರವನ್ನು ಕಟ್ಟಿಕೊಂಡು ಪುಟ್ಟ ಮಕ್ಕಳಿಗೆ ವೇದಿಕೆ ನೀಡುವ ಮೂಲಕ ಅವರ ಪ್ರತಿಭೆಗಳನ್ನು ಅರಳಿಸುತ್ತಿರುವ ಕಾಮತ್‌ರವರು ಕೂಡ ಓರ್ವ ಹುಟ್ಟು ಕಲಾವಿದ. ಕರಾವಳಿ ಕರ್ನಾಟಕದ ಕಲೆ, ಸಾಂಸ್ಕೃತಿಕ ಭೂಪಟದಲ್ಲಿ ಪ್ರಾಚೀನ ಕಾಲದಿಂದಲೂ ಕಾಸರಗೋಡಿನದು ವಿಶಿಷ್ಠ ಕೊಡುಗೆ. ಇಂತಹ ಕಾಸರಗೋಡಿನಿಂದ ಕರ್ನಾಟಕಕ್ಕೆ ಬಂದು ಕನ್ನಡವೇ ಉಸಿರು ಎಂಬಂತೆ ಕನ್ನಡಾಂಭೆಯ ಸೇವೆ ಮಾಡುತ್ತಾ ಕನ್ನಡಕ್ಕಾಗಿ ದುಡಿಯುತ್ತಿರುವ ಓರ್ವ ಸಾಧನಾಶೀಲ ಸಂತ. ವಿದ್ಯಾರ್ಥಿ ಜೀವನದಲ್ಲೇ ನಾಟಕ ರಂಗದಲ್ಲಿ ಕಾಣಿಸಿಕೊಂಡ ಕಾಮತ್‌ರವರು ರಂಗಭೂಮಿಯಲ್ಲಿ ಸೇವೆ ಮಾಡುತ್ತಾ ಬಂದಿರುವ ಓರ್ವ ಪ್ರಬುದ್ಧ ರಂಗನಟ. ನಾಟಕದೊಂದಿಗೆ ಗ್ಲಾಮರ್ ಬದುಕಿನ ಸಿನಿಮಾ ಕ್ಷೇತ್ರದಲ್ಲೂ ಪಾತ್ರ ನಿರ್ವಹಿಸಿದ್ದಾರೆ. ಬಾರಿಸು ಕನ್ನಡ ಡಿಂಡಿಮವ ಎನ್ನುವ ಕಲಾ ತಂಡದೊಂದಿಗೆ ದೇಶ ವಿದೇಶದಲ್ಲಿ ಕನ್ನಡದ ಸದ್ದು ಮಾಡುವ ಮೂಲಕ ಅದೆಷ್ಟೋ ಮಕ್ಕಳ ಪ್ರತಿಭೆಗಳಿಗೆ ಜೀವ ತುಂಬಿಸಿದ ಮೇರು ವ್ಯಕ್ತಿತ್ವದ ಕಿರಣಗಳು ಇನ್ನೂ ಪ್ರಭೆ ಬೀರುತ್ತಲೇ ಅಸ್ತಂಗತವಾಗಿರುವುದು ಸಾಂಸ್ಕೃತಿಕ ಲೋಕದಲ್ಲಿ ದಿಗ್ಭ್ರಮೆಗೆ ಒಳಗಾಗಿಸಿದೆ.
ಕಾಸರಗೋಡಿನಿಂದ ಕರ್ನಾಟಕಕ್ಕೆ: ಕಾಮತ್‌ರವರು ಹುಟ್ಟಿದ್ದು ವಿಟ್ಲದಲ್ಲಿ ದಿ. ಕೆ. ಶಿವರಾಯ ಕಾಮತ್ ಮತ್ತು ಹೇಮಾವತಿ ಕಾಮತ್‌ರವರ ಪುತ್ರರಾಗಿ ಜನಿಸಿದ ಚಿದಾನಂದ ಕಾಮತ್‌ರವರು ಬೆಳೆದದ್ದು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಅಲ್ಲಿಂದ ಕರ್ನಾಟಕಕ್ಕೆ ಬಂದರೂ ಕಾಸರಗೋಡು ಎಂಬ ಹೆಸರನ್ನು ಬಿಡಲಿಲ್ಲ. ಕಾಸರಗೋಡಿನಲ್ಲೇ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ಇವರು 1981 ರಲ್ಲಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಶುರುಮಾಡುತ್ತಾರೆ. ವೃತ್ತಿಯ ನಡುವೆಯೂ ನಾಟಕದಲ್ಲಿ ಅಭಿನಯಿಸುವುದನ್ನು ಮರೆಯಲಿಲ್ಲ. ಮುಂದಕ್ಕೆ  1982ರಲ್ಲಿ ಉಜಿರೆಯ ಅನಿತಾ ಕಾಮತ್ ಎಂಬವರನ್ನು ಮದುವೆಯಾಗುವ ಮೂಲಕ ಗೃಹಸ್ಥ ಜೀವನಕ್ಕೆ ಹೆಜ್ಜೆಯಿಡುತ್ತಾರೆ. ಹೊಸ ಬಾಳಿನ ಹೊಸ್ತಿಲನ್ನು ದಾಟಿದ ಮರುವರ್ಷದಲ್ಲೇ ಅಂದರೆ 1983ರಲ್ಲಿ ಇವರು ಸರಕಾರಿ ನೌಕರಿಗೆ ಆಯ್ಕೆಯಾಗುತ್ತಾರೆ. ಕಾಸರಗೋಡಿನಿಂದ ನೇರವಾಗಿ ಕರ್ನಾಟಕದ ಕಾರ್ಕಳಕ್ಕೆ ಬಂದ ಇವರು ಕಾರ್ಮಿಕ ಇಲಾಖೆಯಲ್ಲಿ ಕೆಲಸಕ್ಕೆ ಮುನ್ನುಡಿ ಬರೆಯುತ್ತಾರೆ. ಇಲ್ಲೂ ಕೂಡ ರಾಜ್ಯ ಸರಕಾರಿ ನೌಕರರ ಸಂಘದ ಸಾಂಸ್ಕೃತಿಕ ಕಾರ‍್ಯದರ್ಶಿಯಾಗಿ ಸರಕಾರಿ ನೌಕರರಲ್ಲಿರುವ ಪ್ರತಿಭೆಗಳನ್ನು ಅರಳಿಸುವಲ್ಲಿ ಪ್ರಯತ್ನಿಸುತ್ತಾರೆ. ಎಲ್ಲೇ ಹೋದರೂ ಸಾಂಸ್ಕೃತಿಕ ಕ್ಷೇತ್ರವನ್ನು ಬಿಡದ ಕಾಮತ್‌ರವರು ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಜನಮಾನಸದಲ್ಲಿ ಅಚ್ಚು ಮೂಡಿಸಿರುವುದು ಶ್ಲಾಘನೀಯ.
ಬದುಕೊಂದು ನಾಟಕ ಶಾಲೆ : ಕಾಮತ್‌ರವರು 7ನೇ ತರಗತಿ ವಿದ್ಯಾರ್ಥಿಯಾಗಿರುವಾಗಲೇ ಭಕ್ತ ಪ್ರಹ್ಲಾದ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದಾರೆ. ಹೈಸ್ಕೂಲ್ ದಿನಗಳಲ್ಲಿ ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಅಭಿನಯ, ಛದ್ಮವೇಷ ಸ್ಪರ್ಧೆಯಲ್ಲಿ ಪ್ರತಿ ವರ್ಷ ಪ್ರಥಮ ಬಹುಮಾನ ಪಡೆಯುತ್ತಿದ್ದ ಇವರು 1976ರಲ್ಲಿ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರ ತುಳುನಾಡ ಸಾಹಿತ್ಯ ಕಲಾಮಂಡಳಿ ಕಂಪೆನಿಗೆ ಸೇರಿ ದೇಶದಾದ್ಯಂತ ಸಂಚರಿಸುವ ಮೂಲಕ ರಂಗನಟನಾಗಿ ಪರಿಚಯಗೊಂಡರು. ಕಾಸರಗೋಡಿನಲ್ಲಿ ’ಯವನಿಕಾ’ ಎಂಬ ನಾಟಕ ತಂಡದ ಸ್ಥಾಪಕ ಸದಸ್ಯರಾಗಿದ್ದುಕೊಂಡು 1976ರಿಂದ ಸುಮಾರು 500ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ ಮೇರುನಟ. ಕಾರ್ಕಳ, ಕಾಸರಗೋಡು, ಕುಂದಾಪುರ ಹೀಗೆ ನಾಡಿನ ಹಲವು ಕಡೆಗಳಲ್ಲಿ ನಾಟಕ ತಂಡ ಕಟ್ಟಿದ ಕಲಾಪೋಷಕ. 1981ರಲ್ಲಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಸಂದರ್ಭದಲ್ಲೂ ಖ್ಯಾತ ನಾಟಕಕಾರ ದಿ.ವಿಶುಕುಮಾರ್‌ರವರ ನಾಟಕ ತಂಡದಲ್ಲಿ ಸಂಜೆಯ ವೇಳೆಗೆ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಅಲ್ಲಿಂದ ಕಾರ್ಕಳದಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ರಂಗನಟನಾಗಿ ಅಪಾರ ಜನಪ್ರಿಯತೆ ಪಡೆದ ಕಾಮತ್‌ರವರು ’ಕಿರಣ್ ಕಲಾವಿದರು’ ಎನ್ನುವ ಸಂಸ್ಥೆ ಹುಟ್ಟು ಹಾಕಿ ರಂಗ ಚಟುವಟಿಕೆಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ನಾಟಕ ಅಕಾಡೆಮಿ ಮುಖೇನ ರಂಗತರಬೇತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಹಲವಾರು ವಿದ್ಯಾರ್ಥಿಗಳಲ್ಲಿ ನಾಟಕದ ಅಭಿರುಚಿಯನ್ನು ಮೂಡಿಸಿದ್ದಾರೆ. ವೃತ್ತಿಯಿಂದ ನಿವೃತ್ತಿಗೊಂಡ ಬಳಿಕವೂ ಹಲವಾರು ಬೀದಿ ನಾಟಕ ತಂಡದಲ್ಲಿ ಸಕ್ರೀಯ ಕಲಾವಿದನಾಗಿ ಗುರುತಿಸಿಕೊಳ್ಳುತ್ತಿರುವ ಕಾಮತ್‌ರವರು ತನ್ನ ಬದುಕನ್ನೇ ನಾಟಕ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಜನ್ಮಭೂಮಿ ಕಾಮತ್‌ರವರ ಹುಟ್ಟಿಗೆ ಕಾರಣವಾದರೆ, ಕರ್ಮಭೂಮಿ ಅವರ ಬದುಕಿಗೆ ಆಸರೆಯಾದರೆ, ರಂಗಭೂಮಿ ಅವರಿಗೊಂದು ಹೆಸರು ಕೊಟ್ಟಿದೆ. ಪುತ್ತೂರಿನ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಗುರುತಿಸಿಕೊಂಡಿದ್ದ ಇವರ ಪ್ರತೀ ವರ್ಷದ ’ಆಟಿದ ಕೂಟ’ದಲ್ಲಿ ಸಂಭ್ರಮಿಸದವರು ಇಲ್ಲ. ಇತ್ತೀಚೆಗಷ್ಟೇ ಲಯನ್ಸ್ ಕ್ಲಬ್‌ನಲ್ಲಿಯೂ ಸದಸ್ಯರಾಗಿ ಸೇರ್ಪಡೆಗೊಂಡಿದ್ದರು.
ಕಾಮತ್‌ರವರು ಅಭಿನಯಿಸಿದ ಪ್ರಮುಖ ನಾಟಕಗಳು: ಕಾಮತ್‌ರವರ ಅಭಿನಯವನ್ನು ನೋಡಿದರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಬಾಲ್ಯದಲ್ಲಿ ’ಭಕ್ತ ಪ್ರಹ್ಲಾದ’ನ ಮೂಲಕ ಬಣ್ಣ ಹಚ್ಚಿದ ಇವರು ಅಭಿನಯಿಸಿದ ಪ್ರಮುಖ ನಾಟಕಗಳೆಂದರೆ, ದಿ.ವಿಶುಕುಮಾರ್‌ರವರ ಡೊಂಕು ಬಾಲದ ನಾಯಕರು,ಮನೆಯಿಂದ ಮಸಣಕ್ಕೆ,ಕುಂದಾಪುರದ ಕುಳ್ಳಪ್ಪುರವರ ಮೂರು ಮುತ್ತು, ಬೇಲೂರು ಕೃಷ್ಣಮೂರ್ತಿಯವರ ತ್ಯಾಗಿ ಮತ್ತು ಜ್ವಾಲೆ, ಕಿರುತೆರೆ ನಟ ಶ್ರೀನಿವಾಸ್ ಪ್ರಭು ನಿರ್ದೇಶನದ ಬಂದಾ ಬಂದಾ ಸರದಾರ ನಾಟಕಗಳು ಕಾಮತ್‌ರವರಿಗೆ ಹೆಸರು ತಂದು ಕೊಟ್ಟ ನಾಟಕಗಳಾಗಿವೆ.
ಬೆಳ್ಳಿಪರದೆಯ ಮೇಲೂ ಕಾಮತ್ ಬಣ್ಣಗಾರಿಕೆ : ಕಾಮತ್‌ರವರು ನಾಟಕದಲ್ಲಿ ಮಾತ್ರವಲ್ಲದೆ ಸಿನಿಮಾ ರಂಗದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಹಲವು ಕನ್ನಡ, ಕೊಂಕಣಿ, ತುಳು ಸಿನಿಮಾಗಳಲ್ಲಿ ಪಾತ್ರ ಮಾಡಿದ ಇವರು ತನ್ನ 24ನೇ ವಯಸ್ಸಿನಲ್ಲೇ ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ. 1980ರಲ್ಲಿ ಪ್ರಥಮ ಮಹಿಳಾ ನಿರ್ದೇಶಕಿ ಪ್ರೇಮಾ ಕಾರಂತ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ ಫಣಿಯಮ್ಮದಲ್ಲಿ ಕಠೀಭಟ್ಟನಾಗಿ ಅಭಿನಯಿಸಿದ್ದಾರೆ. ಶೃಂಗೇರಿ ರಮೇಶ್ ಬೇಗಾರ್‌ರವರ ವಿಡಿಯೋ ಚಿತ್ರ ’ಊರಿನ ಮಾರಿ’ಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರು ಅಭಿನಯಿಸಿದ ’ ಅಂತರಂಗದ ಮೃದಂಗ’ ಮತ್ತು ’ಮಡಿಲ ಮಂದಾರ’ ಕನ್ನಡ ಚಿತ್ರಗಳು ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ.ಸುಂದರ್ ರೈ ಮಂದಾರ ನಿರ್ಮಾಣದ ’ ಪನೊಡಾ ಬೋಡ್ಚಾ ಗುಡ್ಡೆದ ಭೂತ ಅಲ್ಲದೆ ಇನ್ನಷ್ಟೇ ತೆರೆಕಾಣಲಿರುವ ಅಂಬಾರ್ ಕೇಟರರ‍್ಸ್ ಇತ್ಯಾದಿ ತುಳು ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ ಕಾಮತ್‌ರವರು ಕೊಂಕಣಿಯ ಉಜ್ವಾಡ್ ಕನ್ನಡದ ಕನಸು ಕಣ್ಣು ತೆರೆದಾಗ ಸಿನಿಮಾದಲ್ಲಿಯೂ ಪಾತ್ರ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರುವ ಕೊಂಕಣಿ ಚಿತ್ರ ಅಂತುವಿನಲ್ಲಿ ಕಾಮತ್‌ರವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.
ಕಿರುತೆರೆಯಲ್ಲಿ ಕಾಮತ್: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ‘ಪ್ರೀತಿ ಎಂಬ ಮಾಯೆ’ ಧಾರಾವಾಹಿಯಲ್ಲಿ ನಾಯಕಿಯ ತಂದೆಯಾಗಿ ಅಭಿನಯ, ಗುಗ್ಗು ನನ್ ಮಕ್ಳು ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗದಲ್ಲಿ ಹಾಸ್ಯ ಪಾತ್ರ ನಿರ್ವಹಣೆ, ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಂಡ ಶಿವಧ್ವಜ್ ನಿರ್ದೇಶನದ ಗೊತ್ತಾನಗ ಪೊರ್ತಾಂಡ್ ಕೇಬಲ್ ನೆಟ್‌ವರ್ಕ್‌ನಲ್ಲಿ ಪ್ರಸಾರಗೊಂಡ ಮಂದಾರ ನಿರ್ದೇಶನದ ’ನಮ ತೆಲಿಪುಗ’,’ಬಾಬಣ್ಣ ಬೂಬಣ್ಣ’ ಇತ್ಯಾದಿ ಧಾರಾವಾಹಿಯಲ್ಲೂ ಪ್ರಧಾನ ಹಾಸ್ಯ ಪಾತ್ರ ನಿರ್ವಹಿಸಿದ್ದಾರೆ. ಕಿರುಚಿತ್ರಗಳಾದ ಕಲ್ಕುಡ ಕಲ್ಲುರ್ಟಿ, ಸಸ್ಪೆನ್ಸ್ ಇತ್ಯಾದಿ ಚಿತ್ರಗಳಲ್ಲಿ ಅಲ್ಲದೆ ಮಲಯಾಳಂ ಆಲ್ಬಮ್‌ನಲ್ಲಿಯೂ ಕಾಮತ್‌ರವರು ತಮ್ಮ ಅಭಿನಯ ನೀಡಿದ್ದಾರೆ. ಸ್ಪಷ್ಟ ಉಚ್ಛಾರವನ್ನು ಹೊಂದಿದ್ದು, ಮನಸ್ಸಿಗೆ ನಾಟುವ ರೀತಿಯ ಮಾತುಗಾರಿಕೆಯನ್ನು ಹೊಂದಿರುವುದು ಕಾಮತ್‌ರವರ ಇನ್ನೊಂದು ಪ್ರತಿಭೆ. ಅದನ್ನು ತರವಾಡು ಮನೆ ಎಂಬ ಸಾಕ್ಷ್ಯ ಚಿತ್ರಕ್ಕೆ ಧ್ವನಿ ನೀಡುವ ಮೂಲಕ ತೋರಿಸಿದ್ದಾರೆ.
ಸಾಂಸ್ಕೃತಿಕ ಲೋಕದಲ್ಲಿ ಪಯಣ : ಸಿನಿಮಾ, ನಾಟಕ ರಂಗದ ಮೂಲಕ ತನ್ನನ್ನು ಗುರುತಿಸಿಕೊಂಡಿರುವ ಕಾಮತ್‌ರವರು ಸಾಂಸ್ಕೃತಿಕ ಸಂಘಟಕರಾಗಿಯೂ ಬಹಳಷ್ಟು ಹೆಸರು ಮಾಡಿದವರು, ಮಾಡುತ್ತಾ ಇರುವವರು. ಈ 60ರ ಹರೆಯದಲ್ಲೂ ಅವರಲ್ಲಿರುವ ಸಾಂಸ್ಕೃತಿಕ ಸಂಘಟನಾ ಕೌಶಲ್ಯತೆಯನ್ನು ಮೆಚ್ಚಲೇ ಬೇಕಾಗಿದೆ. ನಿರರ್ಗಳವಾಗಿ ಮಾತನಾಡುವ ವಾಕ್ ಚಾತುರ್ಯವನ್ನು ಹೊಂದಿರುವ ಇವರು ಬಹಳಷ್ಟು ಕಡೆಗಳಲ್ಲಿ ಕಾರ‍್ಯಕ್ರಮ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕಾರ‍್ಯಕ್ರಮ ನಡೆಸಿಕೊಡುವ ನಾ ಸೋಮೇಶ್ವರರವರಂತೆ ಸ್ಪಷ್ಟ ನಿರರ್ಗಳ ಮಾತುಗಾರಿಕೆ ಹೊಂದಿರುವ ಕಾಮತ್‌ರವರ ಕಾರ‍್ಯಕ್ರಮ ನಿರೂಪಣೆಯನ್ನು ಕೇಳುವುದೇ ಸೊಗಸು. 2002ರಲ್ಲಿ ಪುತ್ತೂರಿಗೆ ಆಗಮಿಸಿದ ಕಾಮತ್‌ರವರು ಬೊಳುವಾರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಾರೆ. ಆ ಮನೆಯಿಂದಲೇ ಅವರ ಸಾಂಸ್ಕೃತಿಕ ಪಯಣ ಪುತ್ತೂರಲ್ಲಿ ಆರಂಭವಾಗುತ್ತದೆ. 2004ರಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಎಂಬ ಕಲಾ ಕೇಂದ್ರವೊಂದನ್ನು ಹುಟ್ಟು ಹಾಕುತ್ತಾರೆ. ಅಂದಿನಿಂದ ಇಂದಿನವರೆಗೆ 13 ವರ್ಷಗಳಿಂದ ಈ ಸಂಸ್ಥೆಯಡಿಯಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಪ್ರತಿಭೆಗಳನ್ನು ಗುರುತಿಸುವುದು, ಸಾಧಕರಿಗೆ ಸನ್ಮಾನ, ಅಭಿನಂದಿಸುವುದು, ಕನ್ನಡ ಭಾಷಾ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದು ಇಂತಹ ಹಲವು ಕಾರ‍್ಯಕ್ರಮಗಳನ್ನು ಈ ಸಂಸ್ಥೆಯಡಿ ನಡೆಸಿಕೊಂಡು ಬಂದಿದ್ದಾರೆ. ರಾಷ್ಟ್ರೀಯ ಸಂಸ್ಥೆಗಳಂತೆ ಇಂದಿಗೂ ಪುತ್ತೂರಲ್ಲಿ ಜೀವಂತ ಹಾಗೂ ಕ್ರಿಯಾಶೀಲವಾಗಿರುವ ಸಂಘಟನೆ ಎಂದರೆ ಅದು ’ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು’ ಎಂಬುದು ಸತ್ಯ.
ಬಾರಿಸು ಕನ್ನಡ ಡಿಂಡಿಮವ… : ಕಾಮತ್‌ರವರ ಕಲ್ಪನೆಗಳೇ ಹಾಗೇ ಅದಕ್ಕೊಂದು ರೂಪುರೇಷೆ ಇರುತ್ತದೆ. ಅವರ ಯಾವುದೇ ಕಾರ‍್ಯಕ್ರಮಗಳಿಗೆ ಸೋಲು ಎಂಬುದೇ ಇಲ್ಲ. ಅವರು ಹಾಕಿಕೊಳ್ಳುವ ಕಾರ‍್ಯಕ್ರಮಗಳಲ್ಲಿ ಒಂದು ಅರ್ಥ ಇರುತ್ತದೆ. ಪ್ರತಿಭೆಯ ಅನಾವರಣ ಇರುತ್ತದೆ. ಉತ್ಸಾಹಕ್ಕೊಂದು ಪ್ರೋತ್ಸಾಹ ಇರುತ್ತದೆ. ಹೀಗೆ ಕಟ್ಟಿಕೊಂಡ ಸಂಸ್ಥೆಯೇ ಬಾರಿಸು ಕನ್ನಡ ಡಿಂಡಿಮವ. ಕವಿ ಕುವೆಂಪುರವರ ಆಶಯ ಏನಿತ್ತೋ ಗೊತ್ತಿಲ್ಲ ಆದರೆ ಕಾಮತ್‌ರವರು ಮಾತ್ರ ‘ಬಾರಿಸು ಕನ್ನಡ ಡಿಂಡಿಮವ’ದ ಮೂಲಕ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆ ನೀಡಿ ಅವರ ಪ್ರತಿಭೆಗಳ ಅನಾವರಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. 2007 ಜನವರಿಯಲ್ಲಿ ಬೊಳುವಾರಿನ ವೇದಿಕೆಯಲ್ಲಿ ಕಾಮತ್‌ರವರು 10 ಮಕ್ಕಳನ್ನು ನಿಲ್ಲಿಸಿ ’ಬಾರಿಸು ಕನ್ನಡ ಡಿಂಡಿಮವ’ಹಾಡು ಹಾಡಿಸಿದ್ದರು. ಇದೇ ಡಿಂಡಿಮವ ತಂಡ ಕಟ್ಟಲು ಕಾರಣವಾಯಿತು. ಹಾಗೇ ಆರಂಭವಾಗಿ 10ನೇ ವರ್ಷದಲ್ಲಿ ಮುನ್ನೆಡೆಯುತ್ತಿರುವ ಡಿಂಡಿಮವ ತಂಡದಲ್ಲಿ 2ನೇ ತರಗತಿಯಿಂದ 12ನೇ ತರಗತಿವರೆಗಿನ ವಿವಿಧ ಪ್ರತಿಭೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿದ್ದಾರೆ. ಜಾನಪದ, ಶಾಸ್ತ್ರೀಯ, ಸಿನಿಮೀಯ ಇತ್ಯಾದಿ ನೃತ್ಯ, ಹಾಡುಗಾರಿಕೆ, ಏಕಪಾತ್ರಾಭಿನಯ, ಮಿಮಿಕ್ರಿ, ಜಾದೂ ಇತ್ಯಾದಿ ಸೇರಿದಂತೆ ಕನ್ನಡಪರ ಹಲವು ಕಾರ‍್ಯಕ್ರಮಗಳನ್ನು ನೀಡುವ ಪ್ರತಿಭಾವಂತ ಪುಟಾಣಿಗಳ ತಂಡ ಇದಾಗಿದೆ. 2 ರಿಂದ 3 ಗಂಟೆಗಳ ಕನ್ನಡಪರ ಕಾರ‍್ಯಕ್ರಮ ನೀಡುವ ತಂಡ ಈಗಾಗಲೇ 362 ಪ್ರದರ್ಶನಗಳನ್ನು ಕೊಟ್ಟಿದೆ. ಹೈದರಾಬಾದ್, ದೆಹಲಿ, ಮೈಸೂರು, ಬೀದರ್, ಕುದುರೆಮುಖ, ಕೇರಳ ಸೇರಿದಂತೆ ರಾಜ್ಯ, ಹೊರರಾಜ್ಯದಲ್ಲೂ ಪ್ರದರ್ಶನ ನೀಡಿದ್ದಾರೆ. 10 ವರ್ಷಗಳಲ್ಲಿ ಸುಮಾರು 248 ಪ್ರತಿಭೆಗಳು ತಂಡದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ನನ್ನ ಮಗನಲ್ಲಿಯೂ ಪ್ರತಿಭೆ ಇದೆ. ಆದರೆ ಅವಕಾಶ ಇಲ್ಲ ಎಂದೇಳುವ ಅದೆಷ್ಟೋ ಹೆತ್ತವರಿಗೆ ಬಾರಿಸು ಕನ್ನಡ ಡಿಂಡಿಮವ ತಂಡ ತಮ್ಮ ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ನೀಡಿದೆ. ವಿಶೇಷ ಪ್ರತಿಭಾವಂತ ಮಕ್ಕಳಿದ್ದರೆ ಅವರಿಗೆ ವಯಸ್ಸಿನ ಮಿತಿ ಇರುವುದಿಲ್ಲ ೩ವರ್ಷದ ಪುಟಾಣಿ ಕೂಡ ಇವರ ತಂಡದಲ್ಲಿ ಹಾಡಿರುವುದು ಉಲ್ಲೇಖನೀಯ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಆ ಪ್ರತಿಭೆಗೊಂದು ವೇದಿಕೆ ನೀಡಿ ಪ್ರೋತ್ಸಾಹ ನೀಡುವ ಕಾಮತ್‌ರವರ ಸೇವೆಗೆ ಅದೆಷ್ಟೋ ಮಕ್ಕಳು ಖುಷಿಯಿಂದ ಚೆಲ್ಲುವ ಮುಗ್ದ ನಗೆಗಿಂತ ಇನ್ನೇನು ಬೇಕು.
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ… : ಕಾಮತ್‌ರವರ ಸಾಂಸ್ಕೃತಿಕ ಪಯಣಕ್ಕೆ ಕೊನೆ ಎಂಬುದೇ ಇಲ್ಲ. 60ರ ವಯಸ್ಸಿನಲ್ಲೂ 30ರ ತರುಣನಂತೆ ಕೆಲಸ ಮಾಡುವ ಕಾಮತ್‌ರವರು ಸಾಂಸ್ಕೃತಿಕ ಬಿಟ್ಟು ಬೇರೇನೂ ಗೊತ್ತಿಲ್ಲ ಅನ್ನುವಷ್ಟರಮಟ್ಟಿಗೆ ಮುಟ್ಟಿದ್ದರು. ಕವಿವಾಣಿಯಂತೆ ’ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ..ಎದೆ ತುಂಬಿ ಹಾಡಿದೆನು ಅಂದು ನಾನು’ ಎಂಬ ಸಾಲುಗಳಲ್ಲಿರುವ ಅರ್ಥದಂತೆ ಕಾಮತ್‌ರವರು ಸಾಂಸ್ಕೃತಿಕ ಲೋಕದಲ್ಲಿ ಸುತ್ತುತ್ತಲೇ ಇದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರತಿಷ್ಠಿತ ಆರ್ಯಭಟಪ್ರಶಸ್ತಿ, ಜೀವಮಾನ ಸಾಧಕ ಪ್ರಶಸ್ತಿ ಕನ್ನಡ ರತ್ನ ಇತ್ಯಾದಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ಇವರು ’ಕಾಮತ್ ಸರ್ ಇನ್ನೂ ಬೇಕಿತ್ತು’ ಅನ್ನುವಷ್ಟರಮಟ್ಟಿಗೆ ಜನಮಾನಸಲ್ಲಿ ನೆಲೆಯಾಗಿದ್ದರು.
ವೈಯುಕ್ತಿಕ ಜೀವನ: ವೈಯುಕ್ತಿಕವಾಗಿ ಹೇಳಬೇಕಾದರೆ ಕಾಮತ್‌ರವರು ಓರ್ವ ಸಜ್ಜನ ಸರಳ ವ್ಯಕ್ತಿ. ಬೆಳಿಗ್ಗೆಯಿಂದ ಸಂಜೆ ತನಕವೂ ಒಂದೇ ರೀತಿಯ ಮಾನಸಿಕ ಸ್ಥಿತಿಯನ್ನು ಹೊಂದಿರುವ ಶಾಂತ ಸ್ವಭಾವದ ನಗುಮುಖದ ಕಾಮತ್‌ರವರು ಯಾರನ್ನೂ ಕಂಡರೂ ವಿನಯತೆಯಿಂದ ಮಾತನಾಡಿಸುತ್ತಾರೆ. 2007ರಿಂದ ಪುತ್ತೂರು ಪರ್ಲಡ್ಕದಲ್ಲಿ ಕಲಾಸ್ಪೂರ್ತಿ ಎನ್ನುವ ಮನೆಯೊಂದನ್ನು ಕಟ್ಟಿಕೊಂಡು ಪತ್ನಿ ಅನಿತಾ ಕಾಮತ್ ರವರೊಂದಿಗೆ ವಾಸ್ತವ್ಯವಿದ್ದ ಇವರ ಸಾಂಸಾರಿಕ ಜೀವನವೂ ಅಚ್ಚುಕಟ್ಟಾಗಿತ್ತು. ಮಗಳು ನೀತಾ, ಅಳಿಯ ಸಂತೋಷ್‌ರವರೊಂದಿಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿದ್ದಾರೆ. ಮಗ ಕಿರಣ್‌ರಾಜ್, ಸೊಸೆ ಕಾವ್ಯ ಅಮೇರಿಕಾದ ಚಿಕಾಗೋದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಮೊಮ್ಮಗಳು ಆರ್ಣವಿ, ಮೊಮ್ಮಗ ವಿವಾನ್ ಜೊತೆಯಲ್ಲಿ ಚಿಕಾಗೋದಲ್ಲಿ ವಾಸ್ತವ್ಯವಿದ್ದಾರೆ.
ಇವರ ಕಲಾಕ್ಷೇತ್ರದ ಕೊನೆಯ ಕಾಣಿಕೆಯಾಗಿ ’ಅಂತು’ ಕೊಂಕಣಿ ಚಿತ್ರದಲ್ಲಿ ಕುಟುಂಬದ ಹಿರಿಯ ಆಧಾರಸ್ಥಂಭವಾಗಿ ಪ್ರಧಾನಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಇವರ ಅಗಲುವಿಕೆ ನಿಜ ಕುಟುಂಬದ ಆಧಾರಸ್ಥಂಭ ಕಳೆದುಕೊಂಡಂತಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಬಗ್ಗೆ ಜು. 22ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಜು. 28ಕ್ಕೆ ಇದರ ಆಡಿಯೋ ಬಿಡುಗಡೆಗೊಳ್ಳಲಿದೆ. ಆಗಸ್ಟ್‌ನಲ್ಲಿ ಚಿತ್ರ ತೆರೆ ಕಾಣಲಿದೆ. ಅಂತು ಚಿತ್ರದೊಂದಿಗೆ ಇನ್ನೆಂತೂ ಕಾಣದಾದ ಕಾಮತ್ ರವರಿಗೆ ಅವರ ಅಪಾರ ಅಭಿಮಾನಿ ಮಿತ್ರ ಬಳಗ ಕಂಬನಿ ಮಿಡಿದಿದೆ.
ಜು. 26ಕ್ಕೆ ಅಂತ್ಯಕ್ರಿಯೆ: ಇವರ ಪುತ್ರ ಅಮೇರಿಕಾದಿಂದ ಮತ್ತು ಪುತ್ರಿ ತಿರುವನಂತಪುರಂನಿಂದ ಬರಲಿರುವ ಕಾರಣ ಮೃತದೇಹದ ಅಂತ್ಯಕ್ರಿಯೆ ಜು. 26ರಂದು ನಡೆಯಲಿದೆ. ಇದೀಗ ಮೃತದೇಹವನ್ನು ಮಂಗಳೂರಿನ ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಶೀತಲೀಕರಣ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ.

ಜುಲೈ 26 ರಂದು ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ವಠಾರ, ಬೊಳುವಾರು ಕಾರ್ಪೋರೇಶನ್ ಬ್ಯಾಂಕ್ ಎದುರುಗಡೆ ಕಾಮತ್ ರವರ ಮೃತದೇಹವನ್ನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12ರ ತನಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.

About The Author

Related posts

1 Comment

  1. Sudarshan

    ಸರ್ ಕಾಮತರೇ, ನೀವು ಸದ್ದು,ಸುದ್ದಿ ಇಲ್ಲದೇ ಆನಂದ ಲೋಕ ಸೇರಿದಿರಿ,ನಮ್ಮೆಲ್ಲರನ್ನೂ ದು:ಖ. ಸಾಗರದಲ್ಲಿ ತೇಲಿಸಿದರಿ. ನನ್ನ ಮಗನ ದೃಷ್ಟಿ ಇಲ್ಲವಾದಾಗ ಧೈರ್ಯ. ತುಂಬಿ ನಮ್ಮ ದು;ಖದಲ್ಲಿ ಬಾಗಿಯಾಗಿದ್ದೀರಿ. ನಿಮಗಿದೋ ಶೃದ್ದಾಂಜಲಿ. ನಿಮಗೆ ಸ್ವರ್ಗ ಪ್ರಾಪ್ತಿಯಾಗಲಿ. ಮತ್ತೊಮ್ಮೆ ಹುಟ್ಟಿಬಂದು ಪುತ್ತೂರ ಚಿನ್ನರ ಲೋಕದಲ್ಲಿ ಡಿಂಡಿಮ ಬಾರಿಸಿರಿ.

    ಸುದರ್ಶನ್ ಪುತ್ತೂರು ಕುಟುಂಬ ಮತ್ತು ನಿಮ್ಮ ಹಿತ ಚಿಂತಕರು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.