HomePage_Banner
HomePage_Banner

ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಆಲಂಕಾರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ನಿಂಗರಾಜುರವರಿಗೆ ದ.ಕ.ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                                   ನಿಂಗರಾಜು
                                          ಸತೀಶ್ ಭಟ್

ಪುತ್ತೂರು: ದ.ಕ.ಜಿಲ್ಲಾ ಮಟ್ಟದ 2017ನೇ ಸಾಲಿನ ಶ್ರೇಷ್ಠ ಶಿಕ್ಷಕರ ಪ್ರಶಸ್ತಿಗೆ ಪ್ರೌಢಶಾಲಾ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಲಂಕಾರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ನಿಂಗರಾಜು ಆಯ್ಕೆಗೊಂಡಿದ್ದಾರೆ. ಮಂಗಳೂರಿನಲ್ಲಿ ಸೆ.೫ರಂದು ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೇಷ್ಠ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಗೊಂಡ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನವಾಗಲಿದೆ.

ಪ್ರೌಢಶಾಲಾ ವಿಭಾಗದಲ್ಲಿ ಸತೀಶ್ ಭಟ್:
ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿರುವ ಸತೀಶ್ ಭಟ್‌ರವರು 27 ವರ್ಷಗಳಿಂದ ಗಣಿತ,ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 21 ವರ್ಷಗಳ ಕಾಲ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಹಾಗೂ ಕಳೆದ ಆರು ವರ್ಷಗಳಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1989ರಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದ ಇವರು ಇಲ್ಲಿ 21 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, 2011ರಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. ಇಲ್ಲಿ ಕಳೆದ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ 3 ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಯೋಗ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಯೋಗ ತರಬೇತಿಯೂ ನೀಡುತ್ತಿದ್ದಾರೆ. ಅಲ್ಲದೇ ತಾಲೂಕು ಮಟ್ಟದ ಗಣಿತ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಅಜೀವ ಸದಸ್ಯರಾಗಿದ್ದು ವಿಜ್ಞಾನ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಸಿಐಯಲ್ಲಿ ತೊಡಗಿಕೊಂಡಿರುವ ಇವರು ಬಿಳಿನೆಲೆ ಜೆಸಿಐ ಅಧ್ಯಕ್ಷರಾಗಿ, ೨೦೦೩ರಲ್ಲಿ ಜೆಸಿಐ ವಲಯ ಉಪಾಧ್ಯಕ್ಷರಾಗಿದ್ದರು. ಜೆಸಿಐ ವಲಯ ತರಬೇತುದಾರರಾಗಿ, ಪ್ರೈಮ್ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅತ್ಯುತ್ತಮ ತರಬೇತುದಾರರಾಗಿರುವ ಇವರು ಇಲ್ಲಿಯ ತನಕ 1500 ವ್ಯಕ್ತಿತ್ವ ತರಬೇತಿಗಳನ್ನು ನೀಡಿದ್ದಾರೆ. ಸ್ಪಂದನ ಟಿವಿಯಲ್ಲಿ ಗಣಿತ ಪಾಠಗಳನ್ನು ನೀಡಿದ್ದಾರೆ. ವಿಜ್ಞಾನ, ಗಣಿತ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ. 1997ರಲ್ಲಿ ಬಿಳಿನೆಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸಮ್ಮೇಳನದ ಕಾರ್ಯದರ್ಶಿಯಾಗಿ, 1999ರಲ್ಲಿ ಕಡಬ ಕನ್ನಡ ಸಾಹಿತ್ಯ ಸಮ್ಮೇಳನದ ಉಪಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಳೆದ 3 ವರ್ಷಗಳಿಂದ ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿರುವ ಸತೀಶ್ ಭಟ್‌ರವರು ಶಾಲೆಯ ಬೆಳವಣಿಗೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಶಾಲೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಿಸ್ಕೋ, ಒರೆಕಲ್ ಕಂಪನಿ ಹಾಗೂ ಹಳೆವಿದ್ಯಾರ್ಥಿಗಳ ಸಹಾಯದಿಂದ ಸಂಸ್ಥೆಗೆ ೩೦ ಲ್ಯಾಪ್‌ಟಾಪ್‌ಗಳು, ಪ್ರೋಜೆಕ್ಟರ್, ಟಿವಿ, ಕ್ರೀಡಾ ಸಲಕರಣೆಗಳು, ಔಷಧೀಯ ಸಸ್ಯೋದ್ಯಾನ, ತೋಟಗಾರಿಕಾ ಇಲಾಖೆಯಿಂದ ೩೫೦ ಸಸಿಗಳನ್ನು ನೆಡಲು ಕ್ರಮ ಕೈಗೊಂಡಿದ್ದಾರೆ. ಸಿಸ್ಕೋ ತಂಡದ ಸಹಾಯದಿಂದ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಿದ್ದಾರೆ. ಇಟಾಲಿಕ್ ಹ್ಯಾಂಡ್ ರೈಟಿಂಗ್ ಎಲ್ಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೩ಕ್ಕಿಂತಲೂ ಅಧಿಕ ಫಲಿತಾಂಶ ಬರುವಲ್ಲಿ ಸತೀಶ್ ಭಟ್‌ರವರು ಹಲವು ಕ್ರಮ ಕೈಗೊಂಡಿದ್ದಾರೆ. ಇವರಿಗೆ 1992ರಲ್ಲಿ ಧರ್ಮಸ್ಥಳ ಯೋಗ ಕೇಂದ್ರದಿಂದ ಅತ್ಯುತ್ತಮ ಯೋಗ ಅಧ್ಯಾಪಕ, ಮಂಗಳೂರು ಜಿಲ್ಲಾ ಸ್ಕೌಟ್‌ನಿಂದ 1993ರಲ್ಲಿ ಅತ್ಯುತ್ತಮ ಸ್ಕೌಟ್ ಅಧ್ಯಾಪಕ ಪ್ರಶಸ್ತಿಯೂ ಬಂದಿತ್ತು.

ಪ್ರಸ್ತುತ ಇವರು ಕೊಂಬೆಟ್ಟು ಸರಕಾರಿ ಜೂನಿಯರ್ ಕಾಲೇಜು ಹಿಂಭಾಗ’ಸನ್ನಿಧಿ’ನಿವಾಸಿಯಾಗಿದ್ದು ಕೃಷ್ಣಭಟ್ ಹಾಗೂ ಅನುಸೂಯ ದಂಪತಿ ಪುತ್ರ. ಬೆಳ್ತಂಗಡಿ ತಾಲೂಕಿನ ಫಡಿಂಜೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿ ಎಸ್‌ಎಂಎಸ್‌ಪಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಉಡುಪಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್‌ಸಿ, ಮಂಗಳೂರು ಸರಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್ ತರಬೇತಿ ಪಡೆದುಕೊಂಡಿದ್ದಾರೆ. ಧರ್ಮಸ್ಥಳ ಯೋಗಕೇಂದ್ರದಲ್ಲಿ ಯೋಗ, ಮಂಗಳೂರು ಜಿಲ್ಲಾ ಸ್ಕೌಟ್‌ನಲ್ಲಿ ಸ್ಕೌಟ್ ತರಬೇತಿಯೂ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಂಗರಾಜು:
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿರುವ ಆಲಂಕಾರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ನಿಂಗರಾಜುರವರು 2002ರಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2002ರಲ್ಲಿ ಕೋಡಿಂಬಾಳ ಗ್ರಾಮದ ಪನ್ಯ ಗುರಿಯಡ್ಕ ಶಾಲೆಗೆ ಪ್ರಭಾರ ಮುಖ್ಯಶಿಕ್ಷಕರಾಗಿ ನೇಮಕಗೊಂಡು ಶಿಕ್ಷಕ ವೃತ್ತಿ ಆರಂಭಿಸಿದ್ದರು. ಆ ಬಳಿಕ ಇಲಾಖೆಯ ಆದೇಶದಂತೆ ಐತ್ತೂರು ಗ್ರಾಮದ ನೇಲ್ಯಡ್ಕ, ಕುಟ್ರುಪ್ಪಾಡಿ ಗ್ರಾಮದ ಕಾರ್ಕಳ, ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ಶಾಲೆಗಳಲ್ಲಿ ನಿಯೋಜನೆ ಮೇಲೆ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2013ರಲ್ಲಿ ಪೂರ್ಣಕಾಲಿನ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಆಲಂಕಾರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದರು. ಈ ಮಧ್ಯೆ 2014ರಲ್ಲಿ ಆಲಂಕಾರು ಕ್ಲಸ್ಟರ್‌ನ ಪ್ರಭಾರ ಸಿಆರ್‌ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಹಿಂದಿನ ಬಿಇಒ ಶಶಿಧರ್ ಜಿ.ಎಸ್.ರವರು ತಾಲೂಕಿನಲ್ಲಿ ಜಾರಿಗೆ ತಂದ ‘ವಿಷನ್ ಪುತ್ತೂರು’ಯೋಜನೆಗೆ ಆಲಂಕಾರು ಶಾಲೆ ಸೇರ್ಪಡೆಗೊಂಡಿತ್ತು. ಈ ವೇಳೆ ನಿಂಗರಾಜುರವರು ಸಮುದಾಯದ ಜೊತೆ ಸೇರಿಕೊಂಡು ಶಾಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕೈಗೊಂಡಿದ್ದರು. ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಗೆ ಒತ್ತುಕೊಟ್ಟು ‘ಗುಬ್ಬಚ್ಚಿ ಸ್ಪೀಕಿಂಗ್’ತರಗತಿ ಆರಂಭಿಸಿದ್ದರು. ಅಲ್ಲದೇ ವಿಶ್ವಸಂಸ್ಥೆ ಸಹಯೋಗದಲ್ಲಿ ‘ಕರಡಿಪಾಥ್’ತರಗತಿ ಆರಂಭಿಸಿ ಚೆನ್ನೈನ ಇಂಗ್ಲಿಷ್ ಕಲಿಕಾ ಸಂಸ್ಥೆಯೊಂದರಿಂದ ಅಂದಾಜು 1.30 ಲಕ್ಷ ರೂ. ಮೌಲ್ಯದ ಪರಿಕರಗಳನ್ನು ಶಾಲೆಗೆ ತರಿಸಿಕೊಂಡಿದ್ದರು. ಇಲ್ಲಿ ಎರಡು ವರ್ಷದಿಂದ ಎಲ್‌ಕೆಜಿ,ಯುಕೆಜಿ’ಮಕ್ಕಳ ಮನೆ’ ತರಗತಿಯೂ ನಡೆಯುತ್ತಿದೆ. ಎಲ್‌ಕೆಜಿ, ಯುಕೆಜಿಯಲ್ಲಿ 38 ಮಕ್ಕಳು ಕಲಿಯುತ್ತಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಕಂಪ್ಯೂಟರ್, ಸಂಗೀತ,ಕರಾಟೆ ತರಗತಿಯೂ ನೀಡಲಾಗುತ್ತಿದೆ. ತರಗತಿವಾರು ಧ್ವನಿವರ್ಧಕ, 12 ಮಕ್ಕಳು ಏಕಕಾಲದಲ್ಲಿ ಬಾರಿಸುವ ಡ್ರಮ್‌ಸೆಟ್, ಅವರಿಗೆ ಸಮವಸ್ತ್ರ, ಕೈತೊಳೆಯುವ ನೀರಿನ ಘಟಕ, ಶೌಚಾಲಯ,ಅಡುಗೆ ಮನೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಸ್‌ಡಿಎಂಸಿ ಸಹಕಾರ, ದಾನಿಗಳ ನೆರವಿನೊಂದಿಗೆ ನಿಂಗರಾಜುರವರು ಹಲವಾರು ಕ್ರಮ ಕೈಗೊಂಡಿದ್ದಾರೆ.

2015ರಲ್ಲಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟವನ್ನೂ ಆಲಂಕಾರಿನಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶಿಕ್ಷಣ ವೃತ್ತಿಯೊಂದಿಗೆ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಕೊಂಡಿರುವ ಇವರು, ಸಂಧ್ಯಾ ಸುರಕ್ಷಾ, ವಿಧವಾ ವೇತನ, ನಿರಾಶ್ರಿತರಿಗೆ ನಿವೇಶನ ಮಂಜೂರುಗೊಳಿಸುವಲ್ಲಿಯೂ ಸಹಕರಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಹಾಸ್ಟೆಲ್‌ಗೆ ಸೇರ್ಪಡೆಗೊಳಿಸಿ ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸುತ್ತಿದ್ದಾರೆ. ಮೂಲತ: ಹಾಸನ ಜಿಲ್ಲೆ ಹಾಸನ ತಾಲೂಕಿನ ಕಾರ್ಲೆಕೊಪ್ಪುಳು ಗ್ರಾಮದ ಪಾಪಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಪುತ್ರರಾದ ನಿಂಗರಾಜುರವರು ಪ್ರಾಥಮಿಕ ಶಿಕ್ಷಣವನ್ನು ತವರೂರಿನ ಶಾಲೆಯಲ್ಲಿಯೇ ಪೂರೈಸಿದ್ದರು. ಬಳಿಕ ಹಾಸನದಲ್ಲಿ ಪ್ರೌಢಶಿಕ್ಷಣ, ಹಾಸನ ಸರಕಾರಿ ಕಲಾ ಕಾಲೇಜಿನಲ್ಲಿ ಪ.ಪೂ., ಪದವಿ ಶಿಕ್ಷಣ ಹಾಗೂ ಮಂಡ್ಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಟಿಸಿಎಚ್ ಪೂರ್ಣಗೊಳಿಸಿದ್ದರು. ಬಳಿಕ ಹಾಸನ ಶಾಂಭವಿ ವಿದ್ಯಾಲಯದಲ್ಲಿ ತಾತ್ಕಾಲಿಕ ಶಿಕ್ಷಕನಾಗಿ, ಹಾಸನದ ಯತೀಂದ್ರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕನಾಗಿ ಕರ್ತವ್ಯ ಆರಂಭಿಸಿದ್ದರು. ೨೦೦೨ರಲ್ಲಿ ದ.ಕ.ಜಿಲ್ಲೆಯಲ್ಲಿ ಶಿಕ್ಷಕ ಪರೀಕ್ಷೆ ಬರೆದು ಉತ್ತೀರ್ಣಗೊಂಡು ಶಿಕ್ಷಕನಾಗಿ ನೇಮಕಗೊಂಡಿದ್ದರು. ಇವರ ಪತ್ನಿ ಲಲಿತಾರವರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪುತ್ರ ರಾಮಕುಂಜ ಪ.ಪೂ.ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇನ್ನೂ ಹೆಚ್ಚಿನ ಕೆಲಸಕ್ಕೆ ಸ್ಪೂರ್ತಿ: ಸತೀಶ್ ಭಟ್
ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಬಂದಿರುವುದು ಸಂತಸ ತಂದಿದ್ದು ಇನ್ನೂ ಹೆಚ್ಚಿನ ಕೆಲಸಕ್ಕೆ ಸ್ಪೂರ್ತಿ ನೀಡಿದೆ. ಕಳೆದ 27 ವರ್ಷಗಳಿಂದ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಚನ, ಬಿಳಿಲೆನೆ ಹಾಗೂ ರಾಮಕುಂಜ ಪ್ರೌಢಶಾಲೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು, ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಪ್ರೋತ್ಸಾಹದಿಂದ ಪ್ರಶಸ್ತಿ ಬಂದಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸತೀಶ್ ಭಟ್‌ರವರು’ಸುದ್ದಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಮಾದರಿ ಶಾಲೆ ಮಾಡಬೇಕು: ನಿಂಗರಾಜು
ಆಲಂಕಾರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುಂದಿನ ಎರಡು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶವಾದ ಇಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳೇ ಇರುವುದು. ಇವರಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸಿಗಬೇಕೆಂಬ ದೃಷ್ಟಿಯಿಂದ ಎಸ್‌ಡಿಎಂಸಿ, ಹಳೆವಿದ್ಯಾರ್ಥಿ ಸಂಘ, ಜೇಸಿಐ ಆಲಂಕಾರು ಹಾಗೂ ಊರಿನವರ, ದಾನಿಗಳ ನೆರವಿನೊಂದಿಗೆ ಹಲವಾರು ಸೌಲಭ್ಯ ಒದಗಿಸಲಾಗಿದೆ. ಇದನ್ನೊಂದು ಮಾದರಿ ಶಾಲೆ ಮಾಡಬೇಕೆಂಬ ಕನಸು ಇದೆ ಎಂದು ಪ್ರಶಸ್ತಿ ಬಂದ ಸಂತಸದಲ್ಲಿ ನಿಂಗರಾಜುರವರು ‘ಸುದ್ದಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

About The Author

Related posts

2 Comments

  1. g s shashidhara

    This is the victory of vision putter enklena govt branded schools. This is tribute to vision concepts swaami vivekaananda and dr.apj kalam sir

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.