HomePage_Banner
HomePage_Banner
HomePage_Banner
HomePage_Banner

ಗೇರು ಬೆಳೆಯಿಂದ ಯಶಸ್ಸು ಕಂಡ ಕೃಷಿ ಸಾಧಕ ಸತೀಶ್ ರೈ ಕರ್ನೂರು

Puttur_Advt_NewsUnder_1
Puttur_Advt_NewsUnder_1

‘ಬರಡು ಭೂಮಿಯಲ್ಲಿ ಬಂಗಾರದ ಬೆಳೆ-1200 ಗಿಡ, 25 ಕ್ವಿಂಟಾಲ್ ಗೇರು’

ನನ್ನಲ್ಲಿ 6 ಎಕರೆಯಲ್ಲಿ ಸುಮಾರು 1200 ಗೇರು ಗಿಡ ಇದೆ. ವರ್ಷದಲ್ಲಿ ಸರಾಸರಿ 25 ಕ್ವಿಂಟಾಲ್ ಗೇರು ಬೀಜ ಪಡೆಯುತ್ತೇನೆ. ವರ್ಷದಲ್ಲಿ ಪ್ರತಿ 1 ಗಿಡಕ್ಕೆ  ಕೆ.ಜಿ.ಯಂತೆ ಪೋಟಾಸ್, ರಾಕ್, ಯೂರಿಯಾ ಮಿಕ್ಸ್ ಕೊಡುತ್ತೇನೆ. ಮೂರು ಬಾರಿ ಔಷಧಿ ಸಿಂಪಡಿಸುತ್ತೇನೆ.ಗೇರು ತೋಟವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಬರಡು ಭೂಮಿಯಲ್ಲೂ ಗೇರು ಕೃಷಿ ಮಾಡಿದರೆ ಉತ್ತಮ ಲಾಭ ಪಡೆಯಬಹುದು – ಸತೀಶ್ ರೈ ಕರ್ನೂರು, ಹಿತ್ಲುಮೂಲೆ, ಗೇರು ಕೃಷಿಕ

ಸತೀಶ್ ರೈಯವರ ಗೇರು ತೋಟವನ್ನು ನೋಡುವುದೇ ಸೊಗಸು. ತೋಟವನ್ನು ಇಟ್ಟುಕೊಂಡ ರೀತಿಯಿಂದಲೇ ಇವರು ಇಂಥ ಅದ್ಭುತ ಬೆಳೆ ಪಡೆಯುತ್ತಿದ್ದಾರೆ ಎನ್ನಬಹುದು. ಇವರು ಗೇರಿನೊಂದಿಗೆ ಭತ್ತ, ವೀಳ್ಯ, ಅಡಿಕೆ, ತರಕಾರಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದು ಓರ್ವ ಕೃಷಿ ಸಾಧಕರಾಗಿದ್ದಾರೆ – ಕುಮಾರ್ ಪೆರ್ನಾಜೆ, ಜೇನು ಕೃಷಿ ತಜ್ಞ

ಪುತ್ತೂರು: ಬೆಳೆಯುವ ಕೃಷಿಯಲ್ಲಿ ಪ್ರೀತಿ, ಮಾಡುವ ಕಾಯಕದಲ್ಲಿ ಶ್ರಮ. ದಣಿವರಿಯದ ಅವಿರತ ದುಡಿಮೆ. ಮನೆ ಮಂದಿಯ ಸಹಕಾರ ಇವಿಷ್ಟು ಇದ್ದರೆ ಈ ಭೂಮಿ ನಮ್ಮನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಮಣ್ಣನ್ನು ನಂಬಿ ಬದುಕುವವರಿಗೆ ಭೂಮಿ ತಾಯಿ ಯಾವತ್ತೂ ನಷ್ಟ ಮಾಡುವುದಿಲ್ಲ ಆತನ ಬದುಕಲ್ಲಿ ಸದಾ ಗೆಲುವಿನ ನಗೆ ಚಿಮ್ಮುತ್ತಲೇ ಇರುತ್ತದೆ. ಇಂಥ ಗೆಲುವಿನ ನಗೆಯ ಸಾಧಕ ಕೃಷಿಕರೊಬ್ಬರ ಕೃಷಿ ಬದುಕಿನ ಕಥೆಯೇ ಈ ಲೇಖನ. ಅವರು ಪುತ್ತೂರು ತಾಲೂಕಿನ ನೆಟ್ಟಣಿಗೆಮುಡ್ನೂರು ಗ್ರಾಮದ ಕರ್ನೂರು ಹಿತ್ಲುಮೂಲೆ ಸತೀಶ್ ರೈ.

ಒಂದು ಕಾಲದಲ್ಲಿ ಕುಡಿತವೆಂಬ ಚಟಕ್ಕೆ ಬಲಿ ಬಿದ್ದ ಇವರ ಬದುಕಿಗೆ ಹೊಸ ರೂಪು ಕೊಟ್ಟದ್ದು ಧರ್ಮಸ್ಥಳದ ಮದ್ಯಮರ್ಜನ ಶಿಬಿರ. ಇದೀಗ ಇವರ ಕೃಷಿ ಬದುಕಿಗೆ ನಾಡಿನುದ್ದಗಲಕ್ಕೂ ಮನ್ನಣೆ ಕೊಡುತ್ತಿರುವುದು ಇವರ ಶಿಬಿರ ಎಂಬ ಗೇರು ಕೃಷಿ ತೋಟ. ಶಿಬಿರಕ್ಕೆ ಸೇರಿ ಹೊಸ ಜೀವನ ಆರಂಭಿಸಿದ ಸತೀಶ್ ರೈಯವರು ತನ್ನ ಗೇರು ಕೃಷಿ ತೋಟಕ್ಕೂ ಶಿಬಿರ ಎಂದೇ ಹೆಸರು ಇಟ್ಟಿದ್ದಾರೆ.ಭತ್ತದಿಂದ ಹಿಡಿದು ಅಡಿಕೆ,ಕರಿಮೆಣಸು, ವೀಳ್ಯದೆಲೆ, ಚಿಕ್ಕು ಮಾವು, ತರಕಾರಿ ಇತ್ಯಾದಿ ಹಲವು ಬೆಳೆಗಳನ್ನು ಬೆಳೆಯುತ್ತಿರುವ ಇವರು ಸುಮಾರು 10 ಎಕರೆ ಜಾಗದಲ್ಲಿ ಕೃಷಿ ಕಾಯಕ ಮಾಡುತ್ತಿದ್ದಾರೆ. ಒಂದಷ್ಟು ಬರಡು ಭೂಮಿಯಾಗಿದ್ದ ಜಾಗದಲ್ಲಿ ಗೇರು ಕೃಷಿ ಮಾಡುವ ಮೂಲಕ ಪ್ರತಿ ವರ್ಷ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಬ್ಬರದ ಶೋಕಿ ಪ್ರಚಾರವನ್ನು ಬಯಸದೇ ಕಾಯಕದಲ್ಲೇ ದೇವರನ್ನು ಕಾಣುತ್ತಿರುವ ಇವರ ಗೇರು ಕೃಷಿ ಇಡೀ ಜಿಲ್ಲೆಗೆ ಮಾದರಿ ಕೃಷಿಯಾಗಿದೆ.

1200 ಗಿಡ, 25 ಕ್ವಿಂಟಾಲ್ ಗೇರು…. ಸತೀಶ್ ರೈಯವರು ಸುಮಾರು 6 ಎಕರೆ ಜಾಗದಲ್ಲಿ ಗೇರು ಕೃಷಿ ಮಾಡಿದ್ದಾರೆ. ಎಕರೆಗೆ 250 ಗಿಡಗಳಂತೆ ಸುಮಾರು 1200 ಗೇರು ಗಿಡಗಳನ್ನು ಹಾಕಿದ್ದಾರೆ. 6 ವರ್ಷಗಳಿಂದ ಗೇರು ಕೃಷಿಯಲ್ಲಿ ತೊಡಗಿರುವ ಇವರು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನ ಕೇಂದ್ರದ ಉಳ್ಳಾಲ-3, ಭಾಸ್ಕರ ಮತ್ತು ಸೆಲೆಕ್ಷನ್-3 ಜಾತಿಯ ಗೇರು ಗಿಡಗಳನ್ನು ನಾಟಿ ಮಾಡಿದ್ದು, ನಾಟಿ ಮಾಡಿದ 2 ವರ್ಷದಲ್ಲೇ ಫಸಲು ತೆಗೆದಿದ್ದಾರೆ.ಗಿಡಗಳನ್ನು 12 ರಿಂದ 14 ಫೀಟ್ ಅಂತರದಲ್ಲಿ ನಾಟಿ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ 25 ಕ್ವಿಂಟಾಲ್ ಗೇರು ಬೀಜವನ್ನು ಪಡೆಯುತ್ತಿರುವ ಸತೀಶ್ ರೈಯವರು ಕಳೆದ ವರ್ಷ 30 ಕ್ವಿಂಟಾಲ್ ಗೇರು ಬೀಜ ಪಡೆದಿದ್ದಾರೆ. ಈ ವರ್ಷ ಈಗಾಗಲೇ 10 ಕ್ವಿಂಟಾಲ್ ಗೇರು ಬೀಜ ಪಡೆದಿರುವ ಇವರು ಎರಡು ದಿನಕ್ಕೊಮ್ಮೆ 1 ಕ್ವಿಂಟಾಲ್ ಗೇರು ಬೀಜ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಇವರು ಗೇರು ಕೃಷಿಯಿಂದಲೇ ಪ್ರತಿವರ್ಷ ಸುಮಾರು 4 ರಿಂದ 5 ಲಕ್ಷ ರುಪಾಯಿ ಆದಾಯ ಗಳಿಸುತ್ತಿಸುತ್ತಿರುವುದು ಸತ್ಯ.

ಗಿಡಗಳ ನಾಟಿಯಲ್ಲಿ ವಿಶೇಷತೆ…. ಸತೀಶ್ ರೈಯವರ ಗೇರು ಕೃಷಿ ತೋಟವನ್ನು ವೀಕ್ಷಣೆ ಮಾಡಿದರೆ ನಮಗೆ ಬಹಳಷ್ಟು ವಿಷಯಗಳು ಅರ್ಥವಾಗುತ್ತದೆ. ಹೆಚ್ಚಿನವರು ಗೇರು ಗಿಡಗಳನ್ನು ನೆಟ್ಟು ಬಿಟ್ಟರೆ ಸಾಕು ಫಸಲು ತನ್ನಿಂದತಾನೆ ಬರುತ್ತದೆ ಎಂದು ನಂಬಿರುತ್ತಾರೆ. ಆದರೆ ಸತೀಶ್ ರೈಯವರು ಗೇರು ಗಿಡಗಳನ್ನು ಮಕ್ಕಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಗಿಡಗಳ ಬುಡಕ್ಕೆ ಮಣ್ಣು ಹಾಕುವುದು ಬಹಳ ಅಗತ್ಯ ಎನ್ನುವ ಇವರು, ಗಿಡಗಳ ಸಾಲಿನ ಎರಡು ಬದಿಯಲ್ಲೂ ಹಿಟಾಚಿ ಮೂಲಕ ಕಣಿಯ ರೀತಿಯಲ್ಲಿ ಗುಂಡಿ ಮಾಡಿದ್ದಾರೆ. ಅದರ ಮಣ್ಣನ್ನು ಗಿಡಗಳ ಬುಡಕ್ಕೆ ಹಾಕುತ್ತಾರೆ. ಮಳೆಗಾಲದಲ್ಲಿ ಈ ಕಣಿಯಲ್ಲಿ ನೀರು ನಿಲ್ಲುತ್ತಿದ್ದು ಇದರಿಂದ ಗಿಡಗಳಿಗೆ ನೀರು ಸಿಗುತ್ತದೆ ಅಲ್ಲದೆ ನೀರು ಭೂಮಿಗೆ ಇಂಗಿಸಿದಂತೆಯೂ ಆಗುತ್ತದೆ. ನೀರು ಇಂಗಿಸುವ ಕೆಲಸದ ಮೂಲಕ ಗೇರು ಗಿಡಗಳಿಗೆ ಮಣ್ಣನ್ನು ಪೂರೈಕೆ ಮಾಡುವ ಕೆಲಸವು ಇವರಿಂದ ನಡೆಯುತ್ತಿದೆ. ಫಸಲು ಬಿಡುವ ಸಮಯದಲ್ಲಿ ಮರದ ಅಡಿ ಭಾಗವನ್ನು ಸ್ವಚ್ಚವಾಗಿಟ್ಟುಕೊಳ್ಳುತ್ತಾರೆ. ಒಂದಿಷ್ಟು ಪೊದರುಗಳಿಲ್ಲದ ಇವರ ಗೇರು ಕೃಷಿ ತೋಟವನ್ನು ನೋಡಿದರೆ ನಮಗೆ ಆಶ್ಚರ್‍ಯವಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಪೋಟಾಶ್, ರಾಕ್ ಮತ್ತು ಯೂರಿಯಾವನ್ನು ಮಿಕ್ಸ್ ಮಾಡಿ ಪ್ರತಿ ಗಿಡಕ್ಕೆ 1 ಕೆ.ಜಿ.ಯಂತೆ ಕೊಡುತ್ತಾರೆ. ಫಸಲು ಬಿಡುವ ಸಮಯದಲ್ಲಿ ಮೂರು ಬಾರಿ ಔಷಧಿ ಸಿಂಪಡಿಸುತ್ತಾರೆ. ಮುಳ್ಳು ಹಂದಿಯ ಉಪದ್ರ ಬಿಟ್ಟರೆ ಇನ್ಯಾವುದೇ ಪ್ರಾಣಿ,ಕೀಟಗಳ ತೊಂದರೆ ಇಲ್ಲ ಎನ್ನುತ್ತಾರೆ ಸತೀಶ್.

ಕೃಷಿ ಸಂಶೋಧಕ….  ಸತೀಶ್ ರೈಯವರು ಪ್ರಚಾರಕ್ಕೆ ಬಯಸದ ಓರ್ವ ಕೃಷಿ ಸಾಧಕರಾಗಿದ್ದಾರೆ. ಪ್ರತಿ ವರ್ಷ ಭತ್ತ ಕೃಷಿ ಮಾಡುವ ಇವರು ಹತ್ತಿರದ ಶಾಲಾ ಮಕ್ಕಳಿಗೆ ತನ್ನ ಗದ್ದೆಯಲ್ಲಿ ಭತ್ತದ ಕೃಷಿ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ. ಭತ್ತದ ಕೃಷಿಯ ಅನುಭವ ಮತ್ತು ಮಾಹಿತಿಯನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ವೀಳ್ಯದೆಲೆಯ ಕೃಷಿಯನ್ನೂ ಮಾಡುತ್ತಿರುವ ಇವರು ಆಧುನಿಕ ರೀತಿಯಲ್ಲಿ ಸುಮಾರು 100 ಕ್ಕೂ ಅಧಿಕ ವೀಳ್ಯದೆಲೆಯ ಗೂಟಗಳನ್ನು ಬೆಳೆದಿದ್ದಾರೆ. ವಾರಕ್ಕೆ 150 ಸೂಡಿ ವೀಳ್ಯದೆಲೆ ಮಾರಾಟ ಮಾಡುತ್ತಿರುವ ಇವರು ಇದರಿಂದಲೇ ನಮ್ಮ ಜೀವನದ ಖರ್ಚು ಸಾಗುತ್ತದೆ ಎನ್ನುತ್ತಾರೆ. ಇದಲ್ಲದೆ ಅಡಿಕೆ, ಪಪ್ಪಾಯಿ, ಚಿಕ್ಕು, ಮಾವು, ಕರಿಮೆಣಸು ಇತ್ಯಾದಿ ಬೆಳೆಗಳೊಂದಿಗೆ ಜಾನುವಾರು ಸಾಕಾಣೆ ಕೂಡ ಮಾಡುತ್ತಿದ್ದಾರೆ. ಇವರ ಕೃಷಿ ಕಾಯಕಕ್ಕೆ ಪತ್ನಿ ಜಯಂತಿ ರೈ, ಪುತ್ರ ಅನೂಫ್, ಪುತ್ರಿ ಅಣ್ಣಪೂರ್ಣ ಹಾಗೂ ತಂದೆ, ತಾಯಿ ಮನೆಯವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಗೇರು ಕೃಷಿ ಉತ್ತಮ ಲಾಭದಾಯಕ ಬೆಳೆ ಎಂಬುದನ್ನು ಸತೀಶ್ ರೈ ಇಡೀ ಜಿಲ್ಲೆಗೆ ತೋರಿಸಿಕೊಟ್ಟಿದ್ದಾರೆ. ತನ್ನ ಕೃಷಿ ಸಾಧನೆಗೆ ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಇವರಿಂದ ಇನ್ನಷ್ಟು ಕೃಷಿ ಸಂಶೋಧನೆಗಳು ಮೂಡಿ ಬರಲಿ ಎನ್ನುವುದೇ ಎಲ್ಲರ ಆಶಯ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಸುದರ್ಶನ್

    ಎಂಡೋ ಸಲ್ಫಾನ್ ಖಾಯಿಲೆ ಇವರನ್ನು ಆವರಿಸಿದ್ದರೆ ಇವರಿಗೆ ಗೊತ್ತಾಗುತ್ತಿತ್ತು ಈಗ ಎಂಡೋ ಸಿಂಪರಣೆಯ ಭಯಾನಕ ಕಷ್ಟ,ನಷ್ಟಗಳು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.