HomePage_Banner
HomePage_Banner

ರಸ್ತೆ ಸಂಪೂರ್ಣ ಕೆಸರುಮಯ – ಊರವರಿಂದ ಶ್ರಮದಾನದ ಮೂಲಕ ದುರಸ್ಥಿ


ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ಚೆಂಡೆಹಿತ್ಲು ಮೂಲಕ ಕೊಂಬಾರು ಕೆಂಜಳ ಸಂಪರ್ಕ ರಸ್ತೆಯು ತೀರಾ ಹದಗೆಟ್ಟಿದ್ದು ಕೆಸರುಮಯವಾಗಿದ್ದು ಸಾರ್ವಜನಿಕ ಗ್ರಾಮಸ್ಥರು ಜಾತ್ಯಾತೀತ ಜನತಾದಳದ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬರ ನೇತೃತ್ವದಲ್ಲಿ ಹೊಂಡಗುಂಡಿಗಳಿಗೆ ಕಲ್ಲು ಹಾಗೂ ಮರದ ಹಲಗೆ ಹಾಸಿ ಶ್ರಮದಾನದ ಮೂಲಕ ತುರ್ತು ದುರಸ್ಥಿಗೊಳಿಸಿದ ಘಟನೆ ಆ.17ರಂದು ನಡೆದಿದೆ.

ಮೊದಲೇ ನಾದುರಸ್ಥಿಯಲ್ಲಿದ್ದ ನೆಟ್ಟಣ, ಚೆಂಡೆಹಿತ್ಲು-ಪುತ್ತಿಲ ಬೈಲಡ್ಕ ಮೂಲಕ ಬಿಳಿನೆಲೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯನ್ನು ಗ್ರಾಮಸ್ಥ ನಾಗರಿಕರು ಶ್ರಮದಾನದ ಮೂಲಕ ದುರಸ್ಥಿಗೊಳಿಸಿ, ಮಳೆಗಾಲದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದ್ದು ಕಳೆದ ಕೆಲವಾರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಹಳ್ಳ, ತೋಡು, ಕೆರೆಗಳು ತುಂಬಿಕೊಂಡಿದ್ದು, ಗುಂಡ್ಯ ಹೊಳೆಯಲ್ಲಿ ನೀರಿನಮಟ್ಟ ಏರಿಕೆಯಾಗಿದ್ದು ನಿರಂತರ ಹೊಸಮಠ ಸೇತುವೆ ಮುಳುಗಡೆಯಾಗುತ್ತಿದ್ದರೆ, ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ನೆಟ್ಟಣದಲ್ಲಿ ನದಿ ಸೇತುವೆ ಕೂಡ ಮುಳುಗಡೆಯಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಬದಲಿ ರಸ್ತೆಯಾಗಿರುವ ನೆಟ್ಟಣ-ಚೆಂಡೆಹಿತ್ಲು-ಪುತ್ತಿಲ ಬೈಲು ಮೂಲಕ ಬಿಳಿನೆಲೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲು ಅಡ್ಡ ದಾರಿ ಹಿಡಿದ್ದರೂ ಆಗಾಗ ಪುತ್ತಿಲ ಬೈಲಡ್ಕದಲ್ಲಿ ಭಾಗ್ಯಮಲೆಯಿಂದ ಬರುವ ಬೊಳ್ಳಾಯಿಲ ನದಿ ಕೂಡ ತುಂಬಿ ಹರಿಯುತ್ತಿದ್ದು, ಸಾರ್ವಜನಿಕರು, ಪ್ರಯಾಣಿಕರು ಪುತ್ತಲ ಬೈಲಡ್ಕ ಸೇತುವೆಯಲ್ಲಿ ಗಂಟೆಗಟ್ಟಲೆ ಕಾದು ಪ್ರವಾಹ ನೀರಿಳಿದ ಬಳಿಕ ಮುಂದೆ ಸಾಗುತ್ತಿದ್ದಂತೆ ಬಿಳಿನೆಲೆ-ಕೈಕಂಬದ ಮಧ್ಯೆ ಕೋಟೆಸಾರು ತುಂಬಿ ಹರಿಯುತ್ತಿದ್ದು ಅಲ್ಲಿಯೂ ಸಮಸ್ಯೆ ಎದುರಾಗುತ್ತಿದ್ದು ಇನ್ನೆನೂ ಸುಬ್ರಹ್ಮಣ್ಯ ಕ್ಷೇತ್ರವನ್ನು ಮುಟ್ಟುವ ಹಂತದಲ್ಲಿ ಸಾರ್ವಜನಿಕ ಪ್ರಯಾಣಿಕರು ನಿಟ್ಟಿಸಿರು ಬಿಟ್ಟು ಕುಮಾರಧಾರ ನದಿಯನ್ನು ದಾಟುತ್ತಿದ್ದಂತೆ ನದಿ ಹಾಗೂ ಕ್ಷೇತ್ರದ ಪ್ರವೇಶ ದ್ವಾರದ ಮಧ್ಯೆ ನೀರಿನ ಮಟ್ಟ ಏರಿಕೆಯಾಗಿ ಯಾತ್ರಾರ್ಥಿಗಳು ಸೇರಿದಂತೆ ಪ್ರಯಾಣಿಕರು ಕ್ಷೇತ್ರ ಸಂದರ್ಶನಕ್ಕೆ ಸಾಧ್ಯವಾಗದೇ ಸಂಕಷ್ಟಕ್ಕೊಳಗಾಗುತ್ತಿರುವ ನಿದರ್ಶನಗಳು ಕಳೆದ ಒಂದು ತಿಂಗಳಿನಿಂದೀಚೆಗೆ ಆಗಾಗ ಕಂಡುಬರುತ್ತಿದೆ.

ಆ.14ರಂದು ರಾಜ್ಯದ ಮುಖ್ಯಮಂತ್ರಿಗಳಾದ ಎಚ್‌ಡಿ ಕುಮಾರಸ್ವಾಮಿಯವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಬೇಟಿಯಾಗಲು ಹಲವಾರು ಪ್ರದೇಶಗಳಿಂದ ಬಂದಂತಹ ಜನಪ್ರತಿನಿದಿಗಳು, ನಾಯಕರು, ಸಾರ್ವಜನಿಕರು ಕುಮಾರಧಾರ ಸೇತುವೆಯಿಂದ ಮುಂದಕ್ಕೆ ಹೋಗಲು ಸಾಧ್ಯವಾಗದೆ, ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ಕಾದು ಸುಸ್ತಾಗಿ ತಿರುಗಿ ತಮ್ಮ ತಮ್ಮ ಊರುಗಳಿಗೆ ಸುತ್ತು ಬಳಸಿ ಹೋಗುವಂತಹ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಆದರೆ, ಕುಮಾರಧಾರ ನದಿಗೆ ಮೊದಲಾಗಿ ಹಲವಾರು ಕಡೆಗಳಲ್ಲಿ ಸೇತುವೆಗಳು ಮುಳುಗಿದ್ದರೂ ಮುಖ್ಯಮಂತ್ರಿಗಳ ಅಭಿಮಾನದಿಂದ ಅದೆಷ್ಟೋ ಒಳ ರಸ್ತೆಗಳಲ್ಲಿ ಸುತ್ತು ಬಳಸಿ, ಬಂದಂತಹ ಪ್ರಯಾಣಿಕರು ಇದೇ ನೆಟ್ಟಣ-ಚೆಂಡೆಹಿತ್ಲು-ಪುತ್ತಿಲ ಬೈಲಡ್ಕದ ಮೂಲಕ ಬಿಳಿನೆಲೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸಿದ್ದರು. ನಂತರ ದಿನಂಪ್ರತಿ ಸೇತುವೆಗಳು ಮುಳುಗಡೆಯಾಗುತ್ತಿದ್ದು ಇದೇ ರಸ್ತೆಯಲ್ಲಿ ತಮ್ಮ ಪ್ರಯಾಣ ಬೆಳೆಸಿದ್ದು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕೆಸರುಮಯವಾಗಿ ವಾಹನಗಳು, ಬಿಡಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆ.೧೭ರಂದು ಈ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ ಹಲವಾರು ವಾಹನಗಳು ಪುತ್ತಿಬೈಲಡ್ಕದಲ್ಲಿ ಹೊಂಡಮಯ ಕೆಸರು ರಸ್ತೆಯಲ್ಲಿ ಮುಂದೆ ಸಾಗದೇ ಸಾಲುಗಟ್ಟಿ ನಿಂತಿದ್ದು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಯ್ಯದ್ ಮೀರಾ ಸಾಹೇಬರ ವಾಹನ ಕೂಡ ಮುಂದೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ಥಳೀಯರು ಸೇರಿಕೊಂಡು ರಸ್ತೆಗೆ ಕಲ್ಲು ಹಾಗೂ ಮರದ ಹಲಗೆ ಹಾಸಿ ಹೊಂಡಗಳನ್ನು ಮುಚ್ಚಿ ಶ್ರಮದಾನ ಮಾಡುವ ಮೂಲಕ ತುರ್ತು ದುರಸ್ಥಿ ಮಾಡಿಕೊಂಡು ವಾಹನಗಳು ಮುಂದೆ ಸಾಗುವಂತೆ ಮಾಡಿದ್ದು. ಈ ರಸ್ತೆಯು ಅತೀ ಅಗತ್ಯವಾಗಿ ದುರಸ್ಥಿ ಮಾಡಬೇಕೆಂದು ಆಗ್ರಹ ವ್ಯಕ್ತಪಡಿಸಿದಲ್ಲದೇ, ಇದೇ ರಸ್ತೆಯಾಗಿ ಕೊಂಬಾರು ಗ್ರಾಮದ ಕೆಂಜಳ ಮೂಲಕ ಕೈಕಂಬ – ಗುಂಡ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಕೆಂಜಳ ನೆಟ್ಟಣ ಏಳು ಕಿ.ಮೀ.ರಸ್ತೆಯ ದುರಸ್ಥಿ ಕಾರ್ಯ ಅತೀ ಅಗತ್ಯವಾಗಿದೆ ಎಂದು ಗ್ರಾಮಸ್ಥರು ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬರ ಮುಖಾಂತರ ಮುಖ್ಯಮಂತ್ರ್ರಿಗಳಿಗೆ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ್ದು, ತನ್ನ ಕೃಷಿ ತೋಟ ಕೂಡ ಇಲ್ಲಿಯೇ ಪುತ್ತಿಲಬೈಲಿನಲ್ಲಿ ಇರುವುದರಿಂದ ತನಗೂ ಈ ರಸ್ತೆಯ ಅಗತ್ಯವಿದ್ದು ಊರಿನ ಅಭಿವೃದ್ಧಿಯ ದೃಷ್ಟಿಯಲ್ಲಿ ರಸ್ತೆ ದುರಸ್ಥಿಯಾಗಲೇ ಬೇಕಿದೆ ಎಂದು ತಿಳಿಸಿದ ಸಯ್ಯಾದ್ ಮೀರಾ ಸಾಹೇಬರು ಸರಕಾರದಲ್ಲಿ ಒತ್ತಡ ತರುವ ಮೂಲಕ ರಸ್ತೆ ದುರಸ್ಥಿಗೆ ಅನುದಾನ ಒದಗಿಸಲು ಶ್ರಮಿಸಲಾಗುವುದು ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.