ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುರಕ್ಷಾ ಫಾರ್ ವಿಮೆನ್ ಟ್ರಸ್ಟ್ನ ವತಿಯಿಂದ ಸ್ವಯಂ ರಕ್ಷಣೆಯ ಬಗ್ಗೆ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ಪ್ರಾಂಶುಪಾಲರಾದ ಗೋಪಾಲ ಗೌಡ ಡಿ. ಸ್ವಾಗತಿಸಿದರು. ಕಾರ್ಯಗಾರವನ್ನು ಪ್ರಾಯೋಜಿಸಿದ್ದ ಪುತ್ತೂರಿನ ಯಮುನಾ ಬೋರ್ವೆಲ್ಸ್ ಮಾಲಕರಾದ ಕೆ.ಎನ್ ಕೃಷ್ಣ ಶೆಟ್ಟಿ ಯವರ ಸುಪುತ್ರಿ ಕು. ಕಾವ್ಯ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಪರಿಸ್ಥಿತಿ ಎದುರಾದಾಗ ದೂರು-ಕಾನೂನುಗಳ ಮೊರೆ ಹೋಗುವ ಬದಲು ತಮ್ಮನ್ನು ತಾವೇ ಸ್ವಯಂ ರಕ್ಷಿಸುವ ಕಲೆಯ ಮೂಲಕ ರಕ್ಷಿಸಿಕೊಳ್ಳುವ ಅನಿರ್ವಾಯತೆ ಇಂದಿನ ಕಾಲದಲ್ಲಿದೆ. ಈ ಉದ್ದೇಶದಿಂದ ನಾವು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುರಕ್ಷಾ ಫಾರ್ ವಿಮೆನ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ಎಸ್. ಕಟೀಲ್ ಅವರು ಮಹಿಳೆಯರು ದೌರ್ಜನ್ಯ ಎದುರಾದ ಸಂದರ್ಭಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ತಮ್ಮದೇ ಆದ ತಂತ್ರಗಾರಿಕೆಗಳನ್ನು ಕೆಲವು ಸನ್ನಿವೇಶಗಳನ್ನು ಉದಾಹರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು. ಕಾರ್ತಿಕ್ ಎಸ್ ಅವರ ಮಾತೃಶ್ರೀಯಾದ ಶ್ರೀಮತಿ ಶೋಭಾಲತಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಯೋಜಕಿ ಕು. ಕಾವ್ಯ ಶೆಟ್ಟಿ ಎಲ್ಲರಿಗೂ ವಂದಿಸಿದರು.
ಈ ಕಾರ್ಯಗಾರವನ್ನು ಇನ್ನೂ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಆಯೋಜಿಸುವ ಯೋಜನೆಯನ್ನು ಕು. ಕಾವ್ಯ ಶೆಟ್ಟಿ ಹಮ್ಮಿಕೊಂಡಿದ್ದು , ಆಸಕ್ತರು ತಮ್ಮ ದೂರವಾಣಿ ಸಂಖ್ಯೆ 9945182408 ನ್ನು ಸಂಪರ್ಕಿಸಬೇಕೆಂದು ತಿಳಿಸಿರುತ್ತಾರೆ.