HomePage_Banner
HomePage_Banner

ವಿವೇಕಾನಂದ ಕಾನೂನು ವಿದ್ಯಾಲಯದ ವಿದ್ಯಾರ್ಥಿ ಉಜ್ವಲ್ ಬೈಕ್ ಅಪಘಾತದಿಂದ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಸಕಲೇಶಪುರ ಠಾಣಾ ವ್ಯಾಪ್ತಿಯ ಬಾಳುಪೇಟೆ ಬಳಿಯ ಕೊಂಬಾರುಕಟ್ಟೆ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕೊಲ ಗ್ರಾಮದ ಪೂರಿಂಗ ನಿವಾಸಿ, ಪುತ್ತೂರಿನ ವಿವೇಕಾನಂದ ಕಾನೂನು ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯಾಗಿದ್ದ ಉಜ್ವಲ್ ಮಂಜುನಾಥ್(22ವ.)ರವರು ಮೃತಪಟ್ಟ ದಾರುಣ ಘಟನೆ ನ.1ರಂದು ಬೆಳಿಗ್ಗೆ ನಡೆದಿದೆ.

ಮೃತ ಉಜ್ವಲ್ ಮಂಜುನಾಥ್‌ರವರು ಕೊಲ ಗ್ರಾಮದ ಪೂರಿಂಗ ನಿವಾಸಿ, ಪ್ರಗತಿಪರ ಕೃಷಿಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉದಯ ಕುಮಾರ್‌ರವರ ಏಕೈಕ ಪುತ್ರರಾಗಿದ್ದಾರೆ. ಚಾರಣ ಹಾಗೂ ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಉಜ್ವಲ್ ಮಂಜುನಾಥ್‌ರವರು ಅ.೩೧ರಂದು ಸಂಜೆ ತನ್ನ ಸಹಪಾಠಿಗಳಾದ ಬಂಟ್ವಾಳ ತಾಲೂಕಿನ ಬಾಳ್ತಿಲ ನಿವಾಸಿ ರಂಜಿತ್, ಬೆಳ್ತಂಗಡಿ ನಿವಾಸಿಗಳಾದ ಜಾಬಿದ್ ಹಾಗೂ ಕುಲುದೀಪ್‌ರವರೊಂದಿಗೆ ಎರಡು ಬೈಕ್‌ಗಳಲ್ಲಿ ಒಟ್ಟು ನಾಲ್ವರು ಹಾಸನದ ಶೆಟ್ಟಿ ಹಳ್ಳಿ ಎಂಬಲ್ಲಿನ ಹಳೆಯ ಚರ್ಚೊಂದರ ಬಳಿ ಸೂರ್ಯೋದಯದ ಸುಂದರ ಕ್ಷಣಗಳನ್ನು ಆಸ್ವಾದಿಸಿ ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿಯಲು ಹೋಗಿದ್ದರು ಎನ್ನಲಾಗಿದೆ. ನ.1ರಂದು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ಪೂರ್ವ ತಯಾರಿ ಸಿದ್ದತೆಯಲ್ಲಿ ಅ.11 ಗಂಟೆಯ ತನಕ ಕಾಲೇಜಿನಲ್ಲೇ ಇದ್ದು, ಬಳಿಕ ಎರಡು ಬೈಕಿನಲ್ಲಿ ತಲಾ ಇಬ್ಬರಂತೆ ಹಾಸನಕ್ಕೆ ಹೊರಟಿದ್ದರು ಎಂದು ವರದಿಯಾಗಿದೆ. ಶೆಟ್ಟಿ ಹಳ್ಳಿಗೆ ಮುಂಜಾವಿನ 5 ಗಂಟೆಯ ವೇಳೆಗೆ ತಲುಪಿ ಅಲ್ಲಿನ ಮುಂಜಾವಿನ ಸೂರ್ಯೋದಯದ ಸುಂದರ ಕ್ಷಣಗಳನ್ನು ವೀಕ್ಷಣೆ ಮಾಡಿ, ಫೊಟೋ ತೆಗೆಸಿಕೊಂಡಿದ್ದರು. ಉಜ್ವಲ್ ಮಂಜುನಾಥ್‌ರವರು ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ತಾನು ತೆಗೆದಿರುವ ಫೋಟೋವನ್ನು ಹಾಕಿದ್ದರು. ಬಳಿಕ ಉಪಹಾರ ಸೇವಿಸಿ ನಾಲ್ವರು ಊರಿಗೆ ವಾಪಾಸ್ಸು ಹೊರಟಿದ್ದರು.

ರಸ್ತೆ ಗುಂಡಿಗೆ ಬಿದ್ದ ಬೈಕ್: ಉಜ್ವಲ್ ಮಂಜುನಾಥ್ ಹಾಗೂ ರಂಜಿತ್‌ರವರು ಉಜ್ವಲ್‌ರವರಿಗೆ ಸೇರಿದ (ಕೆಎ ೨೧ ಡಬ್ಲ್ಯು ೧೦೦೧)ಬುಲೆಟ್ ಬೈಕ್‌ನಲ್ಲಿ ಬರುತ್ತಿದ್ದು ಉಜ್ವಲ್ ಮಂಜುನಾಥ್‌ರವರೇ ಬೈಕ್ ಚಲಾಯಿಸುತ್ತಿದ್ದರು. ಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಕೊಂಬಾರುಕಟ್ಟೆ ಎಡೆಹಳ್ಳಿ ಕ್ರಾಸ್ ಬಳಿ ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸದೆ ಉಜ್ವಲ್‌ರವರು ಚಲಾಯಿಸುತ್ತಿದ್ದ ಬೈಕ್ ಗುಂಡಿಗೆ ಬಿದ್ದು ಸ್ಕಿಡ್ ಆಗಿ ರಸ್ತೆ ಬದಿಗೆ ಎಸೆಯಲ್ಪಟ್ಟಿದೆ. ಪರಿಣಾಮ ಉಜ್ವಲ್ ಮಂಜನಾಥ್‌ರವರ ಎದೆಗೆ ಬೈಕಿನ ಹ್ಯಾಂಡಲ್ ತಾಗಿ ಬಲವಾದ ಪೆಟ್ಟಾಗಿದೆ, ಎಡ ಕೈ ಮುರಿತವಾಗಿದೆ, ತಲೆ ಹಾಗೂ ಹೊಟ್ಟೆಗೂ ಗಂಭೀರ ಗಾಯವಾಗಿದೆ. ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಸಹಪಾಠಿಗಳು ಗಾಯಗೊಂಡಿದ್ದ ಉಜ್ವಲ್ ಹಾಗೂ ರಂಜಿತ್‌ರನ್ನು ತಕ್ಷಣ ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗೊಂಡಿದ್ದ ಉಜ್ವಲ್ ಮಂಜುನಾಥ್‌ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೈಕ್‌ನ ಹಿಂಬದಿ ಸವಾರ ರಂಜಿತ್ ಅವರಿಗೂ ಗಾಯವಾಗಿದ್ದು ಬಲಕೈ ಮೂಳೆ ಮುರಿತವಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಉಜ್ವಲ್ ಮಂಜುನಾಥ್‌ರವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಸಂಜೆ ಕೊಯಿಲಕ್ಕೆ ಮೃತದೇಹ: ಬೈಕ್ ಅಪಘಾತದಲ್ಲಿ ಉಜ್ವಲ್ ಮಂಜುನಾಥ್‌ರವರು ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಮನೆಯವರು ಹಾಗೂ ಸಂಬಂಧಿಕರು ಘಟನಾ ಸ್ಥಳಕ್ಕೆ ತೆರಳಿದರು. ಹಾಸನ ಸರಕಾರಿ ಆಸ್ಪತ್ರೆಯಲ್ಲಿದ್ದ ಉಜ್ವಲ್‌ರವರ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮನೆಯವರಿಗೆ ಬಿಟ್ಟುಕೊಡಲಾಗಿದೆ. ಸಂಜೆ ವೇಳೆಗೆ ಮೃತದೇಹವನ್ನು ಮೃತರ ಸ್ವಗೃಹ ಕೊಲ ಪೂರಿಂಗಕ್ಕೆ ತರಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಸಂಚಾಲಕ ಗಣೇಶ್ ಜೋಷಿ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಮೋಹನ್‌ದಾಸ್ ಶೆಟ್ಟಿ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ, ಆಲಂಕಾರು ಸಿಎ ಬ್ಯಾಂಕ್ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

 

 

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.