ಪ್ರಶ್ನೆ ಕೇಳುವ ಮನೋಭಾವವಿದ್ದಾಗ ಸಂಶೋಧನೆ ಸಾಧ್ಯ: ಗಣರಾಜ್ ಕುಂಬ್ಳೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಪ್ರತಿಯೊಂದರ ಬಗ್ಗೆಯೂ ಕುತೂಹಲಗೊಂಡು ಪ್ರಶ್ನೆ ಕೇಳುವ ಮಕ್ಕಳ ಮನೋಭಾವವನ್ನು ಪೋಷಕರು, ಗುರುಗಳಿಂದ ಪ್ರೋತ್ಸಾಹಿಸುವ ಕೆಲಸವಾದಾಗ ಮಕ್ಕಳ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುವುದಲ್ಲದೆ, ಸಂಶೋಧನಾತ್ಮಕ ಮನಸ್ಸು ಅವರದ್ದಾಗಲು ಸಾಧ್ಯ ಎಂದು ಉಪನ್ಯಾಸಕ ಗಣರಾಜ್ ಕುಂಬ್ಳೆ ತಿಳಿಸಿದರು.

ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಭಾರತ ಸರಕಾರದ ಪ್ರತಿಷ್ಠಿತ `ಬಾಲ್ ಶಕ್ತಿ ಪುರಸ್ಕಾರ- 2019′ ಪುರಸ್ಕೃತ ವಿದ್ಯಾರ್ಥಿ ಎ.ಯು. ನಚಿಕೇತ್ ಕುಮಾರ್‌ಗೆ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ವತಿಯಿಂದ  ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಮಾತುಗಳನ್ನಾಡುತ್ತಿದ್ದರು.

ಹೊಸತನವನ್ನು ಸೃಷ್ಟಿಸುವ ಸ್ವಭಾವ ಮಕ್ಕಳದ್ದಾಗಬೇಕು. ಅವಶ್ಯಕತೆಯ ಮನೋಭಾವ ಅವರದ್ದಾದಾಗ ಹೊಸತನಗಳ ಸೃಷ್ಟಿ ಸಾಧ್ಯ. ಪ್ರಕೃತಿ ನಮಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸದೇ ಮರಗಳನ್ನಿಂದು ಹಣವನ್ನಾಗಿ ಪರಿವರ್ತಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂಶೋಧನಾತ್ಮಕ ಮನಸ್ಸುಗಳು ಕಡಿಮೆಯಾಗುತ್ತಿದ್ದು, ಆದ್ದರಿಂದ ಆರ್ಥಿಕ ಕ್ರಾಂತಿಯಾಗಿದ್ದರೂ ಆರೋಗ್ಯ ಕ್ರಾಂತಿಯಾಗಿಲ್ಲ. ಪ್ರಕೃತಿಯ ಒಡಲಲ್ಲಿ ಹಲವಾರು ಆರೋಗ್ಯದಾಯಕ, ಔಷಧೀಯ ವಸ್ತುಗಳಿವೆ. ನಮ್ಮ ಹಿರಿಯರು ಅದನ್ನು ಗುರುತಿಸಿ ನಮಗೆ ನೀಡಿದ್ದರೂ ಇಂದು ನಾವು ಅದನ್ನು ಕಡೆಗಣಿಸುತ್ತಿದ್ದೇವೆ. ಆದ್ದರಿಂದ ಇಂದಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಸಂಶೋಧನೆಗಳಾಗಬೇಕು. ಋಷಿ ಸದೃಶ್ಯರಾಗಿ ತ್ಯಾಗಮಯ ಮನೋಭಾವದಿಂದ ಸಂಶೋಧನೆಯಲ್ಲಿ ತೊಡಗಿದಾಗ ಆತ ವಿಶ್ವಕ್ಕೆ ಕೊಡುಗೆ ನೀಡಲು ಸಾಧ್ಯವಿದೆ. ನಚಿಕೇತ್ ಕೂಡಾ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ, ಜಗತ್ತಿಗೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ನಚಿಕೇತ್‌ನೊಂದಿಗೆ ಅಭಿನಂದನೆ ಸ್ವೀಕರಿಸಿದ ಆತನ ತಂದೆ ಯು.ಎಲ್. ಉದಯಕುಮಾರ್ ಮಾತನಾಡಿ, ಸಣ್ಣಗಿರುವಾಗ ನಚಿಕೇತ್ ಚಿಗುಟು ಸ್ವಭಾವನಾಗಿದ್ದರೂ, ಎಳವೆಯಲ್ಲಿಯಲ್ಲಿಯೇ ಪ್ರತಿಯೊಂದರ ಕುರಿತು ಪ್ರಶ್ನಿಸುವ, ಸಂಶೋಧನಾತ್ಮಕ ಗುಣ ಅವನದ್ದಾಗಿತ್ತು. ಆದ್ದರಿಂದ ಹಂತ ಹಂತವಾಗಿ ಸಾಧನೆ ಮಾಡಿ, ಕಲ್ಪಿಸದ ಸೌಭಾಗ್ಯ ನಮ್ಮದಾಗಿದೆ. ಇದು ಆತ ಕಲಿಯುತ್ತಿರುವ ಇಂದ್ರಪ್ರಸ್ಥ ವಿದ್ಯಾಲಯದ ಕೊಡುಗೆಯ ಫಲ ಎನ್ನುತ್ತಾ ಭಾವೋದ್ವೇಗಕ್ಕೊಳಗಾದರು.

ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ ಮಾತನಾಡಿ, ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಹಲವರು ಜಗತ್ತಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅಮೇರಿಕಾದಲ್ಲಿ ಉಪಗ್ರಹ ತಯಾರಿಸಲು ಬಳಸುವ ಅಲ್ಯೂಮಿನಿಯಂಗಿಂತಲೂ ಹಗುರ ತೂಕದ ಲೋಹವನ್ನು ಸಂಶೋಧಿಸಿದ ಯು. ಕೃಷ್ಣ ಭಟ್ ಮೂಲತಃ ಉಪ್ಪಿನಂಗಡಿಯವರು. ಹರಿಕಥೆ ಕೀರ್ತನೆಯ ಮೂಲಕ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಭದ್ರಗಿರಿ ಅಚ್ಯುತ ದಾಸರು ಮೊದಲು ಹರಿಕಥೆ ಸಂಕೀರ್ತನೆಯನ್ನು ಆರಂಭಿಸಿರುವುದು ಉಪ್ಪಿನಂಗಡಿಯ ಮೂಲಕ. ನಚಿಕೇತ್ ಕೂಡಾ ಅದೇ ಹಾದಿಯಲ್ಲಿ ಸಾಗಲಿ. ಈ ಮೂಲಕ ಹುಟ್ಟೂರಿಗೆ ಕೀರ್ತಿ ತರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ, ದೊಡ್ಡ ದೊಡ್ಡ ಕನಸಿದ್ದಾಗ ಮಾತ್ರ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಲು ಸಾಧ್ಯ. ನಚಿಕೇತ್ ಕೂಡಾ ತನ್ನ ಸಾಧನೆಯ ಮೂಲಕ ಜಗತ್ತು ಉಪ್ಪಿನಂಗಡಿಯತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈತನಿಂದ ಇನ್ನಷ್ಟು ಸಾಧನೆಗಳು ಮೂಡಿಬರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದಲೂ ನಚೀಕೇತ್‌ಗೆ ಗೌರವಾರ್ಪಣೆ ನಡೆಯಿತು.

ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ರಘುನಾಥ ರೈ, ನಚಿಕೇತ್‌ನ ತಾಯಿ ವಿನಯಾ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಹಿರಿಯ ಸದಸ್ಯ ಗೋಪಾಲ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಶರತ್ ಕೋಟೆ ವಂದಿಸಿದರು. ಮಧುರಾ ಚಿದಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.