ಸೌತಡ್ಕ: ಸೇವಾಧಾಮದಲ್ಲಿ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ

0

 

ಕೊಕ್ಕಡ : ಸೇವಾಭಾರತಿ ಕನ್ಯಾಡಿ ಇದರ ಅಂಗಸಂಸ್ಥೆಯಾದ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರ,ಸೌತಡ್ಕದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ವಾರ್ಷಿಕ ಸಮಾರಂಭ ಸೆ.5 ರಂದು ಜರಗಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಶೇಷ ಚೇತನರು ಮಾನಸಿಕವಾಗಿ ಸದೃಢರಾದರೆ ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯ ಇಂಥವರಿಗೆ ಬಲ ನೀಡುವ ಕೆಲಸ ಮಾಡುತ್ತಿರುವ ಸೇವಾಧಾಮದ ಸೇವೆ ಅನೇಕರಿಗೆ ದಾರಿ ದೀಪವಾಗಿದೆ. ಬೆನ್ನುಹುರಿ ಅಪಘಾತದ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮುರಳಿ ಕೃಷ್ಣ ಇರ್ವತ್ರಾಯ ಮಾತನಾಡಿ  ಬೆನ್ನುಹುರಿ ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಪೂರ್ತಿಯನ್ನು ಮೂಡಿಸುವ ಮೂಲಕ ಶಕ್ತಿ ನೀಡಬೇಕು, ದೈಹಿಕವಾಗಿ ಗೆಲ್ಲಲಾಗದುದನ್ನು ಮಾನಸಿಕವಾಗಿ ಗೆಲ್ಲಲು ಸಾಧ್ಯ. ಸೇವೆಯೇ ಜೀವನ ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವ ಸೇವಾಧಾಮದ ಪುನಶ್ಚೇತನ ಕೇಂದ್ರದಲ್ಲಿ ತಿಂಗಳಿಗೆ ಒಂದು ಬಾರಿ ತಮ್ಮ ತಂಡ ಉಚಿತವಾದ ಸೇವೆಯನ್ನು ನೀಡಲಿದೆ ಎಂದು ಹೇಳಿದರು.

ಸೇವಾಧಾಮದ ಸಂಚಾಲಕ ಕೆ. ಪುರಂದರ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಹರೀಶ್ ರಾವ್, ಉದ್ಯಮಿ ಪ್ರಭಾಕರ ಹೆಗ್ಡೆ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್, ಮೈಸೂರಿನ ಮಂಜುಶ್ರೀ ಸಂಸ್ಥೆಯ ಮಂಜುಳಾ ಹರೀಶ್, ಸೇವಾಧಾಮದ ನಿರ್ದೇಶಕ ರಾಯನ್ ಫೆರ್ನಾಂಡಿಸ್, ಮೇಲ್ವಿಚಾರಕ ಶಶಿಧರ್ ಖಾಡಿಲ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರತ್ನಾವತಿ, ವಿನೋದಾ ಮತ್ತಿತರರು ಉಪಸ್ಥಿತರಿದ್ದರು.

“ಸಮಾಜದ ಕೊರತೆ ನೀಗಿಸಬಲ್ಲ ಸ್ವಾರ್ಥ ಇಲ್ಲದ ಸೇವೆ ಸೇವಾಧಾಮದಲ್ಲಿ ನಡೆಯುತ್ತಿದ್ದು, ಇದು ಬೆನ್ನುಹುರಿ ಸಮಸ್ಯೆ ಇರುವವರ ಆಶಾಕಿರಣವಾಗಿದ್ದು ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತಿದೆ. ವ್ಯಕ್ತಿಗಳನ್ನು ಶಕ್ತಿಗಳನ್ನಾಗಿಸುವ ಧ್ಯೇಯದೊಂದಿಗೆ ಸದ್ದಿಲ್ಲದ ಸೇವೆಯನ್ನು ಮಾಡುತ್ತ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ನಿಧಾನವಾದ ಹೆಜ್ಜೆಗಳಿಂದ ವೇಗವನ್ನು ಪಡೆಯುವತ್ತ ಸಾಗುತ್ತಿದೆ” ಎಂದು  ಸೇವಾಧಾಮದ ಸಂಸ್ಥಾಪಕರಾದ  ಕೆ. ವಿನಾಯಕರಾವ್ ಹೇಳಿದರು.

ಸೇವಾಧಾಮದ ಸಂಸ್ಥಾಪಕ, ಅಧ್ಯಕ್ಷ ವಿನಾಯಕ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ನಿರ್ದೇಶಕಿ ರೂಪಾಲಕ್ಷ್ಮಿ ಸ್ವಾಗತಿಸಿದರು. ಪುಷ್ಪಲತಾ ಹಾಗೂ ಚರಣ್ ಎಂ. ಕಾರ್ಯಕ್ರಮ ನಿರೂಪಿಸಿದರು.

ಬೆನ್ನುಹುರಿ ಅಪಘಾತಕ್ಕಕೊಳಗಾದವರಿಗೆ ಗಾಲಿ ಕುರ್ಚಿ, ವಾಕರ್ ಇತ್ಯಾದಿ ವಿತರಿಸಲಾಯಿತು. ಸೇವಾಧಾಮಕ್ಕೆ ವಿಶೇಷ ಸೇವೆಗಳನ್ನು ನೀಡಿದವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

LEAVE A REPLY

Please enter your comment!
Please enter your name here