ದಾಖಲೆ ದುರುಪಯೋಗ ಪಡಿಸಿಕೊಂಡು ರೂ. 20 ಲಕ್ಷ ಸಾಲ ಪಡೆದು ವಂಚನೆ ಆರೋಪ ಪೊಲೀಸ್ ಕೇಸು: ಆರೋಪಿಗಳ ಬಂಧನಕ್ಕೆ ಆಗ್ರಹ

0

ಬೆಳ್ತಂಗಡಿ:  ಜಮೀನು ಅಭಿವೃದ್ಧಿ ಪಡಿಸಲು ಬ್ಯಾಂಕ್ ಸಾಲ ಮಾಡಿಕೊಡುವ ನೆಪದಲ್ಲಿ ಆದಿವಾಸಿ ಸಮುದಾಯದ ನನ್ನ ಜಮೀನನ ದಾಖಲೆ ಪಡೆದುಕೊಂಡು, ರೂ.20 ಲಕ್ಷ ಸಾಲ ತೆಗೆದು, ದಾಖಲೆ ದುರುಪಯೋಗ ಪಡಿಸಿ, ಜಾಗ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ್ದು , ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನಗೆ ವಂಚನೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಉಜಿರೆ ಗ್ರಾಮದ ಕುರ್ಮಾಣಿ ಕಾಂತಪ್ಪ ನಾಯ್ಕ ಆಗ್ರಹಿಸಿದ್ದಾರೆ.

ಅವರು ಸೆ.6 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾನು ಅವಿದ್ಯಾವಂತರಾಗಿದ್ದು , ಕೇವಲ ಸಹಿ ಮಾಡಲು ಮಾತ್ರ ಗೊತ್ತಿದೆ. ಈ ವಿಚಾರ ತಿಳಿದುಕೊಂಡ ಧರ್ಮಸ್ಥಳ ಗ್ರಾಮದ ಮಂಜಿಹಿತ್ಲು ರಾಜೇಶ್ ಶಣೈ ಎಂಬವರು ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಜಮೀನು ಅಭಿವೃದ್ಧಿ ಪಡಿಸಲು ಸಾಲ ನೀಡುವುದಾಗಿ ಹೇಳಿ ನನ್ನ ಬಾಬ್ತು ಇರುವ ಸ.ನಂ 265/11 ರಲ್ಲಿರುವ 1.42 ಎಕರೆ ಜಮೀನನ್ನು ಅಧಿಕಾರ ಪತ್ರ ಮಾಡಿಸಿಕೊಂಡಿದ್ದಾರೆ. ಸ.ನಂ 265/26 ರಲ್ಲಿನ 0.42 ಎಕರೆ ಜಮೀನನ್ನು ನೋಂದಾಯಿತ ಕ್ರಯಸಾಧನ ಮಾಡಿಕೊಂಡಿರುತ್ತಾರೆ. ಸಾಲದ ಭರವಸೆ ನೀಡಿದ ಕಾರಣಕ್ಕಾಗಿ ಎಲ್ಲಾ ದಾಖಲೆಗಳಿಗೂ ನಾನು ಸಹಿ ಹಾಕಿರುತ್ತೇನೆ ಎಂದು ತಿಳಿಸಿದರು.

ನನ್ನ ದಾಖಲೆಗಳನ್ನು ದುರುಪಯೋಗ ಮಾಡಿಕೊಂಡು ಅವರು ಬೆಳ್ತಂಗಡಿ ಪ್ರೇರಣಾ ಹಣಕಾಸು ಸಂಸ್ಥೆಯಿಂದ ಕಾನೂನು ಬಾಹಿರವಾಗಿ ರೂ. 20 ಲಕ್ಷ ಸಾಲ ಪಡೆದುಕೊಂಡಿರುತ್ತಾರೆ. ಒಂದೇ ಒಂದು ರೂಪಾಯಿ ಹಣ ನನಗೆ ನೀಡಿರುವುದಿಲ್ಲ. ಈ ಹಣಕಾಸು ಸಂಸ್ಥೆಗೆ ಯಾವುದೇ ಕೃಷಿ ಜಮೀನುಗಳಿಗೆ ಸಾಲ ನೀಡಲು ಕಾನೂನು ಪ್ರಕಾರ ಅಧಿಕಾರ ಇಲ್ಲ. ಇದರಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ನನ್ನ ಹೆಸರಿನ ಜಮೀನಿನ ದಾಖಲೆಗಳನ್ನು ಇಟ್ಟು ಉಜಿರೆಯ ಎರಡು ಬ್ಯಾಂಕುಗಳಲ್ಲಿ ಕ್ರಮವಾಗಿ ರೂ. 15 ಲಕ್ಷ ಮತ್ತು ರೂ.10 ಲಕ್ಷದಂತೆ ಒಟ್ಟು ರೂ. 15ಲಕ್ಷ ಸೇರಿದಂತೆ ರೂ. 45 ಲಕ್ಷ ಸಾಲವಾಗಿ ಪಡೆಯಲಾಗಿದೆ. ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಜಮೀನು ಲಪಾಟಯಿಸಲು ಹುನ್ನಾರ ನಡೆಸಿದ ರಾಜೇಶ್ ಶಣೈ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನನ್ನ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಜಿಪಿಎ ಹಾಗೂ ಕ್ರಯಸಾಧನ ಮಾಡಿಕೊಂಡಿರುವ ವಿಚಾರ ತಿಳಿದ ನಂತರ ನಾನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಜಿಪಿಎ ಹಾಗೂ ಕ್ರಯ ಸಾಧನ ರದ್ದುಗೊಳಿಸಿದೆ. ಬಳಿಕವೂ ಹಣಕಾಸು ಸಂಸ್ಥೆಯವರು ನನ್ನ ಜಮೀನನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂತಪ್ಪ ನಾಯ್ಕರ ಪತ್ನಿ ಗಿರಿಜ, ಅಣ್ಣನ ಮಗ ಸಂಜೀವ, ಪ್ರಮುಖರಾದ ಚಂದು.ಎಲ್, ಶೇಖರ್ ಎಲ್, ಹರೀಶ್, ಸತೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here