ಶೌರ್ಯ ಸ್ವಯಂ ಸೇವಕರಿಂದ ಕಿಂಡಿ ಅಣೆಕಟ್ಟಿನ ಸ್ವಚ್ಛತಾ ಕಾರ್ಯ

0


ಮುಂಡಾಜೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಸ್ವಯಂಸೇವಕರಿಂದ ಮುಂಡಾಜೆ ಗ್ರಾಮದ ಮೃತ್ಯುಂಜಯ ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿಂಡಿ ಅಣೆಕಟ್ಟಿನ ಸ್ವಚ್ಛತಾ ಕಾರ್ಯ ನೆರವೇರಿತು.

ಇತ್ತೀಚೆಗೆ ಸುರಿದ  ಮಳೆಗೆ ಬಂದ ಭೀಕರ ಪ್ರವಾಹದಲ್ಲಿ ನೂರಾರು ಬೃಹದಾಕಾರದ ಮರಮಟ್ಟುಗಳು ತೇಲಿ ಬಂದು ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದ್ದವು ಇದರಿಂದಾಗಿ ಸುಮಾರು ಐದು ಕೋಟಿ ವೆಚ್ಚದಲ್ಲಿ ಕಟ್ಟಿದ ಕಿಂಡಿ ಅಣೆಕಟ್ಟಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು ಹಾಗೂ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆಯಿತ್ತು ಇದನ್ನು ಮನಗಂಡ ಗ್ರಾಮಸ್ಥರು ಕ್ಷೇತ್ರದ ಶೌರ್ಯ ಸ್ವಯಂಸೇವಕರ ಸಹಕಾರವನ್ನು ಕೋರಿದ್ದರು. ಮನವಿಗೆ ಸ್ಪಂದಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ  ವಿವೇಕ್ ವಿನ್ಸೆಂಟ್ ಪಾಯ್ಸ್ ರವರ ಆದೇಶದಂತೆ ಶೌರ್ಯ ವಿಪತ್ತು ನಿರ್ವಹಣಾ ಯೋಜನಾಧಿಕಾರಿ  ಜಯವಂತ ಪಟಗಾರ್ ರವರ ಉಪಸ್ಥಿತಿಯಲ್ಲಿ ಕಿಂಡಿ ಅಣೆಕಟ್ಟಿನ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.

ಸೇವಾ ಕಾರ್ಯದಲ್ಲಿ ಬೆಳ್ತಂಗಡಿ ಹಾಗೂ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವಿಪತ್ತು ನಿರ್ವಹಣಾ ಘಟಕಗಳ ಸಂಯೋಜಕ ಸ್ವಯಂಸೇವಕರು ಪಾಲ್ಗೊಂಡಿದ್ದರು. ನಡ ಕನ್ಯಾಡಿ ಉಜಿರೆ, ಬೆಳಾಲು, ನೆರಿಯ, ಕೊಕ್ಕಡ, ಅಳದಂಗಡಿ ಹಾಗೂ ವೇಣೂರು ಘಟಕಗಳಿಂದ ಒಟ್ಟು 53 ಸ್ವಯಂಸೇವಕರು ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಗ್ರಾಮದ ಜಲ ಸಂರಕ್ಷಣಾ ಸಮಿತಿಯ ಸದಸ್ಯರು, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಯುವಕರು ಪ್ರಾರಂಭದಿಂದ ಕೊನೆಯವರೆಗೆ ಶ್ರಮದಾನದಲ್ಲಿ  ಭಾಗವಹಿಸಿ ಸ್ವಯಂಸೇವಕರೊಂದಿಗೆ ಸಹಕರಿಸಿದರು.

 

LEAVE A REPLY

Please enter your comment!
Please enter your name here