ಸೆ.23 : ಸರಕಾರದ ತಾರತಮ್ಯ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

0

ಪತ್ರಿಕಾ ಗೋಷ್ಠಿ

ಬೆಳ್ತಂಗಡಿ: ಇತ್ತೀಚೆಗೆ ಸುಳ್ಯದ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಎಂಬಿಬ್ಬರ ಹತ್ಯೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಅಲ್ಲದೆ ಇಸ್ಲಾಂ ಧರ್ಮದ ಬಗ್ಗೆ ಅಲ್ಲಲ್ಲಿ ಅಪಪ್ರಚಾರಗಳನ್ನು ಮಾಡುತ್ತಾ, ಕಪೋಲ ಕಲ್ಪಿತ ಹೇಳಿಕೆಗಳನ್ನು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಮದರಸಗಳ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದ್ದು ಇದೆಲ್ಲದಕ್ಕೂ ಕಡಿವಾಣ ಹಾಕಬೇಕು ಎಂಬಿತ್ಯಾಧಿ ಉದ್ದೇಶದಿಂದ ಸೆ.23 ರಂದು ಸಂಜೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಗ್ಗೂಡುವಿಕೆಯೊಂದಿಗೆ ನಡೆಸಲು ತೀರ್ಮಾನಿಸಲಾಗುವುದು ಎಂದು ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಹೇಳಿದರು.ಅವರು ಸೆ.21 ರಂದು ಜಮೀಯತುಲ್ ಫಲಾಹ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

1. ಪ್ರವೀಣ್ ಹತ್ಯೆಯನ್ನು ಎನ್.ಐ.ಎ ತನಿಖೆಗೆ ವಹಿಸಿದಂತೆ, ಮಸೂದ್ ಮತ್ತು ಪಾಝಿಲ್ ಹತ್ಯೆಯನ್ನೂ ಎನ್.ಐ.ಎ ಗೆ ವಹಿಸಬೇಕು.

2. ಮಸೂದ್ ಮತ್ತು ಪಾಝಿಲ್ ಹತ್ಯೆಗೆ ಪ್ರೇರಣೆ ನೀಡಿದವರು, ಹಂತಕರಿಗೆ ನೆರವು ನೀಡಿದವರ ಬಗ್ಗೆ ಕೂಲಂಕಷ ತನಿಖೆ ನಡೆಸಿ ಈ ಹತ್ಯೆಗಳ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು.

3. ಪೊಲೀಸರ ರಾಜಕೀಯ ಪ್ರೇರಿತವಾದ ಹಾಗೂ ಪೂರ್ವಾಗ್ರಹಪೀಡಿತ ತನಿಖೆಯಲ್ಲಿ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದು, ಘಟನೆಯ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಘಟನೆಗಳನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.

4. ಪ್ರವೀಣ್ ಕುಟಂಬಕ್ಕೆ ಪರಿಹಾರ ವಿತರಿಸಿದಂತೆ, ಮಸೂದ್ ಮತ್ತು ಫಾಝಿಲ್‌ ರವರ ಸಂತ್ರಸ್ತ ಕುಟುಂಬಗಳಿಗೂ ಸರಕಾರದ ವತಿಯಿಂದ ತಲಾ 25 ಲಕ್ಷ ರೂ. ಪರಿಹಾರ ಕಲ್ಪಿಸಲು ಕ್ರಮವಹಿಸಬೇಕು.

ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ , ಕೆ.ಎಸ್ ಅಬ್ದುಲ್ಲ ಕರಾಯ, ತಲ್‌ಹತ್ ಎಂ.ಜಿ, ಉಸ್ಮಾನ್ ಶಾಫಿ ಮತ್ತು ಉಮರ್ ಗುರುವಾಯನಕೆರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here