ವೇಣೂರು ಐಟಿಐ: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ: ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ಅಳವಡಿಸಿ- ಸೋಮಶೇಖರ ಶೆಟ್ಟಿ

0

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯ, ಲಯನ್ಸ್ ಕ್ಲಬ್ ವೇಣೂರು ಹಾಗೂ ಎಸ್‌ಡಿಎಂ ತಾಂತ್ರಿಕ ತರಬೇತಿಯ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸೆ. 29ರಂದು ನಡೆಯಿತು.

ಉಜಿರೆ ಶ್ರೀ ಧ.ಮಂ. ಎಜ್ಯುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ದಾರಿ ತಪ್ಪುವ ಕಾರಣಗಳು, ಆದರ್ಶ ವಿದ್ಯಾರ್ಥಿಯಲ್ಲಿ ಇರಬೇಕಾದ ಗುಣ ನಡತೆಗಳ ಬಗ್ಗೆ ಸವಿವಿವರವಾದ ಮಾಹಿತಿಯನ್ನಿತ್ತರು. ಶಿಕ್ಷಣ ಅಂದರೆ ಕೇವಲ ಸರ್ಟಿಪಿಕೇಟ್ ಅಲ್ಲ, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬಾಳಿದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಅವರು ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯ ಮಾರ್ಗದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡು ದುಶ್ಚಟಗಳಿಗೆ ಬಲಿ ಬೀಳುವ ಸಂಭವಗಳು ಕಡಿಮೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸಿ, ಅಮೂಲ್ಯವಾದ ಜೀವವನ್ನು ರಕ್ಷಿಸ ಬೇಕೆಂದು ಕರೆಯಿತ್ತರು.

ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಸತೀಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಯಶವಂತ್ ಎಸ್., ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಗಿರೀಶ್ ಕೆ.ಎಸ್., ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾರಾಮ್ ಆಚಾರ್ಯ, ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಜಗನಾಥ ದೇವಾಡಿಗ ಉಪಸ್ಥಿತರಿದ್ದರು.

ಕಿರಿಯ ತರಬೇತಿ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ಸ್ವಾಗತಿಸಿ, ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕಿ ಶಾಲಿನಿ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸತೀಶ್ ನಿರ್ವಹಿಸಿದ್ದರು. ವಿನಯಚಂದ್ರ ರಾಜ್ ಸಂಘಟಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here