ಮಹಾತ್ಮ ಗಾಂಧೀಜಿ ಅವರ ಜೀವನ ಸಂದೇಶದ ಪಾಲನೆ ಇಂದಿನ ಅಗತ್ಯ: ಡಾ. ಪಿ. ಎನ್. ಉದಯ ಚಂದ್ರ

0


ಉಜಿರೆ:   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು,‌ ಉಜಿರೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಜಂಟಿ ಆಶ್ರಯದಲ್ಲಿ 153ನೇ ಗಾಂಧಿ ಜಯಂತಿಯನ್ನು ಅ.2 ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್. ಉದಯಚಂದ್ರ ಅವರು,‌ ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿದಾಗ ನಮ್ಮ ದೇಶವು ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಯಿಂದ ಕೂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಉಪಸ್ಥಿತರಿದ್ದ ಉಪ ಪ್ರಾಂಶುಪಾಲರಾದ ಡಾ. ಎ. ಜಯ ಕುಮಾರ ಶೆಟ್ಟಿಯವರು ಜಗತ್ತಿನಲ್ಲಿ ಕಾಣಬಯಸುವ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಎಂಬ ಗಾಂಧೀಜಿ ಅವರ ಮಾತನ್ನು ಪಾಲಿಸೋಣ ಎಂದು ಶುಭಹಾರೈಸಿದರು.

ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ರೋವರ್ಸ್ ಲೀಡರ್ ಆಗಿರುವ ಪ್ರಸಾದ್ ಕುಮಾರ್ ಮತ್ತು ರೇಂಜರ್ಸ್ ಲೀಡರ್  ಡಾ. ರತ್ನಾವತಿ, ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್ ಮತ್ತು ನೆರೆದಿರುವ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಹಾಗೆಯೇ ಈ ಕಾರ್ಯಕ್ರಮದಲ್ಲಿದ್ದ ಎಲ್ಲಾ ಅತಿಥಿಗಳು,‌ ಉಪನ್ಯಾಸಕರು ಮತ್ತು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಮಹಾತ್ಮ ಗಾಂಧೀಜಿಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮವನ್ನು ಕುಮಾರಿ ಸಿಂಚನ ಆರ್ ಶೆಟ್ಟಿ ಇವರು ನಿರ್ವಹಿಸಿದರು.

LEAVE A REPLY

Please enter your comment!
Please enter your name here