ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಕಯಂತ್ರ ತರಗತಿಯ ಲೋಕಾರ್ಪಣೆ

0

ಬೆಳ್ತಂಗಡಿ: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ( ಶ್ರೀರಾಮ ಶಾಲೆ) ಯಲ್ಲಿ ಗಣಕಯಂತ್ರ ತರಗತಿಯ ಲೋಕಾರ್ಪಣೆ ಹಾಗೂ ಬೆಂಗಳೂರಿನ ವಿವಿಧ ಸಂಸ್ಥೆಗಳು ನೀಡಿರುವ ಸವಲತ್ತುಗಳ ಹಸ್ತಾಂತರ ಕಾರ್ಯಕ್ರಮ ಅ.8 ರಂದು ನೆರವೇರಿತು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾl ಪ್ರಭಾಕರ ಭಟ್ ಕಲ್ಲಡ್ಕ ಅವರು, ನಮ್ಮತನದ ಶಿಕ್ಷಣವನ್ನು‌ ಹೇಳಿಕೊಡುವುದೇ ಇಂದು ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಶ್ರೀರಾಮ ಶಾಲೆಯಂತಹ ಸುಮಾರು 81 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಹಣದ ಹಿಂದೆ ಹೋಗುವಂತಹ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಗುಣ ಮಾಯವಾಗುತ್ತಿದೆ. ಗುಣದ ಹಿಂದೆ ಹಣ ಬರಬೇಕೆ ಹೊರತು ಹಣದ ಹಿಂದೆ ಗುಣ ಇರಬಾರದು. ನಮ್ಮದೇ ಭಾಷೆಯಲ್ಲಿ ಶಿಕ್ಷಣ ನೀಡುವ ಕೆಲಸ ನಡೆಯುತ್ತಿದೆ. ವಿದೇಶಗಳಲ್ಲಿ ಆಚರಿಸುವ ಬರ್ತ್‌ಡೇಯಂತಹ ಸತ್ವಹೀನ ಕಾರ್ಯಕ್ರಮಗಳ ಹುಚ್ಚು ಹಿಡಿದಿರುವುದು ಖೇದಕರ. ಮಕ್ಕಳಲ್ಲಿ ಸಮಾಜದ, ದೇಶದ ದೃಷ್ಟಿಕೋನವನ್ನು ತಿಳಿಸುವ, ಮಾನವೀಯತೆಯನ್ನು ಬೆಳೆಸುವ ಪ್ರಯತ್ನ ನಮ್ಮದು ಅದಕ್ಕಾಗಿ ಸಮಾಜದ ಹಿರಿಯರು ನಮ್ಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.

ಅತಿಥಿಗಳಾಗಿ ಕಾರ್ಮಿಕ ಇಲಾಖಾ ಪ್ರಾದೇಶಿಕ-2 ಉಪ ಆಯುಕ್ತ ಗುರುಪ್ರಸಾದ್ ಎಚ್.ಎಲ್., ಉದ್ಯಮಿಗಳಾದ ರಾಜೇಶ್ ಪೈ ಉಜಿರೆ, ಧರ್ಮಣ ಗೌಡ ಉಜಿರೆ, ಬೆಳ್ತಂಗಡಿ ದಂತ ವೈದ್ಯ ಡಾl ಶಶಿಧರ ಡೋಂಗ್ರೆ, ಶಾಲೆಗೆ 11 ಗಣಕಯಂತ್ರಗಳನ್ನು ನೀಡಿ, ತರಗತಿ ಉದ್ಘಾಟಿಸಿದ ಬೆಂಗಳೂರಿನ ಬಾಶ್ ಅಟೋಮೋಟಿವ್ ಇಲೆಕ್ಟ್ರಾನಿಕ್ಸ್ ಇಂಡಿಯಾದ ಅಧ್ಯಕ್ಷ ಕುಮಾರ್ , ವಾಲ್ಯೂ ಸ್ಟ್ರೀಮ್ ಲೀಡರ್ ರಾಘವೇಂದ್ರ, ಬಾಶ್ ಅಟೋಮೋಟಿವ್ ಸಿ.ಎಸ್.ಆರ್. ಮುಖ್ಯಸ್ಥ ಜಾನ್ ಸಿಲ್ವೆಸ್ಟರ್, ಸಿ.ಸಿ. ಟಿ.ವಿ.ಗಳ ಕೊಡುಗೆ ನೀಡಿದ ಬೆಂಗಳೂರಿನ ಇಂಡಿಯಾ ಇಂಟರ್‌ಫ್ಲೆಕ್ಸ್ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿ.ನ ಮುಖ್ಯ ಮಾನವಸಂಪನ್ಮೂಲ ಅಧಿಕಾರಿ ವಾಸು,ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜುಪೂಜಾರಿ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಸ್ವಾಗತಿಸಿದರು. ಸದಸ್ಯ ಭಾಸ್ಕರ ಸಾಲಿಯಾನ್ ವಂದಿಸಿದರು. ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.

ಬೆಂಗಳೂರಿನ ಬಾಶ್ ಕಂಪೆನಿಯವರು ಶಾಲೆಗೆ ತರಗತಿ ಕೋಣೆ ಸಹಿತ ಗಣಕಯಂತ್ರಗಳನ್ನು, ಇಂಟರ್‌ಫ್ಲೆಕ್ಸ್ ಇಲೆಕ್ಟ್ರಾನಿಕ್ಸ್ ಇಂಡಿಯಾದವರು ಸಿ.ಸಿ.ಟಿ.ವಿ.ಗಳನ್ನು, ಹೊಂಡಾ ಕಂಪೆನಿಯವರು ಕುಡಿಯುವ ನೀರಿನ ಘಟಕಗಳನ್ನು, ಆಶೀರ್ವಾದ ಪೈಪ್ಸ್ ಲಿ.ನವರು ನೀರು ಪೂರೈಕೆಗೆ ಬೇಕಾಗುವ ಸಾಮಾಗ್ರಿಗಳನ್ನು‌ ಶಾಲೆಗೆ ಹಸ್ತಾಂತರಿಸಿದರು.

ವಿವಿಧ ಕಂಪನಿಗಳೊಂದಿಗೆ ವ್ಯವಹರಿಸಿ ಸವಲತ್ತುಗಳನ್ನು ಶಾಲೆಗೆ ನೀಡುವಂತೆ ಪ್ರಯತ್ನಿಸಿದ ಗುರುಪ್ರಸಾದ್ ಹೆಚ್.ಎಲ್.ಅವರನ್ನು ಸಮ್ಮಾನಿಸಲಾಯಿತು.
ದೇಶದ ಪರಂಪರೆ, ಸಂಪ್ರದಾಯಗಳನ್ನು ಬುದ್ದಿಜೀವಿಗಳೆನಿಸಿಕೊಂಡವರು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥವರನ್ನು ಎದುರಿಸಲು ಸದಾ ಜಾಗೃತರಾಗಿರಬೇಕು — ಡಾ. ಕಲ್ಲಡ್ಕ ಭಟ್

LEAVE A REPLY

Please enter your comment!
Please enter your name here