ಯುವವಾಹಿನಿ ವತಿಯಿಂದ ಮೂಡುಕೋಡಿಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ

0

ವೇಣೂರು : ‘ ಕೆಸರುಗದ್ದೆ ಕ್ರೀಡಾಕೂಟ ಇಂದು ಜನಾಕರ್ಷಣೆಯ ಕ್ರೀಡಾಕೂಟವಾಗಿ ಪರಿವರ್ತನೆಯಾಗುತ್ತಿದೆ. ಯಾವುದೇ ಒಂದು ಸಂಘಟನೆ ಬಲಪಡಿಸಲು ಈ ರೀತಿಯ ಕ್ರೀಡಾಕೂಟ ಮುಖ್ಯವಾಗಿದೆ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಬಿಲ್ಲವ ಸಮುದಾಯವನ್ನು ಒಟ್ಟುಗೂಡಿಸುವ ಕಾರ್ಯ ಯುವವಾಹಿನಿ ಸಂಘಟನೆಯಿಂದಾಗಲಿ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಇಂಧನ ಮತ್ತು ಕನ್ನಡ – ಸಂಸ್ಕೃತಿ   ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಅವರು ಅ 9 ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ವೇಣೂರು ಘಟಕದ ಆತಿಥ್ಯದಲ್ಲಿ ವೇಣೂರು ಮೂಡುಕೋಡಿ ಗ್ರಾಮದ ನೆಲ್ಲಿಗುಡ್ಡೆ ನೋನೊಟ್ಟು ಗದ್ದೆಯಲ್ಲಿ ನಡೆದ ‘ಕೆಸರ್ ಡೊಂಜಿ ದಿನ –ಕೆಸರುಗದ್ದೆ ಕ್ರೀಡಾಕೂಟ – 2022’ ಇದರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೆಸರಿನಲ್ಲಿನ ಕ್ರೀಡಾಕೂಟ ಕೇವಲ ಒಂದು ದಿನ-ಒಂದು ವಾರಕ್ಕೆ ಸೀಮಿತವಾಗಬಹುದು. ಅದರೆ ಅದರ ಹಿಂದೆ ಕೃಷಿ ಚಟುವಟಿಕೆ ವಿಸ್ತಾರವಾಗಬೇಕು ಎಂಬ ಕಾಳಜಿ ಇದೆ. ನಾನಾ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬದುಕಿನ ಅರ್ಥವನ್ನೇ ಕಳೆದುಕೊಳ್ಳುವ ಬದಲು ಕೃಷಿಯಲ್ಲಿ ಯುವಕರು ತೊಡಗಿಸಿಕೊಂಡು ಅಭಿವೃದ್ಧಿಯನ್ನು ಕಾಣುವಂತಾಗಬೇಕು’ ಎಂದರು.

ಮಾಜಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ, ‘ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಗೆ ತನ್ನನ್ನು ತಾನು ತೊಡಗಿಸಿಕೊಳ್ಳಲು ಉತ್ತಮ ಅವಕಾಶ. ಇದರಿಂದ ಗ್ರಾಮೀಣ ಪ್ರದೇಶದ ರೈತರ ಮಕ್ಕಳು ಸಂಘಟನೆಯನ್ನು ಅರ್ಥೈಯಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಇಂತಹ ಕ್ರೀಡಾಕೂಟಗಳ ಮೂಲಕ ಬಿಲ್ಲವ ಸಮುದಾಯದಲ್ಲಿ ಶ್ರೇಷ್ಠ ಸಾಧಕ ಕ್ರೀಡಾಪಟುಗಳು ಮೂಡಿಬರುವಂತಾಗಲಿ’ ಎಂದರು.

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮಾತನಾಡಿ, ‘ ಯುವವಾಹಿನಿ ಸಂಘಟನೆ ಯಾವುದೇ ಕಾರ್ಯಕ್ರಮದ ಶಿಸ್ತಿಗೆ ಹೆಸರಾದುದು. ಬಿಲ್ಲವ ಯುವಕರನ್ನು ತೊಡಗಿಸಿಕೊಂಡಿರುವ ಈ ಸಂಘಟನೆ ನಾರಾಯಣ ಗುರುಗಳ ತತ್ವ ಸಂದೇಶದಂತೆ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.

ಕ್ರೀಡಾಕೂಟವನ್ನು ಗಣೇಶ್ ನಾರಾಯಣ್ ಪಂಡಿತ್ ಉದ್ಘಾಟಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಧ್ವಜಾರೋಹಣ ನೆರವೇರಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಉದ್ಯಮಿ ಶೈಲೇಂದ್ರ ವೈ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ.,ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಬಿಕ್ರೊಟ್ಟು, ಕಾರ್ಯದರ್ಶಿ ಪ್ರಶಾಂತ್ ಪಡ್ಯೋಡಿ, ಕೋಶಾಧಿಕಾರಿ ರಕ್ಷಿತ್ ಬಜಿರೆ, ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕರಾದ ಸುಜಿತ್ ಬಜಿರೆ, ಅಕ್ಷಿತ್ ಕಂಬಳದಡ್ಡ, ಸ್ವಾಗತ ಸಮಿತಿ ಅಧ್ಯಕ್ಷ ನಿತೀಶ್ ಹೆಚ್. ಕುಕ್ಕೇಡಿ, ಸಂಚಾಲಕರಾದ ಶಿವಪ್ರಕಾಶ್ ಅಂಬಾಶ್ರೀ, ಅರುಣ್ ಕೋಟ್ಯಾನ್ ಮೂಡುಕೋಡಿ, ಸತೀಶ್ ಪಿ.ಎನ್ ಮೂಡುಕೋಡಿ ಇದ್ದರು.

ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕ ನವೀನ್ ಪಚ್ಚೇರಿ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.

ಪುರುಷ, ಮಹಿಳೆ ಮತ್ತು ಮಕ್ಕಳ ವಿಭಾಗಕ್ಕೆ ವಿವಿಧ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, 100 ಮೀ.ಓಟ, ಉಪ್ಪಿನ ಮೂಟೆ ಓಟ, ರಿಲೇ, 5 ಕಾಲಿನ ಓಟ, ಮಾನವ ಪಿರಮಿಡ್, ಹಾಳೆ ಓಟ, ಸಂಗೀತ ಕುರ್ಚಿ, ತ್ರೋಬಾಲ್ ಮುಂತಾದ ಆಟಗಳು ನಡೆದವು.

ಇರುವೈಲ್ ಪಾನಿಲ ಬಾಡ ಪೂಜಾರಿಯವರ ಕಂಬಳದ ತಾಟೆ ಮತ್ತು ಬೊಟ್ಟಿಮಾರ್ ಕೋಣಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಇಂತಹ ಕ್ರೀಡಾ ಕೂಟಕ್ಕೆ ತುಳು ಅಕಾಡೆಮಿಯ ಪ್ರೋತ್ಸಾಹ ಅಗತ್ಯ -ಉಮಾನಾಥ್ ಕೋಟ್ಯಾನ್, ಶಾಸಕ ಹರೀಶ್ ಪೂಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here