ಕುತ್ಲೂರು ಕುಕ್ಕುಜೆ ರಾಮಚಂದ್ರ ಭಟ್‌ರವರ ಮನೆಯಂಗಳದಲ್ಲಿದ್ದ ಕಾರು-ಬೈಕ್ ಗೆ ಬೆಂಕಿ ಹಾಕಿ ಸುಟ್ಟ ಪ್ರಕರಣ: ಆರೋಪಿ ದೋಷಮುಕ್ತ

0

ಬೆಳ್ತಂಗಡಿ: 2013 ರಲ್ಲಿ ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ರಾಮಚಂದ್ರ ಭಟ್‌ರವರ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದ ತನಿಖೆ ನಡೆಸಿದ ದ.ಕ ಜಿಲ್ಲಾ ನ್ಯಾಯಾಲಯ ಆರೋಪಿ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಚಿನ್ನಿ ರಮೇಶ್ ಯಾನೆ ಶಿವಕುಮಾರ್‌ನನ್ನು ದೋಷಮುಕ್ತ ಗೊಳಿಸಿ ಅ.10ರಂದು ತೀರ್ಪು ನೀಡಿದೆ.

2013 ನ.9ರಂದು ಬೆಳಗಿನ ಜಾವ ಎರಡು ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿ ರಾಮಚಂದ್ರ ಭಟ್ ಎಂಬವರ ಮನೆ ಅಂಗಳಕ್ಕೆ ಬಂದ ಗುಂಪೊಂದು ಅವರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದು ಅವರು ಮನೆಯಿಂದ ಹೊರಗೆ ಬಾರದಿದ್ದಾಗ ಅವರ ಮನೆಯ ಅಂಗಳದಲ್ಲಿದ್ದ ಮಾರುತಿ ಓಮ್ನಿ ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಹೋಗಿದ್ದರು.

2013ರ ಸಮಯದಲ್ಲಿ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುವ ಕಾರ್ಯ ನಡೆಸುತ್ತಿದ್ದು, ಇದಕ್ಕೆ ರಾಮಚಂದ್ರ ಭಟ್ ಸಹಾಯ ಮಾಡುತ್ತಿದ್ದರು ಎಂಬ ಹಿನ್ನಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್, ವಿಕ್ರಂ ಗೌಡ, ಸಾವಿತ್ರಿ, ಸುಂದರಿ, ವಿಜಯ್, ಜಯಣ್ಣ ಮೊದಲಾದವರ ಮೇಲೆ ಪ್ರಕರಣ ದಾಖಲಿಸಿಕೊಂಡು, ದೂರುದಾರರಿಗೆ ಸುಮಾರು ರೂ. 2,69,555 /ರಷ್ಟು ನಷ್ಟ ಉಂಟಾಗಿರುತ್ತದೆ ಎಂದು ದೋಷರೋಪಣಾ ಪಟ್ಟಿಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಆರಂಭಿಕವಾಗಿ ತನಿಖೆಯನ್ನು ಮಾಡಿದ್ದ ಆಗಿನ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿಆರ್ ಇವರು ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ಅಂತಿಮ ವರದಿಯನ್ನು 2017 ಜ.17 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆ ಬಳಿಕ ಉಡುಪಿಯ ಆಗಿನ ಎಸ್ಪಿಯಾಗಿದ್ದ ಅಣ್ಣಾಮಲೈ ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್‌ನನ್ನು ವಶಕ್ಕೆ ಪಡೆದು ಈ ಪ್ರಕರಣದ ಆರೋಪಿತನೆಂದು ಗುರುತಿಸಿ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡಲಾಯಿತು. ಮರು ತನಿಖೆಯನ್ನು ಆರಂಭಿಸಿದ ಡಿವೈಎಸ್ಪಿ ರವೀಶ್ ಸಿ.ಆರ್ ಆರೋಪಿ ಚಿನ್ನಿ ರಮೇಶ್ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಆರೋಪ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಆರಂಭಿಸಿದ ದ.ಕ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು ೨೨ ಸಾಕ್ಷಿಗಳಲ್ಲಿ ೯ ಸಾಕ್ಷಿಗಳನ್ನು ವಿಚಾರಣೆ ಮಾಡಿತ್ತು. ಅದರಲ್ಲಿ ೫ ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ದೂರುದಾರ ರಾಮಚಂದ್ರ ಭಟ್ ಅವರ ಪತ್ನಿ ಹಾಗೂ ಇತರ ಸಾಕ್ಷಿಗಳು ಪ್ರೊಸಿಕ್ಯೂಶನ್ ಪರವಾಗಿ ಸಾಕ್ಷ್ಯ ನೀಡಿದ್ದರು. ಪ್ರಸ್ತುತ ಚಿನ್ನಿ ರಮೇಶ್ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆರೋಪಿ ಪರವಾಗಿ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರು ವಾದಿಸಿದರು.

LEAVE A REPLY

Please enter your comment!
Please enter your name here